ಎಸ್.ಡಿ.ಎಂ ಕಾಲೇಜು ಉಜಿರೆ: ವಿಟಿಯು ಮಂಗಳೂರು ವಲಯ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

Upayuktha
0

 ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ: ಗಗನ್ ಗೌಡ

 


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣದಲ್ಲಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯ ಅಂತರ್ ಕಾಲೇಜುಗಳ ಪುರುಷರ ಕಬ್ಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

 

ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರೊ ಕಬಡ್ಡಿ ಖ್ಯಾತಿಯ ರಾಷ್ಟ್ರೀಯ ಕಬಡ್ಡಿ ಆಟಗಾರ ಗಗನ್ ಗೌಡ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕ್ರೀಡೆ ದೈಹಿಕ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡಾಳುಗಳು ಪ್ರತಿಭೆ ಮತ್ತು ಕೌಶಲ್ಯದ ಜೊತೆಗೆ ಶಿಸ್ತನ್ನು ಪಾಲಿಸಬೇಕು. ಸ್ಪರ್ಧಾಳುಗಳು ಕ್ಷಣಿಕ ಜಯದ ಸಂಭ್ರಮಕ್ಕೆ ಸೀಮಿತರಾಗದೆ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಹೆಜ್ಜೆ ಹಾಕಿದಾಗ ಯಶಸ್ಸು ಸಾಧ್ಯವಾಗುತ್ತದೆ. ಇದು ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುತ್ತದೆ ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.

 

ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಉಪಸ್ಥಿತರಿದ್ದ ರಾಷ್ಟ್ರ ಮಟ್ಟದ ತೀರ್ಪುಗಾರ ಕೃಷ್ಣಾನಂದ ರಾವ್ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪ್ರಾಯೋಜಿಸಲ್ಪಡುವ ಕ್ರೀಡಾಕೂಟಗಳ ಪೈಕಿ ಒಂದಲ್ಲ ಒಂದು ಕ್ರೀಡೆಯನ್ನು ಎಸ್.ಡಿ.ಎಂ ಆಡಳಿತ ಮಂಡಳಿಯ ಸಹಕಾರದಿಂದ ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿಕೊಂಡು ಬಂದಿದೆ. ಪುರುಷರ ಕಬಡ್ಡಿ ಪಂದ್ಯಾಟವನ್ನು ಎಸ್.ಡಿ.ಎಂ ಸಂಸ್ಥೆ ಎರಡನೇ ಬಾರಿ ನಡೆಸಿಕೊಡುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಕಬ್ಬಡಿ ಕ್ರೀಡೆಗೆ ಇಂದು ವಿಶೇಷ ಮನ್ನಣೆ ದೊರೆತಿದೆ. ಒಲಿಂಪಿಕ್ಸ್ ನಂತಹ ಕ್ರೀಡಾ ಕೂಟಗಳಲ್ಲಿ ಮುಂದೊಂದು ದಿನ ಕಬಡ್ಡಿ ಪ್ರಜ್ವಲಿಸಬೇಕು. ಪ್ರೋ ಕಬಡ್ಡಿಯಂತಹ ಪಂದ್ಯಾವಳಿಗಳು ಆರಂಭಗೊಂಡು ಪ್ರೇಕ್ಷಕರಲ್ಲಿ ಹಾಗೂ ಕ್ರೀಡಾಪಟುಗಳಲ್ಲಿ ಕಬಡ್ಡಿ ಮೇಲಿನ ಆಸಕ್ತಿಯನ್ನು ಹೆಚ್ಚಿಸಿದೆ. ಇಂತಹ ಪ್ರೋ ಕಬಡ್ಡಿ ಕ್ರೀಡಾ ಕ್ಷೇತ್ರಕ್ಕೆ ಎಸ್.ಡಿ.ಎಂ ಸಂಸ್ಥೆಯ 6 ವಿದ್ಯಾರ್ಥಿಗಳು ಆಯ್ಕೆಗೊಂಡು ಭಾಗವಹಿಸಿದ್ದಾರೆ ಎಂಬುವುದು ಹೆಮ್ಮೆಯ ಸಂಗತಿ ಎಂದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ ಮಾತನಾಡಿ, ಕಬಡ್ಡಿ ಕ್ರೀಡೆ ವಿಶೇಷ ಸಾಮಾರ್ಥ್ಯ ಮತ್ತು ಕೌಶಲ್ಯದಿಂದ ಸಾಗಿಬರುವ ಆಟ. ಕ್ರೀಡೆಯ ಮೇಲಿನ ಆಸಕ್ತಿಯೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.

 

ಮಂಗಳೂರು ವಲಯದ ಅಂತರ್ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಉಜಿರೆಯ ತಾಂತ್ರಿಕ ಮಹಾವಿದ್ಯಾಲಯ, ಮೂಡುಬಿದಿರೆಯ ಆಳ್ವಾಸ್, ಸುಳ್ಯದ ಕೆವಿಜಿ, ಮಂಗಳೂರಿನ ಕೆನರಾ, ಎಮ್ ಐಟಿ ಕುಂದಾಪುರ, ವಿವೇಕಾನಂದ ಪುತ್ತೂರು ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಸುಮಾರು 14 ತಂಡಗಳು ಭಾಗವಹಿಸಿದ್ದವು.

 

ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹಾಗೂ ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ತಂಡಗಳು ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉಜಿರೆಯ ಎಸ್ .ಡಿ.ಎಂ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಾದ ಕಲ್ಪಿತ ಹಾಗು ಅನಿಶ್ ಕಲ್ಮಾಡಿ ನಿರೂಪಿಸಿ, ವಂದಿಸಿದರು. ಪುರುಷರ ಕಬಡ್ಡಿ ಪಂದ್ಯಾಟವನ್ನು ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಭಾಕರ್ ಸಂಯೋಜಿಸಿ, ಉಪನ್ಯಾಸಕರಾದ ಡಾ. ರಜತ, ಡಾ. ಬಸವ ಮತ್ತು ಡಾ. ನವೀನ್ ಸಹಕರಿಸಿದರು.

  

"ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ಸಂಘ ಕ್ರೀಡಾಪಟುಗಳಿಗೆ ನಾನಾ ಅತ್ಯಾಧುನಿಕ ಸವಲತ್ತುಗಳನ್ನು ನೀಡುವ ಜೊತೆಗೆ ಪ್ರತಿಭಾವಂತರಿಗೆ ವಿಶೇಷ ತರಬೇತಿಯನ್ನು ನಿರಂತರವಾಗಿ ನೀಡುತ್ತಾ ಬರುತ್ತಿದೆ. ಇದನ್ನು ಕ್ರೀಡಾ ಪಟುಗಳು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರತಿಭೆಯಾಗಿದ್ದ ನನ್ನನ್ನು ಇಂದು ಎಸ್.ಡಿ.ಎಂ ಸಂಸ್ಥೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಬ್ಬಡ್ಡಿಯಲ್ಲಿ ಪಂದ್ಯಾಟಗಳಲ್ಲಿ ಭಾಗವಹಿಸುವಂತೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ಪ್ರೋ ಕಬಡ್ಡಿ ಪಂದ್ಯಾಟದ ಯುಪಿ ಯೋಧ ತಂಡದಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಎಸ್.ಡಿ.ಎಂ ಸಂಸ್ಥೆಯ ಸಹಕಾರ ಪ್ರಮುಖವಾಗಿದೆ."

- ಗಗನ್ ಗೌಡ

ರಾಷ್ಟ್ರೀಯ ಕಬಡ್ಡಿ ಆಟಗಾರ, ಪ್ರೊ ಕಬಡ್ಡಿ ತಾರೆ



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top