ಸಾಧಕರ ಸಾಧನೆಗೆ ಕಷ್ಟ ಬಂದಾಗ ನಂಬಿ ನಡೆವ ತಾಣ : ಅಬ್ಬೂರಿನ ಬ್ರಹ್ಮಣ್ಯತೀರ್ಥ ಸನ್ನಿಧಾನ

Upayuktha
0

 ಅಬ್ಬೂರು ಕ್ಷೇತ್ರದಲ್ಲಿ ಶ್ರೀ ಬ್ರಹ್ಮಣ್ಯತೀರ್ಥರ ಆರಾಧನಾ ಮಹೋತ್ಸವ- ಸಕಾಲಿಕ ಲೇಖನ

 


ಸಾಧನೆ ದಾರಿಯಲ್ಲಿ ಸಂಕಷ್ಟಗಳು ಎದುರಾದಾಗ ಮನಸ್ಸಿಗೆ ಧೈರ್ಯ ತುಂಬುವ ದೈವಿಕ ತಾಣಗಳಿವೆ. ಅಂತಹ ಭಕ್ತರ ಆಶ್ರಯಕ್ಷೇತ್ರಗಳಲ್ಲಿ ಪ್ರಮುಖವಾದುದು ಅಬ್ಬೂರು. ಇಲ್ಲಿ ವಿರಾಜಮಾನರಾದ ಶ್ರೀ ಬ್ರಹ್ಮಣ್ಯತೀರ್ಥರ ಬೃಂದಾವನ ಭಕ್ತರ ಪಾಲಿಗೆ ಚೈತನ್ಯಧಾಮ.   ಮೇ 12,14,15     ರಂದು ನಡೆಯಲಿರುವ ಅವರ ಆರಾಧನಾ ಮಹೋತ್ಸವವು ಭಕ್ತಿಜ್ಞಾನವೈರಾಗ್ಯದ ಸಂದೇಶವನ್ನು ಮರುಸ್ಮರಿಸುವ ಸುವರ್ಣಾವಕಾಶ.

 

ಮಹಾಯತಿಗಳ ಮಹಿಮೆ

ಶ್ರೀ ನರಸಿಂಹನ ಅನುಗ್ರಹದಿಂದ ಜನಿಸಿ, ಶ್ರೀ ಪುರುಷೋತ್ತಮ ತೀರ್ಥರಿಂದ ಯತ್ಯಾಶ್ರಮ ಪಡೆದ ಬ್ರಹ್ಮಣ್ಯತೀರ್ಥರು ಮಾಧ್ವ ಯತಿಪರಂಪರೆಯ ಶ್ರೇಷ್ಠರಲ್ಲಿ ಒಬ್ಬರು. ದ್ವೈತವೇದಾಂತ ಸಾಮ್ರಾಜ್ಯದ ವೀರಕೇಸರಿ ಶ್ರೀ ವ್ಯಾಸರಾಜರ ಗುರುಗಳೆಂಬ ಅಪೂರ್ವ ಕೀರ್ತಿ ಇವರದು. ಸಿದ್ಧಾಂತಪ್ರಚಾರ, ವಾದಿ ಪರಾಜಯ, ಸಮಾಜೋಪಯೋಗಿ ಕಾರ್ಯಗಳುಇವುಗಳ ಮೂಲಕ ಅವರು ಆಧ್ಯಾತ್ಮ ಮತ್ತು ಪ್ರಾಪಂಚಿಕ ಕ್ಷೇತ್ರಗಳೆರಡನ್ನೂ ಪೋಷಿಸಿದ ಮಹನೀಯರು. “ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವಃ... ಎಂದು ಶ್ರೀ ವ್ಯಾಸರಾಜರು ಕೊಂಡಾಡಿದ ಮಹಾಯತಿಗಳು ಸನ್ಯಾಸಧರ್ಮದ ಜೀವಂತ ಮಾದರಿ.

 

ಜ್ಞಾನಮಂಟಪವಾದ ಅಬ್ಬೂರು

ಬೆಂಗಳೂರು ಸಮೀಪದ ಚನ್ನಪಟ್ಟಣದ ಬಳಿಯ ಅಬ್ಬೂರು, ಪ್ರಕೃತಿ ಸೌಂದರ್ಯ ಮತ್ತು ಆಧ್ಯಾತ್ಮಿಕ ಸ್ಪಂದನೆಯ ಸಮನ್ವಯ. ಪುರಾಣಗಳಲ್ಲಿ ಜ್ಞಾನಮಂಟಪವೆಂದು ಖ್ಯಾತಿ ಪಡೆದ ಕ್ಷೇತ್ರ, ಅನೇಕ ಯತಿಗಳ ತಪೋಭೂಮಿ. ಇಲ್ಲಿ ನೆಲೆಸಿರುವ ಬ್ರಹ್ಮಣ್ಯತೀರ್ಥರ ಬೃಂದಾವನವು ಭಕ್ತರ ಮನಸ್ಸಿಗೆ ಶಾಂತಿ, ಶಕ್ತಿ ನೀಡುವ ದೈವಿಕ ಕೇಂದ್ರ.

 

ತಪೋಶಕ್ತಿ ಮತ್ತು ಪವಾಡಗಳು

ಬ್ರಹ್ಮಣ್ಯತೀರ್ಥರ ಜೀವನದಲ್ಲಿ ಅನೇಕ ಅದ್ಭುತ ಘಟನೆಗಳು ಪ್ರಸಿದ್ಧ.

  • ಶಿಷ್ಯರು ತಂದ ಭಿಕ್ಷಾನ್ನವನ್ನು ದೇವರಿಗೆ ಅರ್ಪಿಸಿದ ನಂತರ ಅದು ಮತ್ತೆ ಬಿಸಿಯಾಗುತ್ತಿದ್ದುದೆಂಬ ಪ್ರತೀತಿ ಅವರ ತಪಸ್ಸಿನ ಘನತೆಯನ್ನು ತೋರಿಸುತ್ತದೆ.
  • ಮಳೂರು ಕ್ಷೇತ್ರದಲ್ಲಿ ಕೈಕಾಲು ಕಳೆದುಕೊಂಡ ರಾಜಕುಮಾರನಿಗೆ ಮೃತ್ತಿಕೆಯಿಂದಲೇ ಪುನರ್ಜೀವ ನೀಡಿದ ಘಟನೆ ಭಕ್ತರಲ್ಲಿ ಭರವಸೆ ಮೂಡಿಸುತ್ತದೆ.
  • ವಿಜಯನಗರದಲ್ಲಿ ಅನಾವೃಷ್ಟಿ ನಿವಾರಣೆಗೆ ಪರ್ಜನ್ಯಜಪ ಮಾಡಿಸಿ ಮಳೆ ಸುರಿಸಿದ ಘಟನೆ ಅವರ ಕೃಪಾಶಕ್ತಿಗೆ ಸಾಕ್ಷಿ.

ಶ್ರೀ ವ್ಯಾಸರಾಜರ ಜನನಕ್ಕೆ ಕಾರಣಭೂತರು

ರಾಮಾಚಾರ್ಯ ಎಂಬ ಬ್ರಾಹ್ಮಣನಿಗೆ ಸಂಭವಿಸಿದ ವಿಚಿತ್ರ ಘಟನೆಯ ಮೂಲಕ, ಬ್ರಹ್ಮಣ್ಯತೀರ್ಥರು ಆಶೀರ್ವದಿಸಿದ ಮಗುವೇ ಮುಂದೆ ಮಹಾಮುನಿ ಶ್ರೀ ವ್ಯಾಸರಾಜರಾದರು. ಘಟನೆ ಬ್ರಹ್ಮಣ್ಯತೀರ್ಥರ ದಿವ್ಯ ದೃಷ್ಟಿ ಮತ್ತು ಅನುಗ್ರಹಶಕ್ತಿಯನ್ನು ಸಾಬೀತುಪಡಿಸುತ್ತದೆ.

 

ಧಾರ್ಮಿಕ ಮತ್ತು ಸಾಂಸ್ಕೃತಿಕ ಕೊಡುಗೆ

ಧ್ವಜಸ್ತಂಭ ಸ್ಥಾಪನೆ, ದೇವಾಲಯ ನಿರ್ಮಾಣ, ಪ್ರಾಣವಿಗ್ರಹ ಪ್ರತಿಷ್ಠಾಪನೆ, ಕೃಷಿಗೆ ಅನುಕೂಲವಾಗುವ ಕೆರೆಗಳ ನಿರ್ಮಾಣಇವುಗಳ ಮೂಲಕ ಬ್ರಹ್ಮಣ್ಯತೀರ್ಥರು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದರು. ಅವರ ಪ್ರೇರಣೆಯಿಂದ ಮುಂದೆ ಶ್ರೀ ವ್ಯಾಸರಾಜರು ದೇಶಾದ್ಯಂತ ಅನೇಕ ಪ್ರಾಣದೇವರ ಪ್ರತಿಷ್ಠೆ ನಡೆಸಿದರು.

 

ಭಕ್ತರ ನಂಬಿಕೆ

ಬ್ರಹ್ಮಣ್ಯತೀರ್ಥರನ್ನು ಭಕ್ತರುಅನುಗ್ರಹದ ಚಿಂತಾಮಣಿಎಂದು ಕೊಂಡಾಡುತ್ತಾರೆ.

  • ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ
  • ವಿದ್ಯಾಭಿಲಾಷಿಗಳು ಜ್ಞಾನಲಾಭ ಹೊಂದುತ್ತಾರೆ
  • ಸಂಕಷ್ಟದಲ್ಲಿರುವವರಿಗೆ ಧೈರ್ಯ ದೊರಕುತ್ತದೆ

ಆರೋಗ್ಯಂ ಭಾಸ್ಕರಾದಿಚ್ಛೇತ್ ಎಂಬಂತೆ, ಸೂರ್ಯಾಂಶ ಸಂಭೂತರಾದ ಇವರ ಸೇವೆಯಿಂದ ಆರೋಗ್ಯ ಮತ್ತು ಚೈತನ್ಯ ದೊರೆಯುತ್ತದೆ ಎಂಬ ಭಕ್ತರ ಅನುಭವ.

 

ಆರಾಧನಾ ಮಹೋತ್ಸವದ ಮಹತ್ವ

ಪ್ರತಿ ವರ್ಷ ವೈಶಾಖ ಬಹುಳ ದಶಮಿದ್ವಾದಶಿ ಸಂದರ್ಭದಲ್ಲಿ ನಡೆಯುವ ಆರಾಧನೆ, ವರ್ಷ   ಮೇ 12,14,15     ರಂದು ವಿಜೃಂಭಣೆಯಿಂದ ನಡೆಯಲಿದೆ. ಪೂಜೆ, ಪಾರಾಯಣ, ಧಾರ್ಮಿಕ ಕಾರ್ಯಕ್ರಮಗಳು, ಭಕ್ತರ ಸಮಾಗಮಇವುಗಳ ಮೂಲಕ ಕ್ಷೇತ್ರವು ಭಕ್ತಿ ರಸದ ಸಾಗರವಾಗಲಿದೆ.

  

ಅಬ್ಬೂರು ಕೇವಲ ಒಂದು ಕ್ಷೇತ್ರವಲ್ಲಅದು ಭಕ್ತಿ, ಜ್ಞಾನ, ವೈರಾಗ್ಯಗಳ ಜೀವಂತ ಮಂಟಪ. ಜೀವನದಲ್ಲಿ ದಿಕ್ಕುತೋಚದ ಸಂದರ್ಭಗಳಲ್ಲಿ ಆಶ್ರಯ ನೀಡುವ ದೈವಿಕ ಶಕ್ತಿ ಇಲ್ಲಿದೆ. ಸಾಧಕರಿಗೆ ಮಾರ್ಗದರ್ಶನ ನೀಡುವ, ಸಂಕಷ್ಟಗಳಲ್ಲಿ ಸಹಾಯ ಮಾಡುವ, ಮನಸ್ಸಿಗೆ ಶಾಂತಿ ತುಂಬುವ ಕ್ಷೇತ್ರದ ಆರಾಧನಾ ಮಹೋತ್ಸವವು ಎಲ್ಲರಿಗೂ ಆಧ್ಯಾತ್ಮಿಕ ಉತ್ಸಾಹ ತುಂಬುವ ಪವಿತ್ರ ಸಂದರ್ಭ. ಬನ್ನಿ ಅಬ್ಬೂರಿನ ಬ್ರಹ್ಮಣ್ಯತೀರ್ಥರ ಸನ್ನಿಧಿಯಲ್ಲಿ ಭಕ್ತಿಚೈತನ್ಯ ಅನುಭವಿಸೋಣ.

 

 ಡಾ. ಗುರುರಾಜ ಪೋಶೆಟ್ಟಿಹಳ್ಳಿ

9739369621


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top