ತ್ರಿವಿಧ ದಾಸೋಹಿ, ಕೋಮು ಸೌಹಾರ್ದತೆಯ ಹರಿಕಾರ, ಕ್ರಾಂತಿಯೋಗಿ, ಕಾರುಣ್ಯದ ಕಡಲು, ಮಾತ್ರೃಹ್ರೃದಯಿ, ಕಲಾಪ್ರೇಮಿ, ಸಮಾಜ ವಿಜ್ಞಾನಿ, ಕರ್ನಾಟಕದ ಸ್ವಾಮಿವಿವೇಕಾನಂದ, ಆಧುನಿಕ ಬಸವಣ್ಣ, ಅಭಿನವ ಅಲ್ಲಮಪ್ರಭು, ಬಸವತತ್ವ ಪ್ರಸಾರದ ಮಹಾದಣ್ಣಾಯಕ, ನೇರ ನಿಷ್ಠುರ ನುಡಿ ದಿಟ್ಟ ನಿಲುವಿನ ದಾರ್ಶನಿಕರು, ಇತಿಹಾಸ ನಿರ್ಮಾಪಕರು, ಮಹಾಮಾನವತಾವಾದಿ ಮಾನವೀಯತೆಯ ಸಾಕಾರ ಸ್ವರೂಪರು, ಸಾಮಾಜಿಕ ಹಿತಚಿಂತಕರು, ಸೌಹಾರ್ದಪ್ರೀಯರು, ಕ್ರೃಷಿಪ್ರೇಮಿ, ಕಾಯಕಯೋಗಿವರ್ಯರು, ಕನ್ನಡ ಜಗದ್ಗುರು ಎಂದೇ ಖ್ಯಾತರಾಗಿರುವ ಡಾ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಅಸಾಧಾರಣ ಕೊಡುಗೆ ಐತಿಹಾಸಿಕ ಪರಂಪರೆ ದಾಖಲಾರ್ಹವಾದುದು.ಪ್ರಾತ:ಸ್ಮರಣೀಯರಾದ ಪೂಜ್ಯರು ಮನುಕುಲದ ಅಂತರಾಳದಲ್ಲಿ ನೆಲಸಿ ಸದಾವಕಾಲ ಸ್ಮರಣೀಯರೆನಿಸಿರುವರು.
ವಿರಕ್ತಪೀಠದ ಪರಂಪರೆಯ ತಾಯಿ ಬೇರು ಯಡಿಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳವರು. ಅವರ ಬಳಿ ಬೆಳೆದು ಬಂದ ಮಠ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ.ಈ ಮಠದ ಹತ್ತೊಂಬತ್ತನೆಯ ಪೀಠಾಧಿಕಾರಿಗಳಾಗಿ 1974 ಜುಲೈ 29ರಂದು ಅಧಿಕಾರ ವಹಿಸಿಕೊಂಡ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರು ಆರಂಭದ ದಿನದಿಂದಲೇ ಅಪಾರ ರೂಪದ ಸವಾಲುಗಳನ್ನು ಎದುರಿಸಿದ ಧೀಮಂತರು. ಪೀಠಕ್ಕೆ ಬರುವ ಪೂರ್ವದಲ್ಲಿ ಹೊಯ್ದಾಟವಿದ್ದರೂ ಕೂಡ ಬಂದ ನಂತರ ಗುರುತರ ಹೊಣೆ ನಿಭಾಯಿಸುತ್ತಾ ದೃಢ ನಿಶ್ಚಯವುಳ್ಳವರಾಗಿ ಮಠದ ಭಕ್ತರ ಶ್ರೇಯೋಭಿವೃದ್ಧಿಗಾಗಿ ಅನೂಚಾನವಾಗಿ ಕಷ್ಟ ಸಹಿಷ್ಣುವಾಗಿ ಶ್ರಮಿಸಿದ್ದಲ್ಲದೆ ಅಶಕ್ತ ಅವಕಾಶ ವಂಚಿತ ಅನೇಕ ಸಮುದಾಯಗಳ ಉನ್ನತಿಗಾಗಿ ನಾಡು ನುಡಿ ಗಡಿ ಸಂವರ್ಧನೆಗಾಗಿ ಪ್ರಾಣಿ ಪರಿಸರ ಜಲ ಸ್ಥಿರತೆಗಾಗಿ ತುಂಬಾ ಗಟ್ಟಿಯಾದ ಒಕ್ಕೊರಲಿನ ಧ್ವನಿ ಎತ್ತಿ ಸಿಂಹ ಘರ್ಜನೆಗೈದವರು. ಪೂಜ್ಯರ ಜೀವಪರ ಕಾಳಜಿಯನ್ನು ಕಂಡ ನಾಡ ಜನತೆ 'ಇವ ನಮ್ಮವ ಇವ ನಮ್ಮವ 'ಎಂದು ಶ್ರೀ ಮಠದತ್ತ ಧಾವಿಸಿ ಬರಲಾರಂಬಿಸಿದ್ದು ಸುವರ್ಣ ಅಕ್ಷರಗಳಲ್ಲಿ ಬರೆದಿರುವಂತಹ ಸಂಗತಿ. ಜನಮನದ ಶಕ್ತಿಯ ಸ್ವರೂಪಕ್ಕೆ ಶಿವರೂಪವನ್ನಿತ್ತ ಪೂಜ್ಯರು ಸಾಮಾನ್ಯರಲ್ಲಿ ಸಾಮಾನ್ಯರಾದವರಿಂದ ಅಸಾಧಾರಣ ಕಾರ್ಯಗಳು ಯಶಸ್ವಿಯಾಗುವಂತೆ ಹುರಿದುಂಬಿಸಿದವರು.
ಪೂಜ್ಯರ 44 ವರ್ಷಗಳ ಸುದೀರ್ಘ ಸೇವಾಧಿಕಾರದ ಹಿರಿಮೆ-ಗರಿಮೆ ಕುರಿತು ಹಲವಾರು ಗ್ರಂಥಗಳು ಕವನ ಸಂಕಲನ ಕಾದಂಬರಿಗಳು ಇತ್ಯಾದಿಯಾಗಿ ಇಂದಿಗೂ ಪ್ರಕಟಗೊಳ್ಳುತ್ತಿರುವುದು ಅನುಭವಗೋಚರ ಸಂಗತಿ.
ನೆರೆಹಾವಳಿ ಭೂಕಂಪ ಬರಗಾಲದಂತಹ ಪ್ರಕೃತಿ ವಿಕೋಪ ಸನ್ನಿವೇಶದಲ್ಲಿ ಆಹಾರ ದುಡ್ಡು ಬಟ್ಟೆ ವಿತರಿಸಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಪಶು ರಕ್ಷಣಾ ಗೋಶಾಲೆ ಕೇಂದ್ರಗಳನ್ನು ಸ್ಥಾಪಿಸಿದ ಶ್ರೀಗಳವರು ಮಾತ್ರೃವಾತ್ಸಲದ ಪ್ರತಿರೂಪಿಯೇ ಸರಿ.
ವೈಚಾರಿಕ ಚಿಂತನೆಗಳಿಂದಾಗಿ ಕೋಮು ಸೌಹಾರ್ದತೆಗಾಗಿ ಇಡೀ ದೇಶದಾದ್ಯಂತ ಸಂಚರಿಸಿ ಕೋಮುವಾದಿಗಳ ನಿದ್ದೆಗೆಡಿಸಿರುವ ಪೂಜ್ಯರು ಮಠದಲ್ಲಿ ಎಲ್ಲ ಜಾತಿ ಮತ ಧರ್ಮಗಳ ಜನರಿಗೂ ಸಮಾನವಾದ ಪ್ರಾತಿನಿಧ್ಯವಿತ್ತು ಸಾಮಾನ್ಯರ ಸ್ವಾಮೀಜಿ ಎಂದು ಜನಾದರಣೀಯರಾದವರು.
ಸಾಹಿತ್ಯ ಕಟ್ಟುವ ಜನ ಕಟ್ಟುವ ಜನಸಾಮಾನ್ಯರಿಗೆ ಕಲ್ಯಾಣದ ಹಾದಿಯನ್ನು ತೋರುವ ಕಾರ್ಯದಲ್ಲಿ ಸತತವಾಗಿ ಕಾರ್ಯಮಗ್ನರಾಗಿ ಧರ್ಮ ಪ್ರಸಾರದೊಂದಿಗೆ ಸಾಹಿತ್ಯ ಶಿಕ್ಷಣ ಸಂಸ್ಕೃತಿ ಪ್ರಸಾರ ಕಾರ್ಯದಲ್ಲಿ ಉತ್ಕೃಷ್ಟ ಮಾದರಿಯಾದ ಪೂಜ್ಯರು ಸಾಂಸ್ಕೃತಿಕ ರಾಯಭಾರಿಯಾದವರು. ಹಲವು ಸಾಹಿತ್ಯ ಪ್ರಕಟಣೆಯ ಯೋಜನೆಗಳ ಮೂಲಕ ಸಂಸ್ಕೃತಿ ಮುಖಿ ಸಮಾಜ ನಿರ್ಮಾಣಕ್ಕೆ ಕಟ್ಟಿಬದ್ಧವಾಗಿ ನಿಂತ ಖ್ಯಾತಿವಂತರು. ಸ್ವಚ್ಛ ಶುದ್ಧ ಪಾರದರ್ಶಕ ನಡೆ-ನುಡಿ ಸೇವೆಗಳ ಮೂಲಕ ನಾಡಿನ ಗಮನ ಸೆಳೆದಿರುವ ಡಾ. ಸಿದ್ದಲಿಂಗ ಸ್ವಾಮೀಜಿಯವರು' ಪುಸ್ತಕದ ಸ್ವಾಮೀಜಿ' 'ಜನಸಾಮಾನ್ಯರ ಸ್ವಾಮೀಜಿ' ಎಂದೇ ಜನಜನಿತರಾದವರು.
ಸಮಾಜದ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸಿದ ಸ್ವಾಮೀಜಿಯವರಿಗೆ ಅವರ ಅನುಪಮ ಅಪೂರ್ವ ಕೊಡುಗೆಗಾಗಿ ಕಲ್ಬುರ್ಗಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಶಸ್ತಿಯಿತ್ತು ಗೌರವಿಸಿದೆ.ಶ್ರೀಗಳವರ ಜಾತ್ಯಾತೀತ ನಿಲುವಿಗಾಗಿ ಹಲವು ಪ್ರಶಸ್ತಿ ಗೌರವಗಳು ಪೂಜ್ಯರ ಕೊರಳನ್ನಲಂಕರಿಸಿ ತಮ್ಮ ಘನತೆ ವರ್ಧಿಸಿಕೊಂಡಿರುವುದು ಸರ್ವ ವಿಧಿತವಾದ ಸಂಗತಿ. ಕನ್ನಡ ಭಾಷೆ ಸಂಸ್ಕೃತಿಗಳ ಉಳಿವು ಬೆಳೆವಿನ ಕಾರ್ಯದಲ್ಲಿ ತೊಡಗಿ ನೇರವಾಗಿ ಚಳುವಳಿಯಲ್ಲಿ ಧುಮುಕಿದ್ದು ದಾಖಲಾರ್ಹವಾದುದು. ಬಹುಮುಖ ಪ್ರತಿಭಾನ್ವಿತ ಕೌಶಲ್ಯಾಭಿವೃದ್ಧಿ ವಾಙ್ಮಯಕಾರರೆನಿಸಿರುವ, ಗಡಿಯಾರದಂತೆ ಶ್ರಮಿಸಿರುವ ದ್ಯೋತಕವಾಗಿ ಶ್ರೀ ಮಠವು ಸಾಹಿತ್ಯ ಸಂಶೋಧನೆ ಕಲೆ ಸಂಸ್ಕೃತಿಯಂತಹ ಕಾರ್ಯ ಯೋಜನೆಗಳ ಜಂಗಮವಾಗದೇ ಹೋಗಿದ್ದರೆ ಕನ್ನಡದ ತೇರು ಎಂದೋ ಎಲ್ಲಿಯೋ ಸ್ಥಾವರಗೊಳ್ಳುತ್ತಿತ್ತು ಎಂಬ ಅಭಿಪ್ರಾಯವು ಡಾ.ಬಾಳಣ್ಣಾ ಸೀಗಿಹಳ್ಳಿಯವರದಾಗಿದೆ.
ಆಧುನಿಕ ಯುಗದಲ್ಲಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ವಿದ್ಯೆಯೇ ನಾಂದಿ. ಬರಲಿರುವ ದಿನಮಾನಗಳಲ್ಲಿ ವಿದೇಶಿ ಶಿಕ್ಷಣ ಸಂಸ್ಥೆಗಳೊಂದಿಗೆ ಪೈಪೋಟಿಗೆ ಇಳಿಯಬೇಕಾದ್ದರಿಂದ ಪ್ರಜಾಪ್ರಭುತ್ವದ ಯಶಸ್ಸು ಸುಶಿಕ್ಷಿತ ನಾಗರೀಕರನ್ನು ಅವಲಂಬಿಸಿರುತ್ತದೆ. ಮಠ-ಮಾನ್ಯದಂತಹ ಸಂಸ್ಥೆಗಳಿಂದ ನಾವು ಅಪೇಕ್ಷಿಸುವ ಶಿಕ್ಷಣವು ಕೇವಲ ಬಾಳಿನ ಹೊರ ಮೌಲ್ಯದ ವಿಕಾಸಕ್ಕೆ ಮಾತ್ರ ಕಾರಣವಾಗಬಹುದಾದ ನಾಗರಿಕ ವಿದ್ಯೆಯಲ್ಲ. ಮನುಷ್ಯನ ಅಂತರಂಗದ ಕದವನ್ನು ತೆರೆದು ತೋರಬಲ್ಲ ಆತ್ಮೋನ್ನತಿಯ ಮೌಲಿಕ ಶಿಕ್ಷಣದ ಸಂದೇಶವನ್ನು ಸಾರಲು ಮಠಗಳು ಮುಂದಾಗಬೇಕು. ಅತ್ಯಾಧುನಿಕ ಸೌಲಭ್ಯಗಳಿಂದ ಹೊರಗೆ ಮನುಷ್ಯ ಎಷ್ಟೇ ಬೆಳೆದಂತೆ ತೋರಿದರೂ ಕೂಡ ಆತ್ಮದ ಬೆಳವಣಿಗೆಯಿಲ್ಲದೆ ಮನುಷ್ಯ ಕುಬ್ಜನಾಗಿ ಉಳಿಯುತ್ತಾನೆ. ಇಂತಹ ವಿಪತ್ತಿನಿಂದ ಮನುಷ್ಯನನ್ನು ಮುಕ್ತಗೊಳಿಸುವ ಸಾಮರ್ಥ್ಯವು ಧರ್ಮಕ್ಕಲ್ಲದೆ ಮತ್ತಾವುದಕ್ಕಿದೆ?.
ಒಬ್ಬ ಮಠಾಧೀಶರಾಗಿ ತಮ್ಮ ಬದುಕಿನಲ್ಲಿ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನ ನಮ್ಮ ಗದಗನ ಪರಮ ಪೂಜ್ಯರು. ತಮ್ಮ ಕೊನೆ ಉಸಿರಿರುತನಕವೂ ಬಸವಾದಿಶರಣರ ಮಹಾಮಾರ್ಗದಲ್ಲಿ ಮುನ್ನಡೆದು ಸಾಮಾಜಿಕ ಸುಧಾರಣೆ ಶೈಕ್ಷಣಿಕ ಪ್ರಗತಿ ಧರ್ಮ ಜಾಗೃತಿ ವೈಚಾರಿಕತೆ ಭಾವೈಕ್ಯತೆ ರೈತರ ಏಳ್ಗಗಾಗಿ ಕನ್ನಡದ ಜಾಗೃತಿಗಾಗಿ ಅನೂಚಾನವಾಗಿ ಶ್ರಮಿಸಿದ್ದು ಅನುಕರಣೀಯ.ಈ ಐತಿಹಾಸಿಕ ಪೀಠಕ್ಕೆ ಅಧಿಪತಿಗಳಾಗಿದ್ದ ಪೂಜ್ಯರು ವಿರಕ್ತ ಪರಂಪರೆಯ ಪೀಠಕ್ಕೆ ಗೌರವಾಲಂಕಾರ ಭೂಷಿತರೆನಿಸಿದವರು.
"ಭಕ್ತ ಶ್ರೀಮಂತನಾಗಿರಬೇಕು ಸ್ವಾಮಿ ಬಡವನಾಗಿರಬೇಕು" ಎಂಬ ಹೇಳಿಕೆಯಂತೆ ನಾನು ಈ ಮಠದ ಆಸ್ತಿ ನೋಡಿ ಬಂದಿಲ್ಲ' ಭಕ್ತರ ಹೃದಯ ಶ್ರೀಮಂತಿಕೆಯನ್ನು ನೋಡಿ ಬಂದಿದ್ದೇನೆ' ಎಂದು ಮುಕ್ತ ಕಂಠದಿಂದ ಘೋಷಿಸುತ್ತಾ ತಮ್ಮ ಅಭಿಮಾನಿ ಭಕ್ತರನ್ನು ಸಮಾಧಾನಪಡಿಸಿದ ಕೀರ್ತಿಶಾಲಿಗಳಾಗಿದ್ದ ಶ್ರೀಗಳವರ ತ್ಯಾಗ ಸಹನೆ ಪರಿಶ್ರಮ ಭಕ್ತರ ಸಹಕಾರದಿಂದಾಗಿ ಶ್ರೀಮಠವು ಸಾಲದ ಭಾರದಿಂದ ಮುಕ್ತವಾಗುವಂತಾಯಿತು.
ಶ್ರೀ ಮಠದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆಯನ್ನು 1976 ರಲ್ಲಿ ಸ್ಥಾಪಿಸುವ ಮೂಲಕ ಪುಸ್ತಕಗಳ ಪ್ರಕಟಣೆಯ ಮಹತ್ಕಾರ್ಯಕ್ಕೆ ಅಡಿಪಾಯ ಹಾಕಿದ್ದರಿಂದ ಇಂದಿಗೂ ಈ ಪರಂಪರೆ ಮುಂದುವರೆದಿದೆ. ಸಾಮಾನ್ಯರಿಂದ ಹಿಡಿದು ವಿದ್ವಾಂಸರವರೆಗೆ ಎಲ್ಲರೂ ಮೆಚ್ಚುವಂತಹ ಸಹಸ್ರಾರು ಪುಸ್ತಕಗಳನ್ನು ಪ್ರಕಟಿಸುತ್ತಲಿದೆ. ಹಂಪಿ ವಿಶ್ವವಿದ್ಯಾಲಯವು ಈ ಸಂಸ್ಥೆಯ ಈ ಮಹತ್ತರ ಸಾಧನೆಗಾಗಿ ಸಂಶೋಧನಾ ಕೇಂದ್ರದ ಮಾನ್ಯತೆ ನೀಡಿದೆ. ಇಲ್ಲಿ ಹಲವಾರು ಸಂಶೋಧಕರು ಸಂಶೋಧನಾ ನಿರತರಾಗಿ ಡಾಕ್ಟರೇಟ್ ಪದವಿ ಪುರಸ್ಕೃತರಾಗುತ್ತಲಿರುವರು.ಹೀಗೆ ಪುಸ್ತಕ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬಂದ ಶ್ರೀಮಠದ ಡಾ.ಎಂ.ಎಂ.ಕಲ್ಬುರ್ಗಿ ಲಿಂಗಾಯತ ಅಧ್ಯಯನ ಸಂಸ್ಥೆಯ ಚಟುವಟಿಕೆಯು ಸಾರ್ವಕಾಲಿಕ ದಾಖಲಾರ್ಹವಾದುದು.
ಶಿವಾನುಭವ ಗೋಷ್ಠಿ ಗಳು ಸರ್ವಧರ್ಮ ಸಮನ್ವಯ ಗೋಷ್ಠಿಗಳಂತೆ ಕಂಗೊಳಿಸುತ್ತಲಿರುವದು ಗಿನ್ನಿಸ್ ದಾಖಲೆಗೆ ಅರ್ಹತೆ ಗಳಿಸುತ್ತಲಿದೆ.ಪೂಜ್ಯರ ಕಲಾ ಪ್ರೇಮ ಅನನ್ಯವಾದುದು.ಕರ್ನಾಟಕದ ಎಲ್ಲ ಕಲಾವಿದರನ್ನೂ ಪ್ರವಚನಕಾರರನ್ನೂ ಶಾಸ್ತ್ರಿಗಳನ್ನೂ ಆಹ್ವಾನಿಸಿ ಮಠದಿಂದ ಪ್ರೋತ್ಸಾಹಧನ ಸಹಾಯವೀಯುತ್ತಲಿರುವ ಪರಂಪರೆಯು ಔಚಿತ್ಯಪೂರ್ಣವಾದುದು.
ಕನ್ನಡ ನಾಡು ನುಡಿಗೆ ಬಲತರುವ ಸನ್ನಿವೇಶದಲ್ಲಿ ಸಿಂದಗಿಯಲ್ಲಿ ಶ್ರೀಗಳವರು ಗೈದಿರುವ ಭಾಷಣದ ಕಿಡಿ ಮುಂದೆ ಗೋಕಾಕ್ ಚಳುವಳಿಗೆ ನಾಂದಿ ಹಾಡಿದ್ದು ದಾಖಲಾರ್ಹ ಇತಿಹಾಸವೇ ಸರಿ. ವೈಚಾರಿಕತೆಯ ಮೇರು ವ್ಯಕ್ತಿತ್ವವನ್ನು ಪಡೆದಿರುವ ಶ್ರೀಗಳವರ ಖ್ಯಾತಿಯು ರಾಷ್ಟ್ರಮಟ್ಟವಷ್ಟೇ ಅಲ್ಲ ನಮ್ಮ ಗದಗಿನ ಕೀರ್ತಿ ಪತಾಕೆಯು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ವ್ಯಾಪಿಸುವಂತಾಯಿತು.
ಅಮೇರಿಕಾದ ಲೀಸಾವೆಲ್ ಇಲ್ಲಿ ಮೂರು ವರ್ಷಗಳ ವರೆಗಿದ್ದು ಮಠ-ಗುರುಗಳ ಹಾಗೂ ಸಮಾಜದ ಸಂಬಂಧ ಕುರಿತು ಬರೆದ ಸಂಶೋಧನಾ ಮಹಾಪ್ರಬಂಧಕ್ಕೆ ಫಿಲಿಡೆಲ್ಫಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.
ಜಾತ್ರೆಗಳು ಕಂದಾಚಾರದ ಸಮಾರಂಭಗಳಾಗಬಾರದು.' ಜನ ಮರುಳೋ ಜಾತ್ರೆ ಮರುಳೋ 'ಎಂಬಂತಾಗಬಾರದೆಂದು ಶ್ರೀಗಳು ಅವುಗಳಿಗೆ ಹೊಸ ರೂಪವಿತ್ತ ಶ್ರೇಯಸ್ಸಿಗೆ ಪಾತ್ರರಾದವರು. ಶಾಖಾ ಮಠಗಳ ಜೀರ್ಣೋದ್ಧಾರ, ಸಾಮೂಹಿಕ ವಿವಾಹ,ದೇವದಾಸಿ ಪದ್ಧತಿ ನಿರ್ಮೂಲನೆಗೆ ಪರಿಹಾರ,ನಾಟಕಗಳಿಗೆ ಆರ್ಥಿಕ ಸಹಾಯ,ಜಾನಪದ ತೊಗಲುಗೊಂಬೆಯಾಟಕ್ಕೆ ಧನಸಹಾಯ, ಅನೇಕ ಮಠಗಳಿಗೆ ಪೀಠಾಧಿಪತಿಗಳ ನೇಮಕ,ದಲಿತರ ಬಗೆಗಿರುವ ಕಳಕಳಿ, ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರುವಂತೆ ಹುರಿದುಂಬಿಸಿರುವ ಕಾರ್ಯವೈಖರಿ,ಮಾದರಿಯಾದ ಲಿಂಗಾಯತ ರುದ್ರಭೂಮಿ ,
ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣ ವ್ರೃತ್ತಿಪರ ತಾಂತ್ರಿಕ ಕೋರ್ಸುಗಳು, ಯೋಗ ಮತ್ತು ಸಂಸ್ಕೃತ ಪಾಠಶಾಲೆಗಳು, ಅನಾಥಾಶ್ರಮಗಳು, ಉಚಿತ ಪ್ರಸಾದನಿಲಯಗಳು, ಕಲ್ಯಾಣ ಮಂಟಪಗಳು ಮೊದಲಾದ ಪ್ರಗತಿಪರ ಯೋಜನೆಗಳನ್ನು ಯಶಸ್ವಿಗೊಳಿಸಿರುವ ಪೂಜ್ಯರ ಕಾರ್ಯಕೌಶಲ್ಯ ಶ್ರೀಮಠದ ಐತಿಹಾಸಿಕ ಪರಂಪರೆಗೆ ಹಿಡಿದ ಕೈಗನ್ನಡಿಯಂತಿವೆ.
'ಜನಸೇವೆಯೇ ಜನಾರ್ಧನ ಸೇವೆ' ಎಂಬ ತತ್ವಸಿದ್ಧಾಂತ ಪರಿಪಾಲಿಸಿದ ದಿ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಯವರಿಗೆ ಜಾತಿಮತದ ಕಟ್ಟಳೆಗಳು ಎಂದೂ ಅಡ್ಡಬರಲಿಲ್ಲ.ದಿವಂಗತ ಪರಮಪೂಜ್ಯರು ಹಾಕಿಕೊಟ್ಟ ಭವ್ಯವಾದ ಪರಂಪರೆಯಲ್ಲಿಯೇ ಮುಂದುವರೆಯುತ್ತಲಿರುವ ಈಗಿನ ಪೀಠಾಧಿಪತಿಗಳಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿಯವರು ಮೂಲತಃ ಸಾಹಿತ್ಯ ಸ್ರೃಜಕರಾಗಿದ್ದು ತಮ್ಮ ಹರಿತವಾದ ಲೇಖನಿಯಿಂದ ಸಮಾಜದ ಓರೆ-ಕೋರೆಗಳನ್ನು ನಿವಾರಿಸುತ್ತಲಿರುವರು.ಸ್ರೃಜನಶೀಲ ಸಾಹಿತಿವರೇಣ್ಯರಾಗಿರುವ ಪೂಜ್ಯರು ಅಪಾರ ಸಾಹಿತ್ಯ ಕ್ರೃಷಿಗೈಯುತ್ತ ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸುತ್ತಾ ಲೋಕಾರ್ಪಣೆಗೈಯುತ್ತಲಿರುವರು.ಅದಕ್ಕಿಂತ ಮಿಗಿಲಾಗಿ ಅನುವಾದ ಕೌಶಲ್ಯಾಭಿವೃದ್ಧಿ ಪರಿಣಿತ ವಾಙ್ಮಯಕಾರರಾಗಿರುವ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿಯವರು ಅನುವಾದ ಸಾಹಿತ್ಯ ಸಾಧನೆಗೈದ ನಿಮಿತ್ತ ಉನ್ನತ ಪ್ರಶಸ್ತಿ ಪುರಸ್ಕ್ರೃತರಾಗಿರುವದು ಭಕ್ತಾಭಿಮಾನಿಗಳಿಗೆ ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿಯಾಗಿರುತ್ತದೆ.ಹೀಗೆಯೇ ನಮ್ಮೂರಿನ ಶ್ರೀಮಠದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೇರುತ್ತಾ ಸತತವಾಗಿ ಹಾರುತಲಿರಲಿ ಎಂದು ಮನದುಂಬಿ ಹ್ರೃತ್ಪೂರ್ವಕವಾಗಿ ಸರ್ವಸದ್ಭಕ್ತರು ಹಾರೈಸುತಲಿರುವೆವು.
--ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.ಗದಗ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



