85 ಲಕ್ಷಕ್ಕೂ ಹೆಚ್ಚು ಡೆವಲಪರ್ ಗಳಿಂದ ಗೂಗಲ್ ಎಐ ಮಾದರಿ ಬಳಕೆ; ಆಲ್ಫಾಬೆಟ್‌ನಿಂದ $190 ಬಿಲಿಯನ್ ಹೂಡಿಕೆ: ಸುಂದರ್ ಪಿಚೈ ಘೋಷಣೆ

Upayuktha
0


ಕ್ಯಾಲಿಫೋರ್ನಿಯಾ: ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ (Google) ತನ್ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದೆ. ಪ್ರತಿ ತಿಂಗಳು ವಿಶ್ವದಾದ್ಯಂತ 85 ಲಕ್ಷಕ್ಕೂ ಹೆಚ್ಚು ಡೆವಲಪರ್‌ಗಳು ಹೊಸ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಲು ಗೂಗಲ್‌ನ ಎಐ ಮಾದರಿಗಳನ್ನು ಬಳಸುತ್ತಿದ್ದಾರೆ ಎಂದು ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. ಎಐ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ಕಂಪನಿಯು ಈ ವರ್ಷ ಬರೋಬ್ಬರಿ 190 ಬಿಲಿಯನ್ ಡಾಲರ್ (ಸುಮಾರು ₹15 ಲಕ್ಷ ಕೋಟಿಗೂ ಹೆಚ್ಚು) ಬಂಡವಾಳ ಹೂಡಿಕೆಯನ್ನು (Capex) ನಿರೀಕ್ಷಿಸುತ್ತಿದೆ ಎಂದು ಅವರು ಘೋಷಿಸಿದ್ದಾರೆ.

ಎಐ ಡೇಟಾ ಸೆಂಟರ್‌ಗಳು, ಕಸ್ಟಮ್ ಸಿಲಿಕಾನ್ ಚಿಪ್ಸ್ ಹಾಗೂ ಎಐ ಮಾದರಿಗಳ ತರಬೇತಿಗಾಗಿ ಈ ಭಾರಿ ಮೊತ್ತವನ್ನು ವಿನಿಯೋಗಿಸಲಾಗುತ್ತಿದ್ದು, ಗ್ರಾಹಕರು ಮತ್ತು ಉದ್ಯಮ ವಲಯದಲ್ಲಿ ಗೂಗಲ್ ಎಐಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಸದ್ಯ ಗೂಗಲ್‌ನ ಎಐ ಮಾಡೆಲ್ ಎಪಿಐಗಳು (APIs) ಪ್ರತಿ ನಿಮಿಷಕ್ಕೆ ಸುಮಾರು 19 ಬಿಲಿಯನ್ ಟೋಕನ್‌ಗಳನ್ನು ಪ್ರೊಸೆಸ್ ಮಾಡುತ್ತಿವೆ. ಇನ್ನು ಗೂಗಲ್‌ನ ಜನಪ್ರಿಯ 'ಜೆಮಿನಿ' (Gemini) ಆಪ್‌ನ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 90 ಕೋಟಿಯ ಗಡಿ ದಾಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ. ಇದರೊಂದಿಗೆ ಗೂಗಲ್‌ನ ಎಐ ಓವರ್‌ವ್ಯೂಸ್ 2.5 ಬಿಲಿಯನ್ ಹಾಗೂ ಎಐ ಮೋಡ್ 1 ಬಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದುವ ಮೂಲಕ ಗೂಗಲ್ ಸರ್ಚ್ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 

ಇದೇ ವೇಳೆ ಗೂಗಲ್ ಸಂಸ್ಥೆಯು ಕೋಡಿಂಗ್ ಮತ್ತು ಕೆಲಸದ ವೇಗವನ್ನು ಹೆಚ್ಚಿಸುವ 'ಜೆಮಿನಿ 3.5 ಫ್ಲ್ಯಾಶ್' ಮತ್ತು ಬಳಕೆದಾರರ ಪರವಾಗಿ ಕೆಲಸ ನಿರ್ವಹಿಸುವ ವೈಯಕ್ತಿಕ ಎಐ ಏಜೆಂಟ್ 'ಜೆಮಿನಿ ಸ್ಪಾರ್ಕ್' ಸೇರಿದಂತೆ ಹಲವು ಹೊಸ ಪರಿಕರಗಳನ್ನು ಅನಾವರಣಗೊಳಿಸಿದೆ. ಹಾಗೆಯೇ ವಿಡಿಯೋಗಳಲ್ಲಿ ತಮಗೆ ಬೇಕಾದ ನಿಖರ ಕ್ಷಣಗಳನ್ನು ಸಂಭಾಷಣೆಯ ಮೂಲಕ ಪತ್ತೆಹಚ್ಚಲು ನೆರವಾಗುವ 'ಆಸ್ಕ್ ಯೂಟ್ಯೂಬ್' (Ask YouTube) ಮತ್ತು ಧ್ವನಿ ಆಜ್ಞೆಗಳ ಮೂಲಕ ದಾಖಲೆಗಳನ್ನು ಸಿದ್ಧಪಡಿಸುವ 'ಡಾಕ್ಸ್ ಲೈವ್' (Docs Live) ಫೀಚರ್‌ಗಳನ್ನು ಪರಿಚಯಿಸಲಾಗಿದೆ. ಎಐ ತಂತ್ರಜ್ಞಾನದ ದುರ್ಬಳಕೆ ತಡೆಯಲು ತಂದಿರುವ 'ಸಿಂಥ್‌ಐಡಿ' (SynthID) ವಾಟರ್‌ಮಾರ್ಕಿಂಗ್ ತಂತ್ರಜ್ಞಾನವನ್ನು ಓಪನ್ ಎಐ ಮತ್ತು ಎಲೆವೆನ್‌ಲ್ಯಾಬ್ಸ್‌ನಂತಹ ಪ್ರಮುಖ ಕಂಪನಿಗಳು ಸಹ ಅಳವಡಿಸಿಕೊಳ್ಳುತ್ತಿವೆ ಎಂದು ಸುಂದರ್ ಪಿಚೈ ಮಾಹಿತಿ ನೀಡಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top