ಬೆಂಗಳೂರು: "ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಾನವರಹಿತ ವಿಮಾನಗಳು (ಡ್ರೋನ್‌ಗಳು) ಕೇವಲ ಸಂಶೋಧನೆಗೆ ಸೀಮಿತವಾಗದೆ, ಮನುಷ್ಯನ ದೈನಂದಿನ ಚಟುವಟಿಕೆಗಳು ಹಾಗೂ ದೇಶದ ಆರ್ಥಿಕತೆಯ ಮೇಲೆ ಅಭೂತಪೂರ್ವ ಪ್ರಭಾವ ಬೀರುತ್ತಿವೆ" ಎಂದು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ (NAL) ಹಿರಿಯ ವಿಜ್ಞಾನಿ ಡಾ. ಮನಬೇಂದ್ರ ಎಂ. ಡೇ ತಿಳಿಸಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ‘ನಿಟ್ಟೆ ಸಂಶೋಧನೆ ಹಾಗೂ ಅಭಿವೃದ್ಧಿ ಘಟಕ’ ಹಮ್ಮಿಕೊಂಡಿದ್ದ ‘ಮಾನವರಹಿತ ವಿಮಾನಗಳ ವಿನೂತನ ತಂತ್ರಜ್ಞಾನಗಳು’ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುದ್ಧ ಭೂಮಿಯ ಸ್ವರೂಪ ಬದಲಿಸಿದ ಡ್ರೋನ್
ಕಾರ್ಯಕ್ರಮದಲ್ಲಿ ಡ್ರೋನ್‌ಗಳ ಸಾಮರ್ಥ್ಯದ ಕುರಿತು ಮಾತನಾಡಿದ ಡಾ. ಡೇ, "ಮಾನವ ಚಾಲಿತ ವಿಮಾನಗಳಿಗೆ ಹಸಿವು, ನಿದ್ರೆ ಮತ್ತು ವಿಶ್ರಾಂತಿಯಂತಹ ಮಿತಿಗಳಿರುತ್ತವೆ. ಆದರೆ ಡ್ರೋನ್‌ಗಳು ಯಾವುದೇ ದಣಿವಿಲ್ಲದೆ ಸತತ 48 ಗಂಟೆಗಳ ಕಾಲ ಆದೇಶಗಳನ್ನು ಪಾಲಿಸಬಲ್ಲವು. ಇತ್ತೀಚಿನ ಆವಿಷ್ಕಾರಗಳ ಫಲವಾಗಿ ಆಗಸದಲ್ಲಿಯೇ ಇಂಧನ ತುಂಬುವ ತಂತ್ರಜ್ಞಾನವೂ ಲಭ್ಯವಿದ್ದು, ಇವು ಯುದ್ಧದ ಸ್ವರೂಪವನ್ನೇ ಬದಲಿಸಿವೆ. ಕಡುಕಷ್ಟದ ಕಣಿವೆ ಹಾಗೂ ಸಾಗರದ ಆಳದಲ್ಲಿಯೂ ಇವು ನಿಖರ ಮಾಹಿತಿ ಸಂಗ್ರಹಿಸಬಲ್ಲವು," ಎಂದರು.
ರೆಪ್ಪೆ ಮಿಟುಕಿಸದ ಕಣ್ಗಾವಲು
ಗೌರವಾನ್ವಿತ ಅತಿಥಿಯಾಗಿದ್ದ ಎ.ಡಿ.ಇ (ADE) ಸಂಸ್ಥೆಯ ಹಿರಿಯ ತಂತ್ರಜ್ಞ ಜಿತೇಶ್ ಸಚ್‌ದೇವ ಮಾತನಾಡಿ, "ಡ್ರೋನ್ ಕ್ಯಾಮರಾಗಳು ಒಮ್ಮೆಯೂ ರೆಪ್ಪೆ ಮಿಟುಕಿಸದೆ ಕ್ಷಣಾರ್ಧದಲ್ಲಿ ಮಾಹಿತಿ ರವಾನಿಸುತ್ತವೆ. ಇದರಿಂದಾಗಿ ಶತ್ರು ಪಡೆಗಳು ತಮ್ಮ ಕಾಲ್ದಳ ಅಥವಾ ಟ್ಯಾಂಕ್‌ಗಳನ್ನು ಗುಟ್ಟಾಗಿ ರವಾನಿಸುವುದು ಇಂದು ಅಸಾಧ್ಯವಾಗಿದೆ. ಡ್ರೋನ್‌ಗಳು ಇಂದು ರಕ್ಷಣಾ ವಲಯದ ಅತಿದೊಡ್ಡ ಕಣ್ಣುಗಳಾಗಿವೆ," ಎಂದು ವಿವರಿಸಿದರು.
ನಿರ್ಣಾಯಕ ಸಾಧನವಾಗಿ ಡ್ರೋನ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಮಾತನಾಡಿ, "ಡ್ರೋನ್ ಈಗ ಕೇವಲ ಮನರಂಜನೆಯ ಆಟಿಕೆಯಾಗಿ ಉಳಿದಿಲ್ಲ. ಕೃತಕ ಬುದ್ಧಿಮತ್ತೆ (AI) ಮತ್ತು ರೊಬೋಟಿಕ್ಸ್ ತಂತ್ರಜ್ಞಾನದ ನೆರವಿನಿಂದ ಇದು ವಿವಿಧ ಕ್ಷೇತ್ರಗಳ ಪ್ರಗತಿ ಹಾಗೂ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ," ಎಂದು ಅಭಿಪ್ರಾಯಪಟ್ಟರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಎ.ಡಿ.ಇ ಸಂಸ್ಥೆಯ ಸಹನಿರ್ದೇಶಕ ಡಾ. ಶ್ರೀನಿವಾಸನ್, ಸಿ.ಪಿ.ಆರ್.ಐನ ವಿಶ್ರಾಂತ ನಿರ್ದೇಶಕ ಡಾ. ಎಸ್. ಸೀತಾರಾಂ ಹಾಗೂ ನಿಟ್ಟೆ ಮೀನಾಕ್ಷಿ ಕಾಲೇಜಿನ ಸಂಶೋಧನಾ ಘಟಕದ ನಿರ್ದೇಶಕ ಡಾ. ಪ್ರಹ್ಲಾದ್ ಎನ್. ತೆಂಗಳಿ ಸೇರಿದಂತೆ ಹಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

