ನವದೆಹಲಿ: ಹೆಚ್ಚುತ್ತಿರುವ ದೇಶೀಯ ಬೇಡಿಕೆ, ತೀವ್ರಗತಿಯ ನಗರೀಕರಣ, ನವೀಕರಿಸಬಹುದಾದ ಇಂಧನ ಅಳವಡಿಕೆ ಮತ್ತು ರಫ್ತು ಅವಕಾಶಗಳ ಬೆಂಬಲದೊಂದಿಗೆ ಮುಂದಿನ ಒಂದು ದಶಕದಲ್ಲಿ ಭಾರತದ ಎಲೆಕ್ಟ್ರಿಕಲ್ ಉಪಕರಣಗಳ ಉದ್ಯಮವು ಭಾರಿ ಪ್ರಗತಿ ಕಾಣಲಿದೆ ಎಂದು ಪ್ರಖ್ಯಾತ ಜಾಗತಿಕ ಸಲಹಾ ಸಂಸ್ಥೆ ಮೆಕಿನ್ಸೆ ಆಂಡ್ ಕಂಪನಿ ತಿಳಿಸಿದೆ.
ಸಂಸ್ಥೆಯು ಬಿಡುಗಡೆ ಮಾಡಿರುವ ನೂತನ ವರದಿಯ ಪ್ರಕಾರ, 2025 ರಲ್ಲಿ ಸುಮಾರು 50 ಶತಕೋಟಿ ಯುಎಸ್‌ಡಿ ಇರುವ ಭಾರತದ ದೇಶೀಯ ಎಲೆಕ್ಟ್ರಿಕಲ್ ಉಪಕರಣಗಳ ಉತ್ಪಾದನೆಯು 2035 ರ ವೇಳೆಗೆ 195 ಶತಕೋಟಿಯಿಂದ 235 ಶತಕೋಟಿ ಯುಎಸ್‌ಡಿ ತಲುಪುವ ಮುನ್ಸೂಚನೆ ಇದೆ. ಇದೇ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಇಂತಹ ಉಪಕರಣಗಳ ಬಳಕೆ 205 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದ್ದು, ಭಾರತದ ಜಾಗತಿಕ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುವುದರಿಂದ ರಫ್ತು ಪ್ರಮಾಣವು ಕೂಡ 60 ಶತಕೋಟಿ ಡಾಲರ್ ಗಡಿಯನ್ನು ದಾಟಲಿದೆ. ನವೀಕರಿಸಬಹುದಾದ ಇಂಧನ, ಪವರ್ ಎಲೆಕ್ಟ್ರಾನಿಕ್ಸ್, ಬ್ಯಾಟರಿಗಳು ಮತ್ತು ಗ್ರಿಡ್ ಮೂಲಸೌಕರ್ಯಗಳ ಬೇಡಿಕೆಯಿಂದಾಗಿ ಈ ಉದ್ಯಮವು ವಾರ್ಷಿಕ ಶೇಕಡಾ 11 ರಿಂದ 13 ರಷ್ಟು ವೇಗದಲ್ಲಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಈ ವಲಯವು ಸ್ಥಿರ ಬೆಳವಣಿಗೆ ದಾಖಲಿಸಿದ್ದರೂ, ವಿದೇಶಿ ಆಮದುಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತಿರುವುದನ್ನು ವರದಿ ಎತ್ತಿ ತೋರಿಸಿದೆ. ಎಲೆಕ್ಟ್ರಿಕಲ್ ಉಪಕರಣಗಳ ಆಮದು ಪ್ರಮಾಣವು 2020 ರಲ್ಲಿದ್ದ ಶೇ. 22 ರಿಂದ 2025 ರ ವೇಳೆಗೆ ಶೇ. 33 ಕ್ಕೆ ಏರಿದೆ. ಪ್ರಸ್ತುತ ಪರಿಸ್ಥಿತಿಯೇ ಮುಂದುವರಿದರೆ, 2035 ರ ವೇಳೆಗೆ ಆಮದು ಅವಲಂಬನೆ ಶೇ. 70 ಕ್ಕಿಂತ ಹೆಚ್ಚಾಗಬಹುದು ಮತ್ತು ಇದರಿಂದಾಗಿ ದೇಶದಲ್ಲಿ 130 ಶತಕೋಟಿ ಡಾಲರ್‌ನಷ್ಟು ಭಾರಿ ಉತ್ಪಾದನಾ ಕೊರತೆ ಉಂಟಾಗಬಹುದು ಎಂದು ಮೆಕಿನ್ಸೆ ಎಚ್ಚರಿಸಿದೆ.
ಈ ಸವಾಲನ್ನು ಎದುರಿಸಲು ಭಾರತವು ಪವರ್ ಎಲೆಕ್ಟ್ರಾನಿಕ್ಸ್, ಬ್ಯಾಟರಿಗಳು, ಎಸಿ ಕಂಪ್ರೆಸರ್‌ಗಳು, ಸೋಲಾರ್ ಪಿವಿಸಿ ಸೆಲ್‌ಗಳು ಹಾಗೂ ಕೇಬಲ್ ಮತ್ತು ವೈರ್‌ಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಕನಿಷ್ಠ ಐದು ಪಟ್ಟು ಹೆಚ್ಚಿಸಬೇಕಾಗಿದೆ. ಸೂಕ್ತ ಕ್ರಮ ಹಾಗೂ ಸ್ಥಳೀಯ ಉತ್ಪಾದನೆಗೆ ಒತ್ತು ನೀಡಿದರೆ ಪ್ರಸ್ತುತ ಇರುವ ಶೇ. 33ರಷ್ಟು ಆಮದು ಅವಲಂಬನೆಯನ್ನು ಶೇ. 14ಕ್ಕಿಂತ ಕೆಳಕ್ಕೆ ಇಳಿಸಲು ಸಾಧ್ಯವಿದೆ ಎಂದು ಮೆಕಿನ್ಸೆ ಸಂಸ್ಥೆಯ ಸಹ-ಲೇಖಕ ಭವೇಶ್ ಮಿತ್ತಲ್ ತಿಳಿಸಿದ್ದಾರೆ.
ಐಟಿ ಸೇವೆಗಳು ಮತ್ತು ಆಟೋ ಬಿಡಿಭಾಗಗಳ ವಲಯದಲ್ಲಿ ಭಾರತ ಈಗಾಗಲೇ ಜಾಗತಿಕ ನಾಯಕತ್ವ ಸಾಧಿಸಿರುವುದನ್ನು ನೆನಪಿಸಿಕೊಂಡಿರುವ ಮೆಕಿನ್ಸೆ ಸೀನಿಯರ್ ಪಾರ್ಟ್‌ನರ್ ಅಮಿತ್ ವಿ. ಗುಪ್ತಾ, ಅದೇ ಮಾದರಿಯ ನೀತಿ ಮತ್ತು ನಾವೀನ್ಯತೆಯನ್ನು ಎಲೆಕ್ಟ್ರಿಕಲ್ ವಲಯದಲ್ಲೂ ಅಳವಡಿಸಿಕೊಂಡರೆ ಭಾರತವು ಜಾಗತಿಕ ತಂತ್ರಜ್ಞಾನ ಪೂರೈಕೆದಾರನಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ನವೀಕರಿಸಬಹುದಾದ ಇಂಧನ ಉಪಕರಣಗಳು ಮತ್ತು ಹೈ-ಸ್ಪೀಡ್ ರೈಲು ಕೇಬಲ್‌ಗಳಂತಹ ಹೊಸ ವಲಯಗಳು ಜಾಗತಿಕವಾಗಿ 400 ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಬೃಹತ್ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ