ಬೆಂಗಳೂರು: ಅಖಿಲ ಭಾರತ ಸಾಹಿತ್ಯ ಪರಿಷತ್ (ಅಭಾಸಾಪ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಕುಮಾರವ್ಯಾಸ ಭಾರತದ ವಿರಾಟಪರ್ವದ ‘ಉತ್ತರನ ಪೌರುಷ’ ಕಥಾಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಇಲ್ಲಿನ ವಿದ್ಯಾರಣ್ಯಪುರದ ಎಂ.ಇ.ಎಸ್. ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದುಷಿ ಎನ್. ಶ್ರೀಮತಿ ಜಯರಾಮ್ ಅವರು ಕುಮಾರವ್ಯಾಸ ಭಾರತದ ಪದ್ಯಗಳನ್ನು ಸುಶ್ರಾವ್ಯವಾಗಿ ವಾಚಿಸಿದರು. ಶ್ರೀಮತಿ ವಿ. ಭಾಗ್ಯಲಕ್ಷ್ಮಿ ಸುಬ್ರಹ್ಮಣ್ಯ ಅವರು ಕಥಾಪ್ರಸಂಗದ ಮಾರ್ಮಿಕ ವ್ಯಾಖ್ಯಾನ ನೀಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಅಧಿಕಮಾಸದ ಸಾಲು ಸಾಲು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಳೆಯ ವಾತಾವರಣದ ನಡುವೆಯೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಮಕ ವೈಭವವನ್ನು ಆಸ್ವಾದಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಭಾಸಾಪ ಬೆಂಗಳೂರು ಮಹಾನಗರದ ಅಧ್ಯಕ್ಷ ಎಂ. ಎಸ್. ನರಸಿಂಹಮೂರ್ತಿ ಅವರು ದಂಪತಿ ಸಮೇತ ಉಪಸ್ಥಿತರಿದ್ದು ಕಲಾವಿದರನ್ನು ಪ್ರೋತ್ಸಾಹಿಸಿದರು. ಬಳಿಕ ಮಾತನಾಡಿದ ಅವರು, ತಮ್ಮ ವಾಗ್ಝರಿಯ ಮೂಲಕ ನೆರೆದಿದ್ದ ಸಭಾಸದರನ್ನು ರಂಜಿಸಿದರು.
ಸಮಿತಿಯ ಸಂಪರ್ಕ ಪ್ರಮುಖರಾದ ರಮೇಶ್ ತರೂರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀಮತಿ ಜ್ಯೋತಿ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀಮತಿ ಸುಮಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಮಿತಿಯ ಸಹ ಕಾರ್ಯದರ್ಶಿಗಳಾದ ಸತೀಶ್ ಕುಮಾರ್ ವಂದನಾರ್ಪಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


