ಮೇ 25 ರಂದು ನೀಲಾವರದಲ್ಲಿ ಶ್ರೀ ವಿಶ್ವೇಶ ತೀರ್ಥ ಸ್ಮೃತಿವನ ಲೋಕಾರ್ಪಣೆ

Upayuktha
0

ಅರಣ್ಯ ಇಲಾಖೆ ಹಾಗೂ ಪೇಜಾವರ ಮಠದ ಜಂಟಿ ಆಶ್ರಯದಲ್ಲಿ ಸುಂದರ ವನ ನಿರ್ಮಾಣ




ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ಹಾಗೂ ಶ್ರೀ ಪೇಜಾವರ ಮಠದ ಜಂಟಿ ಸಹಯೋಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 'ಶ್ರೀ ವಿಶ್ವೇಶ ತೀರ್ಥ ಸ್ಮೃತಿವನ'ದ ಭವ್ಯ ಉದ್ಘಾಟನಾ ಸಮಾರಂಭವು ಮೇ 25ರಂದು ಸಂಜೆ 4:30ಕ್ಕೆ ನೀಲಾವರ ಗೋಶಾಲೆಯ ಆವರಣದಲ್ಲಿ ಜರುಗಲಿದೆ.


ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗೌರವಾರ್ಥವಾಗಿ ಕರ್ನಾಟಕ ಸರ್ಕಾರವು 2021 ರಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸ್ಮೃತಿವನ ನಿರ್ಮಾಣವನ್ನು ಘೋಷಿಸಿತ್ತು. ಇದೀಗ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ಅತ್ಯಂತ ಸುಂದರವಾದ ಸ್ಮೃತಿವನವು ನೀಲಾವರದಲ್ಲಿ ತಲೆಎತ್ತಿದ್ದು, ಲೋಕಾರ್ಪಣೆಗೆ ಸಜ್ಜಾಗಿದೆ.


ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ದಿವ್ಯ ಸಾನ್ನಿಧ್ಯ

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಉಡುಪಿ ಶ್ರೀ ಪೇಜಾವರ ಮಠದ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ವಹಿಸಲಿದ್ದಾರೆ.


ಸಚಿವ ಈಶ್ವರ ಖಂಡ್ರೆ ಅವರಿಂದ ಉದ್ಘಾಟನೆ

ಸ್ಮೃತಿವನವನ್ನು ರಾಜ್ಯದ ಮಾನ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಫೋಟೋ ಗ್ಯಾಲರಿಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ವಹಿಸಲಿದ್ದಾರೆ.


ಗಣ್ಯರ ಉಪಸ್ಥಿತಿ:

ಮುಖ್ಯ ಅಭ್ಯಾಗತರಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮಂಜುನಾಥ ಪೂಜಾರಿ ಹಾಗೂ ಶಾಸಕರಾದ ವಿ. ಸುನಿಲ್ ಕುಮಾರ್, ಎಸ್. ಎಲ್. ಭೋಜೇಗೌಡ, ಗುರುರಾಜ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಡಿ, ಗುರ್ಮೆ ಸುರೇಶ್ ಶೆಟ್ಟಿ, ಮಂಜುನಾಥ್ ಭಂಡಾರಿ, ಡಾ. ಧನಂಜಯ ಸರ್ಜಿ ಮತ್ತು  ಕಿಶೋರ್ ಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.



ವಿಶೇಷ ಆಹ್ವಾನಿತರಾಗಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಝ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಮೀನಾಕ್ಷಿ ನೇಗಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪಾ ಟಿ.ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಭಾಯಲ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.


ಪೇಜಾವರ ಶ್ರೀಗಳ ಪರಿಸರ ಕಾಳಜಿಗೆ ಸಂದ ಗೌರವ

ಕೀರ್ತಿಶೇಷ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತರಾಗದೆ, ಸಮಾಜದ ಬಹುವಿಧ ಸುಧಾರಣೆಗಳಿಗೆ ಶ್ರಮಿಸಿದ ಮಹಾನ್ ಸಂತ. ಐದು ಬಾರಿ ಉಡುಪಿ ಕೃಷ್ಣಮಠದ ಪರ್ಯಾಯ ನಡೆಸಿ ಚರಿತ್ರೆ ನಿರ್ಮಿಸಿದ್ದ ಶ್ರೀಗಳಿಗೆ ದೇಶದ ಅತ್ಯುನ್ನತ 'ಪದ್ಮವಿಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು


ಶ್ರೀಗಳ ಪರಿಸರ ಪ್ರೇಮ:

ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಪರಿಸರ ಸಂರಕ್ಷಣೆಗಾಗಿ ಮಾದರಿ ಮಾರ್ಗದರ್ಶನ ನೀಡಿದ್ದರು. ಶ್ರೀಮಠದ ವತಿಯಿಂದ 'ವೃಕ್ಷ ಲಕ್ಷ ಆಂದೋಲನ'ವನ್ನು ಹಮ್ಮಿಕೊಂಡು ಲಕ್ಷಾಂತರ ಭಕ್ತರಿಗೆ ಉಚಿತ ಸಸಿ ಹಾಗೂ ಬೀಜದ ಉಂಡೆಗಳನ್ನು (Seed Balls) ವಿತರಿಸಿ, ಅವುಗಳನ್ನು ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಿದ್ದರು. ಶ್ರೀಗಳ ಇದೇ ಪರಿಸರ ಕಾಳಜಿಯ ನೆನಪಿಗಾಗಿ ಅರಣ್ಯ ಇಲಾಖೆಯು ಈ ಹಸಿರು ವನವನ್ನು ಲೋಕಾರ್ಪಣೆ ಮಾಡುತ್ತಿದೆ.


ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಹಸ್ರಾರು ಅಭಿಮಾನಿಗಳು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ. ಹಾಗೂ ಪೇಜಾವರ ಮಠದ ದಿವಾನರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


إرسال تعليق

0 تعليقات
إرسال تعليق (0)
To Top