ಭವಿಷ್ಯದಲ್ಲಿ ನಾವು ಏನಾಗುತ್ತೇವೆ ಎಂಬುದು ಯಾರಿಗೂ ಖಚಿತವಾಗಿ ತಿಳಿದಿಲ್ಲ. ಆದರೆ ಏನಾಗಬಹುದು ಎಂಬುದನ್ನು ಯೋಚಿಸಿ, ಅದನ್ನು ಸಾಧಿಸಲು ನಾವು ಪ್ರಯತ್ನಿಸಬಹುದು. ಅದೇ ದಾರಿಯಲ್ಲಿ ನಾನು ಪದವಿ ಪ್ರಥಮ ವರ್ಷದಲ್ಲಿ ‘ಭವಿಷ್’ ಘಟಕಕ್ಕೆ ಸೇರಿದೆ.
ಶಿಕ್ಷಕಿಯಾಗಬೇಕೆಂಬ
ನನ್ನ ಆಸೆಯನ್ನು ಬೆಳೆಸುವ ವೇದಿಕೆಯಿದು ಎಂದು ದ್ವಿತೀಯ ವರ್ಷದ
ಅಕ್ಕನವರಿಂದ ತಿಳಿದುಕೊಂಡೆ. ಅವರ ಮಾತುಗಳು ನನಗೆ
ಪ್ರೇರಣೆಯಾಗಿ, ಈ ಘಟಕಕ್ಕೆ ಸೇರ್ಪಡೆಯಾಗುವ
ನಿರ್ಧಾರ ಕೈಗೊಂಡೆ.
ಮೊದಲ ಉಪನ್ಯಾಸವನ್ನು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀಶ ಗುರುಗಳು “ನೋಡು” ಎಂಬ ವಿಷಯದ ಮೇಲೆ ನೀಡಿದರು. ‘ನೋಡು’ ಎಂದರೆ ಕೇವಲ ನೋಡುವುದಲ್ಲ, “Know + Do” ಎಂಬ ಅರ್ಥವನ್ನು ಒಳಗೊಂಡಿದೆ ಎಂಬುದನ್ನು ತಿಳಿದು ಹೊಸ ಅರಿವು ದೊರೆಯಿತು. ಶಿಕ್ಷಕನಾಗಿ ಎಷ್ಟು ದೂರ ಹೋಗಿದ್ದಾನೆ ಎಂಬುದಕ್ಕಿಂತ, ಎಷ್ಟು ಆಳವಾದ ಜ್ಞಾನವನ್ನು ಗಳಿಸಿದ್ದಾನೆ ಎಂಬುದು ಮುಖ್ಯ ಎಂಬ ಮಾತು ಮನಸ್ಸಿನಲ್ಲಿ ಉಳಿಯಿತು.
ನಂತರ ಪತ್ರಕರ್ತರಾದ ಮೌನೇಶ್ ರವರು “ರಂಗ, ಕಲೆ ಮತ್ತು ಶಿಕ್ಷಣ”ಕುರಿತು ಮಾತನಾಡಿ, ಹಾಡು-ನೃತ್ಯದ ಮೂಲಕ ಉಪನ್ಯಾಸವನ್ನು ಮನರಂಜನೀಯವಾಗಿ ಪ್ರಸ್ತುತಪಡಿಸಿದರು. ಧ್ವನಿ ಮತ್ತು ಪದಗಳ ಪ್ರಭಾವ ವಿದ್ಯಾರ್ಥಿಗಳ ಮೇಲೆ ಎಷ್ಟೋ ಮಹತ್ತರವೆಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಹಾಯವಾಯಿತು.
ಮಧ್ಯಾಹ್ನದ ವಿರಾಮದ ಬಳಿಕ ಹೊರಾಂಗಣ ಆಟಗಳಲ್ಲಿ ಭಾಗವಹಿಸಿದ್ದೇವೆ. ಬಾಲ್ ಬದಲು ತೆಂಗಿನಕಾಯಿ ಬಳಸಿ ಆಟ ಆಡುವುದರಿಂದ ಸೃಜನಾತ್ಮಕತೆಯ ಮಹತ್ವವನ್ನು ತಿಳಿದುಕೊಂಡೆವು. ಸಂಜೆ ಚಹಾ-ತಿಂಡಿಯೊಂದಿಗೆ ದಿನದ ಕಾರ್ಯಕ್ರಮಗಳು ಮುಗಿದವು.
ರಾತ್ರಿ ಭಜನೆ, ಊಟದ ನಂತರ ಮಲಗಲು ತೆರಳಿದರೂ ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ಮರೆಯಲಾಗದವು.
ಎರಡನೇ ದಿನದ ಕಾರ್ಯಕ್ರಮಗಳ ನಂತರ ವಿಟ್ಲ ಸಮೀಪದ ಮೂರುಕಜೆyಲ್ಲಿರುವ ಮೈತ್ರೇಯಿ ಗುರುಕುಲಕ್ಕೆ ಭೇಟಿ ನೀಡಿದೆವು. 1994ರಲ್ಲಿ ಸ್ಥಾಪಿತವಾದ ಈ ಗುರುಕುಲವು ಮೂರು ದಶಕಗಳಿಂದ ವಿದ್ಯಾರ್ಥಿನಿಯರಿಗೆ ವೇದ, ಯೋಗ, ಧ್ಯಾನ, ವಿಜ್ಞಾನ, ಕಲೆ ಹಾಗೂ ವಿವಿಧ ಕೌಶಲ್ಯಗಳನ್ನು ಕಲಿಸುತ್ತಿರುವುದನ್ನು ತಿಳಿದು ಸಂತೋಷವಾಯಿತು.
ಈ ಅನುಭವಗಳ ಮೂಲಕ ‘ಭವಿಷ್’ಘಟಕವು ನನ್ನ ಕನಸಿಗೆ ದಾರಿದೀಪವಾಗಿ ಪರಿಣಮಿಸಿದೆ. ಇಲ್ಲಿ ಉತ್ತಮ ಮಾತುಗಾರಿಕೆ, ಬರವಣಿಗೆ, ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಕಲಿಯಲು ಅವಕಾಶ ದೊರೆಯುತ್ತದೆ. ಶಿಕ್ಷಕಿಯಾಗಬೇಕೆಂಬ ಕನಸನ್ನು ಸಾಕಾರಗೊಳಿಸಲು ಇದು ಉತ್ತಮ ವೇದಿಕೆ.
ವಾರದ ಪ್ರತಿ ದಿನವೂ ವಿವಿಧ ಉಪನ್ಯಾಸಕರು ಬಂದು, ಶಿಕ್ಷಕ ವೃತ್ತಿಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಪಾಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಈ ಘಟಕದ ವಿಶೇಷತೆ.
ವಿದ್ಯಾರ್ಥಿಗಳಿಗೆ
ಬೋಧನೆ ಮಾಡುವುದು ಸುಲಭವಾದರೂ, ಅವರನ್ನು ಉತ್ತಮ ಗುರುಗಳನ್ನಾಗಿ ರೂಪಿಸುವುದು ದೊಡ್ಡ ಸವಾಲು. ಈ ದಾರಿಯಲ್ಲಿ ‘ಭವಿಷ್’ ಘಟಕವು
ಮಹತ್ವದ ಪಾತ್ರವಹಿಸುತ್ತಿದೆ.
- ಚೈತನ್ಯ
ಚಂದಪ್ಪ
ಭವಿಷ್
ವಿದ್ಯಾರ್ಥಿನಿ
ವಿವೇಕಾನಂದ
ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


