ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಬಹುನಿರೀಕ್ಷಿತ ವಂದೇ ಭಾರತ್ ರೈಲಿನ ಸಂಚಾರಕ್ಕೆ ಮತ್ತೆ ಅಡಚಣೆ ಎದುರಾಗಿದೆ. ರೈಲ್ವೇ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಗಣ್ಯರು, ನಾಯಕರು ಎಲ್ಲ ಈ ಬಹುನಿರೀಕ್ಷಿತ ರೈಲು ಆರಂಭಕ್ಕೆ ಹಲವು ಗಡುವುಗಳನ್ನು ಹೇಳುತ್ತಲೇ ಬಂದಿದ್ದರು. ಇತ್ತೀಚಿನ ಮಾಹಿತಿಯ ಪ್ರಕಾರ ಜೂನ್ 3 ರಿಂದ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭವಾಗಬೇಕಿತ್ತು. ಆದರೆ ಶಿರಾಡಿ ಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿಗೆ ಅಗತ್ಯವಿರುವ ಆಟೋ ಬ್ರೇಕಿಂಗ್ ವ್ಯವಸ್ಥೆಯನ್ನೇ ಅಳವಡಿಸಿಲ್ಲ ಎಂಬ ವಿಚಾರ ರೈಲ್ವೇ ಇಲಾಖೆಗೆ ಈಗಷ್ಟೇ ಜ್ಞಾನೋದಯವಾದಂತಿದೆ.
ಸದ್ಯಕ್ಕೆ ಅದೊಂದು ನೆಪ ಒಡ್ಡಿ ವಂದೇ ಭಾರತ್ ಪರೀಕ್ಷಾರ್ಥ ಸಂಚಾರ ರದ್ದಾಗಿದೆ. ರಾಜ್ಯದ ಅತ್ಯಂತ ಪ್ರಮುಖವಾದ ಎರಡು ನಗರಗಳ ನಡುವೆ ವೇಗದ ರೈಲು ಸಂಪರ್ಕಕ್ಕಾಗಿ ಜನತೆ ಕಾತರದಿಂದ ನಿರೀಕ್ಷಿಸುತ್ತಿರುವಾಗ ರೈಲ್ವೇ ಇಲಾಖೆ ಮತ್ತೆ ಕೈಕೊಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಜೂನ್ 3 ರಂದು ನಿಗದಿಯಾಗಿದ್ದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಬಹುನಿರೀಕ್ಷಿತ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ ರದ್ದುಗೊಳಿಸಿದೆ.
ಈ ಸಂಬಂಧ ನೈಋತ್ಯ ರೈಲ್ವೆಯ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರ (ಸಿಪಿಟಿಎಂ) ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ ಮತ್ತು ಎಲ್ಲಾ ಸಂಬಂಧಿತ ಇಲಾಖೆಗಳಿಗೆ ತಿಳಿಸಲಾಗಿದೆ. ಅದರಂತೆ, ಪರೀಕ್ಷಾರ್ಥ ಸಂಚಾರ ಮತ್ತು ನಿಲ್ದಾಣಗಳಲ್ಲಿನ ಮರು ವೇಳಾಪಟ್ಟಿ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ನಿಗದಿತ ಕೆಲಸಗಳನ್ನು ಸಹ ರದ್ದುಗೊಳಿಸಲಾಗಿದೆ.
ಈ ಮಾರ್ಗದ ವಿದ್ಯುದೀಕರಣವೇ ಕುಂಟುತ್ತ ಕುಂಟುತ್ತಾ ಸಾಗಿ ಎರಡು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಓಡುವ ರೈಲಿಗೆ ಸ್ವಯಂಚಾಲಿತ ಬ್ರೇಕಿಂಗ್ ವ್ಯವಸ್ಥೆ ಬೇಕು ಅನ್ನುವ ಪರಿಜ್ಞಾನ ಪರೀಕ್ಷಾರ್ಥ ಓಡಾಟದ ದಿನಾಂಕ ಘೋಷಿಸುವಾಗಲೇ ಇಲಾಖೆಯ ಅಧಿಕಾರಿಗಳಿಗೆ ಇರಲಿಲ್ಲವೇ ಎಂಬುದು ಕರಾವಳಿ ಭಾಗದ ರೈಲು ಪ್ರಯಾಣಿಕರ ಪ್ರಶ್ನೆಯಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


