ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವಲಯದಲ್ಲಿ ಇಂದು ಹಲವಾರು ಜ್ವಲಂತ ಸಮಸ್ಯೆಗಳಿವೆ. ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ, ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನಹರಿಸಬೇಕಾದ ಶಿಕ್ಷಣ ಇಲಾಖೆಯು, ಕೇವಲ ಫಲಿತಾಂಶದ ಅಂಕಿಅಂಶಗಳನ್ನು ಹೆಚ್ಚಿಸಲು ಮುಂದಾಗಿರುವುದು ವಿಷಾದನೀಯ.
ವಿದ್ಯಾರ್ಥಿಗಳ ತೇರ್ಗಡೆಯ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಕನಿಷ್ಠ ಅಂಕಗಳನ್ನು 35 ರಿಂದ 33ಕ್ಕೆ ಇಳಿಸಲಾಗಿದೆ. "ಹಿಂದಿನ ಸರ್ಕಾರಕ್ಕಿಂತ ನಮ್ಮ ಅವಧಿಯಲ್ಲಿ ಗರಿಷ್ಠ ವಿದ್ಯಾರ್ಥಿಗಳು ಪಾಸಾಗಿದ್ದಾರೆ" ಎಂದು ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತಿದೆ. ಒಬ್ಬ ವಿದ್ಯಾರ್ಥಿ 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕೇವಲ 13 ಅಂಕ ಗಳಿಸಿದರೂ, ಉಳಿದ 20 ಅಂಕಗಳ ಆಂತರಿಕ ಮೌಲ್ಯಮಾಪನದಲ್ಲಿ ಶಾಲೆಯವರು ಪೂರ್ಣ ಅಂಕಗಳನ್ನು ನೀಡಿ ಹೇಗಾದರೂ ಮಾಡಿ ಪಾಸು ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಶಾಲಾ ಫಲಿತಾಂಶ ಕುಸಿದರೆ ತಮಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಶಿಕ್ಷಕರು ಅನಿವಾರ್ಯವಾಗಿ ಅಂಕಗಳನ್ನು ನೀಡುತ್ತಿದ್ದು, ಇದು ಸಚಿವರ 'ಆತ್ಮತೃಪ್ತಿ'ಗೆ ಕಾರಣವಾಗುತ್ತಿದೆಯೇ ಹೊರತು ಶೈಕ್ಷಣಿಕ ಪ್ರಗತಿಗಲ್ಲ.
ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಶಿಕ್ಷಣ ಕ್ಷೇತ್ರದಲ್ಲಿ 'ಸಾಮಾಜಿಕ-ಧಾರ್ಮಿಕ ನ್ಯಾಯ' ನೀಡುವ ನೆಪದಲ್ಲಿ ಶೈಕ್ಷಣಿಕ ವಲಯದ ನೆಮ್ಮದಿಯನ್ನು ಕೆಡಿಸಲು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ ಎನಿಸುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ರಾಜ್ಯದ ಶಾಂತಿ-ನೆಮ್ಮದಿಯನ್ನು ಕಸಿದುಕೊಂಡ 'ಹಿಜಾಬ್ vs ಕೇಸರಿ ಶಾಲು' ವಿವಾದ ಇಡೀ ವಿದ್ಯಾರ್ಥಿ ಸಮುದಾಯವನ್ನೇ ಇಬ್ಭಾಗ ಮಾಡಿ, ಶಾಲಾ-ಕಾಲೇಜುಗಳನ್ನು ರಾಜಕೀಯ ರಣರಂಗವನ್ನಾಗಿ ಮಾಡಿದ್ದು ಇನ್ನು ಹಸಿರಾಗಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಬೇಕೋ ಬೇಡವೋ? ಧಾರ್ಮಿಕ ಉಡುಗೆ ತೊಟ್ಟು ಶಾಲೆಗೆ ಬರಬಹುದೇ? ಎಂಬ ವಿಷಯ ನ್ಯಾಯಾಂಗದ ಮೆಟ್ಟಿಲೇರಿದಾಗ, ಹೈಕೋರ್ಟ್ ಸಮವಸ್ತ್ರದ ವಿಚಾರವನ್ನು ಆಯಾಯ ಶಾಲಾ ಆಡಳಿತ ಮಂಡಳಿಗೆ ಬಿಟ್ಟ ವಿಚಾರ ಎಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣವು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಿಂತಿದೆ.
ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸರ್ಕಾರ ಮತ್ತು ಶಾಲೆಗಳು ಸರ್ವ ಧರ್ಮೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರಿಗೂ ಒಪ್ಪುವಂತಹ ಸಮವಸ್ತ್ರದ ಕಡೆಗೆ ಒಲವು ತೋರುತ್ತಿದ್ದವು. ಶೈಕ್ಷಣಿಕ ವಾತಾವರಣ ಮತ್ತೆ ಹಳಿಗೆ ಬರುತ್ತಿದೆ ಎನ್ನುವಾಗಲೇ ಶಿಕ್ಷಣ ಸಚಿವರು ಮತ್ತೆ ಹಿಜಾಬ್ ವಿಷಯವನ್ನು ಮುನ್ನೆಲೆಗೆ ತಂದು ಹೊಸ ವೇದಿಕೆ ಸಜ್ಜುಗೊಳಿಸಲು ಮುಂದಾಗುತ್ತಿರುವುದು ಸ್ಪಷ್ಟವಾಗಿದೆ.
ಜನಿವಾರದ ವಿಷಯವನ್ನು ಮುಂದಿಟ್ಟುಕೊಂಡು ಹಿಜಾಬ್‌ಗೆ ನ್ಯಾಯ ಕೊಡಲು ಅವರು ಹೊರಟಿದ್ದಾರೆ. ಆದರೆ ಜನಿವಾರವು ಸಮವಸ್ತ್ರದ ಒಳಗೆ ಯಾರಿಗೂ ಕಾಣದಂತೆ ಇರುತ್ತದೆ, ಅದು ಸಮವಸ್ತ್ರದ ನಿಯಮಕ್ಕೆ ಅಡ್ಡಿ ಮಾಡುವುದಿಲ್ಲ. ಆದರೆ ಹಿಜಾಬ್‌ಗೆ ಅಧಿಕೃತವಾಗಿ ಒಪ್ಪಿಗೆ ನೀಡಿದರೆ, ನಾಳೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು, ಮುಂಡಾಸು ಅಥವಾ ಪೇಟ ಧರಿಸಿ ಬರುತ್ತೇವೆ ಎಂದು ಹಠ ಹಿಡಿಯುವ ಸಾಧ್ಯತೆಯಿದೆ. ಧಾರ್ಮಿಕ ಉಡುಗೆಯ ಪ್ರತಿವಾದವು ಶಿಕ್ಷಣ ವಲಯದಲ್ಲಿ ಮತ್ತೆ ಭುಗಿಲೆದ್ದರೆ ಅದಕ್ಕೆ ನೀವೇ ವೇದಿಕೆ ಮಾಡಿಕೊಟ್ಟಂತಾಗುತ್ತದೆ.
ಅತಿಯಾದ ಧಾರ್ಮಿಕ ತುಷ್ಟೀಕರಣದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಂಕಷ್ಟ ಎದುರಿಸುತ್ತಿರುವುದು ಮತ್ತು ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ನಮಗೆ ಪಾಠವಾಗಬೇಕಿದೆ. ಕರ್ನಾಟಕದಲ್ಲಿ ಶೈಕ್ಷಣಿಕ ನೆಮ್ಮದಿ ಮತ್ತು ಶಾಂತಿ ಉಳಿಯುವ ದೃಷ್ಟಿಯಿಂದ ಮಾನ್ಯ ಮಧು ಬಂಗಾರಪ್ಪನವರು ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಸವಿನಯ ಕೋರಿಕೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


