ಪೆರ್ಲ: "ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಮನುಷ್ಯನ ಯಶಸ್ಸು ಮತ್ತು ಮಾನಸಿಕ ಶಾಂತಿಗೆ ಅವನ ಆಂತರಿಕ ಸಂಕಲ್ಪವೇ ಮುಖ್ಯ ಕಾರಣ. ಭಗವದ್ಗೀತೆಯು ಕೇವಲ ಆಧ್ಯಾತ್ಮಿಕ ಗ್ರಂಥದಲ್ಲ, ಅದು ನಮ್ಮ ದೈನಂದಿನ ಬದುಕನ್ನು ಮತ್ತು ವ್ಯಕ್ತಿತ್ವವನ್ನು ರೂಪಿಸುವ ಅತ್ಯುತ್ತಮ ಮಾರ್ಗದರ್ಶಿ" ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೇಂದ್ರೀಯ ವಿದ್ಯಾಲಯದ ನಿವೃತ್ತ ಮುಖ್ಯಾಧ್ಯಾಪಕರು ಹಾಗೂ ಜೆಸಿಐ ರಾಜ್ಯ ಮಟ್ಟದ ತರಬೇತುದಾರರಾದ ಎಸ್.ಎನ್. ಭಟ್, ಸೈಪಂಗಲ್ಲು ಅಭಿಪ್ರಾಯಪಟ್ಟರು.
ಕರಾಡ ಅಭ್ಯುದಯ ಸಂಘ ಅಗಲ್ಪಾಡಿ ಮತ್ತು ಕರಾಡ ಸುವರ್ಣ ಸಂಭ್ರಮ ಸಮಿತಿ -2026 ಜಂಟಿ ಆಶ್ರಯದಲ್ಲಿ ಇತ್ತೀಚಿಗೆ ಪೆರ್ಲದ ಭಾರತೀ ಸದನದಲ್ಲಿ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಪ್ರೇರಣಾ ಮತ್ತು ವ್ಯಕ್ತಿತ್ವ ವಿಕಸನದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಸುಮಾರು 90 ನಿಮಿಷಗಳ ಕಾಲ ರೋಚಕವಾಗಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಕರಾಡ ಸಮುದಾಯದ 150ಕ್ಕೂ ಹೆಚ್ಚು ಹಿರಿಯ ಚೇತನಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಭಾವನಾತ್ಮಕ ಕನೆಕ್ಟ್ ಮೂಡಿಸಿದ 'ವೀಲ್ ಆಫ್ ಫಾರ್ಚೂನ್':
ಹಿರಿಯರನ್ನು ಕೇವಲ ಮೂಕಪ್ರೇಕ್ಷಕರನ್ನಾಗಿ ಕೂರಿಸದೇ, ಅವರ ಸಕ್ರಿಯ ಭಾಗವಹಿಸುವಿಕೆಗಾಗಿ ಶ್ರೀ ಎಸ್. ಎನ್. ಭಟ್ ಅವರು ರೂಪಿಸಿದ್ದ ಸೃಜನಾತ್ಮಕ ಆಟಗಳು ಎಲ್ಲರ ಗಮನ ಸೆಳೆದುವು. ಕುಟುಂಬದ ಸಂಬಂಧಗಳು ಮತ್ತು ಅದರಲ್ಲಿ ಹಿರಿಯರ ವಿಭಿನ್ನ ಪಾತ್ರಗಳನ್ನು ನೆನಪಿಸುವ 'ವೀಲ್ ಆಫ್ ಫಾರ್ಚೂನ್' ಆಟವು ನೆರೆದಿದ್ದವರಲ್ಲಿ ಹೊಸ ಸಂಚಲನ ಮೂಡಿಸಿತು. ತಾತ, ಅಜ್ಜಿ, ತಂದೆ, ತಾಯಿ ಮುಂತಾದ ಪಾತ್ರಗಳ ಮೂಲಕ ತಮ್ಮ ಲೌಕಿಕ ಜವಾಬ್ದಾರಿಗಳು ಮತ್ತು ಸಂಬಂಧಗಳ ಮೌಲ್ಯವನ್ನು ಹಿರಿಯರು ಮರುಕಳಿಸಿಕೊಂಡರು.
ಬಾಲ್ಯದ ನೆನಪುಗಳ ಓಣಿಯಲ್ಲಿ ಪಯಣ ಮಾಡಿಸಿದ್ದ ಮಾತಿನ ಚಟುವಟಿಕೆಗಳು:
ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ 'ಚಿಟ್ ಸಿಸ್ಟಮ್' ಮೂಲಕ ಹಿರಿಯರು ತಮ್ಮ ಬಾಲ್ಯದ ಮಧುರ ನೆನಪುಗಳನ್ನು ವೇದಿಕೆಯ ಮೇಲೆ ಹಂಚಿಕೊಂಡಾಗ ಇಡೀ ಸಭೆ ಹಳೆಯ ಕೌಟುಂಬಿಕ ನೆನಪುಗಳ ಕಡಲಿನಲ್ಲಿ ತೇಲಿತು. ಅಷ್ಟೇ ಅಲ್ಲದೆ, ಹಿಂದಿನ ಕಾಲದ ವಿಶಿಷ್ಟ ಶಬ್ದಗಳನ್ನು ಗುರುತಿಸುವ ಮಲ್ಟಿ-ಸೆನ್ಸರಿ ಆಕ್ಟಿವಿಟಿಯಲ್ಲಿ ಹಿರಿಯರು ಉತ್ಸಾಹದಿಂದ ಪಾಲ್ಗೊಂಡು ತಾವೂ ಮಕ್ಕಳಂತೆ ಸಂಭ್ರಮಿಸಿದರು. ಆಟಗಳಲ್ಲಿ ಭಾಗವಹಿಸಿ ಯಶಸ್ವಿಯಾದ ೩೦ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಸ್ಥಳದಲ್ಲೇ ಪ್ರೋತ್ಸಾಹಕ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಮಾರೋಪದಲ್ಲಿ ಭಗವದ್ಗೀತೆಯ ಆರನೇ ಅಧ್ಯಾಯದ ಪ್ರಸಿದ್ಧ ಶ್ಲೋಕವಾದ "ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್" ಎಂಬುದನ್ನು ಇಂದಿನ ಆಧುನಿಕ ಬದುಕಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಜೋಡಿಸಿ ಭಟ್ ಅವರು ವಿವರಿಸಿದರು. "ನಮ್ಮ ಉದ್ಧಾರಕ್ಕೆ ನಮ್ಮ ಮನಸ್ಸೇ ಕಾರಣ. ಹಿರಿಯರು ವಯಸ್ಸಿನ ಕಾರಣಕ್ಕೆ ಎಂದಿಗೂ ಧೃತಿಗೆಡದೆ, ತಮ್ಮ ಆಂತರಿಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ನಮಗೆ ನಾವೇ ಬಂಧುಗಳು, ನಮ್ಮ ಆಲಸ್ಯವೇ ನಮಗೆ ಶತ್ರು" ಎಂಬ ಅವರ ಸಂದೇಶವು ನೆರೆದಿದ್ದ ಹಿರಿಯರಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿತು.
ಶಿವಕುಮಾರ ಶಾಂತಿಯಡಿಯವರು ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು. ಕರಾಡ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷರಾದ ಎಡಪ್ಪಾಡಿ ಕೃಷ್ಣಮೂರ್ತಿಯವರು ಧನ್ಯವಾದ ಸಮರ್ಪಣೆ ಮಾಡಿದ್ದಲ್ಲದೆ, ಸಂಪನ್ಮೂಲ ವ್ಯಕ್ತಿ ಎಸ್. ಎನ್. ಭಟ್ ಅವರಿಗೆ ಸಂಘದ ಪರವಾಗಿ ಗೌರವರ್ಪಣೆ ಸಲ್ಲಿಸಿದರು. ಆರಂಭದಿಂದ ಅಂತ್ಯದವರೆಗೆ ಉತ್ಸಾಹವರ್ಧಿ ಚಟುವಟಿಕೆಗಳಿಂದ ಕೂಡಿದ್ದ ಈ ಅಪರೂಪದ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಸಮಾಜ ಬಾಂಧವರಿಂದ ಅತ್ಯುತ್ತಮ ಶ್ಲಾಘನೆ ವ್ಯಕ್ತವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


