ತುರ್ತು ಸಂದರ್ಭದಲ್ಲಿ ಸುರಕ್ಷಿತ ರಕ್ಷಣೆಗಾಗಿ ಕೈಗಾರಿಕೆಗಳಲ್ಲಿ ಅಣಕು ಪ್ರದರ್ಶನ ಅಗತ್ಯ: ಡಿಎಸ್ಪಿ ಜಿ.ಎಂ. ತಿಪ್ಪೇಸ್ವಾಮಿ

Upayuktha
0

 


ಬಳ್ಳಾರಿ: ಕೈಗಾರಿಕೆಗಳು ಮತ್ತು ಕಾರ್ಖಾನೆಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಬೆಂಕಿ ಅವಘಡಗಳನ್ನು ಎದುರಿಸಲು, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವನ್ನು ತಡೆಯಲು ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರನ್ನು ಮತ್ತು ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲು ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ಅಗತ್ಯ ಎಂದು ಬಳ್ಳಾರಿ ಡಿಎಆರ್ ಡಿಎಸ್ಪಿ ಜಿ.ಎಂ. ತಿಪ್ಪೇಸ್ವಾಮಿ ಅವರು ಹೇಳಿದರು.

 

ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕ ದಳ, ಪೌರರಕ್ಷಣೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇವರ ಸಹಯೋಗದಲ್ಲಿ ಬಳ್ಳಾರಿ ತಾಲ್ಲೂಕಿನ ಅಮರಾಪುರ ಗ್ರಾಮದ ಡಿ.ಎಂ ಗ್ಲೋಬಲ್ ಕ್ಲಾತಿಂಗ್ ಕಂಪನಿಯ ಆವರಣದಲ್ಲಿ ವಿಪತ್ತು ನಿರ್ವಹಣೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 

ಕಡಿಮೆ ಸಮಯದಲ್ಲಿ, ಕನಿಷ್ಠ ನಷ್ಟದೊಂದಿಗೆ ಜನರನ್ನು ರಕ್ಷಿಸುವುದು ಅಣಕು ಪ್ರದರ್ಶನದ ಮುಖ್ಯ ಉದ್ದೇಶ. ಇಂತಹ ಸಂದರ್ಭದಲ್ಲಿ ತ್ವರಿತ ಕಾರ್ಯಾಚರಣೆ ಮತ್ತು ಇಲಾಖೆಗಳ ಸಮನ್ವಯತೆಯೂ ಅಗತ್ಯ. ಯಾವುದೇ ತುರ್ತು ಸಂದರ್ಭ ಎದುರಾದಾಗ ಕಾರ್ಖಾನೆಯ ಭದ್ರತಾ ಸಿಬ್ಬಂದಿಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಅಲಾರಂ ಮೊಳಗಿದ ತಕ್ಷಣ ರ‍್ಯಾಲಿ ಪೋಸ್ಟ್ನಲ್ಲಿ ಸಿಬ್ಬಂದಿಗಳು ಹೇಗೆ ಜಮಾಯಿಸಬೇಕು, ಕಾರ್ಖಾನೆಯ ಎಡಭಾಗ, ಬಲಭಾಗ, ಮುಂಭಾಗ ಹಾಗೂ ಮುಖ್ಯ ದ್ವಾರಗಳಲ್ಲಿ ಯಾರ್ಯಾರು ಕರ್ತವ್ಯ ನಿರ್ವಹಿಸಬೇಕು ಎಂಬ ಬಗ್ಗೆ ಚಾರ್ಟ್ ಸಿದ್ಧವಿರಬೇಕು ಎಂದು ವಿವರಿಸಿದರು.

 

ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ವೈ.ಶೇಕ್ ಸಾಬ್ ಅವರು ಮಾತನಾಡಿ, ಇತ್ತೀಚಿನ ಜಾಗತಿಕ ವಿದ್ಯಮಾನಗಳಾದ ಉಕ್ರೇನ್, ಇರಾನ್ ಮತ್ತು ಇಸ್ರೇಲ್ ದೇಶಗಳಲ್ಲಿನ ಪರಿಸ್ಥಿತಿಗಳನ್ನು ಗಮನಿಸಿದಾಗ, ಅಗ್ನಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣಾ ಮೋಕ್ ಡ್ರಿಲ್ಗಳ ಮಹತ್ವ ಏನೆಂಬುದು ನಮಗೆ ಅರಿವಾಗುತ್ತದೆ. ಇದು ಕೇವಲ ಒಂದು ತಾಲೀಮು ಅಲ್ಲ, ದೇಶದ ರಕ್ಷಣೆ ಮತ್ತು ಭವಿಷ್ಯಕ್ಕೆ ಭದ್ರವಾದ ಅಡಿಪಾಯವಾಗಿದೆ ಎಂದು ಹೇಳಿದರು.

 

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ಪರಮೇಶ ಅವರು ಮಾತನಾಡಿ, ನಾಗರಿಕರ ಸುರಕ್ಷತೆ ಹಾಗೂ ಸನ್ನದ್ಧತೆಯನ್ನು ಪರಿಶೀಲಿಸಲು ವರ್ಷಕ್ಕೆ ಎರಡು ಬಾರಿ (ಏಪ್ರಿಲ್ ಹಾಗೂ ನವೆಂಬರ್ನಲ್ಲಿ) ಏರ್ ರೈಡ್ ಅಟ್ಯಾಕ್ (ವಾಯುದಾಳಿ) ಮತ್ತು ಬ್ಯಾಕ್ ಔಟ್ ಮೋಕ್ ಡ್ರಿಲ್ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

 

ಅಣಕು ಪ್ರದರ್ಶನದಲ್ಲಿ ಗಾಯಗೊಂಡವರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ನೀಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಆರೋಗ್ಯ ದೃಷ್ಟಿಯಿಂದ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಂಟಿಯಾಗಿ ಹಮ್ಮಿಕೊಂಡಿದ್ದ ವಿವಿಧ ರಕ್ಷಣಾ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು

 

ವೇಳೆ ಬಳ್ಳಾರಿ ತಾಲ್ಲೂಕು ಉಪ ತಹಸೀಲ್ದಾರ ವಿನಾಯಕಗೌಡ, ಗೃಹರಕ್ಷಕ ದಳದ ಅಧಿಕಾರಿ ಹೆಚ್.ತಿಪ್ಪೇಸ್ವಾಮಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಕಂಚಿನಮಠ, ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top