ನಿರಂತರತೆ: ಯಶೋಮಾರ್ಗದ ಹೆಬ್ಬಾಗಿಲು

Upayuktha
0

 


ಪುರುಷ ಸ್ವಾಮ್ಯದ ಬಯೋಟೆಕ್ ಉದ್ಯಮದಲ್ಲಿ ಅವಕಾಶವನ್ನು ಪಡೆಯಲು ಹಾತೊರೆದು, ಸೂಕ್ತವಾದ ಅವಕಾಶ ದೊರೆಯದೆ ಹೋದಾಗ ತನ್ನದೇ ಆದ ಸ್ವಂತ  ಉದ್ಯಮ ಸಾಮ್ರಾಜ್ಯ ಸ್ಥಾಪಿಸಿದ ಕಿರಣ್ ಮಜುಮ್ದಾರ್ ಶಾ ಅವರ ಬದುಕಿನ ಕಥೆ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾದದ್ದು

 

ಅದು 1970 ಕಾಲ.1953 ರಲ್ಲಿ ಜನಿಸಿದ ದಿಟ್ಟ ಹಾಗೂ ಕ್ರಿಯಾಶೀಲಳಾಗಿದ್ದ  ಯುವತಿ ತೀವ್ರ ಬೇಸರ ಹಾಗೂ ಭ್ರಮನಿರಸನಕ್ಕೆ ಒಳಗಾಗಿದ್ದಳು. ಭಾರತದ ಸಾಂಪ್ರದಾಯಿಕ  ಮಧ್ಯಮ ವರ್ಗದ ಬಹುತೇಕ ಕುಟುಂಬಗಳಂತೆಯೇ ಆಕೆಯ ಕುಟುಂಬವೂ ಒಂದಾಗಿತ್ತು. ವೈದ್ಯಕೀಯ ಓದಬೇಕು ಎಂಬುದು ಆಕೆಯ ಮಹತ್ವಕಾಂಕ್ಷೆಯಾಗಿತ್ತು. ಆದರೆ ವೈದ್ಯಕೀಯ ಓದನ್ನು ಹೊಂದಲು ಅವಶ್ಯಕವಾದ  ಪ್ರವೇಶ ಪರೀಕ್ಷೆಯಲ್ಲಿ ಆಕೆ ವಿಫಲವಾಗಿದ್ದಳು. ಜೀವಶಾಸ್ತ್ರದಲ್ಲಿ ಪದವಿಯನ್ನು ಪಡೆದ ಆಕೆ ವಿದೇಶದಲ್ಲಿ ಇರುವ ಮೆಡಿಕಲ್ ಕಾಲೇಜಿನ ಪ್ರವೇಶಕ್ಕೆ ಅರ್ಜಿ ಹಾಕಿದಳು. ಆದರೆ ಅಲ್ಲೂ ಕೂಡ ಆಕೆ ವಿಫಲವಾದಳು. ವಿದೇಶದಲ್ಲಿಯಾದರೂ ವೈದ್ಯಕೀಯ ಚಿಕಿತ್ಸೆಯ ಓದನ್ನು ಓದಬೇಕು ಎಂಬ ಆಕೆಯ ಕನಸು ಕನಸಾಗಿಯೇ ಉಳಿದು ಮುಂದೆ ಆಕೆ ಆಸ್ಟ್ರೇಲಿಯಾಗೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಫರ್ಮಂಟೇಶನ್ ಸೈನ್ಸ್ ( ಹುದುಗುವಿಕೆ ಶಾಸ್ತ್ರ)ನಲ್ಲಿ ಪಡೆದಳು.

 

ಹಾಗೆ ಆಕೆ ಪಡೆದ ಸ್ನಾತಕೋತ್ತರ ಪದವಿ ಡಿಪ್ಲೋಮಾ ಆಕೆಯ ಬದುಕಿನ ಅತಿ ದೊಡ್ಡ ತಿರುವಿಗೆ ಕಾರಣವಾಯಿತು. ಸೂಕ್ಷ್ಮ ಜೀವಿ ವಿಜ್ಞಾನದತ್ತ ಹರಿದ ಆಕೆಯ ಒಲವು ಆಕೆಯಲ್ಲಿ ಕುದಿಸುವಿಕೆ (brewing) ಹಾಗು ಹುದುಗುವಿಕೆಯ (fermentation) ಆಳವಾದ ಜ್ಞಾನವನ್ನು ಪಡೆಯಲು ಕಾರಣವಾಯಿತು

 

ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಆಕೆ ಮರಳಿ ಭಾರತಕ್ಕೆ ಬಂದಳು. ಇದೀಗ ಆಕೆ ವಿವಿಧ ಕಡೆ ಕೆಲಸ ಕೋರಿ ಹಲವಾರು ಕಂಪನಿಗಳಲ್ಲಿ  ಅರ್ಜಿ ಗುಜರಾಯಿಸಿದಳು. ಆದರೆ ಎಲ್ಲೆಡೆ ದೊರೆತ ಪ್ರತಿಕ್ರಿಯೆಯು ಆಕೆಯ ಎಲ್ಲಾ ಕನಸುಗಳನ್ನು ನುಚ್ಚು ನೂರು ಮಾಡಿತು.

 

ಆಕೆ ಅರ್ಜಿ ಗುಜರಾಯಿಸಿದ ಪ್ರತಿಯೊಂದು ಕಂಪನಿಯೂ ಆಕೆಯ ಜಾಣ್ಮೆ, ಕೌಶಲ್ಯ ಹಾಗೂ ಪದವಿಯ ಕುರಿತು ಅರಿತಿದ್ದರೂ ಕೂಡ ಆಕೆಗೆ ಕೆಲಸ ನೀಡಲು ಒಪ್ಪಲಿಲ್ಲ. ಅದೂ ಅಲ್ಲದೆ ಸಮಯದಲ್ಲಿ ಹುದುಗುವಿಕೆಯನ್ನು ಸರಿಯಾಗಿ ನಿರ್ವಹಿಸುವ ಕೆಲಸಗಳೆಲ್ಲವೂ ಪುರುಷ ಪಾರಮ್ಯವನ್ನು ಹೊಂದಿದ್ದು ದೊಡ್ಡ ದೊಡ್ಡ ಡಿಸ್ಟಿಲರಿ ಕಂಪನಿಗಳು ಆಕೆಗೆ ಕೆಲಸ ಕೊಡಲು ಇನ್ನಿಲ್ಲದಂತೆ ನಿರಾಕರಿಸಿದವು

 

ಯಾವುದೇ ಬ್ರೈವರಿ ಕಂಪನಿಯಲ್ಲೇ ಆಗಲಿ, ಸೂಕ್ತವಾದ  ಮಾಸ್ಟರ್ ಬ್ರೈವರ್ ಕೆಲಸವನ್ನು ಆಕೆಗೆ ನೀಡಿದರೆ ಆಕೆಯೊಂದಿಗೆ ಕೆಲಸ ಮಾಡುವ ಉಳಿದ ಪುರುಷರ ಅಹಮಿಕೆಗೆ ಪೆಟ್ಟಾದೀತು ಎಂಬ ಪುರುಷ ಅಹಂಕಾರಕ್ಕೆ ಪುಷ್ಟಿಕೊಡುವ ಡಿಸ್ಟಿಲರಿ ಕಂಪನಿಗಳ ಭಾವ ಆಕೆಯ ಆತ್ಮ ವಿಶ್ವಾಸ ಮತ್ತು ಭರವಸೆಯ ಮೇಲೆ ತೀವ್ರವಾದ ಹೊಡೆತವನ್ನು ನೀಡಿ ಆಕೆಯ ಕನಸಿಗೆ ಕೊಡಲಿ ಏಟು ನೀಡಿ ತಣ್ಣೀರೆರಚಿತು.

 

ಅಂತಹ ಹಲವಾರು ಸರಣಿ ತಿರಸ್ಕಾರಗಳ ನಂತರ ಆಕೆ ತೀವ್ರವಾದ ಅಸಹಾಯಕತೆ ಮತ್ತು ಭ್ರಮ ನಿರಸನಕ್ಕೆ ಒಳಗಾದಳು.

 

ಬಹಳಷ್ಟು ದಿನಗಳ ಕಾಲ ಇಂತಹ ತಿರಸ್ಕಾರವನ್ನು ಸಹಿಸಿ ಸಾಕಾಗಿ ಆತ್ಮಾವಲೋಕನ ಮಾಡಿಕೊಂಡ ಆಕೆ ಬೇರೆ ಕಂಪನಿಗಳವರು ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದಾದರೆ ನಾನು ನನ್ನದೇ ಆದ ಕಂಪನಿಯನ್ನು ಏಕೆ ಆರಂಭಿಸಬಾರದು ಎಂದು ತನಗೆ ತಾನೇ  ಪ್ರಶ್ನಿಸಿಕೊಂಡಳು.ಎಲ್ಲಾ ಬ್ರೈವರಿ ಕಂಪನಿಗಳ ವಿರುದ್ಧ ಹೋರಾಡುವದರ ಜೊತೆಗೆ ನಾನು ನನಗೆ ಕರಗತವಾದ ಸೂಕ್ಷ್ಮಜೀವಿ ಶಾಸ್ತ್ರದ ಸಂಪೂರ್ಣ ಜ್ಞಾನದ ಲಾಭವನ್ನು ಎಲ್ಲರಿಗೂ  ಕೈಗೆಟಕುವ ದರದಲ್ಲಿ ಕೊಡಲು ಪ್ರಯತ್ನಿಸುವೆ ಎಂದು ಯೋಚಿಸಿದ ಆಕೆ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದಳು.

 

ಆರಂಭದಲ್ಲಿ ಆಕೆಯ ಕಾರ್ಯಕ್ಕೆ ಸಾಕಷ್ಟು ವ್ಯಂಗ್ಯ ಹಾಗೂ ತಮಾಶೆಯ ಪ್ರತಿಕ್ರಿಯೆಗಳು ಬಂದು ತಾಕಿದವು. 70 ದಶಕದಲ್ಲಿ ಹೆಣ್ಣು ಮಗಳೊಬ್ಬಳು ರೀತಿ ತನ್ನದೇ ಒಂದು ಉದ್ಯಮವನ್ನು ಆರಂಭಿಸಲು ಹೋದಾಗ ಇದು ಸಹಜವಾಗಿಯೇ ಬರುವ ಟೀಕೆ ಎಂಬುದನ್ನು ಆಕೆ ಈಗಾಗಲೇ ಅರಿತಿದ್ದಳು. ಹಲವಾರು ವರ್ಷಗಳ ಕಾಲದ ಹೋರಾಟದ ನಂತರ ಸರಿಸುಮಾರು 1978 ರಲ್ಲಿ ಆಕೆ ತನ್ನದೇ ಬಾಡಿಗೆ ಮನೆಯ ಗ್ಯಾರೇಜಿನಲ್ಲಿ ಆರೋಗ್ಯದ ಕಾಳಜಿಯನ್ನು ವಹಿಸುವ ಔಷಧಗಳನ್ನು ತಯಾರಿಸುವ ನಿಟ್ಟಿನಲ್ಲಿ ಬ್ರಿವಿಂಗ್ ಮತ್ತು ಮೈಕ್ರೋಬಿಯಲ್ ಕಂಪನಿಯನ್ನು ಆರಂಭಿಸಿದಳು. ಅಂದು ಆಕೆಯ ಹತಾಶೆ, ನೋವು ಅವಮಾನಗಳಿಗೆ ಉತ್ತರವಾಗಿ ಆರಂಭವಾದ ಅಂದಿನ ಕಂಪನಿ ಇದೀಗ ಭಾರತ ದೇಶದ ಅತಿ ದೊಡ್ಡ  ಬಯೋಕಾನ್ ಕಂಪನಿಯಾಗಿ ತನ್ನ ಹೆಸರನ್ನು ಉಳಿಸಿಕೊಂಡಿದೆ. ಜಾಗತಿಕವಾಗಿ ಐದನೇ ಅತಿ ದೊಡ್ಡ ಬಯೋಟೆಕ್ ಕಂಪನಿಯಾಗಿ ಹೊರಹೊಮ್ಮಿದೆ. ಕಂಪನಿಯ ಮಾಲೀಕಳಾದ ಕಿರಣ್ ಮಜುಂದರ್ ಶಾ ಅವರ ಹೆಸರಿನ ಮುಂದೆ ಬಯೋಕಾನ್ ಎಂಬ ಕಂಪನಿಯ ಹೆಸರನ್ನು ಜೋಡಿಸುವ ನಿಟ್ಟಿನಲ್ಲಿ ಅತ್ಯದ್ಭುತ ಯಶಸ್ಸನ್ನು ಕಂಡಿದೆ.

 

ಇದೀಗ ತನ್ನ 70 ಇಳಿ ವಯಸ್ಸಿನಲ್ಲಿಯೂ ಕೂಡ ಆಕೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು ಆಕೆಯ ಜೀವನೋತ್ಸಾಹ ಇತರರಲ್ಲಿ ಪ್ರೇರೇಪಣೆಯನ್ನು ಉಂಟುಮಾಡುತ್ತದೆ.

 

ನೋಡಿದಿರಾ ಸ್ನೇಹಿತರೇ, ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ನೂರೆಂಟು ಸವಾಲುಗಳನ್ನು ಎದುರಿಸಿದ ಕಥೆಗಳಿರುತ್ತವೆ. ನೋವು, ನಿರಾಶೆ, ಅವಮಾನಗಳ ದಾಳಿಯನ್ನು ಅವರು ಸಹಿಸಿರುತ್ತಾರೆಹಲವಾರು ಬಾರಿ ಇನ್ನಿಲ್ಲದಂತೆ ನೆಲ ಕಚ್ಚಿರುತ್ತಾರೆ. ಆದರೆ ಹಾಗೆ ಪ್ರತಿ ಬಾರಿ ಸೋತಾಗಲು ಕೂಡ ಫೀನಿಕ್ಸ ಹಕ್ಕಿಯಂತೆ ಛಲವನ್ನು ತುಂಬಿಕೊಂಡು ಮತ್ತೆ ಹೋರಾಡಿ ತಮ್ಮ ನಿರಂತರ ಪ್ರಯತ್ನದ ಮೂಲಕ ಗೆಲುವಿನ ಮನೆಯ ಬಾಗಿಲನ್ನು ತಟ್ಟುತ್ತಾರೆ.

 

ನಿರಂತರತೆ ಎಂಬುದು ಯಶಸ್ಸಿನ ನಿಜವಾದ ಕೀಲಿ ಕೈ. ನಿಮಗೆ ಗೊತ್ತಿರಬಹುದು. ನದಿ, ಹೊಳೆ, ಹಳ್ಳಗಳಲ್ಲಿರುವ ಬೃಹದಾಕಾರದ ಬಂಡೆಗಲ್ಲುಗಳ ಸವೆಯುವಿಕೆಗೆ ಕಾರಣ ಅವುಗಳನ್ನು ನಿರಂತರವಾಗಿ ತಾಕುವ ನೀರಿನ  ಹೊಡೆತವೇ ಎಂದು. ಸತತ ಪ್ರಯತ್ನ ಸಾಧನೆಯ ಹಾದಿಯ ಹೆಬ್ಬಾಗಿಲು ಅಲ್ಲವೇ?

 

ಇಂಗ್ಲೀಷ್ ಖ್ಯಾತ ಕವಯತ್ರಿ ಶೆರಿಲ್ ಬರೆದ 'ಕಮ್ ಇನ್ ಔಟ್ ಆಫ್ ದಿ ರೈನ್’, ಎಂಬ ಕವನ ಆಕೆ ಕಿರಣ್ ಮಜುಮ್ದಾರ್ ಶಾ ಅವರನ್ನು ಕುರಿತೇ ಬರೆದದ್ದು ಎಂಬಂತೆ ಭಾಸವಾಗುತ್ತದೆ... ಇದು ಉಳಿದ ಎಲ್ಲರಿಗೂ ಅನ್ವಯವಾಗುತ್ತದೆಯಾದರೂ ಸರಿಸುಮಾರು ಐದು ದಶಕಗಳ ಹಿಂದೆ ತನ್ನ ಕನಸುಗಳನ್ನು ಸಾಕಾರಗೊಳಿಸಲು ಅತ್ಯಂತ ದಿಟ್ಟ ನಿರ್ಧಾರವನ್ನು ಕೈಗೊಂಡು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ತಮ್ಮ ಛಲ ಹಾಗೂ ನಿರಂತರ ಪ್ರಯತ್ನದ ಮೂಲಕ ಜಾಗತಿಕವಾಗಿ ಮನ್ನಣೆ ಗಳಿಸಿ ಯಶಸ್ಸಿನ ಕಿರೀಟವನ್ನು ತೊಟ್ಟವರು ಕಿರಣ್ ಮಜಮ್ದಾರ್ ಶಾ ಪ್ರಶ್ನಾತೀತವಾಗಿ ಪ್ರಶಂಸನಾರ್ಹರು.

 

 ನಿನ್ನ ಕನಸುಗಳನ್ನು ಹಿಂಬಾಲಿಸು  

 ಧೈರ್ಯ ನಿನ್ನೊಳಗೆ ತನ್ನಿಂತಾನೆ ಕಾಣಸಿಗುತ್ತದೆ 

 ನಿನ್ನ ಆತ್ಮ ಬಲ ನಿನ್ನನ್ನು ಗಟ್ಟಿಗೊಳಿಸುತ್ತದೆ 

 ಪ್ರತಿ ಬಾರಿ ನೀನು ಕೆಳಗೆ ಬಿದ್ದಾಗಲೂ ಕೂಡ 

ಮತ್ತೆ ನೀನಾಗಿಯೇ  ಎದ್ದು ನಿಲ್ಲು

ಬಾರಿ ಖಂಡಿತವಾಗಿಯೂ ನೀನು ವಿಫಲವಾಗುವುದಿಲ್ಲ 

 ಪ್ರತಿ ಬಾರಿಯೂ ನಿನ್ನಿಂದಾದಷ್ಟು ಅತ್ಯುತ್ತಮವಾದುದನ್ನು ನೀಡಲು ಪ್ರಯತ್ನಿಸುವ  

ನಿನ್ನ ನಿರಂತರ ಪ್ರಯತ್ನಶೀಲತೆಯು ನೀನು 

ಏನಾಗಬೇಕೆಂದು ಬಯಸಿದ್ದೆಯೋ ಅದನ್ನು ಈಡೇರಿಸುತ್ತದೆ 

 

ಎಂಬ ಶೆರಿಲ್ ಕವನ ಕೇವಲ ಕಿರಣ್ ಮಜುಮ್ದಾರ್ ಶಾ ಅವರಿಗೆ ಮಾತ್ರವಲ್ಲ ಅದು ನಮ್ಮ ನಿಮ್ಮೆಲ್ಲರ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿ ಬದುಕಿನಲ್ಲಿ ಬಂದೊದಗುವ ಎಲ್ಲಾ ಸವಾಲುಗಳನ್ನು ಎದುರಿಸಲು ಸಶಕ್ತವಾಗಿಸಬೇಕು.

 

 ಪ್ರಯತ್ನ ಶೀಲತೆಯನ್ನು ಹೆಚ್ಚಿಸಬೇಕು. ಸೋಲುವುದು ಸಹಜ,ಆದರೆ ಸೋತೆವೆಂದು ಕೈ ಚೆಲ್ಲುವುದು ಬೇಡ. ಮತ್ತೆ ಎದ್ದು ನಿಂತು ಹೋರಾಡಿ ಸೋಲನ್ನು ಹಿಮ್ಮೆಟ್ಟಿಸಿ ಗೆಲುವಿನ ಪತಾಕೆಯನ್ನು ಹಿಡಿದು ಜಗತ್ತಿಗೆ ಹೇಳೋಣ 'ನಾವು ಗೆದ್ದೇ ಗೆಲ್ತೀವಿ ಒಂದು ದಿನ ' ಎಂದು.

 

 ವೀಣಾ ಹೇಮಂತಗೌಡ ಪಾಟೀಲ್

ಮುಂಡರಗಿ ಗದಗ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top