ಮುಂಗಾರು ಹಂಗಾಮು ಸಿದ್ಧತೆ: ಬಳ್ಳಾರಿ ಜಿಲ್ಲೆಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆಗಳು

Upayuktha
0

ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಜ್ಜು

 



ಬಳ್ಳಾರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಹಲವೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ವೇಗವನ್ನು ಪಡೆದುಕೊಂಡಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ಲಭ್ಯವಿರುವ ಉತ್ತಮ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತಮ್ಮ ಕೃಷಿ ಭೂಮಿಯನ್ನು ಹದಗೊಳಿಸುವ ಕಾರ್ಯಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ರಂಟೆ-ಕುಂಟೆ ಹೊಡೆಯುವುದು, ರೋಟವೇಟರ್ ಹಾಗೂ ಎತ್ತುಗಳ ನೇಗಿಲು ಬಳಸಿ ಭೂಮಿಯನ್ನು ಹದಗೊಳಿಸುವ ದೃಶ್ಯಗಳು ಜಿಲ್ಲೆಯಾದ್ಯಂತ ಸಾಮಾನ್ಯವಾಗುತ್ತಿವೆ.


ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆಯು 599.0 ಮಿ.ಮೀ ಆಗಿರುತ್ತದೆ. ಮೇ 31 ಅಂತ್ಯಕ್ಕೆ ಸರಾಸರಿ ವಾಡಿಕೆ ಮಳೆಯು 74.4 ಮಿ.ಮೀ ಇರಬೇಕಾಗಿದ್ದು, ಪ್ರಸ್ತುತ 72.4 ಮಿ.ಮೀ ನಷ್ಟು ಉತ್ತಮ ಮಳೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ. ಸೋಮಸುಂದರ್ ಅವರು ತಿಳಿಸಿದ್ದಾರೆ.


1.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ:

ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 1,59,546 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಪ್ರಮುಖ ಬೆಳೆಗಳ ನಿರೀಕ್ಷಿತ ಬಿತ್ತನೆ ವಿಸ್ತೀರ್ಣದ ವಿವರ ಹೀಗಿದೆ. ಭತ್ತ- 87,741 ಹೆಕ್ಟೇರ್, ಮೆಕ್ಕಜೋಳ-26,000 ಹೆಕ್ಟೇರ್, ಹತ್ತಿ- 20,000 ಹೆಕ್ಟೇರ್, ಸಜ್ಜೆ- 10,000 ಹೆಕ್ಟೇರ್, ತೊಗರಿ- 7,224 ಹೆಕ್ಟೇರ್, ತೃಣಧಾನ್ಯಗಳು- 2,508 ಹೆಕ್ಟೇರ್, ಶೇಂಗಾ (ನೆಲಕಡಲೆ)- 1,500 ಹೆಕ್ಟೇರ್, ಸೂರ್ಯಕಾಂತಿ- 1,200 ಹೆಕ್ಟೇರ್, ಕಬ್ಬು- 800 ಹೆಕ್ಟೇರ್.


15 ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬೀಜ ವಿತರಣೆ:
ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಲು ಸಂಪೂರ್ಣ ಸಜ್ಜಾಗಿದೆ. ಜಿಲ್ಲೆಯ 13 ರೈತ ಸಂಪರ್ಕ ಕೇಂದ್ರಗಳು ಮತ್ತು 02 ಹೆಚ್ಚುವರಿ ಕೇಂದ್ರಗಳು ಸೇರಿದಂತೆ ಒಟ್ಟು 15 ಕೇಂದ್ರಗಳ ಮೂಲಕ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ ಮುಂಗಾರು ಹಂಗಾಮಿನಲ್ಲಿ ಒಟ್ಟು 7,115 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಸದ್ಯ 10,415 ಕ್ವಿಂಟಾಲ್ನಷ್ಟು ದೊಡ್ಡ ಪ್ರಮಾಣದ ದಾಸ್ತಾನು ಲಭ್ಯವಿದೆ.


ಸಮರ್ಪಕ ರಸಗೊಬ್ಬರ ದಾಸ್ತಾನು; ಎಫ್ಐಡಿ ಮೂಲಕ ಯೂರಿಯಾ ವಿತರಣೆ:
ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಮರ್ಪಕವಾಗಿದೆ. ಮುಂಗಾರು ಹಂಗಾಮಿಗೆ ಒಟ್ಟು 1,03,778 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಸದ್ಯ 47,533.23 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿರುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ರಸಗೊಬ್ಬರದ ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗುವ ಸಂಭವವಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೈತರಿಗೆ ಯೂರಿಯಾ ರಸಗೊಬ್ಬರವನ್ನು ಸಮರ್ಪಕವಾಗಿ ಒದಗಿಸಲು ಹಾಗೂ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟಲು ಸರ್ಕಾರದ ಆದೇಶದನ್ವಯ ಯೂರಿಯಾವನ್ನು ಕಡ್ಡಾಯವಾಗಿ ಎಫ್ಐಡಿ (ಫಾರ್ಮರ್ ಐಡಿ) ಮೂಲಕವೇ ವಿತರಿಸಲಾಗುವುದು. ಅಲ್ಲದೆ, ರೈತರು ಕೇವಲ ಯೂರಿಯಾ ರಸಗೊಬ್ಬರ ಒಂದನ್ನೇ ಅವಲಂಬಿಸದೆ ಸಾರಜನಕ ಒದಗಿಸುವ ಇತರೆ ರಸಗೊಬ್ಬರಗಳಾದ ಕಾಂಪ್ಲೆಕ್ಸ್ ಗೊಬ್ಬರಗಳು, ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ..ಪಿ ಗಳನ್ನೂ ಸಹ ಬಳಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.


ಅಕ್ರಮ ತಡೆಗೆ ಕಟ್ಟುನಿಟ್ಟಿನ ನಿಗಾ:
ಜಿಲ್ಲೆಯಲ್ಲಿ ಕೃಷಿ ಪರಿಕರಗಳ ಪರಿವೀಕ್ಷಕರ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಗುಣಮಟ್ಟ ಮತ್ತು ಬೆಲೆ ನಿಯಂತ್ರಣದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಖಾಸಗಿ ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನೇ ಮಾರಾಟ ಮಾಡಬೇಕು ಹಾಗೂ ಯೂರಿಯಾವನ್ನು ಎಫ್ಐಡಿ ಮೂಲಕವೇ ವಿತರಿಸಬೇಕು. ನಿಯಮ ಉಲ್ಲಂಘಿಸಿ ಕಾಳಸಂತೆ ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದರೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ.
ರೈತರು ಸಹ ಯಾವುದೇ ಅನಧಿಕೃತ ಮೂಲಗಳಿಂದ ಪರಿಕರಗಳನ್ನು ಖರೀದಿಸದೇ, ಕೇವಲ ಅಧಿಕೃತ ಪರಿಕರ ಮಾರಾಟಗಾರರಿಂದಲೇ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 


Post a Comment

0 Comments
Post a Comment (0)
To Top