ಕಾಕ್ರೋಚಾಯಣ ವಚನಾಮೃತ ವಿಲಾಸ

Upayuktha
0

ಧಿಕ ಮಾಸ ಆಗಿದ್ದರಿಂದ ಯಾವುದೇ ಊಟದ ಮನೆ ಇರಲಿಲ್ಲ. ತಾರೀಖು 'ಸರಿ ಸಂಖ್ಯೆ' (ಮೇ 22) ಇದ್ದುದರಿಂದ ಅನಾರ್ಯವರ್ಧಿಯವರನ್ನು ಭೇಟಿ ಮಾಡುವ ಅಂತ ಮೇಲುಕೊಪ್ಪದ ಅವರ ಮನೆಗೆ ಬೆಳಗ್ಗೆ ಎಂಟು ಗಂಟೆಗೆ ಹೋದೆ.  


ಅನಾರ್ಯವರ್ಧಿಯವರು ಆಮ್ ಆದ್ಮಿಯ ಅರವಿಂದ ಕೇಜ್ರಿವಾಲ್ ತಂದಿದ್ದ 'ಸರಿ ಬೆಸ ವಾಹನ ಚಾಲನೆ' ನಿಯಮದಂತೆ, ತಾವೂ ಜ್ಯೋತಿಷ್ಯ ಕೇಳಲು ಬರುವವರಿಗೆ 'ಸರಿ ಬೆಸ ಮೊಬೈಲ್ ನಂಬರ್ ಭೇಟಿ ನಿಯಮ ಜಾರಿ ತಂದಿದ್ದಾರೆ!! ಮೊಬೈಲ್‌‌ ನಂಬರ್‌ನ ಕೊನೇ ಸಂಖ್ಯೆ 'ಸರಿ' ಇದ್ದವರು (2, 4, 6...) ಸರಿ ದಿನಾಂಕದಂದೂ, ಮೊಬೈಲ್‌ನ ಕೊನೇ ಸಂಖ್ಯೆ ಬೆಸ ಇದ್ದವರು (1, 3, 5...) ಬೆಸ ದಿನಾಂಕದಂದೂ ಭೇಟಿ ಕೊಡುವಂತೆ ಮನೆ ಮುಂದೆ ಸೂಚನ ಫಲಕ ಹಾಕಿದ್ದಾರೆ.


"ನಮಸ್ಕಾರ ಗುರುಗಳೆ" ಅಂದೆ.


"ಬಾ ಬಾ. ಇದಿಷ್ಟು ಜಿರಳೆಗಳನ್ನು ಲೆಕ್ಕ ಮಾಡಿ, ಅಂಗಳದ ತುದಿಗೆ ಬಿಸಾಕು" ಕೈಯಲ್ಲಿದ್ದ HIT ನ್ನು ಮೂಲೆಯಲ್ಲಿ ಇಡುತ್ತಾ, ಮೊರದಲ್ಲಿ ತುಂಬಿದ್ದ ಜಿರಳೆಗಳನ್ನು ಮೊರ ಸಹಿತ ನನ್ನ ಮುಂದೆ ಇಟ್ರು. ಅಷ್ಟನ್ನೂ ಎಣಿಸಿ ಅಂಗಳದ ತುದಿ ಬಿಸಾಕಿದೆ.  


"ಗುರುಗಳೆ 16 ಜಿರಳೆಗಳು" ಅಂದೆ. ಸತ್ತ ಜಿರಳೆಗಳು ಇದ್ದ ಮೊರದಲ್ಲಿ 'ಕಾಂಗ್ರೆಸ್ ಗಿಡದ' ವಾಸನೆ ಬರ್ತಾ ಇತ್ತು!!


"ನಿನ್ತಲೆ, ಗುರುಗಳು 16 ಜಿರಳೆಗಳಲ್ಲ, I am not cockroach. ಮಾತಾಡುವಾಗ ಶಬ್ದಗಳ ಮಧ್ಯೆ ಸ್ಪೆಸ್ ಕೊಡಬೇಕು.  ಇಲ್ಲಾಂದ್ರೆ ಅರ್ಥ ವ್ಯತ್ಯಾಸ ಆಗುತ್ತೆ" ಸಣ್ಣಕೆ ಗದರಿದರು.


"ಇದೇನ್ ಗುರುಗಳೆ ಬೆಳಗ್ಗೆ ಬೆಳಗ್ಗೆ ಕಾಕ್ರೋಚ್ ಯಾಗ ಮಾಡ್ತಾ ಇದೀರಾ?" 


"ಇಲ್ನೋಡಿಲ್ಲಿ, ಜಿರಳೆಗಳು ಹಳೇ ಪಂಚಾಂಗವನ್ನು ತಿಂದಿದಾವೆ. ಇದು ನೋಡು ಕಾಕ್ರೋಚ್‌ಗಳು 'ಭಾರತ ಸಿಂಧು ರಶ್ಮಿ' ಕೃತಿಯ ಬೈಂಡ್ ತಿನ್ನೋಕೆ ಶುರು ಮಾಡಿದ್ವು. ಸದ್ಯ ಇವತ್ತೇ ನೋಡಿದ್ದು ಒಳ್ಳೇದಾಯ್ತು. ಬೆಳಗ್ಗೆ ನಾಲ್ಕು ಗಂಟೆಗೆ HIT ಹೊಡೆದಿದ್ದೆ. ಈಗ ಕಾಕ್ರೋಚ್ ಸತ್ತು ಹೋಗಿದಾವೆ" 


"ಗುರುಗಳೆ, ಕಾಕ್ರೋಚ್ ಅಷ್ಟು ಬೆಳೆಯಲು ಕಾರಣ ಏನು?" ಕೈಯಲ್ಲಿದ್ದ ಮೊರವನ್ನು ನೈರುತ್ಯ ಮೂಲೆಯಲ್ಲಿಡುತ್ತ ಕೇಳಿದೆ.  


"ಅದಕ್ಕೆ ಇಂತದ್ದೇ ಕಾರಣ ಅಂತಿಲ್ಲ. ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇಲ್ಲಾಂದ್ರೆ ಕಾಕ್ರೋಚ್‌ಗಳು ಅತಿಯಾಗಿ ಬೆಳೆಯಲು ಬಿಟ್ಟರೆ.. ನಮ್ಮನ್ನೇ ಮನೆಯಿಂದ ಓಡಿಸುತ್ತವೆ!! ನಾಲ್ಕು ದಿನದಿಂದ ಮನೆಯವಳು ಇಲ್ಲ, ನನಗೆ ಪುರುಸೊತ್ತು ಇಲ್ಲ. ಈಗ ಅಧಿಕ ಕಾಕ್ರೋಚ್ ಇರುವುದರಿಂದ, ಥೋ..... ಅಧಿಕ ಜೇಷ್ಠ ಇರುವುದರಿಂದ ಸ್ವಲ್ಪ ಫ್ರೀ. 'ಭಾರತ ಸಿಂಧು ರಶ್ಮಿ' ಮೇಲೆ ದಾಳಿ ಮಾಡುತ್ತಿರುವ ಕಾಕ್ರೋಚ್‌ಗಳ ಮೇಲೆ ಹಿಟ್ ಪ್ರತಿ ದಾಳಿ ಮಾಡುವುದಕ್ಕೆ ಸ್ವಲ್ಪ ಸಮಯ ಸಿಕ್ಕಿದೆ".


"ಗುರುಗಳೆ, ಜ್ಯೋತಿಷ್ಯದಲ್ಲಿ ಹಲ್ಲಿ ಬಿದ್ದ ಶಕುನ ಇರುವ ಹಾಗೆ, ಕಾಕ್ರೋಚ್ ಬಿದ್ದ ಶಕುನ ಇದೆಯಾ?" ಕುರ್ಚಿಯ ಮೇಲಿದ್ದ ಕಾಕ್ರೋಚ್ ಹಿಕ್ಕೆಯನ್ನು ಒರೆಸುತ್ತ ಕೂರುತ್ತಿದ್ದ ಅನಾರ್ಯವರ್ದಿಯವರಿಗೆ ಕೇಳಿದೆ. ಅವರು ಒಳ್ಳೆ ಮೂಡಲ್ಲಿ ಇರುವುದು ತಿಳಿದು ಪ್ರಶ್ನೆ ಕೇಳಿದ್ದು. ಸರಿ  ಸಂಖ್ಯೆ ದಿನಾಂಕಗಳಲ್ಲಿ ಅನಾರ್ಯವರ್ದಿಯವರು ಲಘು ಭಾವದಲ್ಲಿರುವುದು ದಿನಚರಿ ಪ್ರಭಾವ ಇರಬೇಕು!!?


"ಹೂಂ ಇದೆ. ಹಲ್ಲಿ ಮುಖದ ಮೇಲೆ ಬಿದ್ದರೆ ಆರ್ಥಿಕ ಲಾಭ, ಜಿರಳೆ ಮುಖದ ಮೇಲೆ ಬಿದ್ದರೆ ಭಯ. ಮಹಿಳೆಯರಿಗೆ ಹಲ್ಲಿ ತಲೆಯ ಮೇಲೆ ಬಿದ್ದರೆ ಮಾನಸಿಕ ಚಿಂತೆ ಅಥವಾ ಜಗಳ. ಅದೇ ಜಿರಳೆ ಮಹಿಳೆಯರ ತಲೆಯ ಮೇಲೆ ಬಿದ್ದರೆ (ಕನ್ನಡಿ ಮುಂದೆ ನಿಂತಾಗ) ಹೃದಯಾಘಾತ ಸಂಭವ!!"


"ಜಿರಳೆಯಿಂದ ಅನುಕೂಲಗಳು ಏನಾದರು ಇದೆಯಾ ಗುರುಗಳೆ?"


"ಇದೆ"


Hit ಹೊಡೆಯುವಾಗ ಎತ್ತಿಟ್ಟಿದ್ದ ಪುಸ್ತಕಗಳನ್ನು ಟೇಬಲ್ ಒಳಗೆ ಇಡುತ್ತ ಅನಾರ್ಯವರ್ಧಿಯವರು ಮಾತು ಮುಂದುವರಿಸಿದರು "ಇದೆ, ಜಿರಳೆಯಿಂದ ಅತಿಸಾರ, ಭೇದಿ ಮತ್ತು ಹೊಟ್ಟೆ ನೋವು, Food Poisoning, ಟೈಫಾಯಿಡ್ ತೀವ್ರ ಜ್ವರ. ಕಾಲರಾ, ಅಲರ್ಜಿ ಆಸ್ತಮಾ ಮುಂತಾದ ರೋಗಗಳು ಬರುವುದರಿಂದ ವೈದ್ಯರಿಗೆ, ಮೆಡಿಕಲ್ ಶಾಪ್‌ನವರಿಗೆ, HIT ಕಂಪನಿಯವರಿಗೆ ಅಧಿಕ ಲಾಭ"


ಅಷ್ಟು ಹೊತ್ತಿಗೆ ಒಂದು ದಂಪತಿ ಪ್ಲಸ್ ಸುಮಾರು 25 ವರ್ಷದ ಯುವಕ, ಮೂವರು ಅನಾರ್ಯವರ್ದಿಯವರ ಮನೆ ಮೆಟ್ಟಿಲು ಹತ್ತಿದರು.  "ಮಗನ ಜಾತಕದ ಬಗ್ಗೆ ಮಾತಾಡಬೇಕಿತ್ತು, ನಿನ್ನೆ ಫೋನ್ ಮಾಡಿದ್ದೆ. ಇವತ್ತು ಬನ್ನಿ ಅಂತ ಹೇಳಿದ್ರಿ, ಮೊಬೈಲ್ ಕೊನೇ ನಂಬರ್ 'ಸೊನ್ನೆ'" ಅಂತ ಹೇಳುತ್ತ ಬಂದವರು ಬೇಂಚಿನ ಮೇಲೆ ಕುಳಿತರು. ಯುವಕನ ಟೀ ಶರ್ಟ್‌ನ ಮೇಲೆ 'I AM COCKROACH' ಮುದ್ರಣವಿತ್ತು. ಕಣ್ಣು ಪರೀಕ್ಷಾ ಕೇಂದ್ರದಲ್ಲಿ ಹಾಕಿದಂತೆ ಮೊದಲ ಸಾಲಿನಲ್ಲಿ I ದೊಡ್ಡದಾಗಿಯೂ, ಎರಡನೇ ಸಾಲಿನಲ್ಲಿ AM ಅನ್ನುವುದು ಮಧ್ಯಮ ಗಾತ್ರದ್ದಾಗಿಯೂ, ಕೊನೆಯ ಸಾಲಿನಲ್ಲಿ ಜಿರಳೆ ಸೈಜಿನ ಅಕ್ಷರದಲ್ಲಿ COCKROACH ಎಂದು ಮುದ್ರಿಸಿತ್ತು. ಅಕ್ಷರಗಳ ಹಿಂಬಾಗದಲ್ಲಿ ಒಂದು ಮೀಸೆ ಇರುವ ಕಾಕ್ರೋಚ್ ಚಿತ್ರ!! ಯುವಕ ಮೀಸೆಯನ್ನು ಪೂರ್ತಿ ಶೇವ್ ಮಾಡಿದ್ದ.


ಬಂದವರು ಕೂರುತ್ತಿದ್ದಂತೆ ನಾನು 'ಸೊನ್ನೆ ಅನ್ನುವುದು 'ಸರಿ' ಸಂಖ್ಯೆಯಾ? 'ಬೆಸ' ಸಂಖ್ಯೆಯಾ?' ಅಂತ ಯೋಚಿಸುತ್ತ ಮನೆ ಕಡೆಗೆ ಹೊರಟೆ.  


ಅಂಗಳದ ತುದಿ ಬಿಸಾಡಿದ್ದ ಜಿರಳೆಗಳ ಪಾರ್ಥಿವ ಶರೀರದ ಮೇಲೆ ಇರುವೆಗಳು ದಾಳಿ ಮಾಡ್ತಿದ್ದವು. 


ಅಂದ ಹಾಗೆ, ಮಾರ್ಚ್ 14 ವಿಶ್ವ ಕಾಕ್ರೋಚ್ ದಿನವಂತೆ. ಮನೆ ಮನೆಗೆ ಕಾಕ್ರೋಚ್‌ಗಳು ಬಾರದಿರಲಿ ಎಂದು ಅಡ್ವಾನ್ಸ್ ಶುಭಾಶಯಗಳು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top