ಸುತ್ತೂರು ಶ್ರೀಗಳು ಹಾಗೂ ಶ್ರೀ ದತ್ತಾತ್ರೇಯ ಹೊಸಬಾಳೆ ಅವರಿಂದ
ಬೆಂಗಳೂರು, ಮೇ 14: ಅವಿಶ‍್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು-ನೆನಪು ಪುಸ್ತಕ ಲೋಕಾರ್ಪಣೆಯನ್ನು ಈ ದಿನ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ಶ್ರೀಕ್ಷೇತ್ರ ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪುಸ್ತಕದ ಲೇಖಕರುಗಳಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ, ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀ ನಾ. ದಿನೇಶ್ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಜಯದೇವರ ಜೊತೆಗೆ ಮೂವತ್ತು ವರ್ಷ ಕಾರ್ಯ ನಡೆಸಿದ ಸೌಭಾಗ್ಯ ನನ್ನದಾಗಿದ್ದು, ನಿಖರತೆ ಇದ್ದ ಜಯದೇವರಿಗೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ವಿಚಾರವನ್ನು ಸಮಾಜದಲ್ಲಿ ಮೂಡಿಸುವ ಕಠಿಣತೆ ಇತ್ತು. ಶಿಕ್ಷಣದಲ್ಲಿ ಭಾರತೀಯತೆಯನ್ನು ತರಬೇಕು, ಭಾರತೀಯ ವೈದ್ಯಕೀಯ ವಿಷಯಗಳನ್ನು ಅಲೋಪತಿ ವೈದ್ಯಕೀಯ ಪದ್ಧತಿಯ ಜೊತೆಗೆ ಇಂಟಗ್ರೇಟ್ ಮಾಡಬೇಕು ಎನ್ನುವ ಅವರ ಆಶಯದಂತೆ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಇಂಟಗ್ರೇಟೆಡ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ರಾಷ್ಟ್ರೋತ್ಥಾನ ಜಯದೇವರು ಬೇರೆಬೇರೆ ಆಗಿರದಿದ್ದರೂ ಸಂಘ ಬೇರೆ ಕರ್ತವ್ಯಕ್ಕೆ ಕರೆದಾಗ ಸರಳವಾಗಿ ಎದ್ದು ಹೋಗಿಬಿಟ್ಟ ಜಯದೇವರು ಉತ್ತಮ ಕೇಳುಗರಾಗಿದ್ದು ಒಂದು ಥರ ಬ್ಲಾಟಿಂಗ್ ಪೇಪರ್ ಥರ ಇದ್ದರು ಎಂದು ಹೇಳಿದರು.
ಡಾ. ಬಾಬು ಕೃಷ್ಣಮೂರ್ತಿಯವರು ಮಾತನಾಡುತ್ತ, ಬಾಲ್ಯದಿಂದಲೂ ಹತ್ತಿರದಿಂದ ಕಂಡ ಮಹಾನ್ ಧ್ಯೇಯಜೀವಿಯ ಬಗ್ಗೆ ಬರೆಯುವ ಕಾರ್ಯ ನನಗೆ ರೋಮಾಂಚನದ ಕೆಲಸ. ಚರ್ಚೆಯ ಸಮಯದಲ್ಲಿ ನಾನು ಹೇಳುತ್ತಿದ್ದ ಬಾಲಿಶ ಮಾತನ್ನು ಸಹ ಕೇಳಿಸಿಕೊಳ್ಳುತ್ತಿದ್ದ ಜಯದೇವರು ನೂರಾರು ಚಟುವಟಿಕೆಗಳನ್ನು ಸಮಾಧಾನ ಚಿತ್ತದಿಂದ ನಿಖರವಾಗಿ ಮುಗಿಸುವ ನಾನು ಮುಗಿಸಬಲ್ಲೆ ಎನ್ನುವ ಮನೋಭಾವದಿಂದ ಮಾಡುತ್ತಿದ್ದರು. ನಿರ್ಮೋಹಿಯಾದ ಜಯದೇವರು ಸಂಘಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದರು ಎಂದರು.
ಶ್ರೀ ದತ್ತಾತ್ರೇಯ ಹೊಸಬಾಳೆಯವರು ಮಾತನಾಡುತ್ತ, 276 ಪುಟಗಳ, 28 ಅಧ್ಯಾಯದ ಕೃತಿ ಮೈ.ಚ.ಜಯದೇವರ ಜೀವನವನ್ನು ಪದರುಪದರಾಗಿ ಹೇಳುತ್ತದೆ. ಆದರೂ ಮುಗಿಯುವುದಿಲ್ಲ. ಯಾವುದೇ ಕೃತಿಯ ಒಳಗಡೆ ಅಡಕವಾಗಿರುವುದೇ ಅದರ ಸೌಂದರ್ಯ. ಹೊರಗಿನದಲ್ಲ. ಈ ಕೃತಿಗೆ ಸಿಂಗಾರ ಕಡಿಮೆ, ಹೂರಣ ಜಾಸ್ತಿ. ಜಯದೇವರ ಸಮಯದಲ್ಲಿಟೀಮ್ ವರ್ಕ್ ಕಟ್ಟಿದ ಹಲವರಿದ್ದು ಅವರಲ್ಲಿ ಭಿನ್ನಾಭಿಪ್ರಾಯವಿದ್ದರೂ ಬೈಠಕ್ ಮುಗಿಸಿ ಹೊರಬಂದಾಗ ಒಂದೇ ಅಭಿಮತವಿರುತ್ತಿತ್ತು. ಒಂದು ಸಂಸ್ಥೆ ಹೇಗಿರಬೇಕು, ಅದರ ಆದರ್ಶ, ನಡವಳಿಕೆ, ತನ್ನನ್ನು ತಾನು ಬೆಳೆಸಿಕೊಂಡು ಸಮಾಜಕ್ಕೆ ಹೇಗೆ ಸೇವೆ ಕೊಡಬೇಕು ಇಂತಹ ವಿಷಯವನ್ನು ತಮ್ಮ ಜೀವನದಲ್ಲಿ ಮಾಡಿ ತೋರಿಸಿದವರು ಜಯದೇವರು. ಅನೇಕ ಸಂಸ್ಥೆಗಳಿಗೆ ಪ್ರೇರಕರಾಗಿದ್ದ ಅವರು ಮಾರ್ಗದರ್ಶಕರಾಗಿ ಅದಕ್ಕೆ ಬೇಕಾದ ವ್ಯಕ್ತಿಗಳನ್ನು ರೂಪಿಸಿದರು. ಇನ್ಸಿಟ್ಯೂಶನ್ ಬಿಲ್ಡರ್ ಜಯದೇವರು ಹಿರಿಯರು ಕಂಡ ಕನಸನ್ನು ನನಸಾಗಿಸುವ ಜವಾಬ್ದಾರಿ ಹೊತ್ತು ಅವರು ಬೆಳೆದು, ಸಂಸ್ಥೆಯನ್ನು ಬೆಳೆಸಿ, ನೂರಾರು ವ್ಯಕ್ತಿಗಳನ್ನು ಬೆಳೆಸಿದರು. ಸಂಘದ ಸೇವಕರ ಭವ್ಯಭಾರತದ ಕನಸು ಕೈಗೂಡುವುದಕ್ಕೆ ಜೀವನದುದ್ದಕ್ಕೂ ಕಾರ್ಯ ಮಾಡಿದರು. ಹಾಗಾಗಿ ಈ ಕೃತಿಯು ಜಯದೇವರ ಜೀವನಕಥೆಯೂ ಹೌದು, ಅವರು ಕಟ್ಟಿದ ಸಂಸ್ಥೆ ಬೆಳೆದ ಕಥೆಯೂ ಹೌದು. ಜಯದೇವರಿಗೆ ವಿಷಯದ ಆಳ ಹರಿವೂ ಎರಡೂ ಬೇಕಾಗುತ್ತಿತ್ತು. ಎಲ್ಲ ಕೇಳಿದ ಬಳಿಕ ಅವರು ಹೇಳಿದವರ ಸಲಹೆಯನ್ನು ಕೇಳಿ ಅದನ್ನು ಬರೆದುಕೊಡಿ ಎನ್ನುತ್ತಿದ್ದರು. ಅದನ್ನು ಇಂಪ್ಲಿಮೆಂಟ್ ಮಾಡುವುದಕ್ಕೆ ಮುಂದಾಗುತ್ತಿದ್ದರು ಎಂದು ಸ್ಮರಿಸಿಕೊಂಡರು.
ಈ ಕೃತಿಯಲ್ಲಿ ಅನೇಕ ಘಟನೆಗಳು ಸಂಗತಿಗಳು ದಾಖಲಾಗಿದ್ದು, ಜಯದೇವರು ಸಂಸ್ಥೆ ಎಂದರೆ ಬರಿ ಇಟ್ಟಿಗೆಯ ಕಟ್ಟಡವಲ್ಲ, ಅದು ತಮ್ಮದೆಂದು ತಿಳಿದು ಕಾರ್ಯಕರ್ತರು ಕೆಲಸ ಮಾಡಿದಾಗ ಮಾತ್ರ ಸಂಸ್ಥೆಯ ಕಾರ್ಯ ಸಫಲವಾಗುತ್ತದೆ ಎನ್ನುವ ಅವರು ಅದನ್ನು ಮಾಡಿ ತೋರಿಸಿದರು. ಅವರು ಧ್ಯೇಯಜೀವಿಯೂ ಅವಿಶ್ರಾಂತರೂ ಕರ್ಮಜೀವಿಯೂ ಆಗಿದ್ದು ಅವರು ಕಟ್ಟಿದ ಸಂಸ್ಥೆಗಳ ಪರಂಪರೆಯು ಮುಂದುವರಿದಿದೆ. ಭಾರತೀಯ ಸಂಸ್ಕೃತಿ ಒಬ್ಬನ ಹೆಸರು ಶಾಶ್ವತವಾಗುವುದು ತ್ಯಾಗದಿಂದ ಎನ್ನುತ್ತದೆ. ಜಯದೇವರು ತಾನೇನೋ ಆಗಬೇಕು ಎನ್ನುವ ಆಸೆ ಇಟ್ಟುಕೊಳ್ಳದೆ, ಸ್ವಂತ ಸುಖ ಬಯಸದೆ ಹತ್ತಾರು ಜನರಿಗೆ ಮಾರ್ಗದರ್ಶನ ಮಾಡಿದರು. ಈ ಕೃತಿ ಜಯದೇವರು ತೆರೆಮರೆಯಲ್ಲಿ ಸಂಸ್ಥೆಗಾಗಿ ಹೇಗೆ ಕಾರ್ಯ ಮಾಡಿದರು ಎನ್ನುವುದನ್ನು ಹೇಳುವ ಈ ಕೃತಿ ಈ ಸಂಸ್ಥೆಯ ಬೆಳವಣಿಗೆಯ ಬಗ್ಗೆಯೂ ಹೇಳುತ್ತದೆ. ಇಂತಹ ಕೃತಿ ಬರೆಯುವಾಗ ಶ್ರದ್ಧೆ ಇದ್ದಾಗ ಸ್ತುತಿ, ಪ್ರಶಂಸೆ ಆಗುವ ಸಾಧ್ಯತೆ ಇರುತ್ತದೆ. ಇಲ್ಲಿ ನಿಖರತೆ ವಿಷಯದ ಮೇಲೆ ಗಮನವಿಟ್ಟು ಬರೆಯಲಾಗಿದೆ. ಇಬ್ಬರು ಲೇಖಕರ ಪ್ರಯತ್ನದಿಂದ ಇದೊಂದು ಸ್ತುತಿಮಾಲೆ ಆಗದೆ ಜೀವನ ಘಟನೆಗಳನ್ನಷ್ಟೇ ಹೇಳಿ ಯಶಸ್ವಿಗೊಳಿಸಿದ್ದಾರೆ ಎಂದರು.
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ- ತಮ್ಮ ಬದುಕನ್ನು ಸಾಮಾಜಿಕ ಸೇವೆಗೆ ಮೀಸಲಿಟ್ಟ ಅಪರೂಪದ ಚೇತನ ಮೈ.ಚ. ಜಯದೇವರು. ಜಯದೇವರಿಗೆ ತಮ್ಮ ಉದ್ಯೋಗ ಪಾರ್ಟ್ ಟೈಮ್ ಆಗಿತ್ತು, ಸಂಘದ ಕೆಲಸ ಫುಲ್ ಟೈಮ್ ಆಗಿತ್ತು. ಶ್ರೀ ಮಠದ ಭಾರತೀಯ ಸಾಂಸ್ಕೃತಿಕ ಪರಿಷತ್ತಿಗೆ ಮಾರ್ಗದರ್ಶನ ಮಾಡುತ್ತಿದ್ದ ಅವರು ಸಭೆಗೆ ಯಾವಾಗಲೂ ಟಿಪ್ಪಣೆ ಮಾಡಿಕೊಂಡೇ ಬರುತ್ತಿದ್ದರು. ಕಿಂಗ್ ಆಗುವ ಬಯಕೆ ಇರದೆ ಕಿಂಗ್ ಮೇಕರ್ ಆಗಿದ್ದರು. ಈ ಭೂಮಿ ತನ್ನ ತಾಯಿ, ನಾನು ಅವಳ ಪುತ್ರ ಎನ್ನುವ ಅಥರ್ವವೇದದ ಮಾತಿನಂತೆ ಬದುಕಿದವರು ಜಯದೇವರು. ಅಲ್ಲಮ ಪ್ರಭು ಹೇಳಿದಂತೆ ಆಶಾಪಾಶಕ್ಕೆ ಹೊರತಾಗಿ ಬದುಕಿದ ಜಯದೇವರು ನಿರ್ಲಿಪ್ತ ಬದುಕನ್ನು ಬದುಕುತ್ತ ಉತ್ತಮ ಸೌಹಾರ್ದಯುತ ವಾತಾವರಣಕ್ಕಾಗಿ ಶ್ರಮಿಸಿದರು.
ಸೆರೆಮನೆಯಲ್ಲಿದ್ದಾಗಲೂ ಸಹಚರರಿಗೆ ಆತ್ಮಸ್ಥೈರ್ಯ ತುಂಬಿ ಹೋರಾಟವನ್ನು ಮುಂದುವರಿಸಲು ಹುರಿದುಂಬಿಸಿದ ಜಯದೇವರು ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡಿಯೂ ಮಾಡದಂತಿರಬೇಕು ಎನ್ನುವ ಮಾತಿಗೆ ಅನುಗುಣವಾಗಿದ್ದರು ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಖ್ಯಾತ ಗಾಯಕರಾದ ಶ್ರೀ ಶಂಕರ್ ಶಾನಭಾಗ್ ಅವರು ಪ್ರಾರ್ಥನೆ ಮಾಡಿದರು ಮತ್ತು ಈ ಸಂದರ್ಭದಲ್ಲಿ ಪುಸ್ತಕದ ಲೇಖಕರುಗಳಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ ಅವರನ್ನು ಗೌರವಿಸಲಾಯಿತು.
ಶ್ರೀ ಮೈ. ಚ. ಜಯದೇವ (1932 - 2017)
ಶ್ರೀ ಮೈ.ಚ. ಜಯದೇವ ಅವರು ರಾಷ್ಟ್ರೋತ್ಥಾನ ಪರಿಷತ್ತನ್ನು ಆರಂಭದ ದಿನಗಳಿಂದಲೂ (1965) ಕಟ್ಟಿ ಬೆಳೆಸಿದವರು. ವ್ಯವಸ್ಥಾಕುಶಲರೂ, ಅಸಾಮಾನ್ಯ ದಕ್ಷರೂ, ಸಂಘಟನೆಯ ರೂವಾರಿಗಳೂ ಆಗಿ ಒಂದು ಜೀವನ, ಒಂದು ಧ್ಯೇಯಾನುಸಂಧಾನ ಎಂಬ ಸೂತ್ರವನ್ನು ಜೀವನದುದ್ದಕ್ಕೂ ಪಾಲಿಸುತ್ತ, ತಮ್ಮ ದೂರದರ್ಶಿ ಚಿಂತನೆ, ರಾಷ್ಟ್ರನಿಷ್ಠ ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮದ ಮೂಲಕ ಸ್ವಸ್ಥ ಸಮಾಜನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಸ್ಥಿರ ಹೆಜ್ಜೆಗಳನ್ನಿಟ್ಟು ಮುನ್ನಡೆಯಲು ಕಾರಣೀಭೂತರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ, ಕ್ಷೇತ್ರೀಯ ಪ್ರಚಾರಕ, ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರು - ಹೀಗೆ 5 ದಶಕಗಳಿಗೂ ಹೆಚ್ಚು ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದವರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅಮೃತ ಶಿಶುನಿವಾಸ, ಅಬಲಾಶ್ರಮ - ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಮೂಲೋದ್ದೇಶದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುವುದರ ಜೊತೆಜೊತೆಗೆ ಅಗತ್ಯ ವ್ಯವಸ್ಥೆ-ವ್ಯಕ್ತಿ ಜೋಡಣೆಯಂತಹ ಕೆಲಸಗಳನ್ನೂ ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ್.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



