ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಚಂದ್ರಶೇಖರ್ ಅವರು ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ
ಇಲಾಖೆಯಿಂದ 'ಪ್ರೊಫೆಸರ್' ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ
ಪ್ರೊಫೆಸರ್ ಹುದ್ದೆಗೇರಿದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇವರು
ತಮ್ಮ ಪಿಯುಸಿ ಹಾಗೂ ಬಿ.ಎಸ್ಸಿ ಪದವಿಯನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿ, ಮಂಗಳೂರು
ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ. ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ
(SLET) ಉತ್ತೀರ್ಣರಾದ ಇವರು, 2000ನೇ ಇಸವಿಯಲ್ಲಿ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ
ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. "Studies on Concentration of
Radionuclides and Trace Elements in some Selected Medicinal Plants " ಎಂಬ ಪ್ರಬಂಧಕ್ಕೆ
ಇವರಿಗೆ ಪಿಎಚ್.ಡಿ ದೊರೆತಿದೆ.
ಡಾ.
ಚಂದ್ರಶೇಖರ್ ಅವರು 'ಸ್ಕೋಪಸ್' (Scopus) ಮತ್ತು 'ವೆಬ್ ಆಫ್ ಸೈನ್ಸ್' ನಂತಹ ಡೇಟಾಬೇಸ್‌ನಲ್ಲಿ
ಅಡಕವಾಗಿರುವ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಅನೇಕ ಸಂಶೋಧನಾ
ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಜ್ಞಾನ ಮತ್ತು ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದ ಜರ್ನಲ್‌ಗಳಿಗೆ
ರೆಫರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ವೇದಿಕೆಗಳಲ್ಲಿ ವೈಜ್ಞಾನಿಕ
ಮತ್ತು ಇತರ ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರಸ್ತುತ ಕಾಲೇಜಿನ ಎನ್.ಎಸ್.ಎಸ್ (NSS) ಯೋಜನಾಧಿಕಾರಿಯಾಗಿ
ಸೇವೆ ಸಲ್ಲಿಸುತ್ತಿರುವ ಇವರು, ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ
ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನ ಪ್ರತಿನಿಧಿಸಿದ್ದರು. ಇವರ ನಿಸ್ವಾರ್ಥ ಎನ್.ಎಸ್.ಎಸ್
ಚಟುವಟಿಕೆಗಳನ್ನು ಗುರುತಿಸಿ ಪುತ್ತೂರಿನ ಲಯನ್ಸ್ ಮತ್ತು ರೋಟರಿ ಕ್ಲಬ್ ಇತ್ತೀಚೆಗೆ ಇವರನ್ನು ಗೌರವಿಸಿದವು.
ಇವರು
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಶ್ರೀಮತಿ ಲಕ್ಷ್ಮಿ ಮತ್ತು ದಿವಂಗತ ಮಹಾಲಿಂಗ ಮೂಲ್ಯ ಅವರ ಪುತ್ರ.
ಡಾ. ಕೆ. ಚಂದ್ರಶೇಖರ್ ಅವರ ಈ ಸಾಧನೆಗೆ ಕಾಲೇಜಿನ ಸಂಚಾಲಕರಾದ ವಂ. ಡಾ. ಜೆ. ಬಿ. ಸಲ್ದಾನ್ಹಾ, ಹಾಗೂ
ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೋ ,ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ
ಸಲ್ಲಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


