ಮಂಗಳೂರು:
ವೇದವ್ಯಾಸ ಕಾಮತ್ ಅವರು ಶುಕ್ರವಾರ ನಡೆದ
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ, ಮಳೆಗಾಲದ
ಪೂರ್ವ ಸಿದ್ಧತೆ, ಕೆ.ಜಿ.ಟಿ.ಟಿ.ಐ. ಕಟ್ಟಡ
ನಿರ್ಮಾಣ ಹಾಗೂ ರಾಜ್ಯದಲ್ಲಿನ ಪಿಂಚಣಿ
ವಿಳಂಬ ಸೇರಿದಂತೆ ಹಲವು ಪ್ರಮುಖ ವಿಚಾರಗಳ
ಕುರಿತು ಸರ್ಕಾರವನ್ನು ಆಗ್ರಹಿಸಿದರು.
ಮಂಗಳೂರಿನಲ್ಲಿಯೇ
ಹೈಕೋರ್ಟ್ ಸಂಚಾರಿ ಪೀಠಕ್ಕೆ ಒತ್ತಾಯ
ದಕ್ಷಿಣ
ಕನ್ನಡ ಜಿಲ್ಲೆಯ ಜನರಿಗೆ ಶೀಘ್ರ ನ್ಯಾಯದಾನ ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಆಗಬೇಕು
ಎಂದು ವೇದವ್ಯಾಸ ಕಾಮತ್ ಆಗ್ರಹಿಸಿದರು. ಮಂಗಳೂರು ವಕೀಲರ ಸಂಘ ಹಲವು ವರ್ಷಗಳಿಂದ
ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದ್ದು, ಆರಂಭದಿಂದಲೂ ರಾಜಕೀಯ ರಹಿತವಾಗಿ ಈ ಬೇಡಿಕೆಗೆ ಬೆಂಬಲ
ನೀಡುತ್ತಿರುವುದಾಗಿ ಹೇಳಿದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ
ಎಚ್.ಕೆ. ಪಾಟೀಲ್ ಅವರಿಗೆ
ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಮಂಗಳೂರು ರಸ್ತೆ, ರೈಲು ಹಾಗೂ ವಿಮಾನ
ಸಂಪರ್ಕ ಹೊಂದಿರುವ ಸುಸಜ್ಜಿತ ನಗರವಾಗಿದ್ದು, ಹಳೆಯ ಜಿಲ್ಲಾಧಿಕಾರಿ ಕಚೇರಿ
ಆವರಣ ಹೈಕೋರ್ಟ್ ಸಂಚಾರಿ ಪೀಠಕ್ಕೆ ಸೂಕ್ತ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಬೇರೆ
ಜಿಲ್ಲೆಯಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸುವುದು
ಸರಿಯಲ್ಲ ಎಂದು ಹೇಳಿದ ಅವರು,
ಎಲ್ಲಾ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ
ಮಂಗಳೂರಿನ ಪರ ಧ್ವನಿ ಎತ್ತಬೇಕೆಂದು
ಕರೆ ನೀಡಿದರು.
ಮಳೆಗಾಲದ
ಪೂರ್ವ ಸಿದ್ಧತೆಯಲ್ಲಿ ಪಾಲಿಕೆ ವಿಫಲ
ಮಳೆಗಾಲ
ಸಮೀಪಿಸುತ್ತಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಸಮರ್ಪಕ ಪೂರ್ವ ಸಿದ್ಧತೆ ಕೈಗೊಂಡಿಲ್ಲ ಎಂದು ವೇದವ್ಯಾಸ ಕಾಮತ್
ಆರೋಪಿಸಿದರು. ರಾಜಕಾಲುವೆ ಮತ್ತು ಚರಂಡಿಗಳ ಹೂಳೆತ್ತುವ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಪ್ರತೀ ವಾರ್ಡ್ಗೆ ಗ್ಯಾಂಗ್ ಮೆನ್
ನೇಮಕಾತಿಯ ಟೆಂಡರ್ ಪ್ರಕ್ರಿಯೆಯೇ ಆರಂಭವಾಗದಿರುವುದು ಆಡಳಿತ ವೈಫಲ್ಯ ಎಂದು ಟೀಕಿಸಿದರು.
ಕೆಲವೆಡೆ
ಜೆಸಿಬಿ ತೆರಳಲಾಗದ ಪ್ರದೇಶಗಳಲ್ಲಿ ಹೂಳೆತ್ತದೇ ಕಾಮಗಾರಿ ಮುಂದುವರಿಸಲಾಗುತ್ತಿದೆ. ಇದರಿಂದ ಮಳೆ ಸಂದರ್ಭ ಕೃತಕ
ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಇತ್ತೀಚಿನ ಬೆಂಗಳೂರಿನ ತಡೆಗೋಡೆ ಕುಸಿತದ ಘಟನೆಯನ್ನು ಉಲ್ಲೇಖಿಸಿದ ಅವರು, ಮಂಗಳೂರಿನಲ್ಲಿ ಇಂತಹ ದುರ್ಘಟನೆ ಮರುಕಳಿಸದಂತೆ
ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ
ಉಸ್ತುವಾರಿ ಸಚಿವರು ಈ ಬಗ್ಗೆ ಸಭೆ
ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ
ಜನತೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಕೆ.ಜಿ.ಟಿ.ಟಿ.ಐ. ಕಟ್ಟಡ ಬಿಜೆಪಿ ಸರ್ಕಾರದ ಕೊಡುಗೆ
ಮಂಗಳೂರಿನ
ಕದ್ರಿಹಿಲ್ಸ್ನ ಸರ್ಕಾರಿ ಕೈಗಾರಿಕಾ
ತರಬೇತಿ ಸಂಸ್ಥೆ ಆವರಣದಲ್ಲಿ ₹20.85 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ
ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ) ಕಟ್ಟಡ
ಉದ್ಘಾಟನೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.
ಈ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರವೇ 2019ರಲ್ಲಿ ಜಮೀನು ಒದಗಿಸಿ, ಬಳಿಕ ಅನುದಾನ ಮಂಜೂರು
ಮಾಡಿತ್ತು. 2022ರಲ್ಲಿ ಅಂದಿನ ಸಚಿವ ಡಾ. ಅಶ್ವಥ್
ನಾರಾಯಣ್ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ಹೇಳಿದರು.
ರಾಜಕೀಯ
ಬೇಧವಿಲ್ಲದೆ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕು. ಈಗಿನ ಕಾಂಗ್ರೆಸ್ ಸರ್ಕಾರ
ಅಗತ್ಯ ಉಪಕರಣ ಹಾಗೂ ಮೂಲಸೌಕರ್ಯ ಒದಗಿಸಿ
ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮೂರು
ತಿಂಗಳಿಂದ ಪಿಂಚಣಿ ವಿಳಂಬ: ಸರ್ಕಾರದ ವಿರುದ್ಧ ಆಕ್ರೋಶ
ರಾಜ್ಯದಲ್ಲಿ
ಕಳೆದ ಮೂರು ತಿಂಗಳಿಂದ ವೃದ್ಧಾಪ್ಯ
ವೇತನ, ವಿಧವಾ ವೇತನ, ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ಬಾಕಿಯಿರುವುದಾಗಿ ಆರೋಪಿಸಿದರು.
ಪಿಂಚಣಿಯನ್ನು
ಅವಲಂಬಿಸಿ ಜೀವನ ಸಾಗಿಸುವ ಜನರು
ಸಂಕಷ್ಟದಲ್ಲಿದ್ದು, ಸರ್ಕಾರ ಸಾಧನಾ ಸಮಾವೇಶಗಳಲ್ಲಿ ತೊಡಗಿಕೊಂಡಿದೆ ಎಂದು ಟೀಕಿಸಿದರು. ಸರ್ಕಾರದಿಂದ
ಹಣ ಬಿಡುಗಡೆಯಾಗದ ಕಾರಣ ಅಧಿಕಾರಿಗಳೂ ಕೈಕಟ್ಟಿ
ಕುಳಿತಿದ್ದಾರೆ ಎಂದು ಹೇಳಿದರು.
ಖಜಾನೆ
ಖಾಲಿಯಾಗಿರುವ ಪರಿಣಾಮ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು,
ಬಾಕಿ ಇರುವ ಎಲ್ಲಾ ಪಿಂಚಣಿಗಳನ್ನು
ತಕ್ಷಣ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ
ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ ಎಂ. ರವಿಶಂಕರ್ ಮಿಜಾರ್,
ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೆಲ್, ಸುರೇಖಾ ಎಂ.ಎಸ್ ಹಾಗೂ
ನಿತಿನ್ ಕುಮಾರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


