ಸಾಹಿತ್ಯದಿಂದ ಸಮನ್ವಯ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣವಾಗಲು ಸಾಧ್ಯ: ಡಾ. ವಿಷ್ಣುಮೂರ್ತಿ ಪ್ರಭು
- ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ಶೀರ್ಷಿಕೆಯಡಿ ವಿಚಾರ ಮಂಥನ
- ಕುವೆಂಪು ಸಾಹಿತ್ಯ ವಿವಿಧ ಕಾರ್ಯಕ್ರಮಗಳು
ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.) ವತಿಯಿಂದ ಒಂದು ದಿನದ ರಾಜ್ಯಮಟ್ಟದ ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ಶೀರ್ಷಿಕೆಯಡಿ ವಿಚಾರ ಸಂಕಿರಣ ಇಂದು (ಏ.1) ಕಾಲೇಜಿನ ಸಮ್ಯಕ್ ದರ್ಶನ ಸಭಾಭವನದಲ್ಲಿ ನಡೆಯಿತು.
ವಿಚಾರ ಸಂಕಿರಣವನ್ನು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.)ದ ಸಮಕಾರ್ಯದರ್ಶಿಗಳಾದ ಕಡಿದಾಳ್ ಪ್ರಕಾಶ್ ಕುವೆಂಪುರವರ ವಿಶ್ವಮಾನವ ಸಂದೇಶಗಳನ್ನು ವಾಚಿಸುವ ಮೂಲಕ ವಿನೂತನವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ಪ್ರಸ್ತುತ ಸಮಾಜಕ್ಕೆ ಅತ್ಯಂತ ಅವಶ್ಯವಿರುವ ಸಂದೇಶಗಳನ್ನು ಹಲವು ದಶಕಗಳ ಹಿಂದೆಯೇ ಕುವೆಂಪುರವರು ತಮ್ಮ ಕಾವ್ಯ, ಕೃತಿ, ನಾಟಕ ಇತ್ಯಾದಿ ಸಾಹಿತ್ಯಗಳ ಮೂಲಕ ಸಾರಿದ್ದಾರೆ. ಅವರ ವೈಚಾರಿಕ ಚಿಂತನೆಗಳನ್ನು ಸಮಗ್ರವಾಗಿ ಅರ್ಥೈಸಿಕೊಂಡು ಸಮಾಜ ಜೀವಿಗಳಾಗಿ ಬದುಕಲು ಪ್ರಯತ್ನಿಸಬೇಕು ಎಂದರು. ಬಳಿಕ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.)ದಿಂದ ಮುದ್ರಿಸಲ್ಪಟ್ಟ ವಿಶೇಷ ಕ್ಯಾಲೆಂಡರನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವಿಶ್ವನಾಥ್ ಪಿ ರವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಉಪಸ್ಥಿತರಿದ್ದ ಉಡುಪಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ವಿಷ್ಣುಮೂರ್ತಿ ಪ್ರಭು ಮಾತನಾಡಿ, ಸರಳವಾಗಿರುವುದನ್ನು ಕ್ಲಿಷ್ಟವಾಗಿ ಕಾಣುವುದೇ ಈಗಿನ ಎಲ್ಲೆಡೆಯ ಸಮಸ್ಯೆಯಾಗಿದೆ. ಸಾಹಿತ್ಯವನ್ನು ಅಭ್ಯಾಸಮಾಡಿ ಆಂತರ್ಯವನ್ನು ಮನಗಾಣುವ ದೃಷ್ಟಿಕೋನ ಹೊಸ ಒಳವುಗಳನ್ನು ನಮ್ಮಲ್ಲಿ ಮೂಡಿಸುತ್ತದೆ. ಪ್ರಕೃತಿ ಮತ್ತು ಸಹಜತೆಯಿಂದ ಮನುಷ್ಯ ದೂರ ಹೊದಂತೆ ಕೃತಕನಾಗುತ್ತಾನೆ. ಕುವೆಂಪುರವರು ಪ್ರಕೃತಿಯಿಂದ ಪ್ರೇರೇಪಿತರಾಗಿ ನವೋದಯ ಕಾಲದ ಬಹುದೊಡ್ಡ ಕವಿಯಾಗಿ ಬೆಳೆದವರು. ಮನುಷ್ಯ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮತ್ತಷ್ಟು ಅಭಿವೃದ್ಧಿ ಹೊಂದುತ್ತಾನೆ. ಕುವೆಂಪುರಂತಹ ಸಾಹಿತ್ಯಗಳು ಸಂವೇದನಾಶೀಲತೆಯನ್ನು ಹೆಚ್ಚಿಸಿ, ಉತ್ತಮ ನಾಗರಿಕರಾಗಲು ಪ್ರೇರೆಪಿಸುತ್ತದೆ. ಸಾಹಿತ್ಯದಿಂದ ಮಾತ್ರ ಸಮನ್ವಯ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣವಾಗಲು ಸಾಧ್ಯ. ಕುವೆಂಪುರವರ ಚಿಂತನೆಯಂತೆ ಹುಟ್ಟುತ್ತಾ ವಿಶ್ವಮಾನವನಾಗಿದ್ದ ಮನುಷ್ಯ ಬೆಳೆಯುತ್ತಾ ಅಲ್ಪ ಮಾನವನಾಗಿ ಮತ್ತೆ ವಿಶ್ವ ಮಾನವನಾಗಿ ಬೆಳೆಯುವ ಅವಶ್ಯಕವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಕನ್ನಡವನ್ನು ವಿಶ್ವ ಮಟ್ಟದಲ್ಲಿ ಪ್ರಚುರ ಪಡಿಸಿ ಕರ್ನಾಟಕಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಕುವೆಂಪು. ತಾನು ಕವಿಯಾಗಿ, ಚಿಂತಕರಾಗಿ , ದಾರ್ಶನಿಕರಾಗಿ ಹಾಗು ಈ ಸಮಾಜದ ಸುಧಾರಣೆಗಾಗಿ ತಮ್ಮ ಸಾಹಿತ್ಯದ ಮೂಲಕ ತಿಳಿಹೇಳಿದವರು. ಈ ನಾಡಿನ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸುವುದರ ಜೊತೆಗೆ ವಿಶ್ವ ಮಾನವ ಚಿಂತನೆಗಳ ಕುವೆಂಪುರವರು ಈ ಸಮಾಜಕ್ಕೆ ಅಗ್ರಗಣ್ಯ ಕೊಡುಗೆಯನ್ನು ನೀಡಿದ್ದಾರೆ. ಪ್ರತಿಯೊಬ್ಬರು ಈ ನೆಲದ ಭಾಷೆ, ಕಲೆ ಹಾಗು ಸಾಹಿತ್ಯವನ್ನು ಅಭಿಮಾನದಿಂದ ಕಾಣುವುದರ ಜೊತೆಗೆ ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಕುಮಾರಿ ವಿದ್ಯಾ ಐತಾಳ್ ರಾಮಾಯಣ ದರ್ಶನಂ ಮಹಾಕಾವ್ಯದ ಗಮಕ ವಾಚಿಸಿದರು. ಕುಮಾರಿ ವೈದೇಹಿ ಕೆ. ಹಾಗೂ ತಂಡದವರಿಂದ ಕುವೆಂಪು ಗೀತ ಗಾಯನ ಹಾಗು ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಕುವೆಂಪು ಗೀತೆಗಳ ನೃತ್ಯ ರೂಪಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ರಂಗನಾಥ್ ಚಿತ್ರದುರ್ಗ ಹಾಗು ಧನುಶ್ರೀ ಕುವೆಂಪು ವಿಚಾರಗಳ ಪ್ರಬಂಧ ಮಂಡನೆ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.)ದ ಟ್ರಸ್ಟಿ ಶಿವಾನಂದ ಕರ್ಕಿ,
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬೋಜಮ್ಮ ಕೆ. ಎನ್. ಸೇರಿದಂತೆ ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕ ಡಾ. ರಾಜಶೇಖರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕ ಡಾ. ನಾಗಣ್ಣ ನಿರೂಪಿಸಿ ವಂದಿಸಿದರು.
'ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ 15 ವರ್ಷಗಳಿಂದ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.)ದ ಜೊತೆ ಒಡಂಬಡಿಕೆ ಮಾಡಿಕೊಂಡು ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ಎಸ್.ಡಿ.ಎಂ ಸಂಸ್ಥೆ ಮಾಡಿಕೊಂಡು ಬಂದಿದೆ. ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ಶೀರ್ಷಿಕೆಯಡಿ ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯದ ನಾನ ಕಾಲೇಜುಗಳಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಸಲಾಗಿದೆ. ಇದರ ಭಾಗವಾಗಿ ಸ್ವತಃ ವಿದ್ಯಾರ್ಥಿಗಳ ತಂಡ ಕುಪ್ಪಳಿಯ ಕುವೆಂಪು ಪ್ರತಿಷ್ಠಾನಕ್ಕೆ ಭೇಟಿ ನೀಡಿ ಸಮಗ್ರ ಅಧ್ಯಯನ ನಡೆಸಲಿದೆ. ಕುವೆಂಪು ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿರು ರಾಜ್ಯದ ಏಕೈಕ ಕಾಲೇಜು ಉಜಿರೆಯ ಎಸ್.ಡಿ.ಎಂ ಸಂಸ್ಥೆ ಎಂಬ ಹೆಮ್ಮೆ ನಮಗಿದೆ.'
- ಡಾ.ಬೋಜಮ್ಮ ಕೆ. ಎನ್.
ಮುಖ್ಯಸ್ಥರು ಕನ್ನಡ ವಿಭಾಗ ಎಸ್.ಡಿ.ಎಂ ಕಾಲೇಜು, ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

