414.16 ಕೋ ರೂ. ವೆಚ್ಚದ ನಿರ್ಮಾಣ ಯೋಜನೆ
ಮಂಗಳೂರು: ರಾ. ಹೆ.66 ರಲ್ಲಿ
ಬೈಕಂಪಾಡಿಯಿಂದ KIOCL ಜಂಕ್ಷನ್ ವರೆಗೆ ಒಟ್ಟು 414.16 ಕೋಟಿ ರೂ. ವೆಚ್ಚದಲ್ಲಿ
ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ ಎಂದು ದಕ್ಷಿಣ ಕನ್ನಡ
ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ನವ ಮಂಗಳೂರು ಬಂದರಿಗೆ ನೇರ ಸಂಪರ್ಕ ಸುಧಾರಿಸುವ
ಒಟ್ಟು 3.075 ಕಿ.ಮೀ. ಉದ್ದದ
ರಸ್ತೆ ಅಭಿವೃದ್ದಿ ಯೋಜನೆ ಇದಾಗಿದ್ದು, ಈ ಪೈಕಿ 1.520 ಮೀ.
ಉದ್ದದ ಅತ್ಯಾಧುನಿಕ 6 ಪಥದ ಎಲಿವೇಟೆಡ್ ಫ್ಲೈಓವರ್
ನಿರ್ಮಾಣಗೊಳ್ಳಲಿದೆ.
ಈ ಬೃಹತ್ ಯೋಜನೆಯನ್ನು ಇಪಿಸಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರೊಂದಿಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ಒಟ್ಟು 5.825 ಕಿ.ಮೀ. ಉದ್ದದ
ಸರ್ವಿಸ್ ರಸ್ತೆ ನಿರ್ಮಿಸಲಾಗುವುದು. ಈ ಯೋಜನೆಯ ಯಶಸ್ವಿ
ಅನುಷ್ಠಾನಕ್ಕಾಗಿ ನವ ಮಂಗಳೂರು ಬಂದರು
ಪ್ರಾಧಿಕಾರವು ಅಗತ್ಯವಿರುವ ಹೆಚ್ಚುವರಿ ಭೂಮಿ ಹಾಗೂ ಆರ್ಥಿಕ
ಧನಸಹಾಯವನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಒದಗಿಸಲಿದೆ.
ರಾ. ಹೆ. 66ರಲ್ಲಿ ಈ ಭಾಗದ ರಸ್ತೆ
ನವ ಮಂಗಳೂರು ಬಂದರಿಗೆ ನೇರ ಸಂಪರ್ಕ ಕಲ್ಪಿಸುವಲ್ಲಿ
ಹಾಗೂ ರಫ್ತು- ಆಮದು ಸರಕುಗಳ ಸಾಗಣೆಗೆ
ಅತ್ಯಂತ ನಿರ್ಣಾಯಕ ಕಾರಿಡಾರ್ ಆಗಿ ಕಾರ್ಯನಿರ್ವಹಿಸುತ್ತಿದೆ. ಈ ನೂತನ
ಯೋಜನೆಯು ಹೆದ್ದಾರಿ ಸಂಚಾರ ಹಾಗೂ ಸ್ಥಳೀಯ ವಾಹನಗಳ
ನಡುವಿನ ಓಡಾಟ ಪ್ರತ್ಯೇಕಿಸಿ, ಸುಗಮ
ಸಂಚಾರ ಹಾಗೂ ರಸ್ತೆ ಸುರಕ್ಷತೆ
ಅನುಕೂಲ ಕಲ್ಪಿಸಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶ ಮತ್ತು KIOCL ವಲಯದ ರಸ್ತೆ ಅಭಿವೃದ್ದಿ
ಯೋಜನೆ ಜಿಲ್ಲೆಯ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಮುಖ ಪ್ರೇರಕ ಶಕ್ತಿಯಾಗಲಿದೆ. ಕರಾವಳಿ ಭಾಗದ ಒಟ್ಟಾರೆ ರಸ್ತೆ
ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರೊಂದಿಗೆ, ಭವಿಷ್ಯದ ವಾಹನ ದಟ್ಟಣೆಯ ಅಗತ್ಯತೆಗಳನ್ನು
ಪೂರೈಸಲು ಮತ್ತು ದೀರ್ಘಕಾಲೀನ ಮೂಲಸೌಕರ್ಯ ಪ್ರಯೋಜನಗಳನ್ನು ಒದಗಿಸಲು ಇದು ಸಹಕಾರಿಯಾಗಲಿದೆ.
ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ
ಆರ್ಥಿಕ ನಾಡಿಮಿಡಿತವಾಗಿರುವ ಈ ರಸ್ತೆಯ ಮೇಲ್ದರ್ಜೆಗೇರಿಸಲು
ಅನುಮೋದನೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ
ಸರ್ಕಾರ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ,
ಕೇಂದ್ರ ಬಂದರು ಹಡಗು ಮತ್ತು ಜಲಮಾರ್ಗಗಳ
ಸಚಿವ ಸರ್ಬಾನಂದ ಸೋನೋವಾಲ್ ಹಾಗೂ ಯೋಜನೆಗೆ ಕೈಜೋಡಿಸಿರುವ
ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಜಿಲ್ಲೆಯ ಜನತೆಯ ಪರವಾಗಿ ಸಂಸದ ಕ್ಯಾ. ಬ್ರಿಜೇಶ್
ಚೌಟ ಕೃತಜ್ಞತೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಎನ್ಎಂಪಿಟಿ ಭಾಗದ ಈ ರಸ್ತೆಯು 'ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್' ವ್ಯಾಪ್ತಿಯಲ್ಲಿದ್ದು, ನಿರ್ದಿಷ್ಟ ಏಜೆನ್ಸಿ ಇಲ್ಲದಿರುವುದು ಹಾಗೂ ನಿಧಿಯ ಕೊರತೆಯಿಂದಾಗಿ ಹೆದ್ದಾರಿ ಅಭಿವೃದ್ಧಿಗೆ ತೀವ್ರ ತಾಂತ್ರಿಕ ಸವಾಲುಗಳು ಎದುರಾಗಿದ್ದವು. ಈ ಬಗ್ಗೆ ಸತತ ಪ್ರಯತ್ನ ನಡೆಸಿ, ಎದುರಾಗಿದ್ದ ಎಲ್ಲಾ ಅಡಚಣೆಗಳನ್ನು ಬಗೆಹರಿಸಿ ಪೋರ್ಟ್ ವ್ಯಾಪ್ತಿಯ ರಸ್ತೆಯನ್ನು ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಲ್ಲಿ ನಾವು ಈಗಾಗಲೇ ಯಶಸ್ವಿಯಾಗಿದ್ದೆವು.
ಇದರ ಮುಂದುವರಿದ ಭಾಗವಾಗಿ, ರಾ.ಹೆ.66 ರ ಬೈಕಂಪಾಡಿ ಮತ್ತು ಕೂಳೂರು ಜಂಕ್ಷನ್ ಬಳಿ ಈಗಾಗಲೇ ರೂ. 11.63 ಕೋಟಿ ವೆಚ್ಚದ ಅಂಡರ್ಪಾಸ್ ನಿರ್ಮಾಣ ಯೋಜನೆಗೆ ಅನುಮೋದನೆ ದೊರೆತು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಬೆನ್ನಲ್ಲೇ, ಇದೀಗ ರೂ. 414.16 ಕೋಟಿ ವೆಚ್ಚದ ಎಲಿವೇಟೆಡ್ ಫ್ಲೈಓವರ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿರುವುದರಿಂದ, ನಮ್ಮ ಬಂದರು ವ್ಯಾಪ್ತಿಯ ಹೆದ್ದಾರಿ ವಲಯ ಸಂಪೂರ್ಣವಾಗಿ ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಲಿದೆ. ಈ ಅಭಿವೃದ್ಧಿ ಕಾರಿಡಾರ್ನಿಂದಾಗಿ ನವ ಮಂಗಳೂರು ಬಂದರಿನ ಸರಕು ಸಾಗಣೆ ವಾಹನಗಳ ಸಂಚಾರ ಸುಗಮಗೊಳ್ಳುವುದರ ಜೊತೆಗೆ, ಸ್ಥಳೀಯ ಸಾರ್ವಜನಿಕರ ದೈನಂದಿನ ಓಡಾಟ ಮತ್ತು ಸುರಕ್ಷತೆಗೂ ಅತ್ಯಾಧುನಿಕ ಹಾಗೂ ದೀರ್ಘಕಾಲೀನ ಮೂಲಸೌಕರ್ಯ ಸೌಲಭ್ಯ ದೊರೆತಂತಾಗಲಿದೆ.
- ಸಂಸದ ಕ್ಯಾ. ಬ್ರಿಜೇಶ್ ಚೌಟ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


