ಕಲೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ; ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ: ದಿನೇಶ್ ಶೆಟ್ಟಿ ಕಾವಳಕಟ್ಟೆ

Upayuktha
0

ಬಂಟರ ಸಂಘ ಕಾವಳಕಟ್ಟೆ ವಲಯ: ಕಲಾಭಿನಂದನೆ– 2026 ಸಂಭ್ರಮಾಚರಣೆ



ಉಜಿರೆ: ಕಲೆ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪವಿತ್ರ ಮಾಧ್ಯಮ. ಕಲಾವಿದರ ಸಾಧನೆಯ ಹಿಂದೆ ಅಪಾರ ಪರಿಶ್ರಮ, ತ್ಯಾಗ ಮತ್ತು ನಿರಂತರ ಅಭ್ಯಾಸ ಇರುತ್ತದೆ. ಕಲಾಸಾಧಕರನ್ನು ಸಮಾಜ ಗುರುತಿಸಿ ಗೌರವಿಸಿದಾಗ ಮತ್ತಷ್ಟು ಸಾಧಿಸುವ ಉತ್ಸಾಹ ಹೆಚ್ಚುತ್ತದೆ. ಕಲೆಯ ತಳಹದಿಯಲ್ಲಿ ಈ ಸಮಾಜ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ಸಮಾಜಿಕ ಚಿಂತಕ ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿಪ್ರಾಯಪಟ್ಟರು. 


ಇವರು ಬಂಟ್ವಾಳ ತಾಲೂಕು ಬಂಟರ ಸಂಘದ ವತಿಯಿಂದ ಬಂಟರ ಸಂಘ ಕಾವಳಕಟ್ಟೆ ವಲಯದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ಡಡ್ಡ ರವರ ನಿವಾಸದಲ್ಲಿ ನಡೆದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾವಳಕಟ್ಟೆ ವಲಯದ ಕಲಾವಿದರನ್ನು ಅಭಿನಂದಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ನೀಡುವುದು ಪ್ರತಿಯೊಂದು ಸಂಘ-ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ. ಬಂಟರ ಸಂಘ ಕಾವಳಕಟ್ಟೆ ವಲಯವು ಕಳೆದ ಹಲವು ವರ್ಷಗಳಿಂದ ಸಮಾಜಸೇವೆ, ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ  ಮುಂಚೂಣಿಯಲ್ಲಿದ್ದು, ಪ್ರತಿಭಾವಂತರಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.


ಕಲಾವಿದರನ್ನು ಗೌರವಿಸುವ ಸಮಾಜ ಎಂದಿಗೂ ತನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಳೆದುಕೊಳ್ಳುವುದಿಲ್ಲ. ಯುವಜನರು ಕಲೆ ಮತ್ತು ಸಂಸ್ಕೃತಿಯತ್ತ ಸೆಳೆಯುವ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ. ಬಂಟರ ಸಂಘ ಕಾವಳಕಟ್ಟೆ ವಲಯವು ಕೈಗೊಂಡಿರುವ ಈ ಕಾರ್ಯ ಇತರ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಮೋಹನ್ ಶೆಟ್ಟಿ ನರ್ವಲ್ಡಡ್ಡ ಮಾತನಾಡಿ, ಕಲಾವಿದರನ್ನು ಗೌರವಿಸುವುದು ಎಂದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸಿದಂತೆಯೇ. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಘಗಳು ಸಮಾಜಕ್ಕೆ ದಾರಿದೀಪವಾಗುತ್ತವೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.


ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾವಳಕಟ್ಟೆ ವಲಯದ ನೃತ್ಯ ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಸಂಯೋಜಿಸಿದ ಮಂಗಳೂರಿನ ಸೀಝ್ಲಿಂಗ್ ಡ್ಯಾನ್ಸ್ ಅಕಾಡೆಮಿಯ ಶುಭಕಿರಣ ಮಣಿ ಹಾಗೂ ಅವರ ತಂಡವನ್ನು ವಿಶೇಷವಾಗಿ ಶಾಲು ಹೊದಿಸಿ ಅಭಿನಂದಿಸಲಾಯಿತು. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರ ಸಾಧನೆಯನ್ನು ಪ್ರಶಂಸಿಸಿ ಗೌರವಿಸಲಾಯಿತು.


ಸಂಘದ ಕಾರ್ಯದರ್ಶಿ  ಉದಯ ಕುಮಾರ್ ಶೆಟ್ಟಿ ಸಂಘದ ಲೆಕ್ಕಪತ್ರವನ್ನು ಮಂಡಿಸಿ, ಸಂಘದ ಆದಾಯ–ವೆಚ್ಚ ಹಾಗೂ ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿವರಗಳನ್ನು ಸಭೆಯ ಮುಂದಿಟ್ಟರು. ಸದಸ್ಯರು ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಮಾರಿ ನಿಧಿಶಾ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾವಳಕಟ್ಟೆ ವಲಯದ ಗೌರವಾಧ್ಯಕ್ಷರಾದ  ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಗೌರವ ಸಲಹೆಗಾರರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಬಿಯಂತಬೆಟ್ಟು, ಕೋಶಾಧಿಕಾರಿಯಾದ ಚಂದ್ರಶೇಖರ ಶೆಟ್ಟಿ ಪಣೆಕಲ, ಯುವ ವಿಭಾಗದ ಅಧ್ಯಕ್ಷರು ಕಿಶೋರ್ ರೈ ಕಾಡಬೆಟ್ಟು ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು.


ಮಾನ್ವಿ ಪ್ರಾರ್ಥಿಸಿ, ಪುನೀತ್ ಶೆಟ್ಟಿ ಕೈಮಾರು ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು.  ಉದಯ ಕುಮಾರ್ ಶೆಟ್ಟಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top