ಬೆವರು ಸುರಿಸುವವನಿಗೆ ಗೆಲುವು ದೂರವಿಲ್ಲ

Upayuktha
0

 


ದ್ರಾನದಿಯ ತಟದಲ್ಲಿರುವ ಸುಂದರ ಗ್ರಾಮ ಸಿರಿಗಿರಿ. ಒಂದು ಕಡೆ ಹಸಿರಿನ ವನಸಿರಿಯ ರಾಶಿ ತಂಪಾದ ತಂಗಾಳಿಯನ್ನು ನೀಡುತ್ತಿದ್ದರೆ, ಮತ್ತೊಂದೆಡೆ ನದಿಯ ನೀರಿನ ಜುಳುಜುಳು ನಿನಾದ ಮೌನದ ತಂಗಾಳಿಯಲ್ಲಿ ತೇಲಿ ಬರುವ ಸಂಗೀತದಂತಿದೆ. ಹಳ್ಳಿಗೆ ಎದುರಾಗಿರುವ ಬೆಟ್ಟಗಳ ಸಾಲು ಹಳ್ಳಿಗೆ ಸುರಕ್ಷಾ ಕವಚದಂತಿದೆ. ಹಳ್ಳಿಯಲ್ಲಿ ಸರಿಸುಮಾರು ಅರವತ್ತರಿಂದ ಎಪ್ಪತ್ತು ಮನೆಗಳಿರಬಹುದು. ಕೆಲವು ಹೆಂಚಿನ ಮನೆಗಳು, ಕೆಲವು ತಾರಸಿ ಮನೆಗಳು, ಮತ್ತೆ ಕೆಲವು ಹುಲ್ಲಿನಿಂದ ಹೊಚ್ಚಲ್ಪಟ್ಟ ಗುಡಿಸಲುಗಳು. ಹಳ್ಳಿಯ ಜನ ತಮಗಿರುವಷ್ಟರಲ್ಲಿಯೇ ಸಂತೃಪ್ತ ಬದುಕನ್ನು ಕಟ್ಟಿಕೊಳ್ಳಲು ಬಯಸುತ್ತಾರೆ. ಅದೇ ಹಳ್ಳಿಯಲ್ಲಿ ರಂಗಪ್ಪ ಓರ್ವ ಮಧ್ಯಮ ವರ್ಗದ ಕುಟುಂಬದ ಸಾಮಾನ್ಯ ರೈತನಾಗಿದ್ದಹೆಂಡತಿ ಮಂಜಮ್ಮ ಪತಿಗೆ ತಕ್ಕ ಸತಿಯಂತೆ ಇದ್ದು ಎಲ್ಲವನ್ನು ಮನೆಯನ್ನು ಸರಿದೂಗಿಸಿಕೊಂಡು ಜೀವನ ಸಾಗಿಸುತ್ತಿದ್ದಳು.

 

ಒಂದು ದಿನ ಮನೆಯ ಮೂಲೆಯಲ್ಲಿ ಕುಳಿತು ದೀಪಕ್ ತನ್ನ ಹಳೆಯ ನೋಟ್ಬುಕ್ನಲ್ಲಿ ಲೆಕ್ಕಾಚಾರ ಹಾಕುತ್ತಿದ್ದ. ಕಿಟಕಿಯಿಂದ ಬರುವ ಮಂದ ಬೆಳಕು ಅವನ ಮುಖದ ಮೇಲಿನ ಆತಂಕವನ್ನು ಎತ್ತಿ ತೋರಿಸುತ್ತಿತ್ತು. ಆಗ ತಾಯಿ ಮಂಜಮ್ಮ " ದೀಪು, ತಿಂಗಳ ಸಂಬಳದಲ್ಲಿ ನಿನಗೆ ಹೊಸ ಶರ್ಟ್ ತಗೋ ಅಂತ ಹೇಳಿದ್ನಲ್ಲಪ್ಪ? ಯಾಕೆ ತಗೊಂಡಿಲ್ಲ?" ಅಂದಳು.ಆಗ ದೀಪಕ್ (ಮಂದಹಾಸದೊಂದಿಗೆ) "ಅಮ್ಮ, ಶರ್ಟ್ ಮುಖ್ಯ ಅಲ್ಲ. ಸಲದ ಯುಪಿಎಸ್ಸಿ ಫೀಸ್ ಕಟ್ಟೋಕೆ ಹಣ ಬೇಕಿತ್ತು. ನೀನು ಉಟ್ಕೊಂಡಿರೋ ಹರಿದ ಸೀರೆ ನನಗೆ ಹೊಸ ಶರ್ಟ್ ಕೊಡೋ ಸುಖಕ್ಕಿಂತ ಜಾಸ್ತಿ ಜವಾಬ್ದಾರಿ ನೆನಪಿಸುತ್ತೆ. ನಾನು ಅಧಿಕಾರಿಯಾದ ಮೇಲೆ ನಿನಗೆ ರೇಷ್ಮೆ ಸೀರೆ ತರ್ತೀನಿ, ಅಲ್ಲಿಯವರೆಗೂ ಹಳೆಯ ಬಟ್ಟೆಗಳೇ ನನಗೆ ಶ್ರೀಮಂತಿಕೆ." ಎಂದನು. ಮಂಜಮ್ಮ , "ಕನಸು ಕಾಣೋದು ತಪ್ಪಲ್ಲ ಕಣೋ, ಆದ್ರೆ ನಮ್ಮಂತ ಬಡವರಿಗೆ ಆಕಾಶ ಎಟುಕುತ್ತಾ ನೀನೇ ಹೇಳು?" ಎಂದಳು. ಆಗ ದೀಪಕ್ ಹೇಳಿದ , "ಆಕಾಶ ಯಾರ ಸ್ವತ್ತೂ ಅಲ್ಲ ಅಮ್ಮ. ರೆಕ್ಕೆ ಇರೋ ಪ್ರತಿಯೊಂದು ಹಕ್ಕಿಗೂ ಅದು ಸೇರೈತೆ. ನನಗೀಗ ರೆಕ್ಕೆಗಳಿಲ್ಲ ನಿಜ, ಆದ್ರೆ ನಿನ್ನ ಆಶೀರ್ವಾದದ ಗಾಳಿ ನನ್ನನ್ನು ಮೇಲೆತ್ತುತ್ತೆ ಅನ್ನೋ ನಂಬಿಕೆ ಇದೆ." ಅಂದ. " ಅಮ್ಮಾ ಓದೋದಕ್ಕೆ ಅಂತ ನಾನು ಬೆಂಗಳೂರಿಗೆ ಹೋಗ್ಬೇಕು ಅಂದ್ಕೊಂಡಿದ್ದೀನಿ. ಅಲ್ಲಿ ಕೋಚಿಂಗ್ ಕ್ಲಾಸ್ ಗೆ ಸೇರಿ ಓದಬೇಕು. ಆಗ ನನಗೆ ಹೇಗೆ ಓದಬೇಕು ಅಂತ ಗೊತ್ತಾಗುತ್ತೆ. ನಾಳೇನೇ ಹೊರಡ್ತೀನಿ ಅಮ್ಮಾ" ಎಂದಾಗ, ತಾಯಿ ಮಂಜಮ್ಮ " ತಗೋ ಮಗ ನನ್ನ ಹತ್ರ ಇಷ್ಟೇ ದುಡ್ಡಿರಾದು. ಇದು ನಿಂಗೆ ಸಹಾಯ ಆಗಬಹುದು ಇಟ್ಕೋ ಮಗ " ಎಂದಳು

 

ದೀಪಕ್ ಮಾರನೇ ದಿನವೇ ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಐಎಎಸ್ ಕೋಚಿಂಗ್ಗಾಗಿ ಬರುತ್ತಾನೆ. ಹಣದ ಕೊರತೆ, ಹಳೆಯ ಬಟ್ಟೆಗಳು ಮತ್ತು ತಾಯಿಯ ಹರಿದ ಸೀರೆಯ ನೆನಪು ಅವನನ್ನು ಸದಾ ಎಚ್ಚರಿಸುತ್ತಿರುತ್ತವೆ. ಅದೇ ಲೈಬ್ರರಿಯಲ್ಲಿ ಅವನಿಗೆ ಮಾನ್ವಿತಾ ಪರಿಚಯವಾಗುತ್ತಾಳೆ. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯದ ಎಸಿ ಗಾಳಿಗಿಂತ ಅಲ್ಲಿನ ಪುಸ್ತಕಗಳ ವಾಸನೆ ದೀಪಕ್ ಗೆ ಹೆಚ್ಚು ಆಪ್ತವಾಗಿತ್ತು. ಅಲ್ಲಿಯೇ ಅವನಿಗೆ ಮಾನ್ವಿತಾಳ ಪರಿಚಯವಾಗಿದ್ದು. ಒಂದು ದಿನ ದೀಪಕ್ ಒಂದು ಪುಸ್ತಕವನ್ನು ಮರಳಿಸಲು ಹೋದಾಗ ಮಾನ್ವಿತಾ ಮಾತು ಶುರುಮಾಡಿದಳು. "ನೀವು ದಿನಕ್ಕೆ ಹದಿನಾಲ್ಕು ಗಂಟೆ ಓದುತ್ತೀರಿ. ಜೀವನದ ಸುಂದರ ಕ್ಷಣಗಳನ್ನ ಮಿಸ್ ಮಾಡ್ಕೊತಿದ್ದೀನಿ ಅಂತ ಅನ್ಸೋಲ್ವಾ ದೀಪಕ್ ?" ಅದಕ್ಕೆ ಕೂಡಲೇ ದೀಪಕ್ ಹೇಳಿದ : "ಸುಂದರ ಕ್ಷಣಗಳ ವ್ಯಾಖ್ಯಾನ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತೆ ಮಾನ್ವಿತಾ. ಕೆಲವರಿಗೆ ಪಾರ್ಟಿ ಮಾಡೋದು ಸುಖ, ಇನ್ನು ಕೆಲವರಿಗೆ ಗೆಲ್ಲೋದು ಸುಖ. ನಾನು ಸದ್ಯಕ್ಕೆ ಸುಖವನ್ನು ಮುಂದೂಡುತ್ತಿದ್ದೇನೆ, ಅಷ್ಟೇ." ಎಂದನು. "ಆದರೆ ಇಷ್ಟೊಂದು ಒತ್ತಡದಲ್ಲಿ ಪ್ರೀತಿ, ಸ್ನೇಹ ಇವೆಲ್ಲಕ್ಕೂ ಜಾಗ ಎಲ್ಲಿದೆ ದೀಪಕ್?" ಅಂತ ಮಾನ್ವಿತಾ ಕೇಳಿದಾಗ, ದೀಪಕ್, "ಪ್ರೀತಿ ಅನ್ನೋದು ಹೊರೆಯಾಗಬಾರದು ಮಾನ್ವಿತಾ, ಅದು ಹೊರೆ ಇಳಿಸುವ ಶಕ್ತಿಯಾಗಬೇಕು. ನನಗೆ ಅಂತಹ ಶಕ್ತಿ ಸಿಕ್ಕ ದಿನ ಖಂಡಿತ ಸಮಯ ಮೀಸಲಿಡುತ್ತೇನೆ." ಎಂದನು.

 

ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಬಂದ ದಿನ. ದೀಪಕ್ ಹೆಸರು ಪಟ್ಟಿಯಲ್ಲಿರಲಿಲ್ಲ. ಕುಸಿಯುವ ಗೋಡೆಯಂತೆ ಅವನು ಕಂಗೆಟ್ಟಿದ್ದ. ಮಾನ್ವಿತಾ ಅವನನ್ನು ಹುಡುಕಿಕೊಂಡು ಬಂದಳು. ಆಗ ದೀಪಕ್, "ನೋಡು ಮಾನ್ವಿತಾ, ಜನ ಹೇಳೋದು ಸರಿ ಇದೆ. ನಾಯಕನಾಗೋಕೆ ಕೇವಲ ಶ್ರಮ ಸಾಕಾಗಲ್ಲ, ಅದೃಷ್ಟವೂ ಬೇಕು. ನನ್ನ ಹಣೆಬರಹದಲ್ಲಿ ಬಡವನಾಗಿ ಹುಟ್ಟಿ, ಬಡವನಾಗೇ ಸಾಯೋದು ಬರೆದಿದೆ. ನನ್ನಂತ ಸಾಮಾನ್ಯನಿಗೆ ಇವೆಲ್ಲ ಅಸಾಧ್ಯ ಅನ್ಸುತ್ತೆ ಮಾನ್ವಿತಾ. ನನ್ನ ಹಣೆಬರಹದಲ್ಲಿ ಬಡತನದ ಗೆರೆಗಳೇ ಜಾಸ್ತಿ ಇವೆ ಅನಿಸುತ್ತೆ." ಎಂದನು. ಆಗ ಮಾನ್ವಿತಾ (ಗಟ್ಟಿಯಾದ ಧ್ವನಿಯಲ್ಲಿ) "ಹಣೆಬರಹದ ಬಗ್ಗೆ ಮಾತಾಡೋದು ಸೋಲೊಪ್ಪಿಕೊಂಡವರು ಮಾತ್ರ. ನೀನು ಸೋತಿರೋದು ಕೇವಲ ಒಂದು ಪರೀಕ್ಷೆಯಲ್ಲಿ ಹೊರತು ಜೀವನದಲ್ಲಲ್ಲ. ನಿನ್ನಲ್ಲಿರೋ ಜ್ಞಾನಕ್ಕೆ ಯಾವ ರಿಸಲ್ಟ್ ಶೀಟ್ ಕೂಡ ಬೆಲೆ ಕಟ್ಟೋಕೆ ಆಗಲ್ಲ." ಎಂದಳು. "ನಿನಗೆ ಇದೆಲ್ಲ ಸುಲಭವಾಗಿ ಕಾಣಬಹುದು. ನೀನು ಶ್ರೀಮಂತ ಮನೆತನದವಳು, ನಿನಗೆ ಆಯ್ಕೆಗಳಿವೆ. ನನಗೆ ಇರೋದು ಇದೊಂದೇ ದಾರಿ!" ಎಂದ ದೀಪಕ್. "ನನ್ನ ಶ್ರೀಮಂತಿಕೆ ಬಗ್ಗೆ ಮಾತಾಡಬೇಡ ದೀಪಕ್. ಶ್ರೀಮಂತಿಕೆಯಲ್ಲಿ ಸುಖವಿರಬಹುದು, ಆದರೆ ನಿನ್ನ ಕಣ್ಣಲ್ಲಿರೋ ಸತ್ಯದ ಕಿಚ್ಚಿಲ್ಲ. ನನಗೆ ನಿನ್ನ ಹಣ ಮುಖ್ಯವಲ್ಲ, ನಿನ್ನ ಛಲ ಮುಖ್ಯ. ನೀನು ಐಎಎಸ್ ಆಗ್ತಿಯೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಕಣ್ಣಲ್ಲಿ ನೀನು ಈಗಾಗಲೇ ಒಬ್ಬ ವಿಜೇತ. ಎದ್ದು ನಿಲ್ಲು!" (ಅವನ ಕಣ್ಣುಗಳನ್ನು ನೇರವಾಗಿ ನೋಡಿ) "ಹಣೆಬರಹವನ್ನ ಕೈ ರೇಖೆಗಳು ನಿರ್ಧರಿಸಲ್ಲ ದೀಪಕ್, ನಿನ್ನ ಕೈಯಲ್ಲಿರೋ ಶ್ರಮ ನಿರ್ಧರಿಸುತ್ತೆ. ಸೋಲು ನಿನ್ನನ್ನು ತಿದ್ದಲು ಬಂದಿದೆಯೇ ಹೊರತು ತಡೆಯಲು ಅಲ್ಲ. ನಿನಗೆ ನಿನ್ನ ಮೇಲೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ, ನನಗೆ ನಿನ್ನ ಮೇಲೆ ನಂಬಿಕೆ ಇದೆ." ಎಂದು ಧೈರ್ಯ ತುಂಬಿಗಳು ಮಾನ್ವಿತ.

 

ಮುಂದಿನ ವರ್ಷ ದೀಪಕ್ ನಿಗೆ ಅಕ್ಷರಶಃ ತಪಸ್ಸಾಗಿತ್ತು. ಮಾನ್ವಿತಾ ಅವನಿಗೆ ನೋಟ್ಸ್ ಮಾಡಿಕೊಡುವುದರಿಂದ ಹಿಡಿದು, ಮಾನಸಿಕ ಧೈರ್ಯ ತುಂಬುವವರೆಗೆ ನೆರಳಾಗಿ ನಿಂತಳು. ಮುಖ್ಯ ಪರೀಕ್ಷೆ ಮುಗಿದು ಸಂದರ್ಶನಕ್ಕೆ ಆಯ್ಕೆಯಾದ ದಿನ ದೀಪಕ್ ಕೇಳಿದನು. "ಮಾನ್ವಿತಾ, ಪಯಣದಲ್ಲಿ ನೀನು ಇರದಿದ್ದರೆ ನಾನು ಅರ್ಧ ದಾರಿಯಲ್ಲೇ ಮರಳುತ್ತಿದ್ದೆ. ಯಾಕೆ ನನಗೆ ಇಷ್ಟೊಂದು ಸಹಾಯ ಮಾಡಿದೆ?" "ಪ್ರೀತಿ ಅಂದ್ರೆ ಕೇವಲ ಐಷಾರಾಮಿ ಹೋಟೆಲ್ನಲ್ಲಿ ಊಟ ಮಾಡೋದಲ್ಲ ದೀಪಕ್. ಒಬ್ಬ ವ್ಯಕ್ತಿಯಲ್ಲಿರುವ ಶಕ್ತಿಯನ್ನು ಆತನಿಗೇ ಪರಿಚಯಿಸಿಕೊಡುವುದು ನಿಜವಾದ ಪ್ರೀತಿ. ನಾನು ನಿನ್ನಲ್ಲಿ ಅಧಿಕಾರಿಯನ್ನು ನೋಡಿದೆ, ಜೊತೆಗೆ ಅಧಿಕಾರಿಯ ಹಿಂದಿರುವ ಪ್ರಾಮಾಣಿಕ ಮನಸ್ಸನ್ನು ಪ್ರೀತಿಸಿದೆ." ಎಂದಳು ಮಾನ್ವಿತ. ಅಂತಿಮವಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆದ ದೀಪಕ್, ಅಖಿಲ ಭಾರತ ಮಟ್ಟದಲ್ಲಿ ಐಎಎಸ್ ಅಧಿಕಾರಿಯಾಗಿ ನೇಮಕಗೊಳ್ಳುತ್ತಾನೆ.

 

ದೀಪಕ್ ನನ್ನು  ಊರಿನ ಜನರೆಲ್ಲ ಸ್ವಾಗತಿಸಿ ಬರಮಾಡಿಕೊಳ್ಳುವಾಗ, ಅವನ ತಾಯಿ ಮಂಜಮ್ಮನ ಕಣ್ಣಲ್ಲಿ ಆನಂದಬಾಷ್ಪ. ಆಗ ದೀಪಕ್ ತನ್ನ ತಾಯಿಗೆ, "ಅಮ್ಮ, ಇದು ಕೇವಲ ನನ್ನ ಗೆಲುವಲ್ಲ. ನಿನ್ನ ಸಹನೆ ಮತ್ತು ಮಾನ್ವಿತ ನೀಡಿದ ಧೈರ್ಯದ ಫಲ." ಮಾನ್ವಿತಾಳ ಕೈ ಹಿಡಿದು ತನ್ನ ಹಳೆಯ ಹಂಚಿನ ಮನೆಗೆ ಕರೆದುಕೊಂಡು ಹೋಗುವಾಗ ದೀಪಕ್ ನಿಗೆ ಅರಿವಾಗುತ್ತದೆ. "ಸಾಧನೆಗೆ ಬೇಕಿರೋದು ಸೌಲಭ್ಯಗಳಲ್ಲ, ಸರಿಯಾದ ಗುರಿ ಮತ್ತು ಗುರಿಗೆ ಸಾಥ್ ಕೊಡುವ ಒಂದು ಹೃದಯ." ಎಂದು. ಆಗ ದೀಪಕ್, " ಮಾನ್ವಿತಾ, ಇವತ್ತು ನನ್ನ ಕೈಯಲ್ಲಿ ಅಧಿಕಾರ ಇದೆ, ಗೌರವ ಇದೆ. ಆದರೆ ಇದೆಲ್ಲದಕ್ಕಿಂತ ದೊಡ್ಡದಾದ ಒಂದು ಪ್ರಶ್ನೆ ನಿನಗೆ ಕೇಳಬೇಕು." ತಕ್ಷಣ ಮಾನ್ವಿತಾ (ನಗುತ್ತಾ) "ಏನು? ಅಧಿಕಾರ ಬಂದ ಮೇಲೆ ಆರ್ಡರ್ ಮಾಡ್ತೀಯಾ ಅಂತ ಅನ್ಕೊಂಡಿದ್ದೆ." ಎಂದಳು. ಆಗ ದೀಪಕ್ "ಇಲ್ಲ, ವಿನಂತಿ ಮಾಡ್ತಿದ್ದೀನಿ.

 

ನಾನು ಶೂನ್ಯದಲ್ಲಿದ್ದಾಗ ನೀನು ನನ್ನ ಕೈ ಹಿಡಿದೆ. ಈಗ ನಾನು ಶಿಖರದಲ್ಲಿದ್ದೇನೆ, ಇಲ್ಲಿಂದ ಕೆಳಗೆ ಬೀಳದಂತೆ ನೋಡಿಕೊಳ್ಳೋಕೆ ನಿನ್ನ ಕೈ ಸದಾ ಇರುತ್ತಾ? ನನ್ನ ಯಶಸ್ಸಿನ ಸಿಂಹಾಸನದಲ್ಲಿ ನಿನಗೆ ಅರ್ಧ ಪಾಲಿದೆ." ಎಂದನು. "ಸಿಂಹಾಸನದ ಪಾಲಿಗಾಗಿ ನಾನು ನಿನ್ನ ಪ್ರೀತಿಸಲಿಲ್ಲ ದೀಪಕ್. ನಿನ್ನ ಕಷ್ಟದ ಹಾದಿಯಲ್ಲಿ ನಿನ್ನ ನೆರಳಾಗಿದ್ದೆ, ಈಗ ನಿನ್ನ ಯಶಸ್ಸಿನ ಬೆಳಕಲ್ಲಿ ನಿನ್ನ ಬಿಂಬವಾಗಿ ಜೊತೆಗಿರ್ತೀನಿ." ಎಂದಳು ಮಾನ್ವಿತ. ಆಗ ತಂದೆ ರಂಗಪ್ಪ, "ನೋಡು ಮಗ, ಬೆವರು ಸುರಿಸುವವನಿಗೆ ಗೆಲುವು ದೂರವಿಲ್ಲ, ಪ್ರೀತಿ ತೋರಿಸುವವನಿಗೆ ಜೀವನ ಭಾರವಲ್ಲ. ಯಶಸ್ಸು ಅನ್ನೋದು ಒಬ್ಬ ವ್ಯಕ್ತಿಯ ಪಯಣವಲ್ಲ, ಅದು ನಂಬಿಕೆ ಇಟ್ಟ ಹೃದಯಗಳ ಸಾಮೂಹಿಕ ಹಬ್ಬ ಕಾಣ್ ಮಗ. ಬದುಕಿನಲ್ಲಿ ನೀವಿಬ್ಬರೂ ಯಾವಾಗ್ಲೂ ಜೊತೆಯಾಗಿದ್ದು ಸಂತೋಷವಾಗಿರಿ" ಎಂದು ಹರಸಿದನು.

 


ಕೆ.ಎನ್. ಚಿದಾನಂದ, ಹಾಸನ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top