ಹಿರಿಯರ ಮಾರ್ಗದರ್ಶನವಿಲ್ಲದೇ ಸೊರಗುತ್ತಿರುವ ಸಮಾಜ: ಪ್ರೊ.ಪಿ.ಎಲ್.ಧರ್ಮ

Upayuktha
0


ಮಂಗಳೂರು:  ಹಿರಿಯರ ಮಾರ್ಗದರ್ಶನವಿಲ್ಲದೇ ಸಮಾಜ ಇಂದು ಸೊರಗುತ್ತಿದೆ. ವಿದ್ಯಾ ಸಂಸ್ಥೆಯನ್ನು ಕೇವಲ ಸಂಸ್ಥೆಯಂತೆ ಕಾಣದೇ ,ಅದೊಂದು  ವಿಸ್ತೃತ ಕುಟುಂಬ ಎಂದು ಪರಿಗಣಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಇಂದಿನ ವಿದ್ಯಾ ಸಂಸ್ಥೆಗಳಲ್ಲಿ ಮೌಲ್ಯ, ಸಂಸ್ಕಾರ, ಪರಂಪರೆಯ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಹಿರಿಯ ತಲೆಮಾರಿನ ಶಿಸ್ತು, ಬದುಕಿನ ಆದರ್ಶಗಳು ಮುಂದಿನ ತಲೆಮಾರಿಗೆ ಹಸ್ತಾಂತರಗೊಳಿಸಬೇಕಿದೆ. ಹಿರಿಯ ವಿದ್ಯಾರ್ಥಿಗಳ ಉಪಸ್ಥಿತಿ ಇಂದಿನ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರೇಪಣೆಯಾಗಬೇಕಿದೆ ಎಂದರು.


ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ನಿವೃತ್ತ ಸೇನಾಧಿಕಾರಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವಾಸ್ತವ ಜಗತ್ತಿನ ಪೈಪೋಟಿಗೆ ಸಿದ್ಧರಾಗುವ ನಿಟ್ಟಿನಲ್ಲಿ ತರಬೇತಿ ಹಾಗೂ ಕೌಶಲ್ಯದ ಶಿಕ್ಷಣ ನೀಡ ಬೇಕಿದೆ. ಈ ತರಬೇತಿ ಹಾಗೂ ಕೌಶಲ್ಯದ ಶಿಕ್ಷಣವನ್ನು ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಜನ್ಯ ಮಾಹಿತಿಯ ಮೂಲಕ ಮುಂದಿನ ತಲೆಮಾರಿಗೆ ತಲುಪಿಸಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಆಲೋಚನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ.ಎಸ್. ಮಾತನಾಡಿ ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ವ್ಯಕ್ತಿಗಳ ಕುರಿತು ಮಾಹಿತಿ ಪಡೆದುಕೊಳ್ಳುವುದು ಮುಖ್ಯ. ತಂತ್ರಜ್ಞಾನದ ಪರಿಣಾಮವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ. ವಿದ್ಯಾಸಂಸ್ಥೆಗಳಿಂದ ಕಲಿತ ಜ್ಞಾನ ಪರಂಪರೆಯನ್ನು ಇಡೀ ಸಮಾಜಕ್ಕೆ ಪಸರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವ್ರತ್ತರಾಗಬೇಕಿದೆ. ಹಿರಿಯ ವಿದ್ಯಾರ್ಥಿಗಳು ಕೇವಲ ಸಂಸ್ಥೆಯ ಪ್ರತಿ ನಿಧಿಗಳಲ್ಲ, ಬದಲಾಗಿ ಜೀವಂತ ಒಡನಾಡಿಗಳು. ಇವರಿಂದಲೇ ಸಂಸ್ಥೆ ಏಳಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ  ರಾಮದಾಸ ಗೌಡ.ಎಸ್, ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವದ ಆಯೋಜನೆಯ ಉದ್ದೇಶ ತಿಳಿಸಿದ್ದು, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ಪಷ್ಟ ಗುರಿ ಹಾಗೂ ಏಕಾಗ್ರತೆಯಿಂದ  ಯಾವುದೇ ಸಾಧನೆಯ ಶಿಖರ ಏರಲು ಸಾಧ್ಯವಿದೆ. ಅದಕ್ಕೆ ಆತ್ಮವಿಶ್ವಾಸದ ಪ್ರಯತ್ನವೊಂದನ್ನು ಬಿಟ್ಟು ಬೇರೆ ಯಾವುದೇ ಕವಲುದಾರಿಗಳಿಲ್ಲ. ಹಾಗಾಗಿ ಸ್ವಯಂ ಶಿಸ್ತು ಹಾಗೂ  ಬಧ್ಧತೆಯಿಂದ ಯಶಸ್ವಿಯಾಗುವಂತೆ ಕರೆ ನೀಡಿದರು.


ಇದೇ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.


ಹಳೆ ವಿದ್ಯಾರ್ಥಿ ನ್ಯಾಯವಾದಿ ಲೋಹಿದಾಸ್. ಆರ್. ಅವರು ಕಾಲೇಜಿನ  ‘ಒಂದು ಹೊತ್ತು ಕೈ ತುತ್ತು’ ಯೋಜನೆಗೆ 50 ಸಾವಿರ ದೇಣಿಗೆಯನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.


ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಭಾಶ್ಚಂದ್ರ ಕಣ್ವ ತೀರ್ಥ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹಳೆ ವಿದ್ಯಾರ್ಥಿ ಸಂಘ ಸಾಗಿ ಬಂದ ದಾರಿ ಹಾಗೂ ವರದಿಯನ್ನು  ಮಂಡಿಸಿದರು.

ಈ ಸಂದರ್ಭದಲ್ಲಿ  ಸಂಘದ ಉಪಾಧ್ಯಕ್ಷ ಡಿ.ಶ್ರೀನಿವಾಸ ನಾಯ್ಕ್, ಕೋಶಾಧಿಕಾರಿ ಯು. ಮೋಹನ್ ರಾವ್, ಜೊತೆ ಕಾರ್ಯದರ್ಶಿ ಡಾ. ವನಜಾ ಉಪಸ್ಥಿತರಿದ್ದರು.


ಸಂಘದ ಕೋಶಾಧಿಕಾರಿ ಯು.ಮೋಹನ್ ರಾವ್ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ   ವಿಶ್ವನಾಥ್ ಕೋಟೆಕಾರ್ ಮತ್ತು ಶುಭ ಕೆ. ಎಚ್ ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top