ಮನದ ಮಾತಿಗೆ ಮೌನ ಸ್ನೇಹಿತ – ದಿನಚರಿ

Upayuktha
0

  

ದಿನವೊಂದು ಹೇಗೆಯೇ ಇರಲಿ, ಎಂತಹದ್ದೇ ಸವಾಲುಗಳು ಬರಲಿ, ಅದನ್ನು ಸ್ವೀಕರಿಸದೇ ಬೇರೆ ವಿಧಿ ಇಲ್ಲ. ದಿನನಿತ್ಯ ಅದೆಷ್ಟೋ ಪರಿಚಿತ-ಅಪರಿಚಿತ ಮುಖಗಳ ಭೇಟಿ, ಸಂಭಾಷಣೆಗಳು ನಡೆಯುತ್ತವೆ. ಇವುಗಳ ನಡುವೆ ಮನಸ್ಸಿನಲ್ಲಿ ನೂರಾರು ಭಾವನೆಗಳು, ಗೊಂದಲಗಳು, ಯೋಜನೆಗಳು ಮತ್ತು ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಹೊರಜಗತ್ತಿಗೆ ಕಾಣುವ ಬದುಕು ಒಂದಾದರೆ, ಯಾರೊಂದಿಗೂ ಹಂಚಿಕೊಳ್ಳಲಾಗದ, ಯಾರಿಗೂ ಕಾಣದ ಒಳಜಗತ್ತು ಇನ್ನೊಂದು. ನಮ್ಮೊಂದಿಗೆ ಅದೆಷ್ಟೇ ಆತ್ಮೀಯರು ಅಥವಾ ಸ್ನೇಹಿತರಿದ್ದರೂ, ಎಲ್ಲರ ಬಳಿ ಮನಸ್ಸಿನ ಮಾತುಗಳನ್ನು ಪಾರದರ್ಶಕವಾಗಿ, ಯಾವುದೇ ಅಳುಕಿಲ್ಲದೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಾವು ರೂಢಿಸಿಕೊಳ್ಳುವ 'ದಿನಚರಿ' ಬರೆಯುವ ಹವ್ಯಾಸ ನಮ್ಮ ಒಂಟಿತನದ ಭಾವನೆಯನ್ನು ದೂರಮಾಡಬಲ್ಲದು.

ಡೈರಿ ಬರವಣಿಗೆಯು ದಿನದ ಘಟನೆಗಳನ್ನು ದಾಖಲಿಸುವುದರ ಜೊತೆಗೆ, ನಮ್ಮೊಂದಿಗೆ ನಾವೇ ಮಾತನಾಡಲು ಇರುವ ಒಂದು ಮುಕ್ತ ವೇದಿಕೆಯಾಗಿದೆ . ಕೆಲವರಿಗೆ ಅನ್ನಿಸಬಹುದು , " ರೀತಿ ದಿನಚರಿ ಬರೆದು ಕೊನೆಗೆ ಏನು ಮಾಡುವುದು? ಪುಸ್ತಕಕ್ಕಾಗಿ ವ್ಯಯಿಸುವ ಹಣ, ಬರೆಯಲು ತೆಗೆದುಕೊಳ್ಳುವ ಸಮಯ ಎಲ್ಲವೂ ವ್ಯರ್ಥವಲ್ಲವೇ?  ಇದನ್ನು ಓದಲು ಮತ್ತೆ ಸಮಯ ಸಿಗುವುದೇ?" ಎಂದು. ನಾವು ಶಾಪಿಂಗ್ ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವಾಗ ಕೇವಲ ನಮ್ಮ ಮನಸ್ಸಿನ ಹಿತಕ್ಕಾಗಿ ಇನ್ನೂರು, ಮುನ್ನೂರು ರೂಪಾಯಿಗೆ ಸಿಗುವ ಪುಸ್ತಕ ಒಂದನ್ನು ಖರೀದಿಸಲಾಗದೆ? ಗೀಚಿದ್ದೆಲ್ಲವನ್ನು  ಮುಂದಿನ ದಿನಗಳಲ್ಲಿ ಓದಲಾಗುವುದೋ ಇಲ್ಲವೋ, ಆದರೆ ಅಂದು ರಾತ್ರಿ ಮಾತ್ರ ನೆಮ್ಮದಿಯಿಂದ ನಿದ್ದೆ ಮಾಡಬಹುದು . ಏಕೆಂದರೆ,  ಮೆದುಳು ಮತ್ತು ಹೃದಯ ಅತಿಯಾದ ಯೋಚನೆಗಳಿಂದ ಮುಕ್ತವಾಗಿರುತ್ತದೆ ಮತ್ತು ಹೆಚ್ಚು ಸ್ಪಷ್ಟವಾಗಿರುತ್ತದೆ.

ರೀತಿ ಬರವಣಿಗೆಯು ಅತ್ಯಂತ ಮೌಲ್ಯಯುತವಾದ ಚಟುವಟಿಕೆ ಯಾಗಿದೆ. ಮನಸ್ಸಿನ ಭಾವನೆಗಳನ್ನು ಮತ್ತು ಯೋಜನೆಗಳನ್ನು ಅಕ್ಷರ ರೂಪಕ್ಕಿಳಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ನಾವು ಹಿಂದೆ ಮಾಡಿದ ತಪ್ಪುಗಳು, ಇಂದಿನ ನಡವಳಿಕೆ ಹಾಗೂ ನಮ್ಮ ಗುರಿಯ ಹಾದಿಯಲ್ಲಿರುವ ಗೊಂದಲಗಳ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ಇದು ನಮ್ಮ ಮುಂದಿಡುತ್ತದೆ. ಆತ್ಮಾವಲೋಕನಕ್ಕೆ ಸಹಕಾರಿಯಾಗುವುದರ ಜೊತೆಗೆ, ನಮ್ಮ ಬರವಣಿಗೆಯ ಶೈಲಿ ಸುಧಾರಿಸುತ್ತದೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಕೌಶಲ್ಯವೂ ಬೆಳೆಯುತ್ತದೆ.

ದಿನಚರಿ ಬರೆಯಲು ಯಾವುದೇ ಔಪಚಾರಿಕ ರೂಪುರೇಷೆಗಳಿಲ್ಲ. ಇದು ನಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುವ ವೇದಿಕೆ; ನಮ್ಮ ದಿನ ಹೇಗಿತ್ತೆಂದು ನಮಗೆ ನಾವೇ ಹೇಳಿಕೊಳ್ಳುವ ಪರಿ. ಇಲ್ಲಿ ನಿರಂತರತೆ ಬಹಳ ಮುಖ್ಯ. ಪ್ರತಿದಿನ ಬರೆಯುವುದರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ದಿನದ ಕೊನೆಯಲ್ಲಿ ಇದಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಮತ್ತು ಬರೆಯಲು ಕುಳಿತಾಗ ಅದನ್ನು ಪೂರ್ತಿಗೊಳಿಸಿಯೇ ಏಳುವುದು ಹೆಚ್ಚು ಪ್ರಭಾವಶಾಲಿ. ಇಲ್ಲಿ ಯಾವುದೇ ಸಾಹಿತ್ಯಿಕ ಭಾಷೆಯ ಹಂಗಿಲ್ಲ; ಸರಳವಾಗಿ, ಪ್ರಾಮಾಣಿಕವಾಗಿ ಮತ್ತು ಯಾವುದೇ ಮುಚ್ಚುಮರೆಯಿಲ್ಲದೆ ಬರೆಯಬೇಕು ಅಷ್ಟೇ . ಇನ್ನೂ

ಇಂದಿನ ಡಿಜಿಟಲ್ ಯುಗದಲ್ಲಿ ಪೆನ್ನು ಹಿಡಿದು ಪುಸ್ತಕದಲ್ಲೇ ಬರೆಯಬೇಕೆಂದಿಲ್ಲ, ಮೊಬೈಲ್ನಲ್ಲಿ ಸಾಕಷ್ಟು 'ಡಿಜಿಟಲ್ ಡೈರಿ' ಅಪ್ಲಿಕೇಶನ್ಗಳು ಲಭ್ಯವಿವೆ. ಆದರೆ, ಪೆನ್ನು ಹಿಡಿದು ಕಾಗದದ ಮೇಲೆ ಅಕ್ಷರಗಳನ್ನು ಗೀಚಿದಾಗ ಸಿಗುವ ಮಾನಸಿಕ ನೆಮ್ಮದಿ ಮತ್ತು ತೃಪ್ತಿ ಮತ್ತ್ಯಾವುದರಲ್ಲೂ ಸಿಗಲಾರದು.

 

ಪ್ರಿಯಾ ಶ್ರೀವಿಧಿ

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ    

ಪುತ್ತೂರು

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top