ಆವತ್ತೊಂದಿನ ಐವತ್ತೈದು ದಾಟಿದ ಅವಿವಾಹಿತ ಗೆಳೆಯ ಬೈಕ್ ಅಪಘಾತದಲ್ಲಿ ತೀವ್ರ ಹಾನಿಯಾಗಿ ಮಣಿಪಾಲ್ ನ "ಚರಕ" ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನನ್ನು ನಾನು ಉಡುಪಿಗೆ ಯಾವುದೋ ಕಾರ್ಯ ನಿಮಿತ್ತ ಹೋದವನು ನೋಡಲು ಹೋಗಿದ್ದೆ.
ಅವನಿಗೆ ಒಬ್ಬ ಅಕ್ಕ ಮತ್ತು ಅಣ್ಣ ಇದ್ದರು. ಬಿಎ ಮುಗಿಸಿದ ಸ್ನೇಹಿತರ ಸಂಪರ್ಕದಿಂದ ಮುಂಬಯಿಯ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದ. ಒಂದಷ್ಟು ಹಣ ಮಾಡಿದ. ನಂತರ ಊರ ಸೆಳೆತ ಹಳ್ಳಿ ಕೃಷಿಗೆ ಬಂದ. ಅಕ್ಕ ಅಣ್ಣ ಒಳ್ಳೆಯ ಪೊಜಿಷನ್ ನಲ್ಲಿದ್ದರು. ಆತ ನೋಡಲೂ ತುಂಬಾ ಸ್ಪರದ್ರೂಪಿಯಾಗಿದ್ದ. ಸರಿಯಾದ ವಯಸ್ಸಿನಲ್ಲೇ ಹುಡುಗಿ ನೋಡಲು ಶುರು ಮಾಡಿದ. ಆ ಕಾಲದಲ್ಲಿ ಮಧ್ಯಮ ವರ್ಗದ ಕೃಷಿಕ ಹುಡುಗರಿಗೂ ಮದುವೆ ಆಗುತ್ತಿತ್ತು.
ಇವನಿಗೂ ಸಾಕಷ್ಟು ಮದುವೆ ಸಂಬಂಧ ಬಂದಿದ್ದವು. ಆಗ ಇವ ಅವಳು ದಪ್ಪ, ಇವಳು ತೆಳು, ಕಪ್ಪು, ತಲೆಗೂದಲು ಕಡಿಮೆ, ಸ್ವ ಗೋತ್ರ, ಏಕ ನಕ್ಷತ್ರ, ಗ್ರಹ ಕೂಟ ಹೊಂದಾಣಿಕೆ ಆಗಲ್ಲ. ಇನ್ನೂ ಸಾವಿರ ನೆಪವೊಡ್ಡಿ ಮದುವೆ ಮುಂದೂಡತೊಡಗಿದ.
ಯಾವಾಗಲೋ ಯಾವುದಾದರೂ ಒಂದು ಹುಡುಗಿಯನ್ನು ನಾನು ಮದುವೆ ಮಾಡಿಕೊಳ್ಳಬೇಕು ಎಂದಾಗ ಕಾಲ ಮಿಂಚಿ ಹೋಗಿತ್ತು.
ಆಗ ಹುಡುಗಿಯರು ತಮ್ಮ ಹುಡುಗನ ಆಯ್ಕೆ ಮಾಡುವ ಕಾಲ ಬಂದಿತ್ತು!
ಇವನು ಒಂದೊಂದೇ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹುಡುಗಿ ಹುಡುಕತೊಡಗಿದ. ಆದರೆ ಅವನು ಗೋತ್ರ ಒಂದೇ ಆದರೂ ಪರವಾಗಿಲ್ಲ ಎನ್ನುವ ಕಾಲದಲ್ಲಿ ಗೋತ್ರದ ಹುಡುಗಿಯರು ಇವನ ಒಪ್ಪುವ ಕಾಲಕ್ಕೆ ಬಂದಾಗಿತ್ತು. ತ್ರಿಮತಸ್ಥರಲ್ಲಿ ಯಾವ ಪಂಗಡದ್ದಾದರೂ ಪರವಾಗಿಲ್ಲ ಎನ್ನುವ ಹೊತ್ತಿಗೆ ಜಾತಿಯ ಹುಡುಗಿಯರು ಇವನ ಮದುವೆ ಮಾಡಿಕೊಳ್ಳಲು ಮುಂದೆ ಬರುವ ಕಾಲ ಮುಗಿದಿತ್ತು. ಕೊನೆಯಲ್ಲಿ ಯಾವುದಾದರೂ ಸಸ್ಯಹಾರಿ ಜಾತಿ ಯ ಹುಡುಗಿಯಾದರೂ ಪರವಾಗಿಲ್ಲ ಎನ್ನುವ ಹೊತ್ತಿಗೆ ಇವನ ಮದುವೆ ವಯೋಮಿತಿ ಮುಗಿದಿತ್ತು!
ಒಟ್ಟಿನಲ್ಲಿ ಮದ್ಯೆ ವಯಸ್ಸಿನಲ್ಲಿ ಹಿಂದೆ ಹೋಗಲಾರದ ಮುಂದೆ ಹೋಗಲಾರದ ದುಸ್ಥಿತಿಗೆ "ಇವ ಬಂದಿದ್ದ".
ತಾಯಿ ತಂದೆ ತೀರಿಕೊಂಡಾಗಿತ್ತು. ಮದುವೆ ಆಗದಿದ್ದರೂ ಪರವಾಗಿಲ್ಲ. ಅಕ್ಕ ನೋಡಿಕೊಳ್ತಾಳೆ ಎಂದು ಯೋಚಿಸಿದ್ದ ಆದರೆ ಅಕ್ಕ ಕ್ಯಾನ್ಸರ್ ಖಾಯಿಲೆ ಬಂದು ತೀರಿಕೊಂಡಿದ್ದರು. ಈಗ ಅವನಿಗಿರೋ ಏಕೈಕ ರಕ್ತ ಸಂಬಂಧ "ಅಣ್ಣ" ಮಾತ್ರ! ಅವರಿಗೆ 68 ವರ್ಷ. ಅವರಿಗೆ ಒಬ್ಬಳೇ ಮಗಳು. ಅವಳಿಗೆ ಮದುವೆ ಆಗಿ ವಿದೇಶದಲ್ಲಿ ನೆಲೆಗೊಂಡಿದ್ದಾರೆ.
ಮಣಿಪಾಲ್ ನ "ಚರಕ"ದ ಎದುರಿನ ಟೀ ಸ್ಟಾಲ್ ಎದುರಿನ ಸ್ಟೂಲ್ ಮೇಲೆ ನಾನು ನನ್ನ ಗೆಳೆಯನ ಅಣ್ಣ ಕೂತೆವು. ಗೆಳೆಯನ ಅಣ್ಣ ನನ್ನ ಗೆಳೆಯನ ಇವತ್ತಿನ ದುಸ್ಥಿತಿಯ ಇನ್ನೊಂದು ಮುಖವನ್ನು ನನ್ನೆದುರು ತೆರದಿಡತೊಡಗಿದರು.
"ತಮ್ಮ ಅಕ್ಕ ಇರುವವರೆ ನನಗೆ ಅಕ್ಕಳೇ ಎಲ್ಲ. ನಾನು ಮದುವೆ ಆಗದೇ ಹಾಗೆಯೇ ಬ್ರಹ್ಮಚಾರಿಯಾಗಿ ಬದುಕುತ್ತೀನಿ. ಅಬ್ದುಲ್ ಕಲಾಮ್, ವಾಜಪೇಯಿ, ವಿವೇಕಾನಂದರು..." ಹೀಗೆ ಅವಿವಾಹಿತ ಆದರ್ಶ ಪುರುಷರ ಕೋಟ್ ಮಾಡತೊಡಗಿದ. ಆದರೆ ಇವನ ನೋಡುವ ಅಕ್ಕ ದಿಢೀರಾಗಿ ತೀರಿಕೊಂಡ ಮೇಲೆ ಇವನ ಭವಿಷ್ಯದ ಭರವಸೆಗೆ ಕತ್ತಲು ಕವಿಯತೊಡಗಿತು.
ನನ್ನ ಬಳಿ ಇವ ಮೊದಲಿನಿಂದಲೂ ಸ್ವಲ್ಪ ಅಂತರ ಕಾಪಾಡಿಕೊಂಡಿದ್ದ. ನಾನಗೂ ಓದು ನೌಕರಿ ಮುಂತಾದ ಕಾರಣಕ್ಕೆ ಹಳ್ಳಿಯ ಮನೆ ಕುಟುಂಬದ ಸಂಪರ್ಕ ಕಡಿಮೆಯಿತ್ತು. ಆದರೂ ಈ ಕಡೆಯ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೆ. ಇವನೂ ಅಲ್ಲಿ ಸಿಗುತ್ತಿದ್ದರೂ ನನ್ನ ಜೊತೆಗೆ ಒಡನಾಡುತ್ತಿರಲಿಲ್ಲ. ದಾಯಾದಿ ಆಗಿದ್ದರಿಂದಲೋ ಏನೋ ನಾನು ಅಣ್ಣ ಎಂಬ ಅಭಿಮಾನ ಪ್ರೀತಿಗಿಂತ ಇವನಿಗೆ ನಾನೊಬ್ಬ ಇವನ ಕಾಂಪಿಟೇಟರ್ ಎನಿಸಿತ್ತು. ಆದರೆ ನನಗೆ ಆವತ್ತೂ ಇವತ್ತೂ ನನ್ನ ಜೊತೆಗೆ ರಕ್ತ ಹಂಚಿಕೊಂಡವ ಎಂಬ ಜೀನ್ಸ್ ನ ಭಾವ ಇದ್ದೇ ಇದೆ. ಆದರೆ ನಾನು ಇವನಿಗಿಂತ ಹತ್ತು ವರ್ಷ ಹೆಚ್ಚು ವಯಸ್ಸಿನವ. ಇವನನ್ನು ನಾನು ಎಷ್ಟು ವರ್ಷ ನೋಡಿಕೊಳ್ಳಬಹುದು. ನನ್ನ ಸ್ಟಾಪ್ ಇವನಗಿಂತ ಮೊದಲು ಬರುತ್ತದೆ. ನನ್ನ ಸ್ಟಾಪ್ ಬಂದಾಕ್ಷಣ ನಾನು ಇಳಿದುಕೊಂಡು ಹೋಗಲೇಬೇಕು. ಆ ನಂತರ ಇವನ ನೋಡುವವರಾರು?
ಅಕ್ಕ ಸತ್ತ ನಂತರ ಇವನಿಗೆ ಫ್ರೆಂಡ್ಸೇ ಎಲ್ಲಾ ಆಗಿದ್ದರು...!!
ಮೊದಲ ಸರ್ತಿ ಇವ ಅಪಘಾತ ಮಾಡಿ ಕೊಂಡಾಗ ಫ್ರೆಂಡ್ಸೇ ಇವನನ್ನು ಆಸ್ಪತ್ರೆಗೆ ಸೇರಿಸಿ ನೋಡಿಕೊಂಡಿದ್ದರು. ನನಗೆ ಇವನಿಗೆ ಅಪಘಾತ ಆಗಿತ್ತು ಎಂದು ಆ ನಂತರವಷ್ಟೇ ಗೊತ್ತಾಗಿದ್ದು. ಆ ನಂತರ ಎರಡನೇ ಬಾರಿ ಅಪಘಾತ ಆದಾಗ ಅಥವಾ "ಅಪಘಾತ ಇವನೇ ಮಾಡಿಕೊಂಡಾಗ" ಇವನ ಫ್ರೆಂಡ್ಸು ಇವನನ್ನು ಆಸ್ಪತ್ರೆಗೆ ಸೇರಿಸಿ ನನಗೆ ಕರೆ ಮಾಡಿ ಮುಂದಿನ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಈ ಸರ್ತಿ ಮತ್ತೆ ಇವ ಕುಡಿದು ಬೈಕು ಚಾಲಾಯಿಸಿ ಬಿದ್ದ. ಯಾವ ಫ್ರೆಂಡ್ಸೂ ಇವನನ್ನು ಆಸ್ಪತ್ರೆಗೆ ಸೇರಿಸಲಿಲ್ಲ! ಯಾರೋ ಮೂರನೆಯ ದಾರಿಹೋಕರು ಆಂಬ್ಯೂಲೆನ್ಸ್ ಗೆ ಹಾಕಿ ಆಸ್ಪತ್ರೆಗೆ ಕಳಿಸಿದ್ದರು. ಪುಣ್ಯಕ್ಕೆ ಇವನ ಜೇಬಿನಲ್ಲಿ ನನ್ನ ಸಂಪರ್ಕ ಸಂಖ್ಯೆ ಇತ್ತು.
ಯಾರೋ ನನ್ನ ಸಂಪರ್ಕ ಮಾಡಿದರು ನಾನು ತಕ್ಷಣ ಇಲ್ಲಿಗೆ ಬಂದು ಮುಂದಿನ ಚಿಕಿತ್ಸೆ ವ್ಯವಸ್ಥೆ ಮಾಡಿದೆ. ಮೊನ್ನೆ ಇವನ ಭಾರೀ ಗಳಸ್ಯ ಕಂಠಸ್ಯ ಸ್ನೇಹಿತನಿಗೆ ಕರೆ ಮಾಡಿ "ಮೊದಲ ಸಲ ಅಪಘಾತ ಆದಾಗ ನೀವೇ ಇವನನ್ನು ನೋಡಿಕೊಂಡಿರಿ, ಎರಡನೇ ಸರ್ತಿ ಇವ ಅಪಘಾತ ಮಾಡಿಕೊಂಡಾಗ ಕನಿಷ್ಠ ಆಸ್ಪತ್ರೆಗಾದರೂ ಸೇರಿಸಿದಿರಿ. ಆದರೆ ಮೂರನೇ ಸರ್ತಿ ಇವ ಬೈಕಿನಿಂದ ಬಿದ್ದು ಅಪಘಾತ ವಾದಾಗ ಆಸ್ಪತ್ರೆಗೆ ಸೇರಿಸು ವುದುರಿಲಿ ಕನಿಷ್ಠ ಆಸ್ಪತ್ರೆಗೆ ನೋಡಲೂ ಬರಲಿಲ್ಲ" ಎಂದು ಪ್ರಶ್ನೆ ಕೇಳಿದೆ.
ಅದಕ್ಕೆ ಇವನ ಫ್ರೆಂಡು "ಸಾರ್, ನಿಮ್ಮ ತಮ್ಮ ಮೊನ್ನೆ ಬೈಕ್ ನಲ್ಲಿ ಬಿದ್ದದ್ದು ನಮಗೆ ಗೊತ್ತಿತ್ತು. ನಾವು ಉದ್ದೇಶ ಪೂರ್ವಕವಾಗಿಯೇ ಬರಲಿಲ್ಲ. ನೋಡಿ ಸಾರ್ "ಈ ಅಪಘಾತ ನಿಮ್ಮ ತಮ್ಮನ ಸ್ವಯಂಕೃತ ಅಪಘಾತ ಅಥವಾ ಅಪರಾಧ! ಹಿಂದೆ ನಿಮ್ಮ ತಮ್ಮ ಕುಡಿದು ಬಸ್ಟಾಂಡ್ ನಲ್ಲಿ ಮಲಗೋರು, ರಸ್ತೆಯಲ್ಲಿ ಮಲಗೋರು.. ನಾವೂ ನಮ್ಮ ಗೆಳೆಯ ನಾಕು ಜನರ ಎದುರು ಹೀಗೆ ಮರ್ಯಾದೆ ಕಳೆದುಕೊಳ್ಳಬಾರದು ಎಂದು ಅಲ್ಲಿಂದ ಎತ್ತಿ ಮನೆಗೆ ಕೊಂಡೊಯ್ದು ಬಿಡ್ತಿದ್ದೆವು. ಆದರೆ ನಿಮ್ಮ ತಮ್ಮ ಇದನ್ನೇ ಒಂದು ಅಡ್ವಂಟೇಜು ತೆಗೆದುಕೊಂಡು "ನಾನು ಎಲ್ಲಿ ಕುಡಿದು ಮಲಗಿದರೂ ಯಾರೋ ಫ್ರೆಂಡ್ಸ್ ಮನೆಗೆ ಕೊಂಡೊಯ್ದು ಬಿಡ್ತಾರೆ" ಎಂಬ ಭಾವದಲ್ಲಿ ಮತ್ತೆ ಮತ್ತೆ ಎಗ್ಗಿಲ್ಲದೇ ಕುಡಿದು ಎಲ್ಲೆಂದರಲ್ಲಿ ಮಲಗೋರು. ಯಾರೋ ನಮಗೆ ಕರೆ ಮಾಡೋರು. ನಂತರ ನಾವು ಅವನನ್ನು ಎತ್ತಿ ಮನೆಗೆ ಕೊಂಡೊಯ್ದು ಬಿಡೋ ಅಭ್ಯಾಸ ಬಿಟ್ಟೆವು.
ನಮಗೆ ನಮ್ಮ ಬಗ್ಗೆ ಜವಾಬ್ದಾರಿ ಕಾಳಜಿ ಇರಬೇಕು ಸಾರ್, ಫ್ರೆಂಡ್ಸೋ ಫ್ಯಾಮಿಲಿನೋ ತೀರಾ ಆಪತ್ತಿನಲ್ಲಿ ಬಳಸಿದರೆ ಒಳ್ಳೆಯದು. ಹೀಗೆ ಕುಡುದು ತಿಂದು ಪದೇ ಅನಾಹುತ ಮಾಡಿಕೊಂಡು ನನ್ನ ಫ್ರೆಂಡ್ಸ್ ನೋಡಲ ಎಂದರೇ? " ಸಾರ್ ನೀವು ರಕ್ತ ಸಂಬಂಧ. ನೀವು ಅವರನ್ನು ನೋಡಿಕೊಳ್ಳೋದು ಅನಿವಾರ್ಯ ಸಾರ್. ಎಲ್ರಿಗೂ ಕಡೇಗೇ ಉಳಿಯೋದು "ಕುಟುಂಬವೇ". ನಾವು ಫ್ರೆಂಡ್ಸ್ ಆದರೂ ನಮಗೊಂದು "ಗಡಿ" ಇರುತ್ತದೆ. ನಾವು ಕುಡಿತ ಬೇಜಾವಾಬ್ದಾರಿಯ ಪೋಷಕರಾಗಬಾರದು ಸಾರ್. ನಿಮ್ಮ ತಮ್ಮನಿಗೆ ನಂಗ್ಯಾರು ಇಲ್ಲ... ನನಗೆ ಮದುವೆ ಆಗಲ್ಲ ಎನ್ನುವ ಕೊರಗು ಸಾರ್, ಅದಕ್ಕೇ ಅವರು ಕುಡಿಯೋದು. ಆದರೆ ಮದುವೆನ ಒಂದೇ ನಮ್ಮ ಕುಟುಂಬ ಬಂಧು ಬಳಗದವರು ಮಾಡಬೇಕು ಇಲ್ಲ ನಮಗೆ ನಾವೇ ಮಾಡಿಕೊಳ್ಳಬೇಕು. ನಾವು ನಮ್ಮ ಬದುಕು ಭವಿಷ್ಯದ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳದೇ ಹಾಗೇ ಕಾಲ ಕಳೆದು ಬದುಕಿನ ಇಳಿ ವಯಸ್ಸಿನಲ್ಲಿ ಕೊರಗಿದರೆ "ಕೇಳೋರಾರು?" ಎಂದರು. ಸತ್ಯ ಅಲ್ವಾ...?
ಇವನಿಗೆ ಇನ್ನಾದರೂ ಬುದ್ದಿ ಬರುತ್ತದಾ? ನನ್ನ ಮಗಳು ಅವಳ ಬಳಿ ಬಂದಿರಲು ಹೇಳುತ್ತಿದ್ದಾಳೆ. ಅದೂ ಸಹಜ ಕೂಡ. ಒಮ್ಮೆ ನಾನೇದರೂ ಮಗಳ ಜೊತೆಗೆ ಹೋಗಿ ನೆಲೆ ನಿಂತರೆ "ಇವನ" ಕಥೆ ಏನು? ಕರುಳ ಸಂಕಟ ಹೌದು ಆದರೆ ನನಗೂ ಬೇರೆ ಜವಾಬ್ದಾರಿ ಇದೆ ಮತ್ತು ನನಗೂ ಇವನಗಿಂತ ಹೆಚ್ಚು ವಯಸ್ಸಾಗಿದೆ. ನನಗೆ ಮನಸಿದ್ದರೂ ವಯಸ್ಸು ಮತ್ತು ನನ್ನ ಉಳಿದ ಜವಾಬ್ದಾರಿ (ಮಗಳ) ತಡೆಯಾಗುತ್ತಿದೆ. ಮುಂದೇನು? ನಾನು ಅವನಿಗೆ ನಾಲ್ಕೈದು ವರ್ಷಗಳ ಹಿಂದಿನ ತನಕವೂ ಯಾವ ಜಾತಿಯಾದರೂ ಪರವಾಗಿಲ್ಲ ಒಂದು ಮದುವೆ ಆಗಿ ಒಬ್ಬ ಜೊತೆಗಾತಿ ಮಾಡಕ ಎಂದು ಹೇಳಿದೆ.. ಇವ ಅದಕ್ಕೆ ಉತ್ತರ ನೀಡಲಿಲ್ಲ. ಮದುವೆ ಮಾಡಿಕೊಳ್ಳಲು ಆಸಕ್ತಿ ಇದ್ದರೆ ಯಾರಿಗೂ ಮದುವೆ ಆಗುತ್ತದೆ. ಮದುವೆ ಆಗಬೇಕೆಂಬ ಪ್ರಖರ ಆಸೆ ಆಸಕ್ತಿ ಇಲ್ಲದಿದ್ದರೆ ಮದುವೆ ಆಗದಿರಲು "ಬರೀ ನೆಪವೇ" ಸಿಕ್ಕಿ ಹೀಗೆ "ಅವಿವಾಹಿತನ" ಉಳಿಯುತ್ತದೆ.
ಮದುವೆ ನಾವು ಸಮಾಜದ ಏನೋ ನಮ್ಮ ಬಗ್ಗೆ ಹೇಳುತ್ತದೆ ಎಂಬ ಕಾರಣಕ್ಕೆ ಆಗದೇ ಕುಳಿತರೆ ಮುಂದೊಂದು ಹೀಗಿನ ತುರ್ತಿನ ಸಂದರ್ಭದಲ್ಲಿ ಒಂಟಿ ಯಾಗಬೇಕಾಗುತ್ತದೆ. ಇವತ್ತಿನ ಐವತ್ತು ಅರವತ್ತು ವರ್ಷದ ವಯಸ್ಸಿನ ಅವಿವಾಹಿತರು "ನಾನು ಗಟ್ಟಿಯಾಗಿರುವೆ" ನನ್ನ ನಾನು ನೋಡಿ ಕೊಳ್ತೇನೆ. ನನಗೆ ಮದುವೆ ಬೇಡ" ಎಂದು ಕೂತವರನ್ನ ಖಂಡಿತವಾಗಿಯೂ ಭವಿಷ್ಯದ ಇನ್ನೊಂದು ಹತ್ತು ವರ್ಷಗಳ ನಂತರ ಇದರ ಬಿಸಿ ತಾಗುತ್ತದೆ. ಹಾಗಂತ ಮದುವೆ ಆದವರಿಗೆಲ್ಲ ವೃದ್ಯಾಪ್ಯದ ಆಸರೆ ಸಿಕ್ಕಿ ಬಿಡುತ್ತದೆ ಅಂತಲ್ಲ. ಆದರೆ "ಮದುವೆ" ನಿಸರ್ಗ ಸಹಜ ವ್ಯವಸ್ಥೆ. ಹಿಂದಿನವರು "ಮದುವೆ" ಎಂಬ ವ್ಯವಸ್ಥೆ ಹುಟ್ಟು ಹಾಕಿರೋದು "ಕುಟುಂಬ" ವ್ಯವಸ್ಥೆ ರೂಪಿಸಿರೋದು ಹೀಗಿನ ತುರ್ತಿನ ಸಂಧರ್ಭದಲ್ಲಿ ಮನುಷ್ಯ ಮನುಷ್ಯ ನಿಗೆ ಆಸರೆಯಾಗಿರಲಿ ಎಂದು. ಹೀಗಿನ ಅಪಘಾತ ಅನಾರೋಗ್ಯದ ಸಂಧರ್ಭದಲ್ಲಿ ಖಾಯಿಲೆ ಆಘಾತದ ಜೊತೆಗೆ ವ್ಯಕ್ತಿಗೆ "ನಂಗೆ ಯಾರೂ ಇಲ್ಲ ನಾನು ಒಂಟಿ" ಎನ್ನುವ ಕೊರಗೂ ಹೆಚ್ಚುವರಿಯಾಗಿ ಕಾಡಿ ಆ ವ್ಯಕ್ತಿಯನ್ನು ಇನ್ನಷ್ಟು ಕುಗ್ಗಿಸುತ್ತದೆ.
ಅವಿವಾಹಿತರು ಈ ದಿಕ್ಕಿನಲ್ಲಿ ಚಿಂತನೆ ಮಾಡಬೇಕು. ಕುಟುಂಬ ಒಡ ಹುಟ್ಟಿದ ವರ ಜೊತೆಗೆ ಚೆನ್ನಾಗಿ ಸಂಪರ್ಕ ಇಟ್ಟುಕೊಳ್ಳಬೇಕು. ತುರ್ತಿನಲ್ಲಿ ಕುಟುಂಬವೇ ಬರೋದು ಅಲ್ವಾ?" ಎಂದು ಅವರು ಒಂದು ಹಂತದ ಮಾತು ಮುಗಿಸಿದರು. ಕೈಯಲ್ಲಿ ಹಿಡಿದ ಕಪ್ ನ ಟೀ ಮುಗಿದಿತ್ತು. ನಾನು ಅವರಿಗೆ ವಂದಿಸಿ ಆಸ್ಪತ್ರೆಯಿಂದ ಹೊರ ಹೊರಟೆ.
ಜಗತ್ತು ಕುಟುಂಬ ವ್ಯವಸ್ಥೆ ಯನ್ನು ಕಳೆದು ಕೊಳ್ಳುತ್ತಿದೆಯಾ? ಹಿಂದಿನ ಕಾಲದಲ್ಲಿ ಇದ್ದ ದೊಡ್ಡ ಕುಟುಂಬ ಈಗ ಒಂದು ಕುಟುಂಬಕ್ಕೆ ಅಣ್ಣ ತಮ್ಮ ತಂಗಿ ಅಕ್ಕ ಇಲ್ಲದ "ಒಂಟಿ ಬಡುಕರಿಗೆ" ಭವಿಷ್ಯದಲ್ಲಿ "ಒಂಟಿತನ" ಕಾಡಿದರೆ? ನಮ್ಮ ಸಮಾಜ ಮಕ್ಕಳ ಎಜುಕೇಶನ್ ದೃಷ್ಟಿಯಿಂದ ಒಂದು ಎರಡು ಮಕ್ಕಳ ಮಾಡಿಕೊಂಡು ಭವಿಷ್ಯದಲ್ಲಿ ಒಂಟಿತನ ವನ್ನು ಅವರಿಗೆ ಪ್ರಾಪ್ತ ಮಾಡ್ತಿದ್ದಾರ? ಇಲ್ಲಿ ಎಷ್ಟೊಂದು ವಿಚಾರ ಇದೆಯಲ್ವಾ? ಹೀಗೆ ಅಪಘಾತ ಅನಾಹುತ ಆದಾಗಲಷ್ಟೇ ನಮಗೆ "ಕುಟುಂಬ" ವ್ಯವಸ್ಥೆಯ "ಬೆಲೆ" ಗೊತ್ತಾಗೋದು ಅಲ್ವಾ?
ಮದುವೆ ಆಗೋಲ್ಲ, ಮಕ್ಕಳು ಮಾಡಿ ಕೊಳ್ಳೋಲ್ಲ. ಹೆಂಗೋ ಕೌಟುಂಬಿಕ ಚೌಕಟ್ಟನ್ನಲ್ಲಿರದೇ ಇರುತ್ತೀನಿ ಎನ್ನುವವರಿಗೆ ಮದುವೆ ಮಕ್ಕಳು ಕೌಟುಂಬಿಕ ಚೌಕಟ್ಟಿನ ಪ್ರಾಮುಖ್ಯತೆ ಗೊತ್ತಾಗೋದು ಇಂತಹ ತುರ್ತಿನಲ್ಲೇ.
ಮದುವೆ ಎನ್ನುವ ವ್ಯವಸ್ಥೆ ಸೆಕ್ಸ್ ಗಾಗಿ ಅಲ್ಲ. ಮದುವೆ ಎನ್ನುವ ವ್ಯವಸ್ಥೆ ಮಕ್ಕಳ ಮಾಡಿಕೊಂಡು ಜವಾಬ್ದಾರಿ ಹೊರಲು ಅಲ್ಲ. ಮದುವೆ ಎನ್ನುವ ವ್ಯವಸ್ಥೆ ಪರಸ್ಪರ ಪ್ರೀತಿಯಿಂದ ಪರಸ್ಪರ ಆಸರೆಗಾಗಿ ಜೀವನ ಪ್ರೀತಿಗಾಗಿ ಮಾಡಿಕೊಂಡ ವ್ಯವಸ್ಥೆಯಾಗಿದೆ. ಮದುವೆ ಎನ್ನುವ ಕೌಟುಂಬಿಕ ವ್ಯವಸ್ಥೆ ಮನುಷ್ಯ ಕಂಡುಕೊಂಡ ಅದ್ಭುತ ಸಂಶೋಧನೆಯಾಗಿದೆ. ಪರಸ್ಪರ ಹೊಂದಿಕೊಂಡು ಅರ್ಥ ಮಾಡಿಕೊಂಡು ಗೌರವಿಸಿಕೊಂಡು ಹೋದರೆ ಮದುವೆ ಯಶಸ್ಸು.
"ಮದುವೆ" ಅನಿವಾರ್ಯತೆ ಈ ಅಪಘಾತ ನೋಡಿದಾಗ ನನ್ನ ಕಾಡಿತ್ತು.
- ಪ್ರಬಂಧ ಅಂಬುತೀರ್ಥ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


