ಶಿರಸಿ: ಸಿದ್ದಾಪುರ ತಾಲೂಕಿನ ನಾಗರಕೋಡಿಯ ಪ್ರಗತಿ ಹೋಂ ಸ್ಟೇ ಆವರಣದಲ್ಲಿ ದಿನಾಂಕ 21-5-2026 ರಂದು "ಭರತವರ್ಷ- ಶಕ್ತಿ ಭಕ್ತಿ ತತ್ತ್ವಗಾಯನ- ವ್ಯಾಖ್ಯಾನ" ಎಂಬ ವಿಶೇಷ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲಾ ಸಮಿತಿ, ಪ್ರಗತಿ ಹೋಂ ಸ್ಟೇ ನಾಗರಕೋಡಿ, ಪ್ರಗತಿ ಕ್ರಿಕೆಟರ್ಸ್ ನಾಗರಕೋಡಿ ಹಾಗೂ ಬಾಳೇಸರದ ನಮ್ಮೂರಿನ ನಮ್ಮವರು ಗ್ರೂಪ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ವ್ಯಾಖ್ಯಾನಕಾರರಾಗಿ ಸಾಹಿತಿಗಳು ಹಾಗೂ ಏಕವ್ಯಕ್ತಿ ತಾಳಮದ್ದಲೆಯ ಪ್ರಸಿದ್ಧ ಕಲಾವಿದರಾದ ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಅವರು ಆಗಮಿಸಿ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಅವರು ತಮ್ಮ ಮಾರ್ಮಿಕ ಮಾತಿನ ಮೂಲಕ ರಾಷ್ಟ್ರದ ಕಲ್ಪನೆ, ದೇಶಭಕ್ತಿ ಗೀತೆಗಳ ವಿವಿಧ ಆಯಾಮಗಳು, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು ಮತ್ತು ಸಂಘಗೀತೆಗಳ ಸಾರವನ್ನು ಶ್ರೋತೃಗಳ ಮುಂದೆ ಮನಮುಟ್ಟುವಂತೆ ತೆರೆದಿಟ್ಟರು. ದೇಶದ ಹೆಮ್ಮೆಯ ಇತಿಹಾಸದ ಅನೇಕ ಘಟನೆಗಳು ಹಾಗೂ ದೇಶಕ್ಕಾಗಿ ಜೀವ ಸವೆಸಿದ ಮಹನೀಯರ ಬದುಕಿನ ಚಿತ್ರಣಗಳು ಅವರ ವ್ಯಾಖ್ಯಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಮೂಡಿಬಂದವು.
ಇದೇ ಸಂದರ್ಭದಲ್ಲಿ ಅವರು ಈ ಮಣ್ಣಿನ ಮಹತ್ವವನ್ನು ಸಾರುವ ಭಾರತ ಭಂಜನ ಪುಸ್ತಕ, ಕೃಷ್ಣ ಚಾರಿತ್ರ್ಯ ಹಾಗೂ ಶಿಶುನಾಳ ಶರೀಫರ ತತ್ತ್ವಪದಗಳ ಕುರಿತಾದ ಪುಸ್ತಕಗಳನ್ನು ಉಲ್ಲೇಖಿಸಿದರು. ಸಂತ ಶಿಶುನಾಳ ಶರೀಫರು ತಮ್ಮ ತತ್ತ್ವಪದಗಳ ಮೂಲಕ ಸನಾತನ ಧರ್ಮದ ಆಳವಾದ ಸಾರವನ್ನು ಹೇಗೆ ಸರಳವಾಗಿ ಪ್ರಸ್ತುತಪಡಿಸಿದ್ದಾರೆ ಮತ್ತು ಬದುಕಿನ ತಾತ್ತ್ವಿಕ ನೆಲೆಗಟ್ಟನ್ನು ಹೇಗೆ ವಿವರಿಸಿದ್ದಾರೆ ಎಂಬುದನ್ನು ಅವರು ಸಭೆಗೆ ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮಕ್ಕಾಗಿ ಆಯ್ದುಕೊಳ್ಳಲಾಗಿದ್ದ ಒಟ್ಟು ಹತ್ತು ಪದ್ಯಗಳಿಗೆ ಅವರು ವಾಸ್ತವ, ತಾತ್ವಿಕ ಮತ್ತು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಅತ್ಯಂತ ಅರ್ಥಪೂರ್ಣ ವಿವರಣೆ ನೀಡಿದರು. ಈ ವ್ಯಾಖ್ಯಾನದ ನಡುವೆ ಅವರು ಸಂದರ್ಭಕ್ಕೆ ತಕ್ಕಂತೆ ಉಲ್ಲೇಖಿಸಿದ ಪೂರಕ ಕವನಗಳು ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಈ ಸಾಹಿತ್ಯಿಕ ಸಂಜೆಯಲ್ಲಿ ಗಾಯನಕ್ಕಾಗಿ ಪ್ರಮುಖ ದೇಶಭಕ್ತಿ ಗೀತೆಗಳು ಮತ್ತು ತತ್ತ್ವಪದಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ವಂದಿಪೆನು ಈ ಭೂಮಿಗೆ, ಹಿಮಗಿರಿಯಾ ಶೃಂಗ, ಭರತಭೂಮಿ ನನ್ನ ತಾಯಿ, ದೇಶ ದೇಶ ದೇಶ ನನ್ನದು, ಭುವನ ಮಂಡಲೆ, ಮಾತೆ ಪೂಜಕ ಮತ್ತು ಬನ್ನಿ ಸೋದರರೆ ಎಂಬ ದೇಶಭಕ್ತಿಗೀತೆಗಳೊಂದಿಗೆ, ಶಿಶುನಾಳ ಶರೀಫರ ಪ್ರಸಿದ್ಧ ಪದಗಳಾದ ಕೋಡಗನ ಕೋಳಿ ನುಂಗಿತ್ತಾ, ಬಿದ್ದಿಯಬ್ಬೆ ಮುದುಕಿ ಬಿದ್ದಿಯಬ್ಬೆ ಹಾಗೂ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಎಂಬ ಮೂರು ತತ್ತ್ವಪದಗಳನ್ನು ಹಾಡುಗಾರರು ಪ್ರಸ್ತುತಪಡಿಸಿದರು.
ವೇದಿಕೆಯ ಮೇಲೆ ಸುಧಾ ಉಮೇಶ ಭಟ್ಟ ಮಿಳಗಾರ, ಸ್ವಾತಿ ಪ್ರಮೋದ ಹೆಗಡೆ ಶಮೇಮನೆ, ರಶ್ಮಿ ವಿನಾಯಕ ಹೆಗಡೆ ಚಿಟ್ಟಮಾಂವ, ಸುಮಾ ವಿನಾಯಕ ಹೆಗಡೆ ಮೇಲಿನ ಮಸಗುತ್ತಿ, ಸವಿತಾ ಮಹಾಬಲೇಶ್ವರ ಹೆಗಡೆ ಹೊನ್ನೇಸರ ಮತ್ತು ವಿನಾಯಕ ಮಹಾಬಲೇಶ್ವರ ಭಟ್ಟ ಶಮೇಮನೆ ಅವರು ತಮ್ಮ ಮಧುರ ಕಂಠದಿಂದ ಗಾಯನ ನಡೆಸಿ ಗಮನ ಸೆಳೆದರು. ಈ ಗಾಯನಕ್ಕೆ ಮಹೇಶ ಹೆಗಡೆ ಹೊಸಗದ್ದೆ ಅವರು ತಬಲಾದಲ್ಲಿ ಹಾಗೂ ಶಶಿಭೂಷಣ ಹೆಗಡೆ ತಂಗಾರಮನೆ ಅವರು ಹಾರ್ಮೋನಿಯಂನಲ್ಲಿ ಅದ್ಭುತವಾಗಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಅಭಾಸಾಪ ಶಿರಸಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಆಯೋಜಕ ಸಂಸ್ಥೆಗಳ ಎಲ್ಲಾ ಸದಸ್ಯರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


