
ನಿನ್ನನ್ನು ನಾನು ಭೇಟಿಯಾದ ದಿನಗಳಲ್ಲಿ ನೀನು ಬರಿ ಅಪರಿಚಿತ ವ್ಯಕ್ತಿಯಾಗಿದ್ದೆ. ಪರಿಚಯವಾದ ಬಳಿಕ ನನಗೇನೋ ನಾನೇ ನಾಟಕ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ನನಗೇ ನಾನು ಯಾರೆಂಬ ಪ್ರಶ್ನೆ ಕಾಡಲು ಶುರುವಾಯಿತು. ಪ್ರೀತಿ ಎಂದರೆ ತನ್ನನ್ನು ತಾನೇ ತೆರೆದುಕೊಳ್ಳುವ ಅಥವಾ ತೆರೆದುಕೊಳ್ಳಲು ಸಹಾಯ ಮಾಡುವ ಕ್ರಿಯೆ ಅಥವಾ ಮಾಧ್ಯಮ ಎಂದಷ್ಟೇ ತಿಳಿದಿದ್ದೆ. ತೆರೆದುಕೊಳ್ಳುವ ಕ್ರಿಯೆಯನ್ನು ನಿನ್ನಿಂದ ನಾನು ಕಂಡುಕೊಂಡಿದ್ದೇನೆ ಎಂದು ಹಲವರು ಹೇಳಿದ್ದುಂಟು. ಹಾಗಾಗಿ, ಇದನ್ನೇ ನಾನು ಯೂನಿವರ್ಸಲ್ ಎಂದು ಭಾವಿಸಿದ್ದೆ. ಆ ಕ್ಷಣಕ್ಕೆ ನನಗೂ ಇದು ನಿಜ ಅನಿಸಿತ್ತು.
ಆದರೆ ಈಗ, ನನಗೆ ನಾನೇ ಇನ್ನಷ್ಟು ಅರ್ಥವಾಗದೇ ಹೋಗಿದ್ದೇನೆ. ಹಾಗೆಂದು ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳಿದರೆ ಐ ಲವ್ ಯೂ ಕೇವಲ ಪದಪುಂಜವಾಗಿ ಮಾತ್ರವೇ ತೋರುತ್ತದೆ. ಇದನ್ನು ಕೇಳಿದ ನಿನಗೆ ಬಹುಶಃ ನಾನು ಖುಷಿಯಾಗಿಲ್ಲ ಎಂದೇ ಭ್ರಮಿಸುತ್ತಿ. ಆದರೆ, ವಾಸ್ತವವಾಗಿ, ನಾನು ಹಿಂದೆಂದಿಗಿಂತಲೂ ಸ್ಟೇಬಲ್ ಆಗಿದ್ದೇನೆ. ಯಾವುದಾದರೂ ಕ್ಷಣದಲ್ಲಿ ನಾನು ಸಾಯುತ್ತೇನೆ ಎಂದು ನೀನು ಹೇಳಿದರೆ, ನನ್ನ ಮನಸ್ಸು, ಹೃದಯ ತುಂಬಿ ಕಣ್ಣೀರಾಗಿ ಹರಿಯುತ್ತದೆ.
ಒಮ್ಮೊಮ್ಮೆ ಬದುಕು ಸೇತುವೆಯೊಂದರ ಮೇಲೆ ಟೆಂಟ್ ಹಾಕಿ ಕುಳಿತಿರುವಂತೆ ಅನಿಸುತ್ತದೆ. ಸೇತುವೆಯ ಈ ದಡದಲ್ಲಿರುವ ನನ್ನನ್ನೇ ನಾನು ಅರಿವಿಲ್ಲದೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಆ ದಡದಲ್ಲಿರುವ ನಿನ್ನನ್ನು ಸೇರಲು ಕಷ್ಟಪಡುತ್ತಿರುವೆ. ಕೊನೆಗೆ, ಯಾವ ದಡವನ್ನೂ ಸೇರಿಕೊಳ್ಳಲಾಗದೆ ನಾನುಗಳ ಮಧ್ಯೆಯೇ ಸಿಲುಕಿಕೊಂಡಿದ್ದೇನೆ.
ಬದುಕಿನಲ್ಲಿ ಹಲವು ಬಾರಿ ಕೆಲವರನ್ನು ಪ್ರೀತಿಸಿದ್ದಿದೆ. ಆ ಪ್ರೀತಿ ಅದೆಷ್ಟೇ ಆಳವಾಗಿದ್ದರೂ ನಾನು ಅದನ್ನು ಮನಸಾರೆ ಅರಿತಿದ್ದೆ. ಆದರೆ ಈ ಬಾರಿ ಅರಿವಿನ ಕೊಂಡಿಗೆ ಬೆಂಕಿ ತಗುಲಿದೆ. ನಾನು ಈ ಪ್ರೀತಿಯ ಆಳವನ್ನು ಅರಿತಿಲ್ಲದಿದ್ದರೂ ಇದು ಹುಟ್ಟು ಹಾಕಿದ ನಾನುಗಳ ಭಾರ, ಮತ್ತಷ್ಟು ಭಾರವಾಗಿ ಸೇತುವೆಗೂ ತೊಂದರೆ ಮಾಡುತ್ತಿದೆ. ಈಗ ನನ್ನದೇ ಪ್ರತಿಬಿಂಬವನ್ನು ನೀರಿನಲ್ಲಿ ಬಹಳ ಚೆನ್ನಾಗಿ ಕಾಣುತ್ತಿದ್ದೇನೆ. ಹೀಗೆ, ಈ ನಾನುಗಳು ನಿನ್ನಿಂದ ಹುಟ್ಟಿ ನಿನಗೆ ಕನ್ನಡ ಬರುವುದಿಲ್ಲ ಎಂದು ತಿಳಿದಿದ್ದರೂ; ಇದುವರೆಗೂ ಯಾರಿಗೂ ಬರೆಯದ ಪತ್ರವನ್ನು ಮೊದಲ ಬಾರಿಗೆ ಕನ್ನಡದಲ್ಲಿ ನಿನಗೆ ಬರೆಯುತ್ತಿದ್ದೇನೆ.
ಬದುಕು ತನ್ನ ಮಜಲು ಬದಲಾಯಿಸಿದಂತೆ ಗುರಿಯೂ ಬದಲಾಗಿತ್ತು. ಆ ಗುರಿಯ ಬೆನ್ನು ಹತ್ತಿ ಪ್ರಯಾಣ ಮಾಡುತ್ತಿದ್ದ ನನಗೆ, ದಾರಿ ಮಧ್ಯದಲ್ಲಿ ಕನ್ನಡ ಬರವಣಿಗೆ ಮತ್ತೊಮ್ಮೆ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿತು. ಈ ಹಿಂದೆ, ನಾನಾ ಕಾರಣಗಳಿಂದ ಕನ್ನಡ ಬರವಣಿಗೆಯನ್ನೇ ನಿಲ್ಲಿಸಿದ್ದ ನಾನು, ಮತ್ತೊಮ್ಮೆ ಅದೇ ಭಾಷೆಯಲ್ಲಿ ಪತ್ರ ಬರೆಯುವ ಸಾಹಸ ಮಾಡುತ್ತಿದ್ದೇನೆ. ಇಂತಹ ವಿಚಿತ್ರ ಅರಿವಿನಲ್ಲಿ ಬದುಕುತ್ತಿದ್ದಾಗ, ಮರಳಿ ಬಂದ ಈ ರೌಂಡ್ರೌಂಡ್ ಅಕ್ಷರಗಳು ನನ್ನನ್ನು ನಾನೇ ಕಳೆದುಕೊಳ್ಳುವಂತೆ ಮಾಡುತ್ತಿದೆಯೋ ಅಥವಾ ಮತ್ತೊಮ್ಮೆ ನನ್ನನ್ನು ನೀನು ಹುಡುಕಿಕೊಳ್ಳುವಂತೆ ಮಾಡುತ್ತಿದ್ದೀಯೋ ಎಂಬುದು ತಿಳಿಯುತ್ತಿಲ್ಲ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


