ಮಹಾತ್ಮರ ಹೆಜ್ಜೆಗಳು- ಶಾಶ್ವತ ಸತ್ಯದ ಹೊಳಹಿನಲ್ಲಿ

Upayuktha
0

  



ಅದು 2007 ಸಮಯ. ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ ತಮ್ಮ ಅವಧಿಯನ್ನು ಪೂರೈಸುವ ಅಂತಿಮ ದಿನಗಳು ಅವಾಗಿದ್ದವು. ಇಡೀ ದೇಶದ ಜನತೆ ಅಬ್ದುಲ್ ಕಲಾಂರನ್ನು ಅವರ ಬುದ್ಧಿಮತ್ತೆಗೆ, ವೈಜ್ಞಾನಿಕತೆಗೆ ಮಾತ್ರ ಗೌರವ ನೀಡುತ್ತಿರಲಿಲ್ಲ ಬದಲಾಗಿ ಅವರು ಕಲಾಮ್ ಅವರನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದರು.


ಜನಸಾಮಾನ್ಯರಿಂದ ಹಿಡಿದು ರಾಜಕೀಯ ಧುರೀಣರವರೆಗೆ ಪ್ರತಿಯೊಬ್ಬರ ಮನಸ್ಥಿತಿ ಅಬ್ದುಲ್ ಕಲಾಂ ಅವರು ಮತ್ತೊಮ್ಮೆ ರಾಷ್ಟ್ರಪತಿಯಾಗಿ ಅಧಿಕಾರವನ್ನು ಸ್ವೀಕರಿಸಲಿ ಎಂಬುದೇ ಆಗಿತ್ತು. ನಿಟ್ಟಿನಲ್ಲಿ ಅವರ ಮನ ಒಲಿಸುವ ಪ್ರಯತ್ನಗಳು ಕೂಡ ನಡೆದಿದ್ದವು.


ಅಂದಿನ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಕೂಡ ಅಬ್ದುಲ್ ಕಲಾಂ ಅವರನ್ನು  ಅತ್ಯಂತ ಗೌರವಿಸುತ್ತಿದ್ದರು. ಅವರು ಅಬ್ದುಲ್ ಕಲಾಂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ 'ತಾವು ಮತ್ತೊಮ್ಮೆ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಳ್ಳಿ ನಮ್ಮೆಲ್ಲರ ಬೆಂಬಲ ತಮಗಿದೆ' ಎಂದು ಅತ್ಯಂತ ಪ್ರಾಮಾಣಿಕತೆಯಿಂದ ಗೌರವಪೂರ್ವಕವಾಗಿ ವಿನಂತಿಸಿಕೊಂಡರು.


ರಾಜಕಾರಣದಲ್ಲಿ ಬಹುತೇಕ ಜನರು ಅಧಿಕಾರ, ಗೌರವ ಮತ್ತು ಮತ್ತೊಂದು ಬಾರಿ ದೇಶದ ಅತ್ಯುನ್ನತ ಹುದ್ದೆಯಲ್ಲಿ ಕುಳಿತುಕೊಳ್ಳುವ ಅವಕಾಶ ದೊರೆತರೆ ಬೇಡ ಎಂದು ಹೇಳುವುದಿಲ್ಲ ಅಲ್ಲವೇ ? ಆದರೆ ಕಲಾಂ ಅವರು ಉತ್ತರಿಸಿದ ರೀತಿ ನಮ್ಮ ಆತ್ಮಸಾಕ್ಷಿಯನ್ನು ನಾವು ಮಾಡಿಕೊಳ್ಳುವ ಪ್ರೀತಿಯಲ್ಲಿ ಗಾಢವಾಗಿ ತಟ್ಟುತ್ತದೆ.


ಅತ್ಯಂತ ಶಾಂತವಾಗಿ ಅವರು 'ನಾನು ರಾಷ್ಟ್ರಪತಿ ಭವನಕ್ಕೆ ಮರಳಿ ಬರಲು ಒಪ್ಪಿಕೊಳ್ಳುವೆ, ಆದರೆ ಇದಕ್ಕೆ ಬಹುತೇಕ ಎಲ್ಲರ ಸರ್ವಾನುಮತದ ಒಪ್ಪಿಗೆ ಬೇಕು. ರಾಷ್ಟ್ರಪತಿಯಂತಹ ಗೌರವಾನ್ವಿತ ಹುದ್ದೆಯು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಬಾರದು ಎಂಬುದು ನನ್ನ ಆಶಯವಾಗಿದೆ' ಎಂದು ಹೇಳಿದರು.


ನಿಜ ! ರಾಷ್ಟ್ರಪತಿಯಂತಹ ಗೌರವಾನ್ವಿತ ಹುದ್ದೆಯು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಬಾರದು ಎಂದು ಕೋಟ್ಯಾಂತರ ಜನರಿಂದ ಪ್ರೀತಿಸಲ್ಪಟ್ಟ, ಗೌರವಿಸಲ್ಪಟ್ಟ ವ್ಯಕ್ತಿ ಮನಸ್ಸು ಮಾಡಿದ್ದರೆ ಮತ್ತೆ ಅಧಿಕಾರದಲ್ಲಿ ಉಳಿಯಬಹುದಿತ್ತು, ಆದರೆ ಅವರು ರಾಷ್ಟ್ರಪತಿ ಭವನದಿಂದ ನಿರ್ಗಮಿಸುವುದನ್ನು ಆಯ್ದುಕೊಂಡರು. ಏಕೆಂದರೆ ಅವರಿಗೆ ತಾವು ರಾಷ್ಟ್ರಪತಿಯಾಗುವ ಗೌರವಕ್ಕಿಂತಲೂ ರಾಷ್ಟ್ರಪತಿ ಹುದ್ದೆಯ ಘನತೆ ಹೆಚ್ಚಿನದು ಎಂಬ ಅರಿವಿತ್ತು


ತಾವು ರಾಷ್ಟ್ರಪತಿ ಹುದ್ದೆಯಲ್ಲಿ ಮುಂದುವರೆಯಲು ಎಲ್ಲ ಪಕ್ಷಗಳ ಸಂಪೂರ್ಣ ಸಹಮತವಿಲ್ಲ ಎಂಬ ಅರಿವಾದಾಗ ಯಾವುದೇ ಹಿಂಜರಿಕೆ ಇಲ್ಲದೆ, ಬೇಸರ ಇಲ್ಲವೇ ಪಶ್ಚಾತ್ತಾಪ ಪಡದೆ ಅಧಿಕಾರದ ಚುಕ್ಕಾಣಿಗೆ ಜೋತು ಬೀಳದೆ ಅತ್ಯಂತ ಶಾಂತವಾಗಿ ಅವರು ಅಲ್ಲಿಂದ ನಿರ್ಗಮಿಸಿದರುಯಾವುದೇ ನಾಟಕೀಯತೆ, ಓಲೈಕೆ ಹಾಗೂ ಅಧಿಕಾರದ ಹಸಿವು ಅಲ್ಲಿರಲಿಲ್ಲ. ಸಂಪೂರ್ಣವಾದ ಮೌನ ಮತ್ತು ಘನತೆಯಿಂದ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದರು.


ಇದು ಅಂದಿನ ಪ್ರಧಾನಿ ಡಾಕ್ಟರ್ ಮನಮೋಹನ್ ಸಿಂಗ್ ಅವರ ಮೇಲೆ ಬಹಳ ಪ್ರಭಾವ ಬೀರಿತು. ಮುಂದೆ ಅವರು ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಮ್ ಅವರ ಜೊತೆಗೆ ಕಾರ್ಯನಿರ್ವಹಿಸಿದ ಗೌರವಯುತ ಬದುಕು ತಮ್ಮದಾಗಿತ್ತು ಎಂದು ಬರೆದುಕೊಂಡಿದ್ದಾರೆ. ಕಾರಣ ಅಬ್ದುಲ್ ಕಲಾಮ್ ಅವರು ಮುಖ್ಯವಾದ ಫೈಲ್ಗಳಲ್ಲಿನ ಕಾಗದ ಪತ್ರ ಹಾಕುವ ಸೋ ಕಾಲ್ಡ ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿಯಾಗಿರಲಿಲ್ಲ. ಅವರೊಬ್ಬ ಶಿಕ್ಷಕ, ಮಾರ್ಗದರ್ಶಕ ಹಾಗೂ ಸಲಹಾಕಾರ ಕೂಡ ಆಗಿದ್ದರು.


ಪ್ರತಿಯೊಂದು ಮಹತ್ವದ ನಿರ್ಣಯದ ಹಿಂದಿನ ಪರಿಣಾಮಗಳ ಅರಿವನ್ನು ಹೊಂದಿದ ವ್ಯಕ್ತಿ ಅವರಾಗಿದ್ದರು. ಇಂದು ಜನರು ತಮ್ಮ ಬದುಕಿನಲ್ಲಿ ಮುಂದೆ ಸಾಗಲು ಯಶಸ್ಸನ್ನು ಪಡೆಯಲು ಬಳಸುವ ಶಾರ್ಟ್ಕಟ್ ಗಳನ್ನು ನೋಡಿದಾಗ ಮನಸ್ಸಿಗೆ ರೇಜಿಗೆಯಾಗುತ್ತದೆ. ಅಧಿಕಾರಕ್ಕಾಗಿ ತಮ್ಮ ವೈಯುಕ್ತಿಕ ಸಂಬಂಧಗಳನ್ನು, ಮೌಲ್ಯಗಳನ್ನು ಹಾಗೂ ತಮ್ಮನ್ನು ತಾವೇ ಕಳೆದುಕೊಳ್ಳುವ ಜನರನ್ನು ನೋಡಿದಾಗ ಕಲಾಂರವರು ಏರಿದ ಎತ್ತರದ ಅರಿವಾಗುತ್ತದೆ


ಅತ್ಯಂತ ವಿಭಿನ್ನವಾದ ವ್ಯಕ್ತಿತ್ವ ಕಲಾಂ ಅವರದಾಗಿದ್ದು ಅವರ ಕಥೆ ನಾವು ನಿಧಾನವಾಗಿ ಮರೆಯುತ್ತಿರುವ ಮೌಲ್ಯವನ್ನು ನೆನಪಿಸುವಂತಹದ್ದಾಗಿದೆಅಧಿಕಾರ, ಹಣ, ಅಂತಸ್ತು ಎಂದಿಗೂ ಶಾಶ್ವತವಲ್ಲ. ಆದರೆ ನಿಮ್ಮ ವ್ಯಕ್ತಿತ್ವ, ನೀವು ನಂಬಿಕೊಂಡಿರುವ ಮೌಲ್ಯಗಳು ಹಾಗೂ ನಿಮ್ಮ ಸದ್ಭಾವಗಳು ನಿಮ್ಮೊಂದಿಗೆ ಸದಾ ಇರುತ್ತವೆ


ಅತ್ಯಂತ ವಿರಳವಾದರೂ ಶಕ್ತಿಯುತವಾದ ಪಾಠವೊಂದನ್ನು ನಾವು ಕಲಾಂ ಅವರ ಬದುಕಿನ ಘಟನೆಯಿಂದ ಕಲಿಯಬಹುದು. ಹಠದಿಂದ, ಮೊಂಡುತನದಿಂದ, ವಿಪರೀತದ ಧೋರಣೆಯ ಭಾವದಿಂದ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಗೌರವವನ್ನು ಹೊಂದಿರುವಾಗಲೇ ಅಧಿಕಾರವನ್ನು ತೊರೆಯುವುದು ಒಳ್ಳೆಯದು ಅಲ್ಲವೇ ?


ಬಹುಷ: ಕಾರಣಕ್ಕಾಗಿಯೇ ಡಾಕ್ಟರ್ ಪಿ ಜೆ ಅಬ್ದುಲ್ ಕಲಾಮ್ ಅವರು ರಾಷ್ಟ್ರಪತಿ ಭವನದಲ್ಲಿ ಮಾತ್ರ ಇರಲಿಲ್ಲ ಬದಲಾಗಿ ಇಡೀ ರಾಷ್ಟ್ರದ ಜನತೆಯ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.

 

- ವೀಣಾ ಹೇಮಂತ್ ಗೌಡ ಪಾಟೀಲ್,

ಮುಂಡರಗಿ ಗದಗ್ 


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top