ಅದೊಂದು
ಮಳೆಗಾಲ. ವಿಪರೀತ ಮಳೆ ಸುರಿಯುತ್ತಿತ್ತು. ನನ್ನ
ತರಗತಿ ಮುಗಿಸಿ ಇನ್ನೊಂದು ಕಟ್ಟಡಕ್ಕೆ ಹೋಗಬೇಕಿತ್ತು. ಒಬ್ಬ ವಿದ್ಯಾರ್ಥಿಯನ್ನು ಕರೆದೆ.
"ತಮ್ಮ, ಒಂದ್ಸಾರಿ ನಿನ್ನ ಕೊಡೆ ತಗೊಂಡು ಬಾ"
ಎಂದು ಹೇಳಿದೆ. " ಓಕೆ ಸರ್" ಹೇಳಿ
ಹೊರಟವನು ಸಲ್ಪ ಮುಂದೆ ಹೋಗಿ
ಅನುಮಾನದಲ್ಲಿ ನಿಂತು ಹಿಂದಿರುಗಿದ. ಬಂದು ಕೇಳಿದ "ಸರ್....
ಕೊಡೆ ಅಂದ್ರೆ ಏನು?" ಮಳೆಯ ನಡುವೆ ಗುಡುಗಿದ
ಶಬ್ದ ಕೇಳಿಸಿತು. ಸಾವರಿಸಿಕೊಂಡು ಹೇಳಿದೆ "ಛತ್ರಿ... ಛತ್ರಿ ...I mean Umbrella
Umbrella". ಅದಕ್ಕವನು
"ಓಹ್..ಅದಾ?" ಎಂದು ಹೇಳಿ ಹೋಗಿ
ಕೊಡೆಯನ್ನು ತಂದುಕೊಟ್ಟ. "ಸರ್ .. ಕೋಡೆ.!" ಎಂದ ನಗುತ್ತಾ. ನಾನೂ
ನಕ್ಕೆ, ಆದರೆ ಮಳೆಯೇ ನಿಂತಿತ್ತು.
ಇದೆಲ್ಲಾ
ಯಾಕೆ ನೆನಪಿಗೆ ತಂದುಕೊಂಡೆ ಎನ್ನುವುದಕ್ಕೂ ಒಂದು ಕಾರಣ ಇದೆ.
ಇತ್ತೀಚಿಗೆ ಒಂದು ಪ್ರಬಂಧ ಸ್ಪರ್ಧೆ
ನಿರ್ಣಯಕ್ಕೆ ಹೋಗಿದ್ದೆ. ಮಕ್ಕಳ ಹೊಸ ಹೊಸ ವಿಚಾರಗಳು
ಏನಿರಬಹುದು ಅನ್ನುವ ಕುತೂಹಲಿಗನಾಗಿ ಕುಳಿತೆ. ಅದೂ ಅಲ್ಲದೇ, ಇತ್ತೀಚಿಗೆ
ಮಕ್ಕಳ ಕನ್ನಡ ಬರವಣಿಗೆಯನ್ನು ನೋಡಲು ಅವಕಾಶ ಸಿಕ್ಕಿರಲಿಲ್ಲ. ಇಂಗ್ಲೀಷ್ ಭಾಷೆಯ ಬೋಧನೆಯಲ್ಲಿ ತಲ್ಲೀನನಾಗಿದ್ದ ನನಗೆ, ಕನ್ನಡ ಭಾಷೆ ಇಂದಿನ ವಿದ್ಯಾರ್ಥಿಗಳಲ್ಲಿ
ಯಾವ ಮಟ್ಟದಲ್ಲಿದೆ ಎನ್ನುವ ಚಿಂತೆಯೂ ಇರಲಿಲ್ಲ. ಎಲ್ಲರಂತೆ ಕನ್ನಡ ದಿನದ ಸಮಯದಲ್ಲಿ ಭಾಷಾಭಿಮಾನ
ಉಕ್ಕಿ ಹರಿದಂತೆ ನನ್ನಲ್ಲೂ ಆಗಿತ್ತೇ ವಿನಃ ಇಂದಿನ ಸ್ಥಿತಿಯ
ಅನುಭವವಾಗಲಿ, ಅಧ್ಯಯನವಾಗಲೀ ನನಗೆ ಆಗಿರಲಿಲ್ಲ.
ನಿರ್ಣಾಯಕನಾದ
ಮೇಲೆ ಪ್ರಬಂಧದಲ್ಲಿ ಬರೆದ ವಿಚಾರಗಳನ್ನು, ಭಾಷಾ
ಗುಣಮಟ್ಟವನ್ನು ಹಾಗೂ ಪ್ರೌಢಿಮೆಯನ್ನು ಆಳವಾಗಿ
ಪರೀಕ್ಷಿಸಬೇಕಲ್ಲ. ಆದರೆ ನನಗೆ ಗಾಬರಿ
ಆಗುವ ಸಂದರ್ಭ! ಸುಮಾರನ್ನು ನೋಡಿದ ಮೇಲೆ ನಿರ್ವಾಹಕರಲ್ಲಿ "ಈ ಸ್ಪರ್ಧೆಗೆ
ವಿಜೇತರನ್ನು ಆಯ್ಕೆ ಮಾಡಲೇಬೇಕಾ?" ಎಂದು ಹಾಸ್ಯದ ದಾಟಿಯಲ್ಲಿ
ಕೇಳಿದೆ.
ಹೀಗೆ
ಕೆಲವೊಂದು ವಿಚಾರಗಳು ಆತಂಕದ ರೂಪದಲ್ಲಿ ಎದುರು ಬಂದವು. ಇಂದು ಎಲ್ಲಾ ಕಡೆ
ಹೆಚ್ಚಿನ ಸ್ಪರ್ಧಿಗಳು ಇಂಗ್ಲೀಷ್ ಮಾಧ್ಯಮದವರೇ. ಉತ್ತಮ ಗುಣಾತ್ಮಕ ಶಿಕ್ಷಣವನ್ನು ಪಡೆಯುತ್ತಿರುವವರು ಅನ್ನುವ ನಂಬಿಕೆ ಕೂಡ ಇದೆ. ಅಂತಹ
ಮಕ್ಕಳು ಬರೆದವುಗಳಲ್ಲಿ ಒಂದು
ವಾಕ್ಯ ಹೀಗೆ ಮುಗಿದಿತ್ತು"ಪರ್ವತಗಳನ್ನು
ಚಲಾಯಿಸಬಹುದು." ಇನ್ನೊಂದು "ಭ್ರಷ್ಟಾಚಾರದಿಂದ ಬಳಲುತ್ತಿರುವವರಿಗೆ ಶಿಕ್ಷೆಯನ್ನು ಒದಗಿಸಬೇಕು". ಜೊತೆಗೆ, ಕೆಲವು ಪದಪುಂಜಗಳು ಇನ್ನೂ ಅದ್ಬುತ "ಜೇನನ್ನು ಬಿಚ್ಚಿದವನು", 'ಸೌಂದರ್ಯತೆ', 'ಇೀಗಾ' (ಈಗಾ!) ಇತ್ಯಾದಿ. ಇವೆಲ್ಲ ವಿದ್ಯಾರ್ಥಿಗಳ ತಪ್ಪಲ್ಲ. ವಿಷಯವಸ್ತುವನ್ನು ಕನ್ನಡಕ್ಕೆ ಭಾಷಾಂತರಗೊಳಿಸಿದರ ಪ್ರಭಾವ! ಹೆಚ್ಚಿನ ಕಡೆಗಳಲ್ಲಿ ಇದೇ ಭಾಷಾಂತರದ ಕನ್ನಡವೇ
ಬಳಕೆಯಾಗುತ್ತಿದೆ. ಸಮಯದ ಅಭಾವ ಮತ್ತು
ಸುಲಭದಲ್ಲಿ ಲಭಿಸುವ ಗೂಗಲ್ ಕನ್ನಡೀಕರಣ ಮಕ್ಕಳಿಗೆ ಮೂಲ ಮತ್ತು ಶುದ್ಧ
ಕನ್ನಡವನ್ನು ಮರೆಮಾಚಿಸುತ್ತಿದೆಯೇನೋ ಎಂದು ಅನಿಸದೇ ಇಲ್ಲಾ.
ನಿಧಾನವಾಗಿ 'ಜಾಗತೀಕರಣದ ಭಾಷೆ'ಯತ್ತ (universal language) ನಮ್ಮ ಮುಂದಿನ ಪೀಳಿಗೆ
ಸಾಗುತ್ತಿದೆಯೇನೋ.
ಒಂದಿಷ್ಟು
ಸಂಸ್ಥೆಗಳು ಇಂಗ್ಲೀಷ್ ಮಾಧ್ಯಮವನ್ನು ತೆರೆದಿದ್ದು ಸಂಖ್ಯೆಗೋಸ್ಕರವೇನೋ ಅಂತ ಅನುಮಾನ ಬಾರದೆ
ಇಲ್ಲ. ಅತ್ತ ಇಂಗ್ಲೀಷ್ ಕೂಡ
ಪೂರ್ತಿಯಾಗಿ ಕಲಿಯದೇ ಇತ್ತ ಕನ್ನಡವೂ ಇಲ್ಲದೇ
ಮಧ್ಯದಲ್ಲಿ ಸಿಲುಕುತ್ತಿದ್ದಾರೆ ಅನ್ನುವುದು ಕೂಡ ನಿಜವೇ. ಇಂದಿನ
ಮಕ್ಕಳಿಗೆ ಭಾಷೆಯ ಅರಿವನ್ನು ವ್ಯವಸ್ಥಿತವಾಗಿ ಮೂಡಿಸಲೇಬೇಕು. ಭಾಷಣಕ್ಕೆ, ಆಚರಣೆಗೆ ಕನ್ನಡ ಎಂದರೆ ಏನೇನೂ ಸಾಲದು. ಹೋಗ್ತಾ ಹೋಗ್ತಾ ತಪ್ಪೇ ಸರಿ ಎಂದು ಆಗಿಬಿಡಬಹುದು!
ಇತ್ತೀಚಿಗೆ ಭಾಷಾಂತರಿತ ಜಾಹೀರಾತುಗಳು, ಧಾರಾವಾಹಿಗಳು ಅಂತದೇ ಅಸಹಜ ಕನ್ನಡವನ್ನು ಪಸರಿಸುತ್ತಿವೆ.
ಭಾಷಾಂತರದ, ಚಾಟ್ Gpt ಕನ್ನಡವೇ ಮುಂದೆ ಪೂರ್ತಿ ಬಳಕೆಗೆ ಬಂದುಬಿಟ್ಟರೆ ಹೇಗೆ? ಊಹಿಸಿಕೊಳ್ಳಿ. ನಾನೇನು ಕನ್ನಡದ ಪಂಡಿತನಲ್ಲ. ಆದರೆ ಸ್ಥಳೀಯ ಸೊಗಡಿನ
ಕನ್ನಡ ಭಾಷೆಯ ಮೇಲೆ ಇರುವ ಪ್ರೀತಿಯಿಂದ
ಇಲ್ಲಿ ಹಂಚಿಕೊಳ್ಳಬೇಕೆನಿಸಿತು.
- ಧರ್ಮಾನಂದ
ಭಟ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


