ನೀವೂ ಸೃಜನಶೀಲ ಶಿಕ್ಷಕರಾಗಿ…

Upayuktha
0


- ಟಿ.ದೇವಿದಾಸ್


ನೀವು ಸೃಜನಶೀಲ ಶಿಕ್ಷಕರಾಗಬೇಕೇ? ಹೌದು, ನೀವು ಸೃಜನಶೀಲ ಶಿಕ್ಷಕರಾದರೆ ನಿಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ವೃತ್ತಿಕ್ಷೇತ್ರದಲ್ಲಿ ವಿಭಿನ್ನವಾಗಿ ವಿಶಿಷ್ಟವಾಗಿ ಸ್ಥಾಪಿಸಿಕೊಳ್ಳಬಹುದು. ವೃತ್ತಿಯಲ್ಲಿ ಎತ್ತರದ ಹಂತವನ್ನು ತಲುಪಬಹುದು. ಆದರೆ ಸೃಜನಶೀಲ ಶಿಕ್ಷಕರಾಗುವುದು ಹೇಗೆ? ಅದಕ್ಕೂ ಮೊದಲು ಸೃಜನಶೀಲತೆ ಎಂದರೇನು ಎಂಬುದನ್ನು ಗೊತ್ತುಮಾಡಿಕೊಳ್ಳಬೇಕು. ಹೊಸ ಮತ್ತು ಉಪಯುಕ್ತ ಆಲೋಚನೆಗಳು ಅಥವಾ ವಸ್ತುಗಳನ್ನು ರೂಪಿಸುವ ಸಾಮರ್ಥ್ಯ. ಹೊಸ ಪರಿಹಾರಗಳನ್ನು ಕಂಡುಹಿಡಿಯುವುದು. ಇಲ್ಲ, ಅಸ್ತಿತ್ವದಲ್ಲಿರುವ ಸಮಸ್ಯೆಗಳಿಗೆ ವಿಭಿನ್ನ ವಿಧಾನಗಳನ್ನು ಅಳವಡಿಸ್ಕೊಳ್ಳುವುದು. ಅಂದರೆ, ಸೃಜನಶೀಲತೆಯು ಹೊಸತನ, ಉಪಯುಕ್ತತೆ, ಕಲ್ಪನೆ, ಅನುಷ್ಠಾನ, ಸಮಸ್ಯೆ- ಪರಿಹಾರ- ಈ ಅಂಶಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬರೂ ಸೃಜನಶೀಲರು ಎಂದು ಸಂಶೋಧನೆ ಹೇಳುತ್ತದೆ. ಆಫ್ ಕೋರ್ಸ್ ಸೃಜನಶೀಲತೆ ಮಾನವನ ಪ್ರಮುಖ ಗುಣಲಕ್ಷಣಗಳಲ್ಲಿ ಒಂದಾಗಿದೆ. ಒಬ್ಬ ನಿಜವಾದ ಸೃಜನಶೀಲ ವ್ಯಕ್ತಿಯಲ್ಲಿ ಸದಾ ಒಂದಲ್ಲ, ಒಂದು ವಿಚಾರದ ಬಗ್ಗೆ ಸತತ ಚಿಂತನೆ ನಡೆಯುತ್ತಿರುತ್ತದೆ. ಸದಾ ವಿಚಾರವೊಂದರ ಕುರಿತು ಯೋಚಿಸುತ್ತ ಅದನ್ನು ಹೇಗೆ ಉತ್ತಮ ಪಡಿಸಬಹುದು, ಹೊಸ ವಿನ್ಯಾಸದಲ್ಲಿ ಹೇಗೆ ಮಾಡಬಹುದು, ಸೃಷ್ಟಿಶೀಲವಾದ ಬದಲಾವಣೆ ಹೇಗೆ ಸಾಧ್ಯ? ಅದಕ್ಕೆ ಏನೇನು ಮಾಡಬಹುದು ಎಂದೆಲ್ಲ ಯೋಚಿಸಿ, ಯೋಜಿಸಿ ಮನಸ್ಸಿನಲ್ಲೇ ಕಲ್ಪಿಸಿಕೊಳ್ಳುತ್ತಿರುತ್ತಾನೆ. ಇಂತಹ ಕಲ್ಪನೆಗಳು ಸೃಜನಶೀಲ ಮನಸ್ಸೊಂದರಲ್ಲಿ ನಡೆಯುವ ಪ್ರಕ್ರಿಯೆಯೂ ಆಗಿರುತ್ತದೆ. ಇಂತಹ ಪ್ರಕ್ರಿಯೆಯಿಂದ ಹೊಸ ಕಲ್ಪನೆಗಳು ಮತ್ತು ನಾವೀನ್ಯ ಚಿಂತನೆಗಳು ಹುಟ್ಟಿ ಸೃಜನಶೀಲತೆಗೆ ದಾರಿ ಮಾಡಿಕೊಡುತ್ತದೆ. ಕಲಾತ್ಮಕ ಸೃಜನಶೀಲತೆ, ವೈಜ್ಞಾನಿಕ ಸೃಜನಶೀಲತೆ, ತಾಂತ್ರಿಕ ಸೃಜನಶೀಲತೆ, ದೈನಂದಿನ ಸೃಜನಶೀಲತೆ- ಹೀಗೆ ವಿಧಗಳಿವೆ. 



ಪ್ರಜ್ಞಾ ನವ ನವೋನ್ಮೇಷ ಶಾಲಿನೀ ಪ್ರತಿಭಾ- ಅಂದಹಾಗೆ ಒಂದು ವಿಚಾರವನ್ನು ಎಲ್ಲರೂ ಆಲೋಚಿಸುವಂತೆ ಸಾಮಾನ್ಯವಾಗಿ ಆಲೋಚಿಸದೆ ವಿಭಿನ್ನ ಮತ್ತು ವಿಶಿಷ್ಟವಾದ ದೃಷ್ಟಿಕೋನದಿಂದ ಆಲೋಚಿಸಿ ನವೀನ ಆವಿಷ್ಕಾರಗಳ ಸೃಷ್ಟಿಗೆ ಕಾರಣವಾಗುವ ಅಂಶವನ್ನು ಸೃಜನಶೀಲತೆ ಎನ್ನಬಹುದು. ಯಾವುದು ಹೊಸ ಆಲೋಚನೆಗಳನ್ನು ಹುಟ್ಟಿಸುವುದೋ, ಸಮಸ್ಯೆಗಳಿಗೆ ಪರಿಹಾರಗಳನ್ನು ಹೊಸ ಬಗೆಯಲ್ಲಿ ಕಂಡುಕೊಳ್ಳುವುದೋ, ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಬದಲಾಯಿಸಿ, ಕಲ್ಪನೆಯನ್ನು ವಾಸ್ತವಕ್ಕೆ ಪಲ್ಲಟಿಸುವುದೋ ಅದು ನಿಜವಾದ ಸೃಜನಶೀಲತೆ. ಇದು ಕೇವಲ ಕಲೆಯಲ್ಲ. ಹೊಸದನ್ನು ಹುಟ್ಟಿಸುವ ಸಾಮರ್ಥ್ಯ. ಆದ್ದರಿಂದ ಸೃಜನಶೀಲತೆಯು ಅಮೂರ್ತ. ಆದರೆ ಅದರ ಅಭಿವ್ಯಕ್ತಿ ಮಾತ್ರ ಮೂರ್ತ. ಆದ್ದರಿಂದ ಸೃಜನಶೀಲತೆಯನ್ನು ಕುರಿತಾದ ವಿಶ್ಲೇಷಣೆ ಮತ್ತು ವ್ಯಾಖ್ಯಾನವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಿದ್ದರೂ ಆತ್ಯಂತಿಕವಾಗಿ ಹೊಸತನ್ನು ಸೃಷ್ಟಿಸುವುದನ್ನೇ ಅವು ಹೇಳುತ್ತವೆ. ಒಟ್ಟಾರೆ, ಸೃಜನಶೀಲತೆಯು ಮನುಷ್ಯನಲ್ಲಿರುವ ವಿಶೇಷವಾದ ಶಕ್ತಿಯಾಗಿದೆ.



ಸೃಜನಶೀಲತೆ ನಮ್ಮ ಸ್ವಭಾವವೂ ಆಗಿರಬಹುದು, ಮನಸ್ಸಿನ ಧೋರಣೆಯೂ ಆಗಬಲ್ಲದು. ಯಾವ ಬದಲಾವಣೆ ಹೊಸತನ್ನು ಒಪ್ಪುವ, ಹೊಸ ಹೊಸ ಕಲ್ಪನೆಗಳನ್ನು ಯೋಚಿಸುವ, ಹಳೆಯದನ್ನು ಬಿಟ್ಟು ಹೊಸ ಚಿಂತನೆಗಳನ್ನು ಚಿಂಸಿಸುವ, ಸುಧಾರಣೆಗಳನ್ನು ಸಂತೋಷದಿoದ ಸ್ವೀಕರಿಸುವ ಹಾಗೂ ಇರುವುದನ್ನು ಇನ್ನೆಷ್ಟು ಚೆನ್ನಾಗಿ ರೂಪಿಸಬಹುದು ಎಂದು ಕನಸು ಕಂಡು ಅದನ್ನು ಸಾಕಾರಗೊಳಿಸಲು ಹಂಬಲಿಸುವ ಮನಃಸ್ಥಿತಿಯನ್ನು ಸೃಜನಶೀಲತೆಯ ಮನಸ್ಸು ಅಥವಾ ಧೋರಣೆ ಎನ್ನಬಹುದು. ಸೃಜನಶೀಲತೆಯು ವಿಭಿನ್ನವಾಗಿ ವಿಶಿಷ್ಟವಾಗಿ ಹೊಸತನ್ನು ಸೃಷ್ಟಿಸಲು ಹಂಬಲಿಸುತ್ತದೆ. ಆದ್ದರಿಂದ ಸೃಜನಶೀಲತೆಯು ಹೊಸತನದ ವಿನ್ಯಾಸದಲ್ಲಿರುತ್ತದೆ. ಅಂದರೆ, ಆ ಹೊಸತನವು ಚಿಂತನೆಯಲ್ಲಿ, ವರ್ತನೆಯಲ್ಲಿ, ನಿರ್ವಹಣೆಯಲ್ಲಿ, ಉತ್ವಾದನೆಯಲ್ಲಿ, ಅಭಿವ್ಯಕ್ತಿಯಲ್ಲಿ ಒಟ್ಟಾರೆಯಾಗಿ ಪ್ರತಿ ಹಂತದಲ್ಲೂ ಹೊಸತು ಎಂಬುದು ಇದ್ದೇ ಇರುತ್ತದೆ.



ಸ್ವಭಾವತಃ ಸೃಜನಶೀಲ ವ್ಯಕ್ತಿಗಳಲ್ಲಿ ಕುತೂಹಲದ ಪ್ರವೃತ್ತಿ ಅಧಿಕವಾಗಿರುತ್ತದೆ. ಅವರಲ್ಲಿ ಹೊಸ ವಿಚಾರಗಳ ಬಗ್ಗೆ, ಹೊಸ ಅನುಭವಗಳ ಬಗ್ಗೆ, ಹೊಸತರ ಬಗ್ಗೆ ತಿಳಿದುಕೊಳ್ಳುವ ಕುತೂಹಲದ ಪ್ರವೃತ್ತಿ ಸದಾ ಜಾಗೃತವಾಗಿರುತ್ತದೆ. ಹಾಗಂತ ಸೃಜನಶೀಲ ವ್ಯಕ್ತಿಗಳ ಸಾಹಸವು ಪೂರ್ವನಿರ್ಧರಿತ ಪರಿಕಲ್ಪನೆಗಳಿಂದಲೇ ಹುಟ್ಟುತ್ತದೆ. ಅಂದರೆ ಸೃಜನಶೀಲತೆಗೆ ಪ್ರೇರಣೆಯಾಗುವಂಥ ಪರಿಕಲ್ಪನೆಗಳು ಹುಟ್ಟಬೇಕಾದರೆ ಕಲ್ಪನಾಶಕ್ತಿ ಗಾಢವಾಗಿರಬೇಕು, ಕಲ್ಪಿಸುವ ಸಾಮರ್ಥ್ಯ ಸಶಕ್ತವಾಗಿರಬೇಕು. ಗ್ರಹಿಸಿನೋಡಿ, ಸೃಜನಶೀಲ ಸ್ವಭಾವ ಇರುವವರಲ್ಲಿ ಊಹಿಸುವ ಸಾಮರ್ಥ್ಯ ಮತ್ತು ಕಲ್ಪನಾಶಕ್ತಿ ವಿಭಿನ್ನವಾಗಿರುತ್ತದೆ.



ಸೃಜನಶೀಲ ವ್ಯಕ್ತಿಗಳು ಯಾವಾಗಲೂ ಒಂದೇ ಮುಖದಲ್ಲಿ ಆಲೋಚಿಸುವುದಿಲ್ಲ. ಒಂದು ವಿಷಯದ ಬಗ್ಗೆ ಅನೇಕ ಆಯಾಮಗಳಲ್ಲಿ, ವಿಭಿನ್ನವಾದ ವಿನ್ಯಾಸಗಳಲ್ಲಿ ಯೋಚಿಸುತ್ತಾರೆ. ಹಲವಾರು ಸಾಧ್ಯತೆಗಳು ಮತ್ತು ಹಲವಾರು ಆಯ್ಕೆಗಳು ಅವರ ಚಿಂತನಾವಲಯದಲ್ಲಿ ಚಿಗುರೊಡೆಯುತ್ತ ಅವು ಮನಸಲ್ಲಿ ವಿಶಿಷ್ಟಾಕೃತಿಗಳನ್ನು ರಚಿಸುತ್ತಿರುತ್ತವೆ. ಪ್ರತಿಯೊಂದೂ ವಿಚಾರವನ್ನು, ವಿಷಯವನ್ನು ಅನ್ಯಾನ್ಯ ಬಗೆಯ ಆಯಾಮಗಳಿಂದ ವಿಶ್ಲೇಷಣೆ ಮಾಡಿ ಅದಕ್ಕೆ ಒಂದು ಹೊಸ ರೂಪವನ್ನು ನೀಡುತ್ತಾರೆ. ಸ್ವಭಾವತಃ ಇವರು ಉತ್ಸಾಹಿಗಳಾಗಿರುವುದರಿಂದ ಇವರ ಮನಸ್ಸು ಹೊಸತನ್ನು ಕಾಣಲು ಹುಡುಕುತ್ತಿರುತ್ತದೆ. ಹೊಸದನ್ನು ನಿರೂಪಿಸುವ, ಇದ್ದುದ್ದನ್ನು ನವೀನ ವಿನ್ಯಾಸದಲ್ಲಿ ರಚಿಸಲು ಇವರ ಸೃಜನಶೀಲ ಮನಸ್ಸು ಕನವರಿಸುತ್ತಿರುತ್ತದೆ.



ಪ್ರಯೋಗಶೀಲತೆ ಸೃಜನಶೀಲ ವ್ಯಕ್ತಿಗಳಲ್ಲಿನ ಬಹುಮುಖ್ಯ ವಿಶೇಷತೆ. ನಿರಂತರ ಪ್ರಯೋಗಶೀಲತೆಯಿಂದಲೇ ಹೊಸತನ್ನು ಸೃಷ್ಟಿಸಲು ಸಾಧ್ಯ. ಈ ಪ್ರಯೋಗಶೀಲತೆಯು ಕಾಣಬಹುದು, ಕಾಣದೆಯೂ ಇರಬಹುದು. ಆದರೆ, ಒಳಗೊಳಗೆ ತುಡಿತವೆಂಬುದು ಚೈತನ್ಯದಿಂದ ಕೂಡಿರುತ್ತದೆ. ಈ ಚೈತನ್ಯದ ಮೂಲವೇ ಮೌನ. ಆದ್ದರಿಂದಲೇ ಮೌನವನ್ನು ಅತ್ಯಂತ ಕ್ರಿಯಾಶೀಲವಾದ ಧ್ಯಾನಸ್ಥಿತಿ ಎಂದಿರುವುದು. ಸಾಮಾನ್ಯವಾಗಿ ಸೃಜನಶೀಲತೆಯು ಬಹಿರಂಗದ ಪ್ರೇರಣೆಯಿಂದ ಹುಟ್ಟನ್ನು ಪಡೆಯಬಹುದಾದರೂ ಹಾಗೆ ಪಡೆದ ಪ್ರೇರಣೆಯು ಅಂತಃಪ್ರೇರಣೆಯಾಗಿ ಪರಿವರ್ತಿತಗೊಳ್ಳದ ವಿನಾ ಸೃಜನಶೀಲತೆ ಹುಟ್ಟಲಾರದು. ಅಂದರೆ ಸೃಜನಶೀಲತೆಯು ಮೂಲತಃ ಅಂತಃಪ್ರೇರಣೆಯಿಂದಲೇ ಹುಟ್ಟುವಂಥದ್ದಾಗಿದೆ.



ಸೃಜನಶೀಲರಲ್ಲಿ ಪ್ರಶ್ನಿಸುವ ಮನೋಭಾವವಿರುತ್ತದೆ. ಈ ಪ್ರಶ್ನೆ ಮಾಡುವ ಸ್ವಭಾವದ ಹಿಂದೆ ಅವರಲ್ಲಿರುವ ಕುತೂಹಲ ಪ್ರವೃತ್ತಿ ಪ್ರಧಾನವಾಗಿರುತ್ತದೆ. ಈ ಸ್ವಭಾವವು ವಸ್ತು, ವಿಷಯ, ವಿಚಾರದ ಬಗ್ಗೆ ಅವರಿಗಿರುವ ಆಸಕ್ತಿ ಮತ್ತು ಅವರ ಸಾಮರ್ಥ್ಯವನ್ನು ತೋರುವುದಲ್ಲದೆ ಅತ್ಮವಿಶ್ವಾಸವನ್ನು ಹೆಚ್ಚಿಸುತ್ತ ಹೋಗುತ್ತದೆ. ಸೃಜನಶೀಲ ವ್ಯಕ್ತಿಗಳಲ್ಲಿ ಅಸಾಧಾರಣ ಧೈರ್ಯ ಮತ್ತು ಸಾಹಸದ ಪ್ರವೃತ್ತಿಯಿದ್ದು ಇವರು ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸುವ ಹಾದಿಯಲ್ಲಿ ಉಂಟಾಗುವ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಎಲ್ಲ ಸನ್ನಿವೇಶ ಸಂದರ್ಭಗಳಲ್ಲಿಯೂ ತಮ್ಮ ವಿಚಾರವನ್ನು ವ್ಯಕ್ತಪಡಿಸಬೇಕೆಂಬ ರಚನಾತ್ಮಕವಾದ ತುಡಿತ ಇವರಲ್ಲಿ ಕಾಡುತ್ತಿರುತ್ತದೆ. ಇವರು ಎಲ್ಲ ವಿಷಯಗಳಲ್ಲಿಯೂ ತಮ್ಮ ಭಾಗಿತ್ವವನ್ನು ಬಯಸುತ್ತಾರೆ. ಅಸ್ತಿತ್ವವನ್ನು ಸೃಷ್ಟಿಸಿಕೊಳ್ಳುತ್ತಾರೆ. 




ಸೃಜನಶೀಲರಲ್ಲಿ ಸ್ವಂತಿಕೆಯ ಹಂಬಲವಿರುವಂತೆಯೇ ತನ್ನ ನಿರ್ಧಾರವನ್ನು, ಪ್ರವೃತ್ತಿಯನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುವ ಲಕ್ಷಣಗಳು ಭರಪೂರವಾಗಿರುತ್ತವೆ. ತಾವು ತೆಗೆದುಕೊಳ್ಳುವ ಸ್ವತಂತ್ರ ನಿರ್ಧಾರಗಳಿಗೆ ಸಕಾರಣಗಳನ್ನು ಹೊಂದಿರುತ್ತಾರೆ. ಕ್ರಿಯಾಶೀಲತೆಯ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಮಾನಸಿಕ ಸಂಘರ್ಷಗಳು ಇವರಲ್ಲಿ ನಡೆಯುತ್ತಿರುತ್ತದೆ. ಸ್ವಂತದ್ದಾದ ಅಸ್ಮಿತೆಯನ್ನು ವ್ಯಕ್ತಪಡಿಸುವ ಹಂಬಲವೇ ಇವರಲ್ಲಿ ಆಲೋಚನೆಗಳ ಸರಣಿಯನ್ನೇ ನಡೆಸುತ್ತಿರುತ್ತದೆ. ಆದ್ದರಿಂದ ನಿತ್ಯ ಬದುಕಿನ ಹೆಚ್ಚಿನ ಸಂದರ್ಭಗಳಲ್ಲಿ ಮಾನಸಿಕವಾದ ಸಂಘರ್ಷದ ಸ್ಥಿತಿಯಲ್ಲಿ ಇವರು ಜೀವ ನಡೆಸುತ್ತಿರುತ್ತಾರೆ. ಸೃಜನಶೀಲ ವ್ಯಕ್ತಿಗಳು ಸೋಲನ್ನು ಪರಿಣಾಮಕಾರಿಯಾಗಿ ಸ್ವೀಕರಿಸಲಾರರು. ಈ ಕಾರಣದಿಂದಾಗಿ ಬದುಕಿನ ಬಗ್ಗೆ ಅತೀವವಾದ ಆಸಕ್ತಿ ಮತ್ತು ನಂಬಿಕೆಗಳನ್ನು ಮತ್ತಷ್ಟು ಹೊಂದಿರುತ್ತಾರೆ. ಈ ರೀತಿಯಾಗಿ ಸೃಜನಶೀಲ ಸ್ವಭಾವವಿರುವ ವ್ಯಕ್ತಿಗಳು ವ್ಯಕ್ತಿಗತವಾದ ವಿಶಿಷ್ಟ ರೀತಿಯ ಗುಣಲಕ್ಷಣಗಳಿಂದ ತಮ್ಮ ಬೆಳವಣಿಗೆಗೆ ಪೂರಕವಾಗುವಂತೆ ಕಾರ್ಯನಿರ್ವಹಿಸುತ್ತಾರೆ.



ಮನುಷ್ಯ ಸಹಜಾಸಹಜ ಗುಣವಾದ ಸಕಾರಾತ್ಮಕ ಸೃಜನಶೀಲತೆಯಿಂದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಜೊತೆಯಲ್ಲಿ ತನ್ನ ಇರುವಿಕೆ ಮತ್ತು ಅಸ್ತಿತ್ವವನ್ನು ಪ್ರಭಾವಗೊಳಿಸಲು ಸಾಧ್ಯವಿದೆ ಎಂಬುದು ನಿಸ್ಸಂದೇಹ. ಈ ಸೃಜನಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ರೂಢಿಸಿಕೊಳ್ಳುವುದು ಬಹುಮುಖ್ಯ ಮತ್ತು ಇದರಿಂದ ಬೌದ್ಧಿಕವಾಗಿ ವೈಚಾರಿಕವಾಗಿ ಮಾನಸಿಕವಾಗಿ ಪ್ರಗತಿ ಸಾಧ್ಯವಿದೆ. ಹಾಗಾದರೆ ಈ ಸೃಜನಶೀಲತೆಯನ್ನು ರೂಪಿಸಿಕೊಳ್ಳುವುದು ಹೇಗೆ? ರೂಢಿಸಿಕೊಳ್ಳುವುದು ಹೇಗೆ? ಉತ್ತರ ನಮ್ಮಲ್ಲೇ ಇದೆ. ಯಾವುದೇ ವಿಭಿನ್ನವೂ ವಿಶಿಷ್ಟವೂ ಆದ ಹೊಸ ಚಿಂತನೆ, ನೋಟ, ಬಗೆ, ಶೈಲಿ ಒಟ್ಟಾರೆ ಈಗಾಗಲೇ ಸ್ಥಾಪಿತಗೊಂಡಿದ್ದನ್ನು ಹೊರತುಪಡಿಸಿದ ಹೊಸತನ್ನು ಬೆಳೆಸಿ ಪ್ರೋತ್ಸಾಹಿಸುವ ಅಗತ್ಯವಿರುತ್ತದೆ. ಆವಶ್ಯಕತೆಯಿರುತ್ತದೆ. ಅಂಥ ಹೊಸತನವೇ ಸೃಜನಶೀಲತೆ. ಅದು ರೂಪುಗೊಳ್ಳಬೇಕಾದರೆ ಸೂಕ್ತ ಪ್ರೋತ್ಸಾಹದ ವೇದಿಕೆಯ ಅನಿವಾರ್ಯತೆಯೂ ಇರುತ್ತದೆ.



ಸೃಜನಶೀಲತೆಗೆ ಪ್ರೋತ್ಸಾಹ:

ಸಾಮಾನ್ಯವಾಗಿ ಮಕ್ಕಳಲ್ಲಿರುವಂತಹ ಸಾಮರ್ಥ್ಯಗಳನ್ನು ಕಂಡುಹಿಡಿದು ಅಥವಾ ಗ್ರಹಿಸಿಕೊಂಡು ಅವಕಾಶ ಸಿಕ್ಕಿದಾಗಲೆಲ್ಲ ಮತ್ತು ಸೂಕ್ತ ಸಂದರ್ಭದಲ್ಲಿ ಅದನ್ನು ಬೆಳೆಯಲು ಅವಕಾಶ ಮಾಡಿಕೊಟ್ಟರೆ ಅದು ಇನ್ನೂ ನಿಚ್ಚಳವಾಗಿ ರೂಪುಗೊಳ್ಳುತ್ತದೆ. ಅದಕ್ಕೆ ಪೂರಕವಾಗಿ ಈ ಕೆಲವು ಅಂಶಗಳು ಸೃಜನಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ. ಅವುಗಳೆಂದರೆ,


ಪ್ರಶ್ನಿಸುವ ಕೌಶಲವನ್ನು ಬೆಳೆಸುವುದು:

ಅಪ್ರಶ್ನಿತ ವಿದ್ಯೆ ಅಪೂರ್ಣ ಮತ್ತು ಅನರ್ಥಕ್ಕೆ ಎಡೆಮಾಡಿಕೊಡುತ್ತದೆ. ಪ್ರಶ್ನಿಸಿ ಪರಾಮರ್ಶಿಸಿ ವಿವೇಚಿಸಿ ಕಲಿತ ವಿದ್ಯೆ ದೀರ್ಘಕಾಲ ಉಳಿಯುತ್ತದೆ ಎಂಬುದು ಅನುಭವಜನ್ಯ ಸತ್ಯ. ಅದ್ದರಿಂದ ಪ್ರತಿ ಮಗುವಿನಲ್ಲೂ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸುವುದು ಶಿಕ್ಷಕನಿಗೆ ಬಹು ಮುಖ್ಯವಾದುದು. ಪ್ರಶ್ನಿಸಲು ಪ್ರಾರಂಭಿಸಿದಾಗಲೇ ಹೊಸ ಹೊಳಹುಗಳು ಚಿಂತನೆಗಳು ಹುಟ್ಟಿಕೊಳ್ಳುತ್ತವೆ. ಇದು ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ವೈಚಾರಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆ ಮೂಲಕ ಸೃಜನಶೀಲ ವ್ಯಕ್ತಿತ್ವನ್ನು ಬೆಳೆಸುತ್ತದೆ. ಆದ್ದರಿಂದ ನಮ್ಮ ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಅಭ್ಯಾಸ ಮಾಡಿಸಬೇಕು.



ಬಹುಮುಖಿ ಚಿಂತನೆಯನ್ನು ಪ್ರೋತ್ಸಾಹಿಸುವುದು: 

ಮಕ್ಕಳಲ್ಲಿರುವ ಚಿಂತನಾ ಪ್ರವೃತ್ತಿಯನ್ನು ತರಗತಿಯೊಳಗೂ ಮತ್ತು ಹೊರಗೂ ಪ್ರೋತ್ಸಾಹಿಸಬೇಕು. ಒಂದು ವಿಷಯವನ್ನು ಒಂದೇ ದೃಷ್ಟಿಕೋನದಿಂದ ಆಲೋಚಿಸದೆ ಬೇರೆಬೇರೆ ದೃಷ್ಟಿಕೋನದಲ್ಲಿ ಆಲೋಚಿಸುವುದನ್ನು ಗ್ರಹಿಸುವುದನ್ನು ಅಭ್ಯಾಸ ಮಾಡಿಸಬೇಕು.


ಮುಕ್ತತೆ:

ವಿದ್ಯಾರ್ಥಿಗಳ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಮಕ್ಕಳಲ್ಲೂ ಅಂಥ ಮುಕ್ತತೆಯ ಮನಸ್ಥಿತಿಯನ್ನು ಬೆಳೆಸಲು ಪ್ರಯತ್ನಿಸಬೇಕು. ಶಿಕ್ಷಕರು ಪೂರ್ವಾಗ್ರಹಪೀಡಿತರಾಗದೆ ವಿದ್ಯಾರ್ಥಿಗಳ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ವಿದ್ಯಾರ್ಥಿಗಳಲ್ಲೂ ಪರಸ್ಪರ ಮುಕ್ತತೆಯ ಮನೋಧರ್ಮವನ್ನು ಬೆಳೆಸುವಲ್ಲಿ ಎಲ್ಲ ಸಂದರ್ಭ-ಸನ್ನಿವೇಶಗಳನ್ನೂ ವಿನಿಯೋಗಿಸಿಕೊಳ್ಳಬೇಕು. ಮಕ್ಕಳ ವರ್ತನೆ ಮತ್ತು ಅಭಿವ್ಯಕ್ತಿಯ ಬಗ್ಗೆ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ನಿಗಾ ವಹಿಸುವುದು ಬಹು ಮುಖ್ಯವಾದುದು.


ಸಂವಾದಗಳಲ್ಲಿ ಭಾಗಿಯಾಗಿಸುವುದು:

ನಿರ್ದಿಷ್ಟ ವಸ್ತು ವಿಷಯಗಳ ಬಗ್ಗೆ ಮಾತನಾಡುವಂತೆ ವಿದ್ಯಾರ್ಥಿಗಳಿಗೆ ಪರಸ್ಪರ ಅವಕಾಶವನ್ನು ಕಲ್ಪಿಸಬೇಕು. ಪಠ್ಯಾಂಶ ಮತ್ತು ಪೂರಕ ಪಠ್ಯಾಂಶಗಳ ಬಗ್ಗೆ ತರಗತಿಯಲ್ಲಿ ಮತ್ತು ಶಾಲಾಮಟ್ಟದಲ್ಲಿ ಆರೋಗ್ಯಕರ ಸಂವಾದವನ್ನು ಏರ್ಪಡಿಸಬೇಕು. ಅಂಥ ಸಂವಾದಗಳಿಂದ ಪಠ್ಯಾಂಶಗಳು ಸುಲಭದಲ್ಲಿ ಮನದಟ್ಟಾಗುತ್ತವೆ. ಇದರಿಂದ ವಿಷಯದ ಬಗ್ಗೆ ಹೆಚ್ಚಿನ ಅರಿವಾಗುತ್ತದೆ. ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗಳಿಗೆ ಇಂಥ ಸಂವಾದಗಳು ಅತ್ಯಂತ ಪರಿಣಾಮಕಾರಿಯಾಗಬಲ್ಲವು. ಮೇಲಾಗಿ, ವಿಭಿನ್ನ ದೃಷ್ಟಿಕೋನಗಳಲ್ಲಿ ವಿದ್ಯಾರ್ಥಿಗಳು ಸಂವಾದ ಮಾಡುವುದರಿಂದ ಗ್ರಹಿಸುವ ಶಕ್ತಿ ವಿಶಾಲವಾದ ವ್ಯಾಪ್ತಿಯನ್ನು ಪಡೆಯುತ್ತದೆ.


ವಿದ್ಯಾರ್ಥಿಗಳ ಸೃಜನಶೀಲ ವ್ಯಕ್ತಿತ್ವ ಬೆಳವಣಿಗೆಗೆ ಪ್ರೇರಣೆಯನ್ನು ಶಾಲೆಯಲ್ಲಿ ನೀಡಿದರೆ, ಅವರಲ್ಲಿರುವ ವೈಚಾರಿಕ ಮತ್ತು ಮಾನಸಿಕ ವಿಕಾಸವಾಗುತ್ತದೆ. ಈ ಕೆಲವು ಅಂಶಗಳು ಸೃಜನಶೀಲ ವ್ಯಕ್ತಿತ್ವದ ಬೆಳವಣಿಗೆಗೆ ಪ್ರೇರಕವಾಗಬಲ್ಲವು. 



ಚಟುವಟಿಕೆಯ ಆಧಾರಿತ ಕಲಿಕೆ: 

ಪಠ್ಯಪೂರಕ ಚಟುವಟಿಕೆಗಳು ಸ್ವಾನುಭವನ್ನು ನೀಡುತ್ತದೆ. ಈ ರೀತಿಯ ಸ್ವಾನುಭವದ ಆಯಾಮಗಳು ಬಹುಮುಖದ ಆಯಾಮದ ಕಲ್ಪನೆಗೆ ಇಂಬು ನೀಡುತ್ತವೆ. ಆದ್ದರಿಂದ ಚಟುವಟಿಕೆ ಆಧಾರಿತ ಕಲಿಕೆಯು ವಿದ್ಯಾರ್ಥಿಯಲ್ಲಿ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ.



ಸೃಜನಶೀಲ ಮಾದರಿಗಳನ್ನು ಒದಗಿಸುವುದು: 

ಮಕ್ಕಳ ಸೃಜನಶೀಲ ಕಲಿಕೆಗೆ ಪೂರಕವಾಗುವಂತಹ ಸೃಜನಶೀಲ ಮಾದರಿಗಳನ್ನು ಒದಗಿಸಬೇಕು. ಇತಿಹಾಸ ಪುರಾಣಗಳ ಪಾತ್ರಗಳು, ಪ್ರತಿಭಾವಂತ ಸಂಗೀತ, ನಾಟ್ಯ, ಚಿತ್ರಕಲಾವಿದರು, ವಿದ್ವಾಂಸರು, ಸಾಹಿತಿಗಳು, ವಿಜ್ಞಾನಿಗಳು, ಸಂಶೋಧಕರು, ಮುಂತಾದ ಸೃಜನಶೀಲ ಮಾದರಿ ವ್ಯಕ್ತಿತ್ವಗಳ ಪರಿಚಯ ಮಾಡಿಸುವುದು ಬಹಳ ಆವಶ್ಯಕವಾಗಿದೆ.



ಸೃಜನಶೀಲತೆಯನ್ನು ಹುಟ್ಟಿಸುವಂತೆ ಒತ್ತಡಗಳನ್ನು ಒದಗಿಸುವುದು: 

ದೊಡ್ಡವರಾಗಲಿ, ಸಣ್ಣವರಾಗಲಿ ಎಂಥ ಒತ್ತಡವನ್ನೂ ನೆಗೆಟಿವ್ ಆಗಿ ಸ್ವೀಕರಿಸುವುದು ಸಹಜ. ಆದರೆ ಒತ್ತಡಗಳು ಎಷ್ಟೋ ಸಲ ಸಕಾರಾತ್ಮಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಪ್ರೀತಿ ಮತ್ತು ವಿಶ್ವಾಸದ, ತಾಳಿಕೊಳ್ಳಬಹುದಾದ ಧನಾತ್ಮಕ ಒತ್ತಡಗಳನ್ನು ವಿದ್ಯಾರ್ಥಿಗಳಲ್ಲಿ ಹುಟ್ಟುವಂತೆ ಮಾಡುವುದರಿಂದ ಸೃಜನಶೀಲತೆಯನ್ನು ಹುಟ್ಟಿಸಲು ಸಾಧ್ಯವಿದೆ. ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರಲ್ಲಿ ಸೃಜನಶೀಲತೆಯನ್ನು ಹುಟ್ಟಿಸಲು ಸಾಧ್ಯವಾಗುವಂಥ ಒತ್ತಡಗಳನ್ನು ಶಿಕ್ಷಕರು ಹಾಕುವುದು ಅನಿವಾರ್ಯವಾಗುತ್ತದೆ. ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವ, ತನಗೆ ಬೇಕಾದ ಆವಶ್ಯಕತೆಗಳನ್ನು ತಾನೇ ಸೃಷ್ಟಿಸಿಕೊಳ್ಳುವಂತೆಯೂ ಪ್ರೋತ್ಸಾಹವನ್ನು ನೀಡಬೇಕು. ಭವಿಷ್ಯದಲ್ಲಿ ಇದು ಸ್ವಂತಿಕೆಯನ್ನು ಬೆಳೆಸುತ್ತದೆ.



ಕಂಠಪಾಠದ ನಿರಾಕರಣೆ: 

ಕಲಿಕೆಯ ಭಾಗವಾಗಿ ಒಂದು ಹಂತದಲ್ಲಿ ಕಂಠಪಾಠದ ಅನಿವಾರ್ಯತೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆ ಹೊತ್ತಿಗೆ ಅದು ಒಳ್ಳೆಯ ಪ್ರತಿಫಲವನ್ನು ಸಾಧಿಸಬಹುದಾದರೂ ಕಲಿಕಾ ಭದ್ರತೆಯಿರುವುದಿಲ್ಲ. ಆದ್ದರಿಂದ ಕಂಠಪಾಠದಿಂದ ವಿದ್ಯಾರ್ಥಿಗಳನ್ನು ಆದಷ್ಟು ದೂರವಿರಿಸುವಂತೆ ಶಿಕ್ಷಕರು, ಪೋಷಕರು ಗಮನ ಕೊಡಬೇಕು. ಪಾಠಾಂಶಗಳು ರಿಯಲೈಸ್ ಆಗಿ ಅದನ್ನು ಅರ್ಥಮಾಡಿಕೊಂಡು ಕಲಿಯುವ ಕ್ರಮದಿಂದಲೇ ಕಲಿಕಾ ದಕ್ಷತೆ ಹೆಚ್ಚುತ್ತದೆ. ಸೃಜನಶೀಲತೆಗೆ ಬೇಕಾದಂತಹ ಕಲ್ಪನೆಗಳು ಮೂಡಿಬರುತ್ತದೆ. ಹಾಗಂತ ಇಸವಿ, ವ್ಯಕ್ತಿ, ಹೇಳಿಕೆ, ಘಟನೆ, ಶ್ಲೋಕ, ಪದ್ಯ, ಸೂತ್ರಗಳು, ಒಪ್ಪಂದಗಳು, ಮಗ್ಗಿ ಇಂಥವುಗಳನ್ನು ಅರ್ಥಮಾಡಿಕೊಂಡು ಕಂಠಪಾಠ ಮಾಡಿಸಲೇಬೇಕು. 



ಓದುವ ಹವ್ಯಾಸವನ್ನು ಬೆಳೆಸುವುದು:

ಗ್ರಂಥಾಲಯದ ಬಳಕೆ, ಓದು, ಟಿಪ್ಪಣಿ, ಕಥೆ, ಕಾದಂಬರಿ, ನಾಟಕ, ವ್ಯಕ್ತಿಚಿತ್ರಣ, ಜೀವನ ಚರಿತ್ರೆ, ಆತ್ಮಚರಿತ್ರೆಗಳನ್ನು ಓದುವಂತೆ ಮಾಡುವ ಶ್ರಮವನ್ನು, ಕೊಂಡು ಓದುವ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. 



ತುಲನಾತ್ಮಕ ಬೋಧನಾ ಕ್ರಮ: 

ಸೃಜನಶೀಲತೆಯನ್ನು ತರಗತಿಯಲ್ಲಿ ಸೃಜನಾತ್ಮಕವಾಗಿ ಪ್ರೋತ್ಸಾಹಿಸುವ ರೀತಿಯಲ್ಲಿ ಶಿಕ್ಷಕರು ತುಲನಾತ್ಮಕ ಬೋಧನಾ ಕ್ರಮವನ್ನು ರೂಢಿಸಿಕೊಳ್ಳಬೇಕು. ಹಾಗೆಯೇ ಪಾಠಯೋಜನೆಯನ್ನು ಸಿದ್ಧಗೊಳಿಸಬೇಕು. ಈ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೃಜನಶೀಲರಾಗಲು ತರಗತಿ ಬೋಧನೆ ಪರಿಣಾಮಕಾರಿಯಾಗುತ್ತದೆ.



ಒಟ್ಟಾರೆಯಾಗಿ, ಹೊಸತನ, ಕುತೂಹಲ ಪ್ರವೃತ್ತಿ, ಕಲ್ಪನಾ ಶಕ್ತಿ, ಬಹುಮುಖ ಚಿಂತನಾ ಸಾಮರ್ಥ್ಯ, ವಿಷಯ ವಿಸ್ತರಣೆಯ ಸಾಮರ್ಥ್ಯ, ಆವಿಷ್ಕಾರ ಪ್ರವೃತ್ತಿ, ಪ್ರಯೋಗಶೀಲತೆ, ಅಂತಃಪ್ರೇರಣೆ, ಪ್ರಶ್ನಿಸುವ ವುನೋಭಾವ, ಸವಾಲನ್ನು ಸ್ವೀಕರಿಸುವ ಮನೋಭಾವ, ಸ್ವಂತಿಕೆಯ ಹಂಬಲ, ಸ್ವಂತದ್ದನ್ನು ಸಹಜವಾಗಿ ಸಮರ್ಥಿಸುವಿಕೆ, ಮಾನಸಿಕ ಸಂಘರ್ಷ, ಬದುಕಿನ ಬಗೆಗಿನ ಆಸಕ್ತಿ- ಇವೆಲ್ಲವೂ ಒಬ್ಬ ವ್ಯಕ್ತಿಯನ್ನು ಸೃಜನಶೀಲನನ್ನಾಗಿಸುತ್ತದೆ. ನಾವು ಶಿಕ್ಷಕರು ಮಕ್ಕಳಿಗೆ ಕಲ್ಪನೆಯ ಸ್ವಾತಂತ್ರ್ಯ ನೀಡುವುದು, ಕಲ್ಪನೆಯ ಆಟಗಳು, ಮತ್ತು ಕಲಾಕೃತಿಯನ್ನು ರಚಿಸಲು ಅವಕಾಶ ನೀಡುವುದು, ಓದು ಮತ್ತು ಕಥೆ ಹೇಳುವ ಅಭ್ಯಾಸ ಮಾಡಿಸುವುದು, ಸ್ವತಂತ್ರ ಚಿಂತನೆಗೆ ಅವಕಾಶ ನೀಡುವುದು, ಸ್ವಾವಲಂಬನೆ ಮತ್ತು ಪ್ರಯೋಗಾತ್ಮಕ ಅಧ್ಯಯನದ ಮಹತ್ವ ತಿಳಿಸುವುದು, ಟೆಕ್ನಾಲಜಿ ಮತ್ತು ಆಟಗಳ ಸೃಜನಾತ್ಮಕ ಬಳಕೆಯ ಬಗ್ಗೆ ಅರಿವು ಮೂಡಿಸುವುದು, ಪ್ರಾಕೃತಿಕ ಅನುಭವ ಮತ್ತು ಸುತ್ತಮುತ್ತಲಿನ ಅನುಭವದ ಅನ್ವೇಷಣೆಗೆ ಮುಕ್ತ ಅವಕಾಶ ಕಲ್ಪಿಸುವುದು- ಹೀಗೆ ಶಿಕ್ಷಕರು ತಮ್ಮ ವೈಯಕ್ತಿಕ ಅನುಭವಗಳಿಂದ ಮಕ್ಕಳಲ್ಲಿ ಸೃಜನಶೀಲತೆಯನ್ನು ನಿರಂತರವಾಗಿ ಸಾಧ್ಯವಾದಷ್ಟು ಮಟ್ಟಿಗೆ ಮಾಡಲು ಸಾಧ್ಯವಿದೆ; ನಿಮ್ಮಲ್ಲಿ ಸೃಜನಶೀಲತೆಯ ಬಗ್ಗೆ ಕುತೂಹಲ ಪ್ರವೃತ್ತಿ ಮತ್ತು ಆಸಕ್ತಿಯಿದ್ದರೆ!



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top