ವಿದ್ಯಾರ್ಥಿನಿಯರಿಗೆ ಪರಿಸರ ಸ್ನೇಹಿ ಹತ್ತಿಬಟ್ಟೆ ಪ್ಯಾಡ್ ವಿತರಣೆ: ಆರೋಗ್ಯ, ಪರಿಸರ ಜಾಗೃತಿ ಕಾರ್ಯಕ್ರಮ

Upayuktha
0


ಉಡುಪಿ: ಕೇವಲ 586 ಮಹಿಳೆಯರು ತಿಂಗಳಿಗೆ ತಲಾ 12 ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿದರೂ, ವರ್ಷಕ್ಕೆ 84,384 ಪ್ಲಾಸ್ಟಿಕ್ ಪ್ಯಾಡ್‌ಗಳ ತ್ಯಾಜ್ಯ ನಿರ್ಮಾಣವಾಗುತ್ತದೆ. ಈ ಗಂಭೀರ ಪರಿಸರ ಸಮಸ್ಯೆಯ ಕುರಿತು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಸ್ವಚ್ಛತಾ ವಿಭಾಗದ ವತಿಯಿಂದ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಮಣಿಪಾಲದ ಪ್ರಾಧ್ಯಾಪಕರಾದ ಡಾ. ವಿದ್ಯಾ ಪ್ರತಾಪ್ ಹಾಗೂ ಡಾ. ಅರುಣಿಮಾ ಕೆ.ವಿ. ಅವರು ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.


ಗರ್ಭಕೋಶದ ಆರೋಗ್ಯ ಮತ್ತು ವೈಯಕ್ತಿಕ ಸ್ವಚ್ಛತೆಯ ಮಹತ್ವವನ್ನು ವಿವರಿಸಿದ ಅವರು, ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ರಾಸಾಯನಿಕ ಅಂಶಗಳಿರುವುದರಿಂದ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಅಲ್ಲದೆ, ಅವುಗಳ ತ್ಯಾಜ್ಯ ವಿಲೇವಾರಿ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿರುವುದರಿಂದ ಪರಿಸರ ಸ್ನೇಹಿ ಹತ್ತಿ ಪ್ಯಾಡ್‌ಗಳ ಬಳಕೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕೊಯಮತ್ತೂರಿನ ಜೆನಿಸಿಸ್ ಪ್ರೈವೇಟ್ ಪ್ಯಾಕೇಜಿಂಗ್ ಲಿಮಿಟೆಡ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಾಲೇಜಿನ ಎಲ್ಲಾ 586 ವಿದ್ಯಾರ್ಥಿನಿಯರಿಗೆ ಹತ್ತಿಬಟ್ಟೆಯಿಂದ ತಯಾರಿಸಲಾದ ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಅವುಗಳ ಬಳಕೆ ಮತ್ತು ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆಯನ್ನೂ ನಡೆಸಲಾಯಿತು.


ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ವಿದ್ಯಾ ಪ್ರತಾಪ್ ಅವರ ಈ ಸಮಾಜಮುಖಿ ಕಾರ್ಯ ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಯಿತು.


ಉಪನ್ಯಾಸಕಿ ಶ್ರೀಮತಿ ಗಿರಿಜಾ ಹೆಗಡೆ ಅತಿಥಿಗಳನ್ನು ಸ್ವಾಗತಿಸಿ, ಕಾಲೇಜಿನ ಆರೋಗ್ಯ ಮತ್ತು ಸ್ವಚ್ಛತಾ ವಿದ್ಯಾರ್ಥಿ, ಎನ್‌ಎಸ್‌ಎಸ್‌ನ ಪ್ರತಿನಿಧಿಗಳು ಎಲ್ಲಾ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಜಗದೀಶ್ ಕುಮಾರ್ ವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top