ನಕ್ಕು ಬಿಡಿ: ಪಂಚಾಂಗದ ಪ್ರಕಾರ ಇವತ್ತು 'ಗಂಡ ಯೋಗ!'

Upayuktha
0

 



ಇವತ್ತಿನ ದಿನಚರಿ ಪಂಚಾಂಗ ನೋಡ್ತಾ ಇದ್ದೆ.  


ಋತು: ಗ್ರೀಷ್ಮ ಮಾಸ

ಪಕ್ಷ: ಶುಕ್ಲ. 

ತಿಥಿ: ಪಂಚಮೀ

ನಿತ್ಯನಕ್ಷತ್ರ: ಪುಷ್ಯ

ಮಹಾ ನಕ್ಷತ್ರ: ಕೃತ್ತಿಕಾ

ಯೋಗ: ಗಂಡ.


'ಯೋಗ: ಗಂಡ' ಎಂಬಲ್ಲಿಗೆ ಪಂಚಾಂಗ ಪಠಣಕ್ಕೆ ಒಂದು ಬ್ರೇಕ್ ಬಿತ್ತು!!!


ಪಕ್ಕನೆ ಹಳೆಯದೊಂದು ಕತೆ ನೆನಪಾಯ್ತು! ಕತೆಯ ಹೆಸರು "ಗಂಡ" ಮಾರಾಟಕ್ಕಿದ್ದಾನೆ" (ಈ ಕತೆ ಬರೆದವರು ಯಾರೋ ತಿಳಿಯದು). 


ಗಂಡ ಮಾರಾಟಕಿದ್ದಾನೆ ಅಂದರೆ, ಗಂಡಸೊಬ್ಬ ಈಗಾಗಲೆ ಯಾರಿಗೋ ಪತಿಯಾಗಿದ್ದು, ಪತ್ನಿಯಾದವಳು ಹಳೆಯದಾದ ಗುಜರಿ ಗಂಡನನ್ನು ಮಾರಾಟ ಮಾಡುತ್ತಿದ್ದಾಳೆ ಅನ್ನುವ ಅರ್ಥ ಅಲ್ಲ. ಅಂದರೆ ಸೆಕೆಂಡ್ ಹ್ಯಾಂಡ್ ಗಂಡ ಅಲ್ಲ!! ಕತೆಯಲ್ಲಿರುವುದು, ಇನ್ನೂ ಒಂದು ಬಾರಿಯೂ ಮದುವೆ ಆಗದ ಗಂಡನ ಮಾರಾಟ!. ಒಂದೂ ಬಾರಿಯೂ ಮದುವೆ ಆಗದಿದ್ದರೆ ಆತ ಗಂಡ ಹೇಗಾಗುತ್ತಾನೆ!!? ಖರೀಧಿ ಮಾಡಿದವರು ಗಂಡ ಅಂತ ನೊಂದಣಿ ಮಾಡಿಸಿದ ಮೇಲೆ ಆತ ಗಂಡ ಆಗುವುದಲ್ಲವೆ? ಎಂಬ ನಿಮ್ಮ 'ಗಂಡನ ಮೇಲಿನ ಅನುಮಾನದ ಪ್ರಶ್ನೆ'ಗೆ ಉತ್ತರ ಇಲ್ಲ. ಕತೆ ಬರೆದವರಿಗೇ ಕೇಳಬೇಕು, ಆದರೆ, ಕತೆ ಬರೆದ 'ಬರಹಪತಿ' ಯಾರು ಅಂತ ಗೊತ್ತಿಲ್ಲದಿರುವುದರಿಂದ 'ಗಂಡನ ಮೇಲಿನ ಅನುಮಾನದ ಪ್ರಶ್ನೆ'ಗೆ ಸದ್ಯಕ್ಕೆ ಉತ್ತರ ಇಲ್ಲ.  


ಇವತ್ತಿನ ಪಂಚಾಂಗದ ಯೋಗದಲ್ಲಿ ಗಂಡಾಂತಿರುವುದರಿಂದ (ಕರೆಕ್ಟಾಗಿ ಓದಿಕೊಳ್ಳಿ ಗಂಡಾಂತರ ಇರುವುದರಿಂದ ಅಂತ ಅಲ್ಲ!) ಈ "ಗಂಡ" ಮಾರಾಟಕ್ಕಿದ್ದಾನೆ" ಕತೆ ನೆನಪಾಯ್ತು.  


ಇನ್ನೊಂದು ವಿಷಯ ನೋಡಿ ಕತೆ ಕಡೆ ಹೋಗುವ. ಇವತ್ತು ಮದುವೆ ವಯಸ್ಸಿಗೆ ಬಂದ ಹುಡುಗಿಯರು, ಗಂಡ ಆಗುವವನಿಂದ ನಿರೀಕ್ಷೆ ಮಾಡುವ ಹೈಫೈ ಕ್ವಾಲಿಟಿಗಳು ಮತ್ತು ಡಿಮ್ಯಾಂಡ್‌ಗಳು ಭಯಂಕರವಾಗಿರುವುದರಿಂದ, ಅನೇಕ ಹುಡುಗರಿಗೆ ಮದುವೆ ಆಗುವ ಯೋಗವೂ ಇಲ್ಲ 'ವರ'ವೂ ಇಲ್ಲ ಅಂತಾಗಿದೆ.  


ದಶಕಗಳ ಹಿಂದೆ 'ಕನ್ಯಾ ಪಿತೃಗಳನ್ನು' ಶಾರ್ಟ್ ಫಾರ್ಮ್‌ನಲ್ಲಿ 'ಕಪಿಗಳು' ಅಂತ ಹಾಸ್ಯವಾಗಿ ಕರೆಯುತ್ತಿದ್ದರು. ಈಗ ವಧುಗಳ ಡಿಮ್ಯಾಂಡ್ ಕೇಳಿ ಗಂಡು, ಗಂಡಿನ ಪೋಷಕರು 'ಮಂಗ'ಗಳಾಗುವಂತಾಗಿದೆ!!


ಬಿಡಿ, ಅದೆಲ್ಲ ಹೋಗಲಿ. ಪಂಚಾಗದ ಪ್ರಕಾರ, ಇವತ್ತಿನಿಂದ ಅವಿವಾಹಿತ ಗಂಡಂದಿರಿಗೆಲ್ಲ 'ಗಂಡ ಯೋಗ' ಗಂಡ ಆಗುವ ಯೋಗವನ್ನು ಕರುಣಿಸಿದೆ ಅಂತ ಭಾವಿಸುವ.  


ಬೇರೆ ಬೇರೆ ದೇಶಗಳ ಮೇಲೆ ಅಸಾಧ್ಯವಾದ ಸುಂಕ, ನಿಯಮ, ಅನುಮತಿ, ಡಿಮ್ಯಾಂಡ್, ಟಾರ್ಚರ್‌ಗಳನ್ನು ಹಾಕಿ ವಿಶ್ವವನ್ನೇ ಯುದ್ಧರಂಗವಾಗಿಸುವ ಟ್ರಂಪ್‌ನಂತೆ, ವಧುಗಳು ವಿಧಿಸುವ ಡಿಮ್ಯಾಂಡ್‌ಗಳಿಂದಾಗಿ ಅನೇಕ ಗಂಡು ಮಕ್ಕಳಿಗೆ ನಿಂತೇ ಹೋಗಿರುವ ಮದುವೆ ಹೊಂದಾಣಿಕೆಗಳು (ಮದುವೆಯೂ ಒಂದು ರೀತಿಯಲ್ಲಿ ಯುದ್ಧವೆ!!? ವಿಚ್ಛೇದನೆ ಅನ್ನುವುದು ಶಾಂತಿ ಒಪ್ಪಂದ!? ಹೊಂದಾಣಿಕೆ ಎನ್ನುವುದು ಕಲ್ಪನೆ!?) ಪುನ ಪ್ರಾರಂಭವಾಗಲಿ. ಅರ್ಹರಿಗೆಲ್ಲ ಗಂಡ ಯೋಗ ಸಿಗಲಿ. (ಗಂಡ ಆಗುವ ಯೋಗ ಮತ್ತು ಗಂಡ ಸಿಗುವ ಯೋಗ!)


ಸರಿ, ಕತೆ ಓದುವ. (ಈ ಕತೆಯನ್ನು ನೀವು ಈಗಾಗಲೆ ಓದಿರಬಹುದು. ಆದರೂ ಇನ್ನೊಮ್ಮೆ ಓದಿ. ಈ "ಗಂಡ" ಮಾರಾಟಕ್ಕಿದ್ದಾನೆ" ಕತೆ ಓದಿದರೆ... ಏಳೇಳು ಜನ್ಮಕ್ಕೂ ಹುಟ್ಟುವಾಗಲೇ ಗಂಡ ಯೋಗ ಜಾತಕದಲ್ಲಿ ಕೂಡಿ ಬರುತ್ತದೆ ಅಂತ ಮೇಲುಕೊಪ್ಪ ಸಂಖ್ಯಾ ಜ್ಯೋತಿಷಿ ಅನಾರ್ಯವರ್ದಿಯವರು ಹೇಳಿದರೂ ಹೇಳಬಹುದು!!


ಕತೆ:


*****


"ಗಂಡ" ಮಾರಾಟಕ್ಕಿದ್ದಾನೆ"

 

ಆ ಊರಿನ ಪ್ರಮುಖವಾದ ಮಾರುಕಟ್ಟೆಯಲ್ಲಿ ವಿಶಿಷ್ಟವಾದ ಅಂಗಡಿಯನ್ನು ತೆರೆಯಲಾಗಿತ್ತು.

"ಇಲ್ಲಿ ನೀವು ಇಚ್ಛಿಸಿದ ಗಂಡ ನನ್ನು ಖರೀದಿಸಬಹುದು.l"

ಅಂಗಡಿ ತೆರೆಯಿತು. ಕೂಡಲೇ ಒಳಗೆ ಬರಲು "ಅವಿವಾಹಿತ" ಮಹಿಳೆಯರು ಕಾತರದಿಂದ ಜಮಾಯಿಸಿದ್ದರು. ಆದರೆ ಅಂಗಡಿಯ ಹೊರಗೆ ಎಚ್ಚರಿಕೆಯನ್ನೂ ಬರೆಯಲಾಗಿತ್ತು

"ಗಂಡನನ್ನು ಖರೀದಿಸಲು ಪಾಲಿಸಬೇಕಾದ ನಿಯಮಗಳು"

-ಒಬ್ಬ ಮಹಿಳೆ ಒಮ್ಮೆ ಮಾತ್ರ ಅಂಗಡಿಯನ್ನು ಪ್ರವೇಶಿಸಬಹುದು. ಎರಡನೆಯ ಬಾರಿ ಪ್ರವೇಶಕ್ಕೆ ಅವಕಾಶವಿಲ್ಲ.

-ಅಂಗಡಿಯ ಸಂಕೀರ್ಣದಲ್ಲಿ ಒಟ್ಟು 6 ಮಹಡಿಗಳಿವೆ ಮತ್ತು ಪ್ರತಿ ಮಹಡಿಯಲ್ಲಿ ಅಲ್ಲಿ ಸಿಗಬಹುದಾದ ವಿಭಿನ್ನ ರೀತಿಯ ಗಂಡಂದಿರ ಬಗ್ಗೆ  ವಿವರಣೆ ನೀಡುತ್ತದೆ.

-ಗ್ರಾಹಕರು ಯಾವುದೇ ಮಹಡಿಯಿಂದ ತಮ್ಮ ಪತಿಯನ್ನು ಆಯ್ಕೆ ಮಾಡಬಹುದು.

-ಒಮ್ಮೆ ನೀವು ಮೇಲಿನ ಮಹಡಿಗೆ ಹೋದರೆ, ಅಂಗಡಿಯಿಂದ ನಿರ್ಗಮಿಸುವುದನ್ನು ಹೊರತುಪಡಿಸಿ ನೀವು ಮತ್ತೆ ಹಿಂತಿರುಗಲು ಸಾಧ್ಯವಿಲ್ಲ.


ಯುವತಿಯೊಬ್ಬಳು ಉತ್ಸಾಹದಿಂದ ಅಂಗಡಿಯನ್ನು ಪ್ರವೇಶಿಸಿದಳು. ಆಮೇಲೆ ಒಬ್ಬಳು, ಮತ್ತೆ ಇನ್ನೊಬ್ಬಳು, ಮುಂದೆ ಇನ್ನೊಬ್ಬಳು...

ಮೊದಲ ಮಹಡಿ: ಅಲ್ಲಿ ಹೀಗೆ ಬರೆದಿತ್ತು:

"ಇಲ್ಲಿ ಸಿಗುವ ಗಂಡಂದಿರು ಉದ್ಯೋಗದಲ್ಲಿದ್ದಾರೆ ಮತ್ತು ಪ್ರಾಮಾಣಿಕರಾಗಿದ್ದಾರೆ."

ಇನ್ನೂ "ಸ್ವಲ್ಪ ನೋಡ್ತೀನಿ" ಎಂದುಕೊಂಡು ಮುಂದೆ ಸಾಗಿದಳು ಹುಡುಗಿ. ಆಸೆ ಅಲ್ವೇ?

ಎರಡನೇ ಮಹಡಿ: ಅಲ್ಲಿ ಹೀಗೆ ಬರೆದಿತ್ತು:

"ಇಲ್ಲಿ ಸಿಗಲಿರುವ ಗಂಡಂದಿರು ಕೆಲಸ ಮಾಡುತ್ತಾರೆ, ಪ್ರಾಮಾಣಿಕರು ಮತ್ತು ಮಕ್ಕಳನ್ನು ಪ್ರೀತಿಸುತ್ತಾರೆ."


"ನಾನು ಇನ್ನೂ ಏನನ್ನಾದರೂ ಚೆನ್ನಾಗಿ ನೋಡಲಿದ್ದೇನೆ" ಎಂದು ಹುಡುಗಿ ಮತ್ತೆ ಯೋಚಿಸಿ ಮುಂದೆ ಸಾಗಿದಳು. ಮೂರನೇ ಮಹಡಿ: ಅಲ್ಲಿ ಹೀಗೆ ಬರೆದಿತ್ತು:

"ಇಲ್ಲಿ ಸಿಗಲಿರುವ ಗಂಡಂದಿರು ಉದ್ಯೋಗಿಗಳು, ಪ್ರಾಮಾಣಿಕರು, ಮಕ್ಕಳನ್ನು ಪ್ರೀತಿಸುತ್ತಾರೆ ಮತ್ತು ತುಂಬಾ ಸುಂದರವಾಗಿದ್ದಾರೆ"

ಹುಡುಗಿ ಒಂದು ಕ್ಷಣ ನಿಂತಳು, ಆಸೆ ಇನ್ನೂ ಜೀವಂತವಾಗಿತ್ತು, ಅದರಿಂದಾಗಿ ಮುಂದೆ ಹೋಗುವುದನ್ನು ತಡೆಯಲಾಗಲಿಲ್ಲ.

 ನಾಲ್ಕನೇ ಮಹಡಿ: ಅಲ್ಲಿ ಹೀಗೆ ಬರೆದಿತ್ತು:

 "ಇಲ್ಲಿ ಸಿಗಲಿರುವ ಗಂಡಂದಿರು ಉದ್ಯೋಗಿಗಳು, ಪ್ರಾಮಾಣಿಕರು, ಸುಂದರ ಮತ್ತು ಮನೆಕೆಲಸಗಳಲ್ಲಿ ಸಹಾಯ ಮಾಡುತ್ತಾರೆ."

ಒಂದರಿಂದ ಇನ್ನೊಂದರಲ್ಲಿ ಉತ್ತಮವಾದದ್ದೇ ಇದೆ.

 "ಇದಕ್ಕಿಂತ ಉತ್ತಮವಾದದ್ದು ಮುಂದಿನ ಮಹಡಿಯಲ್ಲಿ ಯಾವುದಿರಬಹುದು?" 

ಆ ಹುಡುಗಿ ಯೋಚಿಸಿದಳು. ಆದರೆ ಅವಳ ಹೃದಯವು "ಇನ್ನೊಂದು ಮಹಡಿಯನ್ನು ನೋಡೋಣ" (ಯೆ ದಿಲ್ ಮಾಂಗೇ ಮೋರ್) ಎಂದು ಹೇಳಿತು.


 ಐದನೇ ಮಹಡಿ: ಅಲ್ಲಿ ಹೀಗೆ ಬರೆದಿತ್ತು:

 "ಇಲ್ಲಿ, ಗಂಡಂದಿರು ಉದ್ಯೋಗಿಗಳು, ಪ್ರಾಮಾಣಿಕರು, ಸುಂದರರು, ಮನೆಕೆಲಸಗಳಲ್ಲಿ ಸಹಾಯ ಮಾಡುತ್ತಾರೆ ಮತ್ತು ಅವರ ಹೆಂಡತಿಯರನ್ನು ಆಳವಾಗಿ ಪ್ರೀತಿಸುತ್ತಾರೆ."

ಓಹ್..

ಹುಡುಗಿಗೆ ನಂಬಲಾಗಲಿಲ್ಲ. "ಅಂತಹ ಗಂಡ ಇರಬಹುದೇ?" ಯೋಚಿಸಿ...ದ....ಳು... 

ಇನ್ನೊಂದು ಮಹಡಿ ಇದೆ. ಅಲ್ಲಿ....ಇನ್ನೆಷ್ಟು ಒಳ್ಳೆಯ ವರ ಸಿಗಬಹುದು...?

ಕುತೂಹಲ ಅವಳನ್ನು ಕೊನೆಯ ಮಹಡಿಗೆ ಕರೆದೊಯ್ದಿತು.


 ಆರನೇ ಮಹಡಿ: ಅಲ್ಲಿ ಹೀಗೆ ಬರೆದಿತ್ತು:

ನಿಮಗೆ ಸುಸ್ವಾಗತ

 "ನೀವು ಈ ಮಹಡಿಗೆ ಬಂದ 3339 ನೇ ಮಹಿಳೆ. ಇಲ್ಲಿ ಗಂಡಂದಿರು ಇಲ್ಲ. ಮಹಿಳೆಯರನ್ನು ಸಂಪೂರ್ಣವಾಗಿ ತೃಪ್ತಿಪಡಿಸುವುದು ಅಸಾಧ್ಯವೆಂದು ಸಾಬೀತುಪಡಿಸಲು ಈ ಮಹಡಿ. ನಮ್ಮ ಅಂಗಡಿಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು! ನೀವು ಎಡಭಾಗದಲ್ಲಿರುವ ಮೆಟ್ಟಿಲುಗಳ ಮೂಲಕ ಸಾವಧಾನವಾಗಿ  ತೆರಳಿರಿ."


ಇಂದಿನ ಕಾಲದಲ್ಲಿ, ಅನೇಕ ಕುಟುಂಬಗಳು ಮತ್ತು ಹುಡುಗಿಯರು "ಅತ್ಯುತ್ತಮದ" ಹುಡುಕಾಟದಲ್ಲಿ ಸರಿಯಾದ ವಯಸ್ಸಿನಲ್ಲಿ ಮದುವೆಗೆ

ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ದೊಡ್ಡ ಬುದ್ಧಿವಂತಿಕೆ.

(ಸಂಗ್ರಹಿತ ಕತೆ.  ಬರೆದವರು ಯಾರೋ ಗೊತ್ತಿಲ್ಲ)


-ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top