ಹಕ್ಕಿಯ ಪುಕ್ಕ ಮೂಡಿಸಿದ ಜಿಗುಪ್ಸೆ

Upayuktha
0


ಬಾಲ್ಯದಲ್ಲಿ ನಾಣ್ಯ, ಸ್ಟಾಂಪ್‌, ಕಪ್ಪೆಚಿಪ್ಪು ಸಂಗ್ರಹಿಸುವುದು ಸಾಮಾನ್ಯವಾದ ಹವ್ಯಾಸವಾಗಿತ್ತು. ನಾನು ಮತ್ತು ನನ್ನ ತಂಗಿ ಹೀಗೆ ಒಂದಲ್ಲಾ ಮತ್ತೊಂದು ಹವ್ಯಾಸ ರೂಢಿಸಿಕೊಳ್ಳುತ್ತಿದ್ದೆವು. ಆದರೆ, ಅದೊಂದು ದಿನ ಹಕ್ಕಿಯ ಪುಕ್ಕ ಸಂಗ್ರಹಿಸುವ ಹುಚ್ಚು ನಮ್ಮನ್ನು ಆವರಿಸಿತ್ತೋ ತಿಳಿಯದು. ಹಾಗೆ ಕಾಡಿದ ಆಸಕ್ತಿ ಸಂಗ್ರಹ ಮಾಡುವ ಹುಚ್ಚಿಗೆ ತಿರುಗಿತು. 


ಒಂದು ದಿನ ಮುಂಜಾನೆ ವಾಕ್‌ ಮಾಡುವಾಗ ದೊಡ್ಡದೊಂದು ಪುಕ್ಕ ರಸ್ತೆ ನಡುವಿನಲ್ಲಿ ಬಿದ್ದಿತ್ತು. ಸಾಮಾನ್ಯವಾಗಿ, ನಾವು ಕೆಲವೊಂದು ವಿಷಯಗಳ ಕುರಿತು ಆಳವಾಗಿ ಯೋಚಿಸುವುದಿಲ್ಲ. ಹಾಗೆಯೇ, ಆ ಕ್ಷಣವೂ ತಟ್ಟಂತೆ ಇನ್ಯಾರೋ ಹಕ್ಕಿಯ ಪುಕ್ಕ ತೆಗೆದುಕೊಳ್ಳುತ್ತಾರೆಂಬ ಅವಸರದಲ್ಲಿ ಓಡಿಹೋಗಿ ಎತ್ತಿಕೊಂಡೆ. ಜನರು ನೋಡಿಯಾರು ಎಂಬ ಭಯದಲ್ಲಿ ಅಲ್ಲಿಂದ ತೆರಳಲು ನಿರ್ಧರಿಸಿ ಆದಷ್ಟು ವೇಗವಾಗಿ ನಡೆಯಲು ಪ್ರಾರಂಭಿಸಿದೆ.


ಆ ದಿನ ತಂಗಿ ವಾಕ್‌ಗೆ ಬಂದಿರಲಿಲ್ಲ. ನನ್ನ ಬಳಿ ಇರುವ ಪುಕ್ಕವನ್ನು ಕಂಡು ಕಸಿದುಕೊಳ್ಳುವ ಆಸೆ ವ್ಯಕ್ತಪಡಿಸಿದಳು. ಆ ಪುಕ್ಕ ನನ್ನ ಇಡೀ ಸಂಗ್ರಹದಲ್ಲೇ ಅತಿ ದೊಡ್ಡ ಪುಕ್ಕವಾಗಿತ್ತು. ನಂತರದ ದಿನಗಳಲ್ಲಿ ಈ ಪುಕ್ಕಗಳನ್ನು ಹೆಕ್ಕಿ ಸಂಗ್ರಹಿಸುವುದು ಮತ್ತು ಅದನ್ನು ಎಣಿಕೆ ಮಾಡಿ ಯಾರಲ್ಲಿ ಅತಿ ಹೆಚ್ಚು ಪುಕ್ಕಗಳಿವೆ ಎಂದು ಆಟ ಆಡುವುದು ಒಂದು ಸ್ಪರ್ಧೆಯೇ ಆಗಿ ಬಿಟ್ಟಿತು. ದಾರಿಯಲ್ಲಿ ಹೋಗುವಾಗ ರಸ್ತೆ ಬದಿಯಲ್ಲಿರುವ ತಿಂಡಿ ತಿನಸುಗಳನ್ನೂ ಮರೆತು ಆಕಾಶ ನೋಡುತ್ತಾ ನಡೆಯುತ್ತಿದ್ದ ನೆಲ, ಪೊದೆಗಳನ್ನು ದಿಟ್ಟಿಸಿ ನೋಡಿ ನಡೆಯಲು ಶುರುಮಾಡಿದೆವು.


ಕೆಲವೊಂದು ಬಾರಿ ಒಂದೇ ಪುಕ್ಕ ಬಿದ್ದಿದ್ದರೆ ಮೊದಲು ನೋಡಿದವರಿಗೆ ಅದು ಸಲ್ಲುತ್ತದೆ ಎಂಬ ನಿಯಮ ಮಾಡಿಕೊಂಡೆವು. ಈ ವಿಷಯಕ್ಕೆ ಹಲವು ಬಾರಿ ಜಗಳವಾಡಿದ್ದೂ ಉಂಟು. ಇದರಿಂದ ರಸ್ತೆಯ ಈ ಬದಿ ನನ್ನದು, ಆ ಬದಿ ನಿನ್ನದು ಎಂಬಂತಹ ಮತ್ತಷ್ಟು ಹಲವು ನಿಯಮಗಳನ್ನು ಹಾಕಿಕೊಂಡೆವು. ಹೊಸ ಹೊಸ ನಿಯಮಗಳ ಜೊತೆಗೇ ಹುಡುಕಾಟ ಸಾಗುತ್ತಿತ್ತು. 


ಅದೋದು ದಿನ ಕಾಲೇಜು ಮುಗಿಸಿ ನಡೆದುಕೊಂಡು ಬರುವ ಓಣಿಯಲ್ಲಿ ನಾನೊಂದು ಪುಕ್ಕ ಕಂಡೆ. ತಂಗಿಯನ್ನು ಓಟದಲ್ಲಿ ಮೀರಿಸಿ ಬಹಳಷ್ಟು ಚೆಂದವಾದ ಆ ಪುಕ್ಕವನ್ನು ಎತ್ತಿಕೊಳ್ಳುವಷ್ಟರಲ್ಲಿ ಅದರ ಮುಂದೆ ಮತ್ತೊಂದು. ಅದರಾಚೆಗೆ ಇನ್ನೊಂದು. ಹೀಗೆ ಪುಕ್ಕಗಳ ಸಾಲು ಬಿದ್ದಿತ್ತು. ನಾನು, ನನ್ನ ತಂಗಿ ಇಬ್ಬರೂ ಸಾಕಷ್ಟು ಪುಕ್ಕಗಳನ್ನು ಹೆಕ್ಕಿಕೊಂಡೆವು. ಕೈ ತುಂಬಿದರೂ ಹಟ ಬಿಡದೇ ಹೆಕ್ಕುತ್ತಾ ಮತ್ತೊಂದಿಷ್ಟು ದೂರ ಬಂದೆವು. ಇನ್ನೇನು ಕೊನೆಯ ಪುಕ್ಕ ಎತ್ತುವ ವೇಳೆಗೆ ಹಕ್ಕಿಯ ಜೀವ ನಿರ್ಜೀವವಾಗಿ ಬಿದ್ದಿದ್ದು ಕಾಣಿಸಿತು. ತಂಗಿಯನ್ನು ಕರೆದು ನಿರ್ಜೀವವಾಗಿ ಬಿದ್ದ ಹಕ್ಕಿಯನ್ನು ತೋರಿಸಿದೆ. ಅದೇನೋ ಆ ಕ್ಷಣಕ್ಕೆ ವೈರಾಗ್ಯದಂತಹ ಜಿಗುಪ್ಸೆ ಮನಸ್ಸಿಗೆ ಆವರಿಸಿಬಿಟ್ಟಿತು. ಮುಂದಿನ ಕ್ಷಣ ಕೈಯಲ್ಲಿ ಹಿಡಿದ ಪುಕ್ಕವನ್ನು ಅಲ್ಲೇ ಬಿಡಬೇಕೋ ಅಥವಾ ಸಂಗ್ರಹಗಾರಕ್ಕೆ ಸಾಗಿಸಬೇಕೋ ತಿಳಿಯದೇ ಒಂದಷ್ಟು ಪುಕ್ಕದ ಜೊತೆಗೆ ಜಿಗುಪ್ಸೆಯನ್ನು ಮನಸ್ಸಿನ ತುಂಬಾ ತುಂಬಿಕೊಂಡು ಮನೆ ಕಡೆಗೆ ತೆರಳಿದೆವು. ಅಂದಿಗೆ, ಪುಕ್ಕ ಸಂಗ್ರಹಕ್ಕೆ ಪೂರ್ಣ ವಿರಾಮವೊಂದು ಬಿದ್ದಿತು.




- ವೈಷ್ಣವಿ ರಾಜೇಶ್ ಕೆ.,
III ಬಿಎ ​​ಪತ್ರಿಕೋದ್ಯಮ ವಿಭಾಗ
ಯೂನಿವರ್ಸಿಟಿ ಕಾಲೇಜು, ಮಂಗಳೂರು


إرسال تعليق

0 تعليقات
إرسال تعليق (0)
To Top