ಕಾಸರಗೋಡು: ಗಡಿನಾಡಿನ ಸಾಂಸ್ಕೃತಿಕ ರಂಗದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ ಭವ್ಯ "ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ" ಹಾಗೂ ನಾಡಿನ ಹಿರಿಯ ಕವಿ, ವೈದ್ಯ, ಸಾಂಸ್ಕೃತಿಕ ಹೋರಾಟಗಾರ ಡಾ. ರಮಾನಂದ ಬನಾರಿ ಅವರ 85ರ ಅಭಿನಂದನಾ ಪೂರ್ವಕ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭವು ನಾಳೆ, ಮೇ 31, ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ.
ಬೆಳಿಗ್ಗೆ 8:50ಕ್ಕೆ ಸರಿಯಾಗಿ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಸೋಮಣ್ಣ ಬೇವಿನಮರದ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ಸಾಹಿತಿಗಳಾದ ಡಾ. ಮೋಹನ ಕುಂಟಾರ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಮಹಾಜನ ವಿದ್ಯಾಸಂಸ್ಥೆಯ ನಿರ್ವಾಹಕರಾದ ಜಯದೇವ ಖಂಡಿಗೆ ಹಾಗೂ ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಾಕ್ಷ್ಯಚಿತ್ರ ಮತ್ತು ಕೃತಿ ಬಿಡುಗಡೆ
ಇದೇ ಸಂದರ್ಭದಲ್ಲಿ ಡಾ. ರಮಾನಂದ ಬನಾರಿ ಅವರ ಬದುಕು-ಬರಹವನ್ನು ಒಳಗೊಂಡ ಸಾಕ್ಷ್ಯಚಿತ್ರ ಮತ್ತು ಮಂಜೇಶ್ವರದ ಮುತ್ತು ಸಾಕ್ಷ್ಯಚಿತ್ರಗಳನ್ನು ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಡಾ. ಪುರುಷೋತ್ತಮ ಬಿಳಿಮಲೆ ಲೋಕಾರ್ಪಣೆ ಮಾಡಲಿದ್ದಾರೆ. ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ನಿರ್ದೇಶನವನ್ನು ಡಾ. ಪ್ರವೀಣ್‌ರಾಜ್ ಎಸ್. ರಾವ್ ನಿರ್ವಹಿಸಿದ್ದಾರೆ.
ಇದೇ ವೇದಿಕೆಯಲ್ಲಿ ಕುಟ್ಟಿಯಾನ ಮುಹಮ್ಮದ್ ಅವರ “ಕನಸುಗಳ-ಭೂಮಿಗೆ ಯಾತ್ರೆ” ಕೃತಿಯನ್ನು ಬಿಡುಗಡೆ ಮಾಡಲಾಗುವುದು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ 10:50ರಿಂದ ವಿವಿಧ ವೈಚಾರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಕಾಸರಗೋಡಿನ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಕುರಿತು ಡಾ. ವರದರಾಜ ಚಂದ್ರಗಿರಿ ಮತ್ತು ಡಾ. ರತ್ನಾಕರ ಮಲ್ಲಮೂಲೆ ಅವರಿಂದ ಅವಲೋಕನ. ಗುರುರಾಜ್ ತಂಡದಿಂದ "ಸಾಂಸ್ಕೃತಿಕ ಕಲಾ ವೈಭವ" ಹಾಗೂ 'ನಾಟ್ಯತರಂಗಿಣಿ' ಸಂಸ್ಥೆ ವತಿಯಿಂದ "ಮೋಹಿನಿಯಾಟ್ಟಂ" ನೃತ್ಯ ಪ್ರದರ್ಶನ. ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರಿಂದ "ನಾಟ್ಯ ತರಂಗಿಣಿ" ಭಾವಗೀತೆ, ಸ್ವರಚಿತ ಕವನ ವಾಚನ ನಡೆಯಲಿದೆ.
ಮಧ್ಯಾಹ್ನ 1:45ರಿಂದ ಕಾಸರಗೋಡಿನ ಕಾವ್ಯ, ಗದ್ಯ, ಸಾಂಸ್ಕೃತಿಕ ವಿಲೀನೀಕರಣ, ನ್ಯಾಯಾಂಗದ ಮುಂದಿರುವ ಕಾಸರಗೋಡಿನ ಸಮಸ್ಯೆಗಳು ಹಾಗೂ ವಿದ್ಯಾರ್ಥಿಗಳ ಪಾತ್ರದ ಕುರಿತು ಹಿರಿಯ ವಿದ್ವಾಂಸರಾದ ರಾಧಾಕೃಷ್ಣ ಕೆ ಉಳಿತ್ತಾಯ, ಡಾ. ಧನಂಜಯ ಕುಂಬ್ಳೆ, ಟಿ.ಎನ್. ಖಂಡಿಗೆ, ಎನ್. ಕೆ. ಮೋಹನದಾಸ್ ಅಡ್ವಕೇಟ್, ಡಾ. ಬಾಲಕೃಷ್ಣ ಹೊಸಂಗಡಿ ಮತ್ತು ಶಿವಶಂಕರ ಅವರಿಂದ ಗೋಷ್ಠಿಗಳು ನಡೆಯಲಿವೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ “ಕನ್ನಡದಲ್ಲಿ ಕನ್ನಡಿಗ” 7ನೇ ಸಂಚಿಕೆಯನ್ನು ಡಾ. ಪುರುಷೋತ್ತಮ ಬಿಳಿಮಲೆ ಬಿಡುಗಡೆ ಮಾಡಲಿದ್ದಾರೆ. ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭಶಂಸನೆಗೈಯಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕರೊಂದಿಗೆ ಸಂವಾದ, ಕಥೆ-ಕವಿತೆ ರಚನೆಯ ಸಹಭಾಗಿಗಳಿಗೆ ಸಾಂಕೇತಿಕ ಸಂಭಾವನೆ ಹಾಗೂ ಅತಿಥಿ ಸಾಧಕರಿಗೆ ಗೌರವ ಸಮರ್ಪಣೆ, ಪ್ರಮಾಣ ಪತ್ರ ವಿತರಣೆ ನಡೆಯಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


