ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ : ಟಿ. ರಘು ಮೂರ್ತಿ

Upayuktha
0

 


      ಉಡುಪಿ: ಉಡುಪಿ ನಗರ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಯ ಪ್ರಗತಿಯ ವಿಳಂಬದಿಂ ಸಾರ್ವಜನಿಕರಿಗೆ ತೊಂದರೆಗಳು ಉಂಟಾಗುತ್ತವೆ. ಇವುಗಳನ್ನು ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸಿ ಕುಡಿಯುವ ನೀರನ್ನು ಒದಗಿಸಬೇಕು ಎಂದು ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಅಧ್ಯಕ್ಷರಾದ ಟಿ. ರಘು ಮೂರ್ತಿ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


     ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವತಿಯಿಂದ ನಡೆಸಲಾದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


   ಸರಕಾರ ಜನಸಾಮಾನ್ಯರಿಗೆ ಅಗತ್ಯ ವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಅನೇಕ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಕೈಗೊಳ್ಳುತ್ತದೆ. ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ವಿಳಂಬವಿಲ್ಲದೆ ಪೂರ್ಣಗೊಳಿಸಿ, ಜನಸಾಮಾನ್ಯರ ಸದುಪಯೋಗಕ್ಕೆ ಅವಕಾಶ ಮಾಡಿಕೊಡಬೇಕು. ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಪ್ರತಿದಿನ 45 ಎಂ.ಎಲ್.ಡಿ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದರು.


    ಉಡುಪಿ ನಗರಕ್ಕೆ ಪ್ರಸ್ತುತ ಬಜೆ ಹಾಗೂ ಹಾಲಾಡಿಯ ಕೆ.ಎನ್.ಎನ್.ಎಲ್ ನಾಲೆಯಿಂದ ತಾತ್ಕಾಲಿಕವಾಗಿ ನೀರು ನೀಡಲಾಗುತ್ತಿದೆ. ಭರತ್ಕಲ್ ಜಾಕ್ವೆಲ್ನಿಂದ ಹಾಲಾಡಿ ನೀರು ಶುದ್ದೀಕರಣ ಘಟಕದವರೆಗೆ 3 ಕಿ.ಮೀ ಪೈಪ್ಲೈನ್ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿಯನ್ನು ಶೀಘ್ರದಲ್ಲಿಯೇ ಮುಕ್ತಾಯಗೊಳಿಸಬೇಕು ಎಂದರು.


   ಕಾಮಗಾರಿಯ ವಿಳಂಬದಿಂದಾಗಿ ಯೋಜನಾ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆ. ದರ ಪರಿಷ್ಕರಣೆಯಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ವಸ್ತುಗಳಿಗೆ ಮಾತ್ರ ಹೆಚ್ಚುವರಿ ನೀಡಲು ಸಾಧ್ಯ. ಕಾಮಗಾರಿಯ ವಿಳಂಬವಾದಾಗ ಹೆಚ್ಚುವರಿ ಅನುದಾನದ ಅವಶ್ಯಕತೆಯು ಉಂಟಾಗುತ್ತದೆ ಇದಕ್ಕೆ ಆಸ್ಪದ ನೀಡಬಾರದು ಎಂದರು.


    ಹಾಲಾಡಿ ನೀರು ಶುದ್ದೀಕರಣ ಘಟಕದ ಪಕ್ಕದಲ್ಲಿರುವ ವಾರಾಹಿ ಎಡದಂಡೆ ಕಾಲುವೆ ಮೂಲಕ ಕೆ.ಎನ್.ಎನ್.ಎಲ್ ಇಲಾಖೆಯವರು ಕರಾರು ಒಪ್ಪಂದದಂತೆ ಉಡುಪಿ ನಗರ ಹಾಗೂ ಇತರೆ ಗ್ರಾಮಗಳಿಗೆ ಡಿಸೆಂಬರ್ ನಿಂದ ಜೂನ್ ಅಂತ್ಯದವರೆಗೆ ನೀರು ಸರಬರಾಜು ಮಾಡಲಿದ್ದಾರೆ. ಕಾಮಗಾರಿ ಮುಗಿಯುವವರೆಗೆ ವರ್ಷಪೂರ್ತಿ ನೀಡಲು ಜಲ ಸಂಪನ್ಮೂಲ ಇಲಾಖೆಯಿಂದ ಅನುಮತಿಯನ್ನು ಪಡೆಯಬೇಕು ಎಂದ ಅವರು, ಇತರೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಕಮಿಟಿಯ ಗಮನಕ್ಕೆ ತರಬೇಕು ಎಂದರು.


    ಕುಡಿಯುವ ನೀರು ಪೈಪ್ಲೈನ್ ಕಾಮಗಾರಿಯು ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಬಾಕಿ ಇರುವ ಕಾಮಗಾರಿಯನ್ನ ರಾಷ್ಟ್ರೀ ಹೆದ್ದಾರಿ ಪ್ರಾಧಿಕಾರದೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಂಡು ಪೂರ್ಣಗೊಳಿಸಬೇಕೆಂದರು.


    ಸಮಿತಿಯ ಸದಸ್ಯರಾದ ಐವನ್ ಡಿ ಸೋಜಾ ಮಾತನಾಡಿ, ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸುವ ಹಾಗೂ ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು 5 ರಿಂದ 6 ವಷ ತೆಗೆದುಕೊಂಡರೆ ಜನರಿಗೆ ಸಮಸ್ಯೆಗಳು ಉಂಟಾಗುತ್ತವೆ. ಕಾಮಗಾರಿಯನ್ನು ಗಂಭೀರವಾಗಿ ಪರಿಗಣಿಸಿ, ಅಡಚಣೆಗಳನ್ನು ಬಗೆಹರಿಸಿ, ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದರು.


      ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ 270 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಹಿಂದೆ 2021 ರಲ್ಲಿ 330 ಕೋಟಿ ರೂ. ಅಂದಾಜು ವೆಚ್ಚದ ಯೋಜನಾ ವರದಿಯನ್ನು ಕೆ.ಯು.ಡಬ್ಲ್ಯೂ.ಎಸ್ & ಡಿ.ಬಿ ಮೂಲಕ ತಯಾರಿಸಿ, ನಗರಸಭೆಯ ಮುಖಾಂತರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ವ್ಯಾಪ್ತಿಯಲ್ಲಿ ಗುಡ್ಡ-ಗಾಡು, ತಗ್ಗು ಪ್ರದೇಶವಾದ್ದರಿಂದ ಅಂದಾಜು ವೆಚ್ಚವು ಜಾಸ್ತಿ ಇದ್ದ ಕಾರಣ ಅನುಮೋದನೆ ದೊರಕಿರುವುದಿಲ್ಲ. ಹೊಸದಾಗಿ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಸಮಿತಿಯ ಗಮನಕ್ಕೆ ತಂದರು.


   ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಜಿ.ಕೆ. ವೆಂಕಟಶಿವಾರೆಡ್ಡಿ, ಎಂ. ಕೃಷ್ಣಪ್ಪ, ಶಾಂತನಗೌಡ ಡಿ.ಜಿ, ಎಸ್. ಮುನಿರಾಜು, ಟಿ.ಎನ್ ಜವರಾಯ ಗೌಡ, ಸಮಿತಿಯ ಉಪ ಕಾರ್ಯದರ್ಶಿಗಳಾದ ಹರೀಶ ಮತ್ತು ಶ್ರೀ ವಾತ್ಸವ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top