ಕಿನ್ನರಿಯ ಆತ್ಮದ ಸಂಚಾರದೊಳಗೆ ನಾನು: ಆತ್ಮ ಪ್ರಾಯಶ್ಚಿತ್ತ ಪುಸ್ತಕ ವಿಮರ್ಶೆ

Upayuktha
0

 


ಮಾನವನ ಬದುಕು ಹೊರಗೆ ಕಾಣುವಷ್ಟು ಸರಳವಲ್ಲ; ಒಳಗೆ ಸಾವಿರ ಭಾವನೆಗಳ ಘರ್ಷಣೆ, ನಿಶ್ಶಬ್ಧ ನೋವುಗಳು ಮತ್ತು ಉತ್ತರ ಹುಡುಕುವ ಆತ್ಮದ  ಕಿರುಚಾಟ ಇರುತ್ತದೆ. ಆ ಒಳಜಗತ್ತಿನ ಪ್ರತಿಧ್ವನಿಯೇ ಆತ್ಮ. ಈ ಕೃತಿ ಕೇವಲ ಕಥೆಯನ್ನು ಹೇಳುವುದಿಲ್ಲ; ಓದುಗರ ಮನಸ್ಸಿನ ಬಾಗಿಲನ್ನು ನಿಧಾನವಾಗಿ ತೆರೆಯುತ್ತಾ ಆತ್ಮಪರಿಶೀಲನೆಗೆ ಕರೆದೊಯ್ಯುವಂತ ಪುಸ್ತಕ ಆತ್ಮ ಪ್ರಾಯಶ್ಚಿತ್ತ ತೆಲುಗು ಭಾಷೆಯಲ್ಲಿ ಸೂರ್ಯ ದೇವರ ರಾಮ ಮೋಹನ್ ರಾವ್ ಅವರು ಬರೆದದ್ದು ಇದನ್ನು ಕನ್ನಡ ಭಾಷೆಗೆ ರಾಧಾ ಟೇಕಲ್ ಅವರು ಅನುವಾದಿಸಿರುವುದು.


ಆತ್ಮ ಪ್ರಾಯಶ್ಚಿತ್ತ ಎನ್ನುವ ಹೆಸರೇ ಓದಲು ಆಸಕ್ತಿ ಹುಟ್ಟಿಸುವಂತಿದೆ. ಲೇಖಕರು ಬದುಕಿನ ನಿಜಸ್ವರೂಪವನ್ನು ಅಲಂಕಾರವಿಲ್ಲದೆ ಚಿತ್ರಿಸಿದ್ದಾರೆ. ಸಂಬಂಧಗಳ ಬಿರುಕು, ಏಕಾಂತದ ತೂಕ, ನೆನಪುಗಳ ನೋವು ಮತ್ತು ಮನುಷ್ಯನೊಳಗಿನ ಮೌನ ಯುದ್ಧವನ್ನು ಕೃತಿಯಲ್ಲಿ ಗಾಢವಾಗಿ ಮೂಡಿಸಿದ್ದಾರೆ. ಕೆಲವೆಡೆ ಪಾತ್ರಗಳ ಮಾತಿಗಿಂತ ಅವರ ಮೌನವೇ ಹೆಚ್ಚು ಮಾತನಾಡುತ್ತದೆ. ಇದೇ ಈ ಕೃತಿಯ ಶಕ್ತಿ. ಮನಸ್ಸಿನ ಗಾಯವನ್ನು ಮುಟ್ಟುವ ನಿಶ್ಶಬ್ದ ಸ್ಪರ್ಶದಂತಿದೆ. ಪ್ರತಿಯೊಂದು ಪುಟವೂ ಬದುಕಿನ ಯಾವುದೋ ಒಂದು ಮುಖವನ್ನು ತೆರೆದಿಡುತ್ತದೆ. ಓದುತ್ತಿರುವಾಗ ಕೆಲ ಕ್ಷಣಗಳಲ್ಲಿ ಓದುಗರಿಗೆ ತಮ್ಮದೇ ಜೀವನದ ಪ್ರತಿಬಿಂಬ ಕಾಣಲು ಆರಂಭವಾಗುತ್ತದೆ. ಇದೇ ಉತ್ತಮ ಸಾಹಿತ್ಯದ ಲಕ್ಷಣ.ಲೇಖಕರು ಜೀವನದ ಅರ್ಥವನ್ನು ನೇರವಾಗಿ ಹೇಳುವುದಿಲ್ಲ; ಬದಲಾಗಿ ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸುತ್ತಾರೆ. “ನಾವು ಬದುಕುತ್ತಿರುವುದು ನಿಜವಾಗಿಯೂ ಬದುಕೇನಾ?” ಎಂಬ ಪ್ರಶ್ನೆ ಓದಿನ ನಂತರವೂ ಮನಸ್ಸಿನಲ್ಲಿ ಉಳಿಯುತ್ತದೆ.  ಎನ್ನುವುದಕ್ಕೆ ಈ ಪುಸ್ತಕವೇ ಸಾಕ್ಷಿ ಪುಸ್ತಕವು ನೋವನ್ನು ಕೇವಲ ದುಃಖವಾಗಿ ಚಿತ್ರಿಸದೆ, ಅದು ಮನುಷ್ಯನನ್ನು ಒಳಗಿನಿಂದ ರೂಪಿಸುವ ಶಕ್ತಿಯೆಂದು ತೋರಿಸುತ್ತದೆ.


ಕೆಲವೆಡೆ ಕಥೆಯ ಗತಿ ನಿಧಾನವಾಗಿ ಸಾಗಿದರೂ ಅದು ಕೃತಿಯ ದೌರ್ಬಲ್ಯವಲ್ಲ; ಬದಲಾಗಿ ಓದುಗರನ್ನು ಭಾವನೆಯೊಳಗೆ ಆಳವಾಗಿ ಇಳಿಸುವ ಪ್ರಯತ್ನವಾಗಿದೆ.  ವೇಗದ ಕಥೆ ಬಯಸುವವರಿಗೆ ಇದು ಸಾಮಾನ್ಯ ಕೃತಿ ಅನಿಸಬಹುದು, ಆದರೆ ಭಾವನೆಗಳ ಆಳವನ್ನು ಹುಡುಕುವವರಿಗೆ ಇದು ವಿಭಿನ್ನ ಅನುಭವ ನೀಡುತ್ತದೆ.


ಒಟ್ಟಾರೆ, ಆತ್ಮದ ಒಂದು ಪುಸ್ತಕ ಮಾತ್ರವಲ್ಲ; ಅದು ಮನುಷ್ಯನ ಆತ್ಮದೊಂದಿಗೆ ನಡೆಯುವ ನಿಶ್ಶಬ್ದ ಸಂಭಾಷಣೆ. ಓದಿದ ನಂತರ ಕಥೆ ಮುಗಿಯಬಹುದು, ಆದರೆ ಅದರ ಪ್ರಶ್ನೆಗಳು ಮತ್ತು ಭಾವನೆಗಳು ಮನಸ್ಸಿನಲ್ಲಿ ಬಹುಕಾಲ ಪ್ರತಿಧ್ವನಿಸುತ್ತಲೇ ಇರುತ್ತವೆ. ಈ ಕಥೆಯೊಳಗೆ ಕಿನ್ನರಿ ಎನ್ನುವ ಬಾಲೆಯ ಆತ್ಮದ ಸಂಚಾರವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಸಾಯುವ ಮುನ್ನ ಅದೆಷ್ಟೋ ಆಸೆಗಳನ್ನು ಇಟ್ಟುಕೊಂಡಿದ್ದರೇ ಸಾವಿನ ನಂತರ ಬೇರೆ ಬೇರೆ ರೂಪವನ್ನು ಪಡೆದು ಅಲೆದಾಡುತ್ತದೆ ಎನ್ನುವುದು  ನಂಬಬೇಕೋ ಬೇಡವೋ ಎಂದು ಅನಿಸಿ ಬಿಡುತ್ತದೆ. ರಂಗರಾವ್ ಎನ್ನುವ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆತ್ಮವು ಹುಟ್ಟಿಕೊಂಡು ಆತನ ಮಗಳಾದ ಸುಪ್ರಿಯಾಳ ದೇಹವನ್ನು ಆಗಮಿಸಿ ತೊಂದರೆಗಳನ್ನು ನಡೆಸುತ್ತಾಳೆ. ಒಂದು ಕಡೆ ರಂಗರಾವ್ ಕುಟುಂಬಕ್ಕೆ ಆತ್ಮದ ತೊಂದರೆಯಾದರೆ ಇನ್ನೊಂದೆಡೆ ಭೂಪತಿ ಎನ್ನುವಂತಹ  ದ್ವೇಷಿಗಳ ತೊಂದರೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಿನ್ನರಿಯ ಆತ್ಮ ತಾನೊಬ್ಬಳೇ ತೊಂದರೆ ಕೊಡಬೇಕು ಎನ್ನುವ ಹಠದಲ್ಲಿ ನಿಂತಿರುವುದು. ತಾನಲ್ಲದೇ ಬೇರೆ ಯಾರೂ ಆ ಕುಟುಂಬಕ್ಕೆ ತೊಂದರೆ ನೀಡಬಾರದು ಎನ್ನುವ ದೃಢ ನಿರ್ಧಾರ.  ಭೂಪತಿಯ ತಂಡದವರು ಎಷ್ಟೇ ರಂಗರಾವ್ ಕುಟುಂಬಕ್ಕೆ ತೊಂದರೆ ನೀಡಲು ಬಂದರೆ ಅವರೆಲ್ಲರನ್ನೂ ಕಿನ್ನರಿಯ ಆತ್ಮವೇ ಕೊನೆ ಎನಿಸಿ ಬಿಡುತ್ತಿತ್ತು.ಆತ್ಮವು ಸುಪ್ರಿಯಾ ಮತ್ತು ಮೋಹನ್ ಅಂದರೆ ರಂಗರಾವ್ ಮಗಳು ಮತ್ತು ಭಾವಿ ಅಳಿಯ  ಇವರಿಬ್ಬರ ಹಿಂದೆ ಬೇರೆ ಬೇರೆ ರೂಪವನ್ನು ತಾಳಿ ಪ್ರತಿಯೊಂದು  ಕ್ಷಣದಲ್ಲೂ ಜೊತೆಯಾಗಿ ಬೆರೆಯುವುದನ್ನು ಎಳೆ ಎಳೆಯಾಗಿ ಬರೆದಿರುವುದನ್ನು ಗಮನಿಸಬಹುದು.  ಆತ್ಮಗಳನ್ನು ಬಂದಿಕ್ಕುವ ಮಂತ್ರವಾದಿಗಳು ಸಹ ಆತ್ಮದ ಶಕ್ತಿ ಮುಂದೆ ಸೋತು ಸಾವನ್ನಪ್ಪಿರುವುದು ಒಂದು ಮಟ್ಟಿಗೆ ಆಶ್ಚರ್ಯವೇ ಸರಿ.


ಕಥೆಯ ಕೊನೆಯಲ್ಲಿ ರಂಗರಾವ್ ಸಾವಿನ ಮುಂಚೆ ಮಗಳ ಮದುವೆಯನ್ನು ಕಣ್ತುಂಬಿಕೊಂಡೆ ಕೊನೆ ಉಸಿರೆಳೆಯುತ್ತಾನೆ ಅದರೊಂದಿಗೆ ಕಿನ್ನರಿಯ ಆತ್ಮವು ಮಾಯಾ ವಾಯಿತು ಎಂದು ಬರೆದಿರುವುದನ್ನು ಕಂಡು ಅದೆಷ್ಟೋ ಪ್ರಶ್ನೆಗಳು ನನ್ನನು ಕೆರಳಿಸಿತು. ಏಕಾಂತದ ಭಾವನೆ ಎಂದರೇನು? ಆತ್ಮ ನಿಜವಾಗಿಯೂ ಬರುತ್ತದೆಯೇ?  ತಪ್ಪು ಮತ್ತು ಪಶ್ಚಾತ್ತಾಪದ ನಡುವಿನ ಸಂಬಂಧ ? ಕ್ಷಮೆ ಮತ್ತು ಪಶ್ಚಾತ್ತಾಪ? ಎಂದು ನನ್ನನ್ನು ಅತೀ ಹೆಚ್ಚು ಕಾಡುತ್ತಿದೆ .ಆತ್ಮ ಪ್ರಾಯಶ್ಚಿತ್ತ” ಕೃತಿಯನ್ನು ಓದಬೇಕು, ಏಕೆಂದರೆ ಇದು ಕೇವಲ ಕಥೆಯಲ್ಲ — ಮಾನವನ ಅಂತರಂಗದ ಪಯಣವನ್ನು ತೋರಿಸುವ ಕೃತಿ. ಜೀವನದಲ್ಲಿ ಮಾಡಿದ ತಪ್ಪುಗಳು, ಪಶ್ಚಾತ್ತಾಪ, ಕ್ಷಮೆ ಮತ್ತು ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಈ ಪುಸ್ತಕ ಆಳವಾಗಿ ತಿಳಿಸುತ್ತದೆ.ಲೇಖಕರು ಮಾನವನ ಮನಸ್ಸಿನ ನೋವು ಮತ್ತು ಆತ್ಮದ ಸಂಘರ್ಷವನ್ನು ಭಾವನಾತ್ಮಕವಾಗಿ ಚಿತ್ರಿಸಿರುವುದರಿಂದ ಓದುಗರ ಮನಸ್ಸಿಗೆ ಸ್ಪರ್ಶಿಸುತ್ತದೆ. ಸರಳ ಆದರೆ ಗಂಭೀರವಾದ ಭಾಷಾಶೈಲಿ, ಮನಮುಟ್ಟುವ ಘಟನೆಗಳು ಮತ್ತು ಜೀವನ ಮೌಲ್ಯಗಳ ಸಂದೇಶ ಈ ಪುಸ್ತಕದ ವಿಶೇಷತೆ. ಆದ್ದರಿಂದ ಸಾಹಿತ್ಯಾಸಕ್ತರು, ತತ್ವಚಿಂತನೆ ಇಷ್ಟಪಡುವವರು ಹಾಗೂ ಭಾವನಾತ್ಮಕ ಕಥೆಗಳನ್ನು ಓದಲು ಇಚ್ಛಿಸುವವರು ಓದಲೇಬೇಕು.


-  ಅನನ್ಯ ಎಚ್ ಸುಬ್ರಹ್ಮಣ್ಯ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top