ಮಂಗಳೂರು: ನಗರದ ಕಾವೂರು ಪರಿಸರದ ಕೆಲವು ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆಯಾಗಿದ್ದು, ಬಾವಿ ನೀರನ್ನು ಆಶ್ರಯಿಸಿದ - ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಬಲಿಪಗುರಿ ಲೀಲಾವತಿ ಎಂಬುವರ ಹಳೇ ಬಾವಿಯ ನೀರನ್ನು ಎರಡು ಬಾರಿ ಸಂಪೂರ್ಣ ಖಾಲಿ ಮಾಡಿ ಶುಚಿಗೊಳಿಸಿದರೂ,ಮತ್ತೆ ಅದೇ ಸಮಸ್ಯೆ ಎದುರಾಗಿದೆ. ನೀರಿನ ಮೇಲ್ಬಾಗದಲ್ಲಿ ಎಣ್ಣೆ ಮಿಶ್ರಿತ ಪದರ ಕಾಣಿಸಿಕೊಳ್ಳುತ್ತಿದೆ.
ನಿವೃತ್ತ ಪ್ರಾಂಶ ಪಾಲರಾದ ಸದಾಶಿವ ಅವರ ಮನೆಯ ಬಾವಿಯಲ್ಲೂ ಡೀಸೆಲ್ ಅಂಶ ಪತ್ತೆಯಾಗಿದೆ. ಅವರ ಬಾವಿಯ ನೀರಿನಲ್ಲಿ ಪೇಪರ್ ಮುಳುಗಿಸಿ ಬೆಂಕಿ ಹಚ್ಚಿದಾಗ ಕಾಗದ ಹೊತ್ತಿ ಉರಿಯುತ್ತದೆ. ರಮೇಶ್ ಶೆಟ್ಟಿ ಎಂಬುವರ ಬಾವಿಯಲ್ಲೂ ಡೀಸೆಲ್ ಅಂಶ ಪತ್ತೆಯಾಗಿದೆ. ಆರಂಭದಲ್ಲಿ ನೀರಿನಲ್ಲಿ ವಿಚಿತ್ರ ವಾಸನೆ ಬರುತ್ತಿತ್ತು. ನಂತರ ಡೀಸೆಲ್ ಅಂಶ ಇರುವುದು ಗಮನಕ್ಕೆ ಬಂದಿದೆ. ಸಮೀಪದಲ್ಲೇ ಡೀಸೆಲ್ ಬಂಕ್ ಇದ್ದು ಅಲ್ಲಿಂದ ಸೋರಿಕೆಯಾಗಿರಬಹುದೆಂಬ ಅನುಮಾನದಿಂದ ಅವರಲ್ಲಿ ವಿಚಾರಿಸಿದಾಗ, 'ನಮ್ಮಲ್ಲಿ ಯಾವುದೇ ಸೋರಿಕೆಯಾಗುತ್ತಿಲ್ಲ. ಸೋರಿಕೆಯಾಗುತ್ತಿದ್ದರೆ ಗೊತ್ತಾಗಬೇಕಿತ್ತು. ಅಂತಹ ಯಾವುದೇ ಸಮಸ್ಯೆ ಆಗುತ್ತಿಲ್ಲ' ಎಂದು ಮಾಲೀಕರು ಹೇಳಿದ್ದಾರೆ.
ಆರೋಗ್ಯ ಅಧಿಕಾರಿಗಳು ನೀರನ್ನು ಕೊಂಡೊಯ್ದು ಪರೀಕ್ಷೆಗೊಳಪಡಿಸಿದಾಗ ಶೇ.27 ಡೀಸೆಲ್ ಅಂಶ ಇರುವುದು ಪತ್ತೆಯಾಗಿದೆ. ಜತೆಗೆ ತೈಲದೊಂದಿಗೆ ಗ್ರೀಸ್ ಅಂಶವೂ ಪತ್ತೆಯಾಗಿರುವುದು ವರದಿಯಲ್ಲಿ ಶ್ರುತಪಟ್ಟಿದೆ.
ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಇನ್ನಷ್ಟು ಬಾವಿಗಳಲ್ಲಿ ಡೀಸೆಲ್ ಅಂಶ ಸೇರುವ ಭೀತಿ ಇದ್ದು, ಇದಕ್ಕೆ ಕಾರಣ ಏನೆಂಬುದನ್ನು ಪತ್ತೆ ಮಾಡಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಸದಾಶಿವ ಅವರು ಉಪಯುಕ್ತ ನ್ಯೂಸ್ ಜತೆ ಹಂಚಿಕೊಂಡ ಮಾಹಿತಿ ಹೀಗಿದೆ:
ನಾವು 2022ರಲ್ಲಿ ಮನೆ ಕಟ್ಟಿಸುವಾಗ ಬಾವಿ ತೋಡಿಸಿ ಅದರ ನೀರನ್ನೇ ಉಪಯೋಗಿಸುತ್ತಿದ್ದೆವು. ಜತೆಗೆ ನಗರಪಾಲಿಕೆಯ ನೀರಿನ ಸಂಪರ್ಕವನ್ನೂ ಪಡೆದುಕೊಂಡಿದ್ದೆವು.
ಇತ್ತೀಚೆಗೆ ಪಕ್ಕದ ಮನೆಯವರು ನಮ್ಮ ನಲ್ಲಿಯಲ್ಲಿ ಡೀಸಿಲ್ ವಾಸನೆ ಬರುತ್ತಿದೆ ಎಂದರು. ನಾನು ನೋಡಿದಾಗ ನೊರೆ ನೊರೆಯಾಗಿ ನೀರು ಬರುತ್ತಿದ್ದು ನಾವು ಬಾವಿಯನೀರನ್ನು ಬಳಸುತ್ತಿದ್ದ ಕಾರಣ ನಮ್ಮನ್ನು ಅದು ಬಾಧಿಸಲಿಲ್ಲ. ಕೆಲವು ದಿನಗಳಾದ ಬಳಿಕ ನಾವು ನಲ್ಲಿ ನೀರು ಬಳಸದೇ ಇದ್ದರೂ ಸಣ್ಣಗೆ ಡೀಸಿಲ್ ವಾಸನೆ ತೊಡಗಿತು. ಆ ಹೊತ್ತಿಗೆ ಸ್ವಲ್ಪ ದೂರದಲ್ಲಿದ್ದ ಮನೆಯವರ ಬಾವಿಯಲ್ಲಿ ಡೀಸಿಲ್ ವಾಸನೆ ತೊಡಗಿ ನೀರು ಖಾಲಿ ಮಾಡಿಸಿದರೂ ಸರಿಹೋಗಲಿಲ್ಲವಂತೆ. ನಾವು ನಮ್ಮ ಮನೆ ಮೇಲುತಟ್ಟಿನ ಟ್ಯಾಂಕ್ ಸ್ವಚ್ಛಗೊಳಿಸಿದೆವು. ಆ ಮೇಲೂ ಬಾವಿಯ ನೀರೇ ಆದರೂ ಒಮ್ಮೊಮ್ಮೆ ಡೀಸಿಲ್ ವಾಸನೆ ಬರುತ್ತಿತ್ತು.
ಈ ದಿನ, 11.05.26 ರಂದು ಕೆಸರು ವಾಸನೆ ಬರುತ್ತಿದ್ದ ಕಾರಣ ಸ್ವಚ್ಛಗೊಳಿಸುವ ಕೆಲಸ ಕೖಗೊಂಡೆವು. ಮೊದಲಿಗೆ ನೀರೇ ಬಂದರೂ ನೀರು ಕಡಿಮೆಯಾದಂತೆ ಡೀಸಿಲ್ ಮಿಶ್ರಿತ ನೀರು ಬರತೊಡಗಿತು. ಕೆಲಸಗಾರರು ನಮಗೆ ಬಾವಿಗಿಳಿದು ಸ್ವಚ್ಛಗೊಳಿಸಲಾಗದು ಎಂದು ಅದೇ ನೀರನ್ನು ಖಾಲಿ ಮಾಡಿ ಹೊರಟುಹೋದರು.
ನಮ್ಮ ಬಾವಿಯಿಂದ ಸುಮಾರು ನೂರು ಮೀಟರ್ ದೂರದಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ. ಅದರ ಮ್ಯಾನೇಜರನ್ನು ಕರೆತಂದು ನೀರಿನ ಸ್ಥಿತಿ ತೋರಿಸಿದೆ. ಅದಕ್ಕೆ ಅವರ ಮೇಲಧಿಕಾರಿಗಳ ನಂಬರ್ ಕೊಟ್ಟು ದೂರು ಸಲ್ಲಿಸಲು ಹೇಳಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


