ತೆಗ್ಗಿ ಗ್ರಾಮದ ಸಾಂಸ್ಕೃತಿಕ ಕನ್ನಡಿ: ಗ್ರಾಮದೇವತೆಗಳ ಭವ್ಯ ಜಾತ್ರಾ ಮಹೋತ್ಸವ

Upayuktha
0


ಬಾಗಲಕೋಟೆ: ಕನ್ನಡ ನಾಡಿನ ಸಾಂಸ್ಕೃತಿಕ ಸೌರಭವು ಅದರ ಹಳ್ಳಿಗಳ ಜಾತ್ರೆಗಳಲ್ಲಿ ಅಡಗಿದೆ. ಗ್ರಾಮೀಣ ಪರಿಸರದ ಧಾರ್ಮಿಕ ಆಚರಣೆಗಳು ಪರಂಪರೆಯ ಕೊಂಡಿಗಳಾಗಿ ಇಂದಿಗೂ ಸಜೀವವಾಗಿವೆ. ಅಂತಹ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿ ನಿಂತಿರುವುದು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮ. ಐತಿಹಾಸಿಕವಾಗಿ ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸವನ್ನು ಮಡಿಲಲ್ಲಿಟ್ಟುಕೊಂಡಿರುವ ಈ ಗ್ರಾಮದಲ್ಲಿ, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ದ್ಯಾಮಾಂಬಿಕಾದೇವಿ ಮತ್ತು ಶ್ರೀ ದುರ್ಗಾಂಬಿಕಾದೇವಿಯರ ಜಾತ್ರಾ ಮಹೋತ್ಸವವು ಭಕ್ತಿ ಮತ್ತು ಸೌಹಾರ್ದತೆಯ ಸಂಗಮವಾಗಿದೆ. ಈ ಬಾರಿ ಶಾಲಿವಾಹನ ಶಕೆ 1948ರ ಪರಾಭವನಾಮ ಸಂವತ್ಸರದ ವೈಶಾಖ ಮಾಸದಲ್ಲಿ, ಅಂದರೆ ದಿನಾಂಕ 22 ರಿಂದ 25 ಏಪ್ರಿಲ್ 2026ರ ವರೆಗೆ ಈ ವಿಶಿಷ್ಟ ಜಾತ್ರೆ ಜರುಗುತ್ತಿದೆ.


ಕೃಷಿ ಮೂಲದ ಸಂಪ್ರದಾಯ ಮತ್ತು ಜಾತ್ರೆಯ ಮುನ್ನುಡಿ

ತೆಗ್ಗಿ ಗ್ರಾಮದ ಜಾತ್ರೆಯು ಕೃಷಿ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಯುಗಾದಿಯ ನಂತರ ಬರುವ ದವನದ ಹುಣ್ಣಿಮೆಯಿಂದ ಕಡ್ಲಿಗರ ಹುಣ್ಣಿಮೆಯ ನಡುವಿನ ಅವಧಿಯಲ್ಲಿ ಈ ಉತ್ಸವ ಸಂಭ್ರಮದಿಂದ ನಡೆಯುತ್ತದೆ. ರೈತರ ಪ್ರಧಾನ ಬೆಳೆಯಾದ ಬಿಳಿಜೋಳದ ರಾಶಿಯ ಸಮಯದಲ್ಲಿ, ಮುತ್ತಲಗೇರಿ ಮನೆತನದವರು ಬಿಳಿಜೋಳದ ಸಿಪ್ಪೆಯನ್ನು ತೆಗೆಯುವ ಮೂಲಕ ಜಾತ್ರೆಗೆ ಸಾಂಕೇತಿಕವಾಗಿ ಚಾಲನೆ ನೀಡುತ್ತಾರೆ. ಯುಗಾದಿ ಪಾಡ್ಯದಂದು ಗ್ರಾಮದ ಹಿರಿಯರು ದೇವಸ್ಥಾನದಲ್ಲಿ ಸಭೆ ಸೇರಿ, ಅರ್ಚಕರಾದ ಬಡಿಗೇರ ಮನೆತನದವರಿಗೆ ಸೂಚಿಸಿ ದೇವತೆಗಳ ಮೂರ್ತಿಗಳಿಗೆ ಹೊಸ ಬಣ್ಣ ಹಚ್ಚಲು ಕೀಲುಗಳನ್ನು ಸಡಿಲಗೊಳಿಸುತ್ತಾರೆ. ಇದು ಜಾತ್ರೆಯ ಸಿದ್ಧತೆಯ ಮೊದಲ ಹಂತವಾಗಿರುತ್ತದೆ.


ಅಂಕಿ ಹಾಕುವುದು ಮತ್ತು ಧಾರ್ಮಿಕ ವಿಧಿವಿಧಾನಗಳು

ಜಾತ್ರೆಯ ಅಧಿಕೃತ ಆಚರಣೆಗಳು ಹದಿನೈದು ದಿನಗಳ ಮುಂಚೆಯೇ ಆರಂಭವಾಗುತ್ತವೆ. ಮಂಗಳವಾರ ರಾತ್ರಿ ಒಂಬತ್ತು ಗಂಟೆಗೆ ಗ್ರಾಮದ ಪ್ರತಿಷ್ಠಿತ ಒಂಬತ್ತು ಬಾಬದ ಮನೆತನಗಳಾದ ಗೌಡರ, ಮೊಕಾಶಿ, ಕಾಳನ್ನವರ, ಗಾಜಿ, ಕುಲಕರ್ಣಿ, ಮೇಟಿ, ಪೂಜಾರ, ಮುತ್ತಲಗೇರಿ ಮತ್ತು ಹೊಸಗೌಡ್ರ ಮನೆತನದ ಕಳಸಗಳನ್ನು ದೇವಸ್ಥಾನಕ್ಕೆ ತಂದು 'ಅಂಕಿ' ಹಾಕುವ ವಿಶಿಷ್ಟ ಸಂಪ್ರದಾಯವಿದೆ. ಅಲ್ಲಿಂದ ಹೊಸಗೌಡ್ರ ಮನೆಯಲ್ಲಿ ಸೊನ್ನಿಮಗಿಯನ್ನು ಮತ್ತು ತಳವಾರ ಮನೆಯಲ್ಲಿ ಘಟೆಗಡಿಗಿಯನ್ನು ಸ್ಥಾಪಿಸಲಾಗುತ್ತದೆ. ನಂತರದ ಮಂಗಳವಾರ ಬಣ್ಣದ ಕಾರ್ಯ ಮುಗಿಸಿದ ದೇವತೆಗಳನ್ನು ಶಾಸ್ತ್ರೋಕ್ತವಾಗಿ ಜೋಡಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.


ಗಂಗಾ ಪೂಜೆ ಮತ್ತು ಉಡಿ ತುಂಬುವ ಸಂಭ್ರಮ

ಬುಧವಾರದ ಮುಂಜಾನೆ ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಸಿರುತ್ತದೆ. ವಾದ್ಯಮೇಳಗಳೊಂದಿಗೆ ಕಳಸದವರು ನದಿಯ ಪ್ರತೀಕವಾದ ಹಳ್ಳಕ್ಕೆ ತೆರಳಿ ದೇವತೆಗಳ ಸೀರೆಗಳಿಗೆ ಹೊಳೆ ಪೂಜೆ ನೆರವೇರಿಸುತ್ತಾರೆ. ಅಲ್ಲಿಂದ ತಂದ ಮಡಿ ಸೀರೆಗಳನ್ನು ದೇವತೆಗಳಿಗೆ ಉಡಿಸಿ, ದೇವಸ್ಥಾನದಿಂದ ದೇವತೆಗಳನ್ನು ಭಕ್ತರ ಉಡಿ ತುಂಬಿಸಿಕೊಳ್ಳಲು ಎಬ್ಬಿಸಲಾಗುತ್ತದೆ. ದೇವತೆಗಳ ತವರು ಮನೆಯಾದ ಬಡಿಗೇರ ಮನೆತನದಿಂದ ಆರಂಭವಾಗುವ ಈ ಉಡಿ ತುಂಬುವ ಕಾರ್ಯಕ್ರಮವು ಮಧ್ಯಾಹ್ನದವರೆಗೆ ನಡೆಯುತ್ತದೆ. ಸಾವಿರಾರು ಭಕ್ತರು ಬಂಗಾರ, ಬೆಳ್ಳಿ, ಸೀರೆ ಹಾಗೂ ಹಣ್ಣು-ಕಾಯಿಗಳನ್ನು ಅರ್ಪಿಸಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ.


ರಥೋತ್ಸವ ಮತ್ತು ಜನಪದ ಸೊಗಡು

ಜಾತ್ರೆಯ ಕಳಶಪ್ರಾಯವಾದ ಮಹಾರಥೋತ್ಸವಕ್ಕೆ ಸಿದ್ಧತೆಗಳು ವಿಶೇಷವಾಗಿರುತ್ತವೆ. ಕುರಿಯವರ ಮನೆಯಿಂದ ಕಳಸ ಮತ್ತು ಮೇಟಿ ಮನೆತನದಿಂದ ಹಗ್ಗವು ವಾದ್ಯಗಳೊಂದಿಗೆ ರಥದ ಮೈದಾನಕ್ಕೆ ಬರುತ್ತದೆ. ತೆಗ್ಗಿ ಸೇರಿದಂತೆ ಸುತ್ತಮುತ್ತಲಿನ ರಾಘಾಪೂರು, ತಿಮ್ಮಸಾಗರ, ಕೆಲವಡಿ ಮೊದಲಾದ ಗ್ರಾಮಗಳ ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಥೋತ್ಸವದ ನಂತರ ಉಪವಾಸವಿದ್ದ ಭಕ್ತರಿಗೆ ಉಡಿ ತುಂಬಿ ಪ್ರಸಾದ ನೀಡುವ ಕ್ರಮವಿದೆ. ಇದಾದ ಬಳಿಕ ಗ್ರಾಮದೇವತೆಯ ಹಂದರದಲ್ಲಿ ಬಿಳಿಜೋಳದಿಂದ 'ರಂಗ' ಹಾಕುವ ವಿಶಿಷ್ಟ ಕಾರ್ಯ ನಡೆಯುತ್ತದೆ. ಇದರ ಬೆನ್ನಲ್ಲೇ ಸೊನ್ನಿಮಗಿ, ಘಟೆಗಡಿಗಿ ಮತ್ತು ಹೂವಿನ ಮಾಲೆಗಳನ್ನು ಮೆರವಣಿಗೆಯಲ್ಲಿ ತಂದು ಹಂದರಕ್ಕೆ ಸಮರ್ಪಿಸಲಾಗುತ್ತದೆ.


ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನ

ಜಾತ್ರೆಯು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಕಲಾ ಉತ್ಸವವಾಗಿಯೂ ಮಾರ್ಪಡುತ್ತದೆ. ಗುರುವಾರ ಮತ್ತು ಶುಕ್ರವಾರದ ರಾತ್ರಿಗಳು ನಾಟಕೋತ್ಸವಕ್ಕೆ ಮೀಸಲು. ಗ್ರಾಮದ ವಿವಿಧ ಓಣಿಯ ನಾಟ್ಯ ಸಂಘದವರಿಂದ ಪ್ರದರ್ಶಿತವಾಗುವ ನಾಟಕಗಳು ಜನರಲ್ಲಿ ಮನರಂಜನೆ ಮತ್ತು ಕಲಾಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಭಕ್ತರು ತಾವು ಹೊತ್ತುಕೊಂಡ ಹರಕೆಗಳನ್ನು ತೀರಿಸಲು ದೇವಸ್ಥಾನಕ್ಕೆ ದೀಡನಮಸ್ಕಾರಗಳನ್ನು ಹಾಕುತ್ತಾ ಬರುವುದು ಭಕ್ತಿಯ ಪರಾಕಾಷ್ಠೆಯನ್ನು ತೋರಿಸುತ್ತದೆ.


ಮುಕ್ತಾಯ ಮತ್ತು ಸೀಮೆಗೆ ತೆರಳುವುದು

ಶನಿವಾರದ ಮುಂಜಾನೆ ಮುತ್ತಲಗೇರಿ ಮನೆತನದವರಿಂದ 'ಕಾರಬಾನ' ತರುವುದು ಜಾತ್ರೆಯ ಕೊನೆಯ ಹಂತದ ಪ್ರಮುಖ ಆಚರಣೆ. ಕಾರಬಾನ ಬಂದ ನಂತರ ದೇವತೆಗಳ ಮುಂದೆ ಹಾಕಿದ್ದ ರಂಗವನ್ನು ಬಳಿದು, ಆ ಕಾಳುಗಳನ್ನು ರೈತರಿಗೆ ಬಿತ್ತನೆ ಬೀಜವನ್ನಾಗಿ ನೀಡುವ ಪರಂಪರೆ ಅತ್ಯಂತ ಅರ್ಥಪೂರ್ಣವಾಗಿದೆ. ಅಂತಿಮವಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ದೇವತೆಗಳು ಸೀಮೆಗೆ ತೆರಳುತ್ತವೆ. ಶನಿವಾರ ರಾತ್ರಿ ಸೀಮೆಯಿಂದ ಮರಳಿ ದೇವಸ್ಥಾನಕ್ಕೆ ಬಂದ ನಂತರ, ಮಂಗಳವಾರ ಮತ್ತೆ ರಥವನ್ನು ಜೋಡಿಸಿ ಕಡೆದೀಪ ಹಚ್ಚುವ ಮೂಲಕ ಈ ಭವ್ಯ ಜಾತ್ರೆಯು ಸಂಪನ್ನಗೊಳ್ಳುತ್ತದೆ. ತೆಗ್ಗಿ ಗ್ರಾಮದ ಈ ಜಾತ್ರೆಯು ಶ್ರದ್ಧೆ, ಸಂಪ್ರದಾಯ ಮತ್ತು ಗ್ರಾಮದ ಐಕ್ಯತೆಯನ್ನು ಸಾರುವ ಸುಂದರ ಸಾಂಸ್ಕೃತಿಕ ಉತ್ಸವವಾಗಿದೆ.


- ಡಾ. ಚಂದ್ರಶೇಖರ ಮುತ್ತಪ್ಪ ಕಾಳನ್ನವರ

ಕನ್ನಡ ಉಪನ್ಯಾಸಕರು, ತೆಗ್ಗಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top