ಮಂಗಳೂರು ಹನಿ-ಟ್ರಾಪ್ ಪ್ರಕರಣ ಯೂತ್ ಕಾಂಗ್ರೆಸ್ ನಾಯಕರ ನೈತಿಕ ಅಧಃಪತನಕ್ಕೆ ಸಾಕ್ಷಿ: ನಂದನ್ ಮಲ್ಯ

Upayuktha
0


ಮಂಗಳೂರು: ಮಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ಹನಿ-ಟ್ರಾಪ್ ಮತ್ತು ಬ್ಲಾಕ್‌ಮೇಲ್ ಮಾಡುವ ಮೂಲಕ ಸುಮಾರು 2.77 ಕೋಟಿ ರೂಪಾಯಿ ವಸೂಲಿ ಮಾಡಿರುವ ಘೋರ ಅಪರಾಧ ಪ್ರಕರಣದಲ್ಲಿ ಸ್ಥಳೀಯ ಯೂತ್ ಕಾಂಗ್ರೆಸ್ ಪದಾಧಿಕಾರಿ ನಿಜಾಮ್ ಮತ್ತು ಆತನ ಸಹಚರ ಜಿತೇಶ್ ಬಂಧನಕ್ಕೊಳಗಾಗಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ ಎಂದು ಭಾಜಪ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.


ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಯು.ನಂದನ್ ಮಲ್ಯ ಅವರು, "ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣದ ವಿವರಗಳು ಅತ್ಯಂತ ಆಘಾತಕಾರಿಯಾಗಿದ್ದು, ಕಾಂಗ್ರೆಸ್ ಯುವ ನಾಯಕರ ನೈತಿಕ ಅಧಃಪತನ ಮತ್ತು ಕ್ರಿಮಿನಲ್ ಮನಸ್ಥಿತಿಯನ್ನು ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದೆ. ಉದ್ಯಮಿಯೊಬ್ಬರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು, ಸುಲಿಗೆಕೋರರೊಂದಿಗೆ ಕೈಜೋಡಿಸಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿರುವ ಯೂತ್ ಕಾಂಗ್ರೆಸ್ ನಾಯಕನ ನಡೆ ಅತ್ಯಂತ ಖಂಡನೀಯ" ಎಂದು ಹೇಳಿದ್ದಾರೆ.


ವ್ಯವಸ್ಥಿತ ವಂಚನೆ ಮತ್ತು ಸುಳ್ಳು ಕಥೆಯ ಹಿನ್ನೆಲೆ:

ಪ್ರಕರಣದ ಹಿನ್ನೆಲೆಯನ್ನು ಉಲ್ಲೇಖಿಸಿರುವ ಅವರು, ಈ ಇಡೀ ಪ್ರಕರಣದಲ್ಲಿ ಆರೋಪಿಗಳು ನಡೆಸಿರುವ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತ ಮತ್ತು ಕ್ರೂರವಾದುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಉದ್ಯಮಿ ತನಗೆ ಎದುರಾದ ಬ್ಲಾಕ್‌ಮೇಲ್ ಸಮಸ್ಯೆಯಿಂದ ಪಾರಾಗಲು ಸಹಾಯ ಕೋರಿ ಯೂತ್ ಕಾಂಗ್ರೆಸ್ ಪದಾಧಿಕಾರಿ ನಿಜಾಮ್‌ನನ್ನು ಸಂಪರ್ಕಿಸಿದಾಗ, ಆತ ಸಂತ್ರಸ್ತನಿಗೆ ನೆರವಾಗುವ ಬದುಲು ತಾನೇ ಸ್ವತಃ ಬ್ಲಾಕ್‌ಮೇಲ್ ಜಾಲದ ಸೂತ್ರಧಾರನಾಗಿ ಬದಲಾಗಿದ್ದಾನೆ.


ಅದಕ್ಕಿಂತಲೂ ಮಿಗಿಲಾಗಿ, ಸಹಚರ ಜಿತೇಶ್ 2024 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿ, ನಕಲಿ ಶವಸಂಸ್ಕಾರದ ಫೋಟೋಗಳು ಮತ್ತು ಉದ್ಯಮಿಯ ಹೆಸರಿರುವ ನಕಲಿ ಡೆತ್‌ ನೋಟ್ ತೋರಿಸಿ ಸಂತ್ರಸ್ತನನ್ನು ಕಾನೂನು ಕ್ರಮದ ಹೆಸರಿನಲ್ಲಿ ಹೆದರಿಸಲಾಗಿದೆ. ಮಾನಹಾನಿ ಮತ್ತು ಜೈಲು ಶಿಕ್ಷೆಯ ಭೀತಿಯಿಂದ ಉದ್ಯಮಿ ಕಳೆದ ಎರಡು ವರ್ಷಗಳಿಂದ ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಾ ಬಂದಿದ್ದು, ಕೊನೆಗೆ ಜಿತೇಶ್ ಜೀವಂತವಾಗಿರುವುದನ್ನು ಕಂಡು ಪೊಲೀಸರ ಮೊರೆ ಹೋಗಿದ್ದಾರೆ ಎಂದು ಮಲ್ಯ ವಿವರಿಸಿದ್ದಾರೆ.


ಕಾಂಗ್ರೆಸ್‌ನ ದ್ವಿಮುಖ ನೀತಿಗೆ ತರಾಟೆ:

ಕಾಂಗ್ರೆಸ್ ಪಕ್ಷವು ಸದಾ ಸಾರ್ವಜನಿಕವಾಗಿ ನೈತಿಕತೆಯ ಭಾಷಣ ಬಿಗಿಯುತ್ತದೆ. ಆದರೆ ಅದರ ಯುವ ನಾಯಕರು ಮಾತ್ರ ಇಂತಹ ಹನಿ-ಟ್ರಾಪ್ ಮತ್ತು ಬ್ಲಾಕ್‌ಮೇಲ್ ದಂಧೆಗಳನ್ನು ನಡೆಸುತ್ತಿರುವುದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡಿರುವ ಯುವ ಮೋರ್ಚಾ, ಇದು ಕೇವಲ ವೈಯಕ್ತಿಕ ಅಪರಾಧವಲ್ಲ, ಬದಲಿಗೆ ರಾಜಕೀಯ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ಸಾರ್ವಜನಿಕರನ್ನು ಬೆದರಿಸುವ ವ್ಯವಸ್ಥಿತ ಕ್ರಿಮಿನಲ್ ಜಾಲವಾಗಿದೆ. ಮಂಗಳೂರಿನ ಶಾಂತಿಪ್ರಿಯ ನಾಗರಿಕರು ಮತ್ತು ಉದ್ಯಮಿಗಳು ಇಂತಹ ರಾಜಕೀಯ ಗೂಂಡಾಗಿರಿಯ ನೆರಳಿನಲ್ಲಿ ಬದುಕುವಂತಾಗಿರುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದೆ.


ನಿಷ್ಪಕ್ಷಪಾತ ತನಿಖೆಗೆ ಆಗ್ರಹ:

ಈ ಹಿನ್ನೆಲೆಯಲ್ಲಿ ಭಾಜಪ ಯುವ ಮೋರ್ಚಾ ಮಂಗಳೂರು ಜಿಲ್ಲಾ ಘಟಕವು ಪೊಲೀಸ್ ಇಲಾಖೆಯಿಂದ ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಆಗ್ರಹಿಸಿದೆ.


"ಈ ಲೂಟಿ ಮಾಡಿದ 2.77 ಕೋಟಿ ರೂಪಾಯಿಗಳ ಹಿಂದೆ ಬೇರೆ ಯಾವುದೇ ಪ್ರಭಾವಿ ರಾಜಕೀಯ ಮುಖಂಡರ ಹಸ್ತವಿದೆಯೇ ಅಥವಾ ಯಾರಿಗಾದರೂ ಹಣದ ಪಾಲು ಹೋಗಿದೆಯೇ ಎಂಬುದನ್ನು ಪತ್ತೆಹಚ್ಚಲು ಆಳವಾದ ತನಿಖೆಯಾಗಬೇಕು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ ಮಂಗಳೂರು ನಗರ ಪೊಲೀಸರ ಕ್ರಮವನ್ನು ಶ್ಲಾಘಿಸುತ್ತಾ, ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು," ಎಂದು ನಂದನ್ ಮಲ್ಯ ಒತ್ತಾಯಿಸಿದ್ದಾರೆ.


ಒಂದು ವೇಳೆ ಈ ತನಿಖೆಯನ್ನು ಹಳ್ಳಹಿಡಿಯಲು ರಾಜಕೀಯ ಪ್ರಭಾವ ಬಳಸಿದರೆ ಬಿಜೆಪಿ ಯುವ ಮೋರ್ಚಾ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top