ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದಲ್ಲಿರುವ ವಾಣಿಜ್ಯ ಕಟ್ಟಡವೊಂದರ ಅಂಗಡಿಯಲ್ಲಿ ಭಾನುವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಕಟ್ಟಡವೇ ಅಗ್ನಿಗಾಹುತಿಯಾಗಿದೆ.
ಭಾನುವಾರ ಸಂಜೆ 5.20 ರ ವೇಳೆಗೆ ಕಟ್ಟಡದ ನೆಲ ಮಹಡಿಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಅಂಗಡಿಗಳಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ದಟ್ಟ ಹೊಗೆ ಎದ್ದಿದ್ದು, ಬೆಂಕಿಯನ್ನು ಹಾರಿಸುವುದಕ್ಕೆ ಅಗ್ನಿಶಾಮಕ ದಳ ಹರಸಾಹಸ ಪಟ್ಟಿದೆ. ಅವಘಡದಿಂದ ಲಕ್ಷಾಂತರ ಮೌಲ್ಯದ ಸೊತ್ತುಗಳು ನಷ್ಟವಾಗಿವೆ.
ನಿಯಂತ್ರಣಕ್ಕೆ ಬಾರದ ಬೆಂಕಿ:
ಭಾನುವಾರ ಸಂಜೆ 5.20 ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿಯಲ್ಲಿ ಮೊಬೈಲ್, ಮೊಬೈಲ್ ರಿಪೇರಿಗಳಿಗೆ ಬಳಸುವ ಸೊತ್ತು, ಪ್ಲಾಸ್ಟಿಕ್ ಸಹಿತ ಬೇರೆ ಬೇರೆ ವಸ್ತುಗಳ ಅಂಗಡಿ ಈ ಕಟ್ಟಡದಲ್ಲಿತ್ತು. ಬೆಂಕಿ ಒಮ್ಮೆಲೇ ಇಡೀ ಕಟ್ಟಡಕ್ಕೆ ಹಬ್ಬಿದೆ. ಸ್ಥಳೀಯ ಸಾರ್ವಜನಿಕರು ಪಕ್ಕದ ಕಟ್ಟಡವನ್ನು ಏರಿ ಬೆಂಕಿ ನಂದಿಸುವುದಕ್ಕೆ ನೀರು ಎರಚಲು ಪ್ರಯತ್ನ ಪಟ್ಟರೂ ಫಲ ಕೊಡಲಿಲ್ಲ.
ಆರಂಭದಲ್ಲಿ ಒಂದು ಟ್ಯಾಂಕರ್ ಬಂದಿದ್ದು, ಬೆಂಕಿ ನಂದಿಸುವುದಕ್ಕೆ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಇನ್ನೊಂದು ಟ್ಯಾಂಕರ್ ತರಿಸಲಾಯಿತು. ಆದರೂ 8 ಗಂಟೆಯ ತನಕವೂ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಅಕ್ಕಪಕ್ಕದ ಅಂಗಡಿ ಮಾಲೀಕರು ತಮ್ಮ ಅಂಗಡಿಯಲ್ಲಿದ್ದ ಸೊತ್ತುಗಳನ್ನು ಇತರೆಡೆಗೆ ಸಾಗಿಸಿ ಮುಂಜಾಗ್ರತಾ ಕ್ರಮ ವಹಿಸಿದರು.
ಅರ್ಧ ಗಂಟೆಯ ಬಳಿಕ ಬಂದ ಅಗ್ನಿಶಾಮಕ ವಾಹನ:
ಅಗ್ನಿ ಅವಘಡ 5.20 ರ ಸುಮಾರಿಗೆ ಸಂಭವಿಸಿದ್ದು, ಕೂಡಲೇ ಮಾಹಿತಿ ರವಾನಿಸಲಾಗಿತ್ತು. ಆದರೆ ಉಡುಪಿ ಅಗ್ನಿ ಶಾಮಕ ದಳದಿಂದ ಅವಘಡ ಸಂಭವಿಸಿದ ಸ್ಥಳಕ್ಕೆ ಕೇವಲ ಎರಡು ಕಿ.ಮೀ. ಅಂತರದಲ್ಲಿದ್ದರೂ, ಅರ್ಧಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆಯ ವಾಹನ ತಲುಪಿದೆ. ಆ ವೇಳೆಗೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅಗ್ನಿಶಾಮಕ ದಳದವರ ಕಾರ್ಯಾಚರಣೆ ಮುಂದುವರೆದಿದೆ.
ಸಾರ್ವಜನಿಕರು, ಅಂಗಡಿ ಮಾಲೀಕರು ಅಗ್ನಿಶಾಮಕ ದಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅಗ್ನಿಶಾಮಕ ದಳದಲ್ಲಿ ಸೂಕ್ತ ವ್ಯವಸ್ಥೆಗಳು ಇಲ್ಲದೇ ಇರುವುದೇ ವಿಳಂಬಕ್ಕೆ ಕಾರಣ ಎನ್ನುತ್ತಾರೆ ಸಿಬ್ಬಂದಿಗಳು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

