ದೇಹಕ್ಕೆ ಸಂಸ್ಕಾರ ಕೊಡುವುದೇ ಯೋಗ: ಸುಬ್ರಮಣ್ಯ ನಟ್ಟೋಜ
ಪುತ್ತೂರು: ಭಾರತವು ಯೋಗವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದೆ. ಭಾರತೀಯ ಸಂಸ್ಕೃತಿಯಲ್ಲಿ ಯೋಗ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದು, ಜೀವನಕ್ಕೆ ಪುಷ್ಟಿ ನೀಡುತ್ತದೆ. ಅಂಬಿಕಾ ವಿದ್ಯಾಲಯ ವಿದ್ಯಾರ್ಥಿಗಳಿಗೆ ಸಂಸ್ಕಾರದ ಜೊತೆಗೆ ಯೋಗಭ್ಯಾಸ ಮಾಡಿಸುವ ಮೂಲಕ ಅಧ್ಯಯನ ಪ್ರಕ್ರಿಯೆಗೆ ಹೊಸ ಆಯಾಮ ನೀಡುತ್ತಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಶ್ರೀಶಂಕರಾ ಸಭಾಭವನದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಯೋಗ ತರಬೇತಿ ತರಗತಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗ ಹಾಗೂ ಧ್ಯಾನದ ಮೂಲಕ ಇಡೀ ಜಗತ್ತನ್ನೇ ಗೆಲ್ಲಬಹುದು, ಯಶಸ್ಸು ಸಾಧಿಸಬಹುದು. ನಿರಂತರ ಅಭ್ಯಾಸದಿಂದ ಮಾತ್ರ ಜೀವನದಲ್ಲಿ ಸಫಲತೆಯನ್ನು ಪಡೆಯಲು ಸಾಧ್ಯ. ವ್ಯಕ್ತಿಯ ದೇಹಕ್ಕೆ ಸಂಸ್ಕಾರ ಕೊಡುವುದೇ ಯೋಗ. ಆದುದರಿಂದ ಯೋಗವನ್ನು ಕಲಿಯುವ ಮೂಲಕ ದೇಹಕ್ಕೆ ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ಪಡೆಯಬಹುದು. ಪ್ರತಿಯೊಬ್ಬರೂ ದಿನಂಪ್ರತಿ ಯೋಗಾಭ್ಯಾಸ ಮಾಡುವ ಸಂಕಲ್ಪ ಮಾಡಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಬದುಕಿನಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳನ್ನು ಅರ್ಥೈಸಿಕೊಂಡು ಜೀವಿಸಬೇಕು. ಧರ್ಮದಿಂದ ಅರ್ಥವನ್ನು ಸಂಪಾದಿಸಿ ಆಸೆಯನ್ನು ಪೂರೈಸಿ ಮೋಕ್ಷದ ದಾರಿಯನ್ನು ಪಡೆಯಬಹುದು. ದೇಹವಿರುವುದು ಸಾಧನೆಗಾಗಿ ನಿಮ್ಮ ಬತ್ತಳಿಕೆಗೆ ಹೊಸ ಅಸ್ತ್ರ ವನ್ನು ಅಂಬಿಕಾ ಒದಗಿಸುತ್ತಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಬದುಕಿನಲ್ಲಿ ಯಶಸ್ಸು ದೊರೆಯುತ್ತದೆ ಎಂದರು.
ಆರ್ಟ್ ಆಫ್ ಲಿವಿಂಗ್ನ ಶಿಕ್ಷಕಿ ಶರಾವತಿ ರವಿ ನಾರಾಯಣ ಯೋಗ ತರಬೇತಿ ನೀಡಿದರು. ಯೋಗ ಶಿಕ್ಷಕಿಯರಾದ ದೀಪಿಕಾ, ದಿವ್ಯ ಜ್ಯೋತಿ, ವಿದ್ಯಾರಾಜ್, ಮೇಘಶ್ರೀ ಸಹಕರಿಸಿದರು.
ವೇದಿಕೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಾ ಎಸ್. ಎಸ್. ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


