ಕಾಂಗ್ರೆಸ್ಸಿಗೆ ಕೇಸರಿ ಭಯ ಆರಂಭ: ಡಾ. ಉಮೇಶ್ ಜಾಧವ್

Upayuktha
0

ಶಾಲಾ ಸಮವಸ್ತ್ರ ನೀತಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ- ಆಕ್ರೋಶ 




ಕಲಬುರಗಿ: ರಾಜ್ಯ ಸರ್ಕಾರದ ನೂತನ ಶಾಲಾ ಸಮವಸ್ತ್ರ ನೀತಿಯು ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ತರಾತುರಿಯಲ್ಲಿ ಕ್ಯಾಬಿನೆಟ್‌ನಲ್ಲಿ ತಗೊಂಡಿರೋ ತೀರ್ಮಾನವಾಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ಗೆ ಕೇಸರಿ ಕಂಡರೆ ಭಯವಾಗುತ್ತಿದೆ ಎಂದು ಅವರು ಇದೇ ವೇಳೆ ಲೇವಡಿ ಮಾಡಿದರು.


ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಸಮವಸ್ತ್ರ ನೀತಿಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕದ ಹಿನ್ನೆಲೆಯಲ್ಲಿ, ಈಗ ಅವರನ್ನು ಓಲೈಸುವುದಕ್ಕಾಗಿಯೇ ತರಾತುರಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ನೀತಿಯನ್ನು ಕ್ಯಾಬಿನೆಟ್‌ನಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಆರೋಪಿಸಿದರು.


ಹಿಂದೆ ಬೊಮ್ಮಾಯಿ ಸರ್ಕಾರ ಜಾರಿ ಮಾಡಿದ್ದ ಶಾಲಾ ಸಮವಸ್ತ್ರ ನೀತಿಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿತ್ತು. ಅದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ಅಲ್ಲಿ ವಿಭಜನೆಯ ತೀರ್ಪು ಬಂದಿರುವುದರಿಂದ ಪ್ರಕರಣವು ಸದ್ಯ ಸುಪ್ರೀಂಕೋರ್ಟ್‌ನಲ್ಲಿದೆ. ಈ ವಿವಾದ ಇನ್ನೂ ನ್ಯಾಯಾಲಯದಲ್ಲಿ ಇರುವಾಗಲೇ ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆಗಾಗಿ ಈ ಸಮವಸ್ತ್ರ ನೀತಿಯನ್ನು ಜಾರಿ ಮಾಡಿ ವಿದ್ಯಾರ್ಥಿ ಸಮೂಹದಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದ ಅವರು, ಸುಪ್ರೀಂ ಕೋರ್ಟ್ ಆದೇಶ ಬರುವವರೆಗೆ ಹೊಸ ಶಾಲಾ ಸಮವಸ್ತ್ರ ನೀತಿಯನ್ನು ಅನುಷ್ಠಾನ ಮಾಡಬಾರದು ಎಂದು ಆಗ್ರಹಿಸಿದರು.


ಕಾಂಗ್ರೆಸ್‌ನ ಇಂತಹ ತುಷ್ಟೀಕರಣ ನೀತಿಯಿಂದಾಗಿಯೇ ದೇಶಾದ್ಯಂತ ಆ ಪಕ್ಷವು ನಾಮಾಶೇಷವಾಗುತ್ತಿದ್ದು, ಇತ್ತೀಚಿನ ಚುನಾವಣೆಗಳೇ ಇದಕ್ಕೆ ಸಾಕ್ಷಿಯಾಗಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ನೀತಿಯೊಂದಿಗೆ ಭಾರತದ 140 ಕೋಟಿ ಜನರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಎಲ್ಲೆಡೆ ಬಿಜೆಪಿ ಜಯಭೇರಿ ಬಾರಿಸುತ್ತಿದೆ ಎಂದ ಅವರು, ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕರು ಭೂಮಿಯನ್ನು ಒತ್ತುವರಿ ಮಾಡಿ ಅಲ್ಪಸಂಖ್ಯಾತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಅಶೋಕ್ ಬಗಲಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ್ ರಾಯಕೋಡ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top