ನಿಗದಿತ ಗುರಿಯನ್ನು ಸಾಧಿಸಲು ಪ್ರಯತ್ನಿಸಿ: ಅಬ್ದುಲ್ ರಜಾಕ್ ಅನಂತಾಡಿ

Upayuktha
0

ಎಸ್ ಡಿ ಎಂ ಪದವಿಪೂರ್ವ ಕಾಲೇಜು ಆರಂಭೋತ್ಸವ- 'ಪ್ರವೇಶಂ'

 


ಉಜಿರೆ: ರಾಜ್ಯದಲ್ಲಿರುವ ಮೇಲ್ಪಂಕ್ತಿಯಲ್ಲಿ ಇರುವಂತಹ ಶಿಕ್ಷಣ ಸಂಸ್ಥೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊಂದಿರುವ ವಿದ್ಯಾಸಂಸ್ಥೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆ. ಸಿದ್ಧವನ ಮಕ್ಕಳನ್ನು ಸಮಾಜಕ್ಕೆ ಸಿದ್ಧ ಮಾಡಿ ಕೊಡುತ್ತಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರಾಧ್ಯಾಪಕರಾದ ಅಬ್ದುಲ್ ರಜಾಕ್ ಅನಂತಾಡಿ ಹೇಳಿದರು.

 

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಇಂದು ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ ಪ್ರವೇಶಂ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

 

ಅಂಕಗಳು ಅನಾಯಾಸವಾಗಿ ಬರುವುದಿಲ್ಲ. ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಿಗದಿತ ಗುರಿಯನ್ನು ಸಾಧಿಸಲು ಪ್ರಯತ್ನಿಸಿ. ಅಶಿಸ್ತು, ಕೆಟ್ಟಚಟ, ವಯೋಸಹಜ ಕಾಮನೆಗಳಿಂದ,  ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಉತ್ತಮ ಅಂಕ ಗಳಿಸಲು ಸಾಧ್ಯ ಎಂದು ಹೇಳಿದರು.

 

ಶಿಕ್ಷಣದ ವ್ಯವಸ್ಥೆಯಲ್ಲಿ ಹಾಜರಾತಿ ಅತೀ ಅವಶ್ಯಕ. ತರಗತಿಗಳಲ್ಲಿ ಮಾಡುವ ಪಾಠ ಪ್ರವಚನಗಳನ್ನು ಗಮನವಿಟ್ಟು ಕೇಳಿದರೆ ಮಾಡಿದ ಪಾಠ ಒಳ್ಳೆಯ ರೀತಿಯಲ್ಲಿ ಮನವರಿಕೆ ಆಗುತ್ತದೆ. ಶಿಕ್ಷಣದಲ್ಲಿ ಬದ್ಧತೆ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಹಕಾರಿ. ಭಾಷಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದರೆ ರಾಜ್ಯ ಮಟ್ಟದಲ್ಲಿ ಒಳ್ಳೆಯ ಫಲಿತಾಂಶ ಗಳಿಸಲು ಸಹಕಾರಿಯಾಗಿದೆ. ಬರವಣಿಗೆ ಶುದ್ಧ ಹಾಗೂ ಚಂದವಾಗಿರಬೇಕು. ವಿಷಯಗಳ ಬಗ್ಗೆ ಆಸಕ್ತಿ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.

 

ಸಣ್ಣ ಪುಟ್ಟ ತಪ್ಪುಗಳು ಕಲಿಕೆಯ ಮೇಲೆ ಪ್ರಭಾವ ಬೀರಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದೆ ಇರಬಹುದು. ಕಲಿಯುವ ವಿದ್ಯಾ ಸಂಸ್ಥೆಯ ಮೇಲೆ ಗೌರವ ಮತ್ತು ಅಭಿಮಾನ ಹೊಂದಿರಬೇಕು. ಹೆತ್ತವರ ಭರವಸೆಯನ್ನು ಹುಸಿ ಮಾಡಬೇಡಿ. ನಿಮ್ಮ ಮೇಲೆ ನಿಮಗೆ ಅಭಿಮಾನ ಇದ್ದರೆ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

 

 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್ ಎನ್ ಕಾಕತ್ಕರ್ ಶಿಕ್ಷಣದಲ್ಲಿ ಜೀವನ ಮೌಲ್ಯಗಳನ್ನು ನೀಡುವ ಉದ್ದೇಶ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳದ್ದು. ನಮ್ಮ ಪದವಿ ಪೂರ್ವ ಕಾಲೇಜು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವ ಸಂಸ್ಥೆ. ಹೆತ್ತವರಿಗೆ ಯಾವುದೇ ರೀತಿಯ ಆತಂಕ ಬೇಡ ಕಾಲೇಜಿನ ಪ್ರಾಧ್ಯಾಪಕರಿಂದ ಎಲ್ಲ ರೀತಿಯ ಸಹಕಾರ ದೊರಕುತ್ತದೆ. ವಿದ್ಯೆ ಶ್ರೇಷ್ಠ ಸಂಪತ್ತು, ವಿದ್ಯೆಯ ಜೊತೆಗೆ ಶಿಸ್ತಿಗೂ ಪ್ರಾಮುಖ್ಯತೆಯನ್ನು ಕಾಲೇಜು ನೀಡುತ್ತದೆ. ನಮ್ಮ ಕಾಲೇಜಿನಲ್ಲಿ ನೀಡುವ ನೈತಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ಬದುಕಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.

 

ಇದೇ ಸಂದರ್ಭದಲ್ಲಿ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ನಿಜ ಕುಲಾಲ್, 9ನೇ ಸ್ಥಾನ ಪಡೆದ ಶ್ರೀಪೂರ್ಣ ಗಬ್ಲಡ್ಕ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಹಂಸಿನಿ ಭಿಡೆ, 8 ನೇ ಸ್ಥಾನ ಪಡೆದ ಅರ್ಪಿತ ಅಡಿಗ, 9 ನೇ ಸ್ಥಾನ ಪಡೆದ ಅಂಶುಲ ಶ್ರೇಷ್ಠ, 10 ನೇ ಸ್ಥಾನ ಪಡೆದ ರಾಮಚರಣ್ ಎಸ್, ಮತ್ತು ವಿಜ್ಞಾನ ವಿಭಾಗದಲ್ಲಿ 9 ನೇ ಸ್ಥಾನ ಪಡೆದ ಅಂಕಿತಾ ಇವರನ್ನು ಗೌರವಿಸಲಾಯಿತು.

 

ಸಾಧಕರನ್ನು ಗೌರವಿಸಿ ಮಾತನಾಡಿದ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ ಸತೀಶ್ಚಂದ್ರ ಎಸ್ ಉನ್ನತ ಸಾಧನೆಗೆ ಶಿಕ್ಷಕರ ಹಾಗೂ ಹೆತ್ತವರ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯ. ಸಾಧನೆ ಹೊಸ ವಿದ್ಯಾರ್ಥಿಗಳಿಗೆ ಪ್ರೇರೇಪಿಸುತ್ತದೆ. ಹೆತ್ತವರ ಜೀವನದ ಉದ್ದೇಶ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು. ಹೆತ್ತವರ ಹಾಗೂ ಶಿಕ್ಷಕರ ಆಶಯಗಳಿಗೆ ಸ್ಪಂದಿಸಿ ಒಳ್ಳೆಯ ನಡವಳಿಕೆ ಇಟ್ಟುಕೊಳ್ಳಿ. ಪ್ರತೀ ವಿದ್ಯಾರ್ಥಿಯಲ್ಲಿ ಪ್ರತಿಭೆ ಇರುತ್ತದೆ, ಅಧ್ಯಾಪಕರು ಅದನ್ನು ಇರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನಮ್ಮ ಕಾಲೇಜಿನಲ್ಲಿ ನೀಡಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ಯಶಸ್ಸಿನ ಸೂತ್ರಗಳನ್ನು ಸರಿಯಾಗಿ ಪಾಲಿಸಿದಾಗ ಕಂಡ ಕನಸು ಈಡೇರಿಸಲು ಸಾಧ್ಯ. ಕೇವಲ ಪುಸ್ತಕದ ಹುಳು ಆಗಿರದೆ ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

 

ಕಾಲೇಜಿನ ಉಪ ಪ್ರಾಂಶುಪಾಲ ಡಾ ರಾಜೇಶ್ ಬಿ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ ಹೆಚ್ ವಂದಿಸಿದರು. ಕನ್ನಡ ಭಾಷಾ ಪ್ರಾಧ್ಯಾಪಕ ಡಾ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top