ಸಂಜೆಯ ತಂಪಾದ ಗಾಳಿ ನಿಧಾನವಾಗಿ ಮುಖಕ್ಕೆ ತಾಗುತ್ತಿದ್ದಂತೆ ಮನಸ್ಸು ಬೇರೆಡೆ ಜಾರಿಬಿಡುತ್ತದೆ. ಬಸ್ ನ ಕಿಟಕಿಯ ಪಕ್ಕದಲ್ಲಿ ಕೂತು ಹೊರಗಿನ ಜಗತ್ತನ್ನು ನೋಡುತ್ತಿರುವಾಗ ಮನಸ್ಸು ಕೆಲವೊಂದು ವಿಷಯಗಳನ್ನು ಮೆಲುಕು ಹಾಕುತ್ತದೆ. ರಸ್ತೆಯಲ್ಲಿ ಓಡಾಡುವ ಜನರು, ಹಾರುವ ಹಕ್ಕಿಗಳು, ದೂರದಲ್ಲಿ ಕೇಳಿಸುವ ಮಳೆಯ ಶಬ್ದ... ಇವೆಲ್ಲವೂ ಕೆಲವೊಮ್ಮೆ ಹಳೆಯ ನೆನಪುಗಳನ್ನು ಮತ್ತೆ ಜೀವಂತವಾಗಿಸುತ್ತವೆ.
ಕಿಟಕಿಯ ಪಕ್ಕದಲ್ಲಿ ಕೂತಿರುವ ಕ್ಷಣವೇ ಒಂದು ವಿಚಿತ್ರ. ದಿನವಿಡೀ ನಡೆದ ಘಟನೆಗಳು, ನಮ್ಮ ಜೊತೆ ಇದ್ದವರು,ಬಿಟ್ಟು ಹೋದವರು,ಕಳೆದ ಸಂತೋಷದ ಕ್ಷಣಗಳು, ಕೆಲವೊಮ್ಮೆ ನೋವು ಕೊಟ್ಟ ನೆನಪುಗಳೂ ಸಹ ಮನಸ್ಸಿಗೆ ಬರುತ್ತವೆ. ಹೊರಗೆ ಬೀಸುವ ಗಾಳಿ ನಮ್ಮೊಳಗಿನ ಭಾವನೆಗಳನ್ನೇ ಮಾತನಾಡಿಸುತ್ತಿರುವಂತೆ ಅನಿಸುತ್ತದೆ.
ಮಳೆ ಬರುತ್ತಿರುವಾಗ ಕಿಟಕಿಯ ಗಾಜಿನ ಮೇಲೆ ಬೀಳುವ ನೀರಿನ ಹನಿಗಳು ಬಾಲ್ಯದ ದಿನಗಳನ್ನು ನೆನಪಿಗೆ ತರುತ್ತವೆ. ಶಾಲೆಯಿಂದ ಮನೆಗೆ ಬರುತ್ತಿದ್ದ ದಿನಗಳು, ಸ್ನೇಹಿತರ ಜೊತೆ ಆಡಿದ ಆಟಗಳು, ಕುಟುಂಬದವರ ಜೊತೆ ಕಳೆದ ಕ್ಷಣಗಳು — ಇವೆಲ್ಲವೂ ಕಣ್ಣ ಮುಂದೆ ಚಿತ್ರವಾಗಿ ಓಡುತ್ತವೆ.
ಕಿಟಕಿಯ ಪಕ್ಕದಲ್ಲಿ ಕೂತು ಹೊರಗೆ ನೋಡುತ್ತಿರುವಾಗ ನಮಗೆ ಜೀವನದ ಹಲವಾರು ಪಾಠಗಳೂ ಅರ್ಥವಾಗುತ್ತವೆ. ಸಮಯ ಯಾರನ್ನೂ ಕಾಯುವುದಿಲ್ಲ ಎಂಬುದು ಅಲ್ಲಿ ಸ್ಪಷ್ಟವಾಗುತ್ತದೆ. ಹೊರಗೆ ಓಡಾಡುವ ವಾಹನಗಳಂತೆ ಜೀವನವೂ ಮುಂದುವರೆಯುತ್ತಲೇ ಇರುತ್ತದೆ. ಆದರೆ ನೆನಪುಗಳು ಮಾತ್ರ ನಮ್ಮ ಜೊತೆ ಸದಾ ಉಳಿಯುತ್ತವೆ. ಯಾರು ಸಹ ನಮ್ಮ ಜೀವನದ ಅಂತ್ಯದ ವರೆಗೂ ಇರಲ್ಲ. ಇದ್ದರೆ ಅದು ಒಬ್ರು ಇಬ್ರು ಅಷ್ಟೇ.
ಅದಕ್ಕಾಗಿಯೇ ಕಿಟಕಿಯ ಪಕ್ಕದಲ್ಲಿ ಕಳೆದ ಕ್ಷಣಗಳು ಕೇವಲ ಸಮಯವಲ್ಲ; ಅವು ನಮ್ಮ ಭಾವನೆಗಳ ಜೊತೆಗಿನ ಒಂದು ಸಣ್ಣ ಪ್ರಯಾಣವಾಗಿರುತ್ತದೆ.
ಕಿಟಕಿಯಾಚೆ ಕಾಣುವ ದೃಶ್ಯಗಳು ಕೇವಲ ಪ್ರಕೃತಿಯ ಸೌಂದರ್ಯವಲ್ಲ. ಅವು ನಮ್ಮ ನೆನಪುಗಳ ಕನ್ನಡಿ. ಕೆಲವೊಮ್ಮೆ ಸಂತೋಷವನ್ನು, ಕೆಲವೊಮ್ಮೆ ನೋವನ್ನು, ಮತ್ತೆ ಕೆಲವೊಮ್ಮೆ ಬದುಕಿನ ಅರ್ಥವನ್ನೇ ಮನಸ್ಸಿಗೆ ತಿಳಿಸುವ ಒಂದು ಮೌನ ಸಂಗಾತಿಯಾಗಿವೆ.
- ಭೂಮಿಕಾ ನಿರಂಜನ್
ದ್ವಿತೀಯ ಪತ್ರಿಕೋದ್ಯಮ ವಿಭಾಗ.
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


