ಈ ಜಗತ್ತು ಎಷ್ಟೊಂದು ವಿಸ್ಮಯವಲ್ಲವೇ? ಸಾವಿರಾರು ಜೀವರಾಶಿಗಳು ನೆಲೆಸಿರುವ ಭೂಮಿ ಇದು. ಈ
ಜಗತ್ತಿನ ಒಂದು ಸಣ್ಣ ಅಂಶ ಬುದ್ಧಿಜೀವಿಯೆನಿಸಿಕೊಂಡಿರುವ ಮಾನವ. ಭಾರತೀಯ ಪರಂಪರೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.
ಶತಮಾನಗಳನ್ನು ತಿರುಗಿ ನೋಡಿದಾಗ ವೇದ, ಉಪನಿಷತ್, ಶ್ಲೋಕ,
ಭಗವದ್ಗೀತೆಗಳ ಅಧ್ಯಯನವನ್ನು ಕಾಣಬಹುದು. ಚಾಣಕ್ಯ, ರನ್ನ, ಪೊನ್ನ ಹೀಗೆ ಹತ್ತಾರು ಬರಹಗಾರರು
ತಮ್ಮ ಬರವಣಿಗೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ತದನಂತರ ಬಂದಂತಹ ಕುವೆಂಪು, ದ.ರಾ ಬೇಂದ್ರೆ,
ಗಿರೀಶ್ ಕಾರ್ನಾಡ್ ಹೀಗೆ ಹಲವರು
ಸಾಹಿತ್ಯ ಸೃಷ್ಟಿ ಮಾತ್ರವಲ್ಲದೇ, ಶಿಕ್ಷಣ
ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಈ ರೀತಿಯಾಗಿ ಗುರುತಿಸಿಕೊಂಡಂತಹ
ಪಾರಂಪರಿಕ ಶಿಕ್ಷಣ ವ್ಯವಸ್ಥೆ ನಮ್ಮ ಭಾರತ ದೇಶದ್ದು.
ಬ್ರಿಟಿಷರ
ಆಗಮನದ ನಂತರ ಭಾರತದಲ್ಲಿ ಇಂಗ್ಲಿಷ್
ಭಾಷೆಯ, ಮೆಕಾಲೆ ಶಿಕ್ಷಣ ಪದ್ಧತಿಯ ಪರಿಚಯವಾಯಿತು.
ಭಾಷೆಗಳಲ್ಲಿ, ಸಂಸ್ಕೃತಿಯಲ್ಲಿ ಅನೇಕ
ವೈವಿಧ್ಯತೆಯನ್ನು ಹೊಂದಿದ್ದ ಭಾರತಕ್ಕೆ ಇಂಗ್ಲಿಷ್ ಭಾಷೆ, ಬ್ರಿಟಿಷರ ಸಂಸ್ಕೃತಿ, ಶಿಕ್ಷಣ ಪದ್ಧತಿ
ಕೂಡಾ ಸೇರ್ಪಡೆಗೊಂಡಿತು.
ಸ್ವಾತಂತ್ರ ಸಂಗ್ರಾಮದ
ಜೊತೆಜೊತೆಗೆ ಭಾರತದಲ್ಲಿ ಹಲವಾರು ಸುಧಾರಣೆಗಳಾದವು. ಮೂಢನಂಬಿಕೆಗಳು ಒಂದಷ್ಟು ದೂರಾದವು, ಹೆಣ್ಣು
ಮಕ್ಕಳಿಗೂ ಶಿಕ್ಷಣ ಸಿಗಲಾರಂಭಿಸಿತು. ಸಂವಿಧಾನ ಶಿಲ್ಪಿ
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್
ಮುಂತಾದ ಮಹನೀಯರ ಪ್ರಯತ್ನಗಳಿಂದ
ಹಿಂದುಳಿದ ವರ್ಗಗಳ ಜನರಿಗೂ ಶಿಕ್ಷಣ, ಅನೇಕ ಸೌಲಭ್ಯಗಳು ದೊರೆತು, ಅವರೂ
ಮುನ್ನೆಲೆಗೆ ಬರುವಂತಾಯಿತು.
ಹೀಗೇ ನಮ್ಮ ಸಮಾಜ
ಸುಧಾರಕರಿಂದ ಬದಲಾವಣೆಯ ಹೊಸ ದಾರಿಯನ್ನು ಕಂಡಿತು.
ಹೀಗೆ ಭಾರತೀಯ ಶಿಕ್ಷಣ ಪದ್ಧತಿಯೂ ಹಲವಾರು ಬದಲಾವಣೆ, ಸುಧಾರಣೆ
ಕಂಡಿತು. ಅನೇಕ ಭಾರತೀಯರು ಉನ್ನತ
ಶಿಕ್ಷಣ, ಉದ್ಯೋಗದ ನಿಮಿತ್ತ ವಿದೇಶಗಳಿಗೆ ತೆರಳಿದರು.
ಆದರೆ ಈಗ ಭಾರತೀಯ
ಶಿಕ್ಷಣ ಪದ್ಧತಿಯ ಕುರಿತು ಜಿಜ್ಞಾಸೆ ಮೂಡುತ್ತಿದೆ. ಕೊರೋನಾ ನಂತರದ ದಿನಗಳಲ್ಲಿ ಆನ್ಲೈನ್ ತರಗತಿಗಳು
ಮಾತ್ರವಲ್ಲದೇ ಬದಲಾದ ಜೀವನಶೈಲಿ, ಶಿಕ್ಷಣ ವ್ಯವಸ್ಥೆ, ತಂತ್ರಜ್ಞಾನದ ಅತಿಯಾದ ಅವಲಂಬನೆ, ಮೊಬೈಲ್
ಅನಿವಾರ್ಯತೆ, ಇವೆಲ್ಲವುಗಳೂ ವಿದ್ಯಾರ್ಥಿಗಳ ದೈಹಿಕ ಶ್ರಮ ಹಾಗೂ ಬೌದ್ಧಿಕ ಸಾಮರ್ಥ್ಯದ ಮೇಲೆ ದೊಡ್ಡ
ಪರಿಣಾಮ ಬೀರಿದವು. ವಿದ್ಯಾರ್ಥಿಗಳ ಬುದ್ಧಿಶಕ್ತಿ ಮಟ್ಟ, ಯೋಚನಾಶಕ್ತಿ, ಏಕಾಗ್ರತೆ, ಮುಂತಾದವುಗಳ
ಮೇಲೆ ದೊಡ್ಡ ಹೊಡೆತ ಬೀಳುತ್ತಿದೆ.
ಇದಲ್ಲದೇ ಮಕ್ಕಳಲ್ಲಿ ಓದಿನ ಮೇಲಿನ ಆಸಕ್ತಿಯು ಕಡಿಮೆಯಾಗುತ್ತಿದೆ. ಅಷ್ಟೇ ಅಲ್ಲದೆ ಮಕ್ಕಳ ಮೌಲ್ಯಗಳು, ಉತ್ತಮ ನಡವಳಿಕೆಗಳು, ಹಿರಿಯರನ್ನು ಗೌರವಿಸುವ ಗುಣ ಎಲ್ಲವೂ ಎಲ್ಲೋ ಅವನತಿಯತ್ತ ಸಾಗುತ್ತಿದೆಯೇನೋ ಎಂಬ ಭಯವಾಗುತ್ತಿದೆ. ಈ ಎಲ್ಲಾ ಸಂಗತಿಗಳನ್ನು ಗಮನಿಸುವಾಗ ನಮ್ಮ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿ ಹಾಗೂ ಇಂದಿನ ಶಿಕ್ಷಣ ಪದ್ಧತಿಗೂ ಅಜಗಜಾಂತರ ಗೋಚರಿಸುವುದು ಮಾತ್ರವಲ್ಲದೇ, ವಿದ್ಯಾರ್ಥಿಗಳ, ಇಂದಿನ ಮಕ್ಕಳ ಭವಿಷ್ಯದ ಕುರಿತು ಬಹುದೊಡ್ಡ ಪ್ರಶ್ನೆ ಕಾಡಲಾರಂಭಿಸುತ್ತದೆ.
ಚೈತನ್ಯ ಚಂದಪ್ಪ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


