ಮಸೂದೆ ಹೆಸರಿನಲ್ಲಿ ಸಂವಿಧಾನ ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದೆ-ಮುಂಡ್ರಿಗಿ ನಾಗರಾಜ್
ಬಳ್ಳಾರಿ: ಮಹಾ ಮಾನವತಾವಾದಿ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ 895 ನೇ ಜಯಂತಿ, ಮತ್ತು ಡಾ.ಬಿ.ಆರ್.ಅಂಬೇಡ್ಕರವರ 135 ನೇ ಜಯಂತಿಯ ಅಂಗವಾಗಿ ಸೋಮವಾರ ಬಳ್ಳಾರಿ ನಗರದ 4 ನೇ ವಾರ್ಡಿನ ಜಗದಾಂಭ ಕಾಲನಿಯಲ್ಲಿನ ಬನ್ನಿ ಮಹಂಕಾಳಿ ದೇವಸ್ಥಾನ (ಶ್ರೀ ಶಿವ ಶಕ್ತಿ ದೇವಸ್ಥಾನ)ದಲ್ಲಿ ಜಗಜ್ಯೋತಿ ಬಸವೇಶ್ವರರ ಮತ್ತು ಅಂಬೇಡ್ಕರವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಮರ್ಪಿಸಿ, ಶ್ರದ್ಧಾಭಕ್ತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು, 12ನೇ ಶತಮಾನದಲ್ಲೇ ಸಮಾನತೆ, ಏಕತೆ ಮತ್ತು 'ಕಾಯಕವೇ ಕೈಲಾಸ' ಎಂಬ ಉದಾತ್ತ ತತ್ವಗಳನ್ನು ಸಾರಿದ ಮಹಾನ್ ಚೇತನರು. ಬಸವಣ್ಣನವರ ಹಾದಿಯಲ್ಲಿ ಇಂದು ನಾವೆಲ್ಲರೂ ಸಾಗಬೇಕಿದೆ ಎಂದು ಕರೆ ನೀಡಿದರು. ವಿಶ್ವಗುರು, ಶ್ರೇಷ್ಠ ವಚನಕಾರ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲ್ಪಟ್ಟಿರುವ ಬಸವಣ್ಣನವರ ಜನ್ಮ ದಿನೋತ್ಸವವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಎಲ್ಲರನ್ನು ಒಂದೇ ಎಂಬ ಏಕತಾ ಭಾವಕ್ಕೆ ತಂದ ಪುಣ್ಯಾತ್ಮರು ಎಂದು ಹೇಳುತ್ತಾ, ಜಿಲ್ಲೆಯ ಜನತೆಗೆ ಬಸವ ಜಯಂತಿ ಹಾಗು ಡಾ.ಬಿ.ಆರ್.ಅಂಬೇಡ್ಕರವರ 135 ನೇ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ತದನಂತರ ಲಿಡ್ಕರ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದಂತ ಮುಂಡ್ರಿಗಿ ನಾಗರಾಜ್ ಅವರು ಮಾತನಾಡುತ್ತಾ ಮಹಿಳೆಯರ ಹೆಸರಿನಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆಗ್ರಹ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಪಕ್ಷ ಇತಿಹಾಸದಿಂದಲೇ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ನೇತೃತ್ವವೇ ಇದಕ್ಕೆ ಉದಾಹರಣೆ ಎಂದು ಹೇಳಿದರು. ರಾಜೀವ್ ಗಾಂಧಿ ಕಾಲದಲ್ಲಿ ಮಾರ್ಗರೇಟ್ ಅಲ್ವಾ ನೇತೃತ್ವದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಲಾಗಿದೆ ಎಂದರು. ಮಹಿಳಾ ಮೀಸಲಾತಿ ಬಿಲ್ 2023ರಲ್ಲಿ ಸಂಸತ್ತಿನಲ್ಲಿ ಎಲ್ಲಾ ಪಕ್ಷಗಳ ಒಪ್ಪಿಗೆಯೊಂದಿಗೆ ಅಂಗೀಕಾರವಾಗಿದ್ದರೂ, ಇಂದಿಗೂ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿಲ್ಲ ಎಂದು ಟೀಕಿಸಿದರು.
ಇದೀಗ ಮಹಿಳಾ ಬಿಲ್ ಜೊತೆ ಡೆಲಿಮಿಟೇಶನ್ ಸೇರಿದಂತೆ ಇತರ ಬಿಲ್ಲುಗಳನ್ನು ಸೇರಿಸಿ ಸಂವಿಧಾನ ಬಾಹಿರವಾಗಿ ಜಾರಿಗೆ ತರಲು ಯತ್ನಿಸಲಾಗುತ್ತಿದೆ. ಇದು ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡುವ ಕುತಂತ್ರವಾಗಿದೆ ಎಂದು ಆರೋಪಿಸಿದರು, ಕೇಂದ್ರ ಸರಕಾರ ರಾಜಕೀಯ ಲಾಭ ಪಡೆಯಲು ಈ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ದೂರಿದರು.
ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲರೂ ಒಗ್ಗಟಾಗಿ ಸಮಾಜದ ಏಳಿಗೆ ಶ್ರಮಿಸಬೇಕು. ಸಮಸ್ಯೆಗಳು ಇದ್ದಲ್ಲಿ ಯಾವುದೇ ಸರ್ಕಾರ ಇರಲಿ. ಹೋರಾಟ ಮಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು. ಯಾವುದೇ ಕೆಲಸದಲ್ಲಿ ಮೇಲುಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಹೌದು. ದೇಶದಲ್ಲಿ ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ಹೇಳಿದರು.
ಕರ್ನಾಟಕ ಕಂಡ ಮಹಾನ್ ಶ್ರೇಷ್ಠ ಶರಣ, ಬಸವಣ್ಣನವರು ಆಗಿದ್ದಾರೆ, ಅವರು ಮೂಢನಂಬಿಕೆಯನ್ನು ಬಲವಾಗಿ ವಿರುದ್ಧ ಮಾಡುತ್ತಿದ್ದರು, ಸಮಾಜದಲ್ಲಿ ಶೋಷಿತರಿಗೆ ನ್ಯಾಯ ಒದಗಿಸಲು ಬಹಳಷ್ಟು ಶ್ರಮಿಸಿದ್ದಾರೆ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಅವರು ತಮ್ಮ ಉಪದೇಶಗಳಲ್ಲಿ ಹೇಳಿದ್ದು, ಇಂದಿನ ಯುವ ಪೀಳಿಗೆಗೆ ಅನ್ವಯಿಸುತ್ತದೆ. ಜಗತ್ತು ಅನೇಕ ರೀತಿಯ ತಂತ್ರಜ್ಞಾನವನ್ನು ಹೊಂದಿದ್ದರು ಸಹ ಬಸವಣ್ಣನವರ ತತ್ವದಡಿ ಕೆಲಸ ಮಾಡಲಾಗುತ್ತಿದೆ. ಬಸವಣ್ಣನವರು ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು 12ನೇ ಶತಮಾನದಲ್ಲಿ ನೀಡಿದ್ದರು ಎಂದರು.
ಬಸವಣ್ಣನವರು ಕಾರ್ಲ್ ಮಾರ್ಕ್‍ಸ್ ಅವರಿಗೆ ಪ್ರೇರಣೆಯಾಗಿದ್ದರು. ಸಂಸತ್ತು ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಪ್ರಸ್ತುತ ಜಗತ್ತಿನ ತುಂಬೆಲಾ ಸಂಸತ್ತು ಕಾಣಬಹುದು ಅದಕ್ಕೆ ಮೂಲ ಕಾರಣ ಬಸವಣ್ಣನವರು ಆಗಿದ್ದಾರೆ. ಬಸವಣ್ಣ ಎಲ್ಲ ಧರ್ಮಗಳಲ್ಲಿ ದಯೆ ಇರಬೇಕು. ದೇಹವೆ ದೇಗುಲ, ಕಾಯಕವೇ ಕೈಲಾಸ ಹಾಗೂ ಶರಣ ಸತಿ ಎಂಬ ಮೂರು ಕಲ್ಪನೆಯನ್ನು ನೀಡಿದರು. ಬಸವಣ್ಣನವರ ಕಲ್ಯಾಣ ಸಾಮ್ರಾಜ್ಯವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು. ಅವರ ಮಾರ್ಗದರ್ಶನವನ್ನು ನೆವೆಲ್ಲರೂ ಪಾಲಿಸಬೇಕು ಎಂದರು.
12ನೇ ಶತಮಾನದ ಸಾಮಾಜಿಕ ಕ್ರಾಂತಿಯು ಸ್ತ್ರೀಯರಿಗೆ ಸಮಾನತೆ, ಗೌರವ ಮತ್ತು ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟ ಪ್ರಮುಖ ಮೈಲುಗಲ್ಲಾಗಿದೆ.ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಕೇವಲ ಭೋಗದ ವಸ್ತುವಾಗಿದ್ದು ಕಾಲಕ್ರಮೇಣ ಬಸವಣ್ಣನವರು ಮತ್ತು ಡಾ. ಅಂಬೇಡ್ಕರವರಯ ಹೆಣ್ಣಿಗೂ ಪುರುಷನಿಗೂ ಸಮಾನ ಸ್ಥಾನಮಾನ ಕಲ್ಪಿಸಿಕೊಟ್ಟರು. ಅವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶವಿತ್ತು. ಬಾಲ್ಯ ವಿವಾಹ ವಿರೋಧಿಸಿ ವಿಧವಾ ವಿವಾಹವನ್ನು ಬೆಂಬಲಿಸಿದ್ರು ಮಹಿಳೆಯರಿಗೆ ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಮಾನ ಹಕ್ಕುಗಳನ್ನು ಒದಗಿಸುತ್ತಾರೆ. ಹೆಣ್ಣು ಅಥವಾ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದ ಶ್ರೇಷ್ಠ ಸಮಾಜ ಸುಧಾರಕರು 12ನೇ ಶತಮಾನದಲ್ಲಿ ಹೆಣ್ಣಿನ ಬಗ್ಗೆ ಇದ್ದ ಕೀಳು ಭಾವನೆಯನ್ನು ಹೋಗಲಾಡಿಸಿ ಲಿಂಗ ಸಮಾನತೆಗಾಗಿ ಧ್ವನಿ ಎತ್ತಿದವರು ನಮ್ಮ ಬಸವಣ್ಣನವರು.
ಹನ್ನೆರಡನೇ ಶತಮಾನದ ಶರಣ ಚಳುವಳಿಯ ನಾಯಕರಾದ ಬಸವಣ್ಣನವರ ವಚನಗಳು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ರಚಿತವಾದ ಇವರ ವಚನಗಳು ಜೀವನದ ಸಾರವನ್ನು ತಿಳಿಸುತ್ತವೆ.ದಯವಿಲ್ಲದ ಧರ್ಮವಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ, ಶ್ರಮದಿಂದ ಬದುಕಬೇಕು ಮತ್ತು ದುಡಿದದ್ದರಿಂದ ಅಲ್ಪ ಭಾಗವನ್ನು ಸಮಾಜಕ್ಕೆ ನೀಡಬೇಕೆಂಬುದು ಅವರ ಆಶಯ ಹಾಗೂ ಸೋಮಾರಿತನವನ್ನು ಅವರು ವಿರೋಧಿಸಿದ್ದರು ಎಂದರು.
ಜಾತಿಲಿಂಗ ಮತ್ತು ವರ್ಗ ಆಧಾರಿತ ತಾರತಮ್ಯಗಳನ್ನು ಬಸವಣ್ಣ ವಿರೋಧಿಸ್ತಾರೆ. ಎಲ್ಲರೂ ಸಮಾನರು ಎಂಬ ತತ್ವದ ಮೇಲೆ ಸಮಾಜ ಕಟ್ಟಲು ಪ್ರಯತ್ನಿಸುತ್ತಾರೆ ಸ್ತ್ರೀ ಪುರುಷ ಸಮಾನತೆಗೆ ಅವರು ಹೆಚ್ಚು ಆದ್ಯತೆಯನ್ನು ನೀಡುತ್ತಾರೆ.ದೇವರು ಕಲ್ಲಿನಲ್ಲಿಲ್ಲ ನಮ್ಮ ಮನಸ್ಸಿ ನಲ್ಲಿದ್ದಾನೆ ಅಂತರಂಗ ಶುದ್ಧವಾಗಿದ್ದರೆ ಬಹಿರಂಗವು ಶುದ್ದವಾಗಿರುತ್ತದೆ ಕೇವಲ ಶಾಸ್ತ್ರ, ಪುರಾಣ ಓದುವುದಕ್ಕಿಂತ ನಮ್ಮ ನಡೆಯಲ್ಲಿ ಸತ್ಯವಿರಬೇಕೆಂದು ಅವರ ವಚನಗಳು ಒತ್ತಿ ಹೇಳುತ್ತವೆ ಎಂದರು.
ಬಸವಾದಿ ಶಿವಶರಣರು ಮಹಿಳೆಯರನ್ನ ಶಾರೀರಿಕ ರಚನೆಯಿಂದ, ಮೇಲು ಕೀಳು ಎಂಬ ಭಾವದಿಂದ ಪುರುಷ ಶ್ರೇಷ್ಠತೆಯನ್ನ ಪರಿಗಣಿಸುವುದನ್ನು ಬದಿಗಿರಿಸಿ ಸ್ತ್ರೀಯರನ್ನು ಆತ್ಮದ ನೆಲೆಯಲ್ಲಿ ಪರಿಗಣಿಸಿ ಹೆಣ್ಣು ಗಂಡು ಎಂಬ ಭೇದವನ್ನು ತೊಡೆದು ಹಾಕಿ ಎಲ್ಲ ರೀತಿಯ ಸ್ವಾತಂತ್ರವನ್ನು ದೊರಕಿಸಿ ಕೊಟ್ಟ ಕಾರಣ ಬಸವಣ್ಣನನ್ನು ಸಮಾನತೆಯ ಹರಿಕಾರ ಎನ್ನುವರು ಎಂದರು. ಒಟ್ಟಾರೆಯಾಗಿ ಬಸವಣ್ಣನವರು ಸ್ತ್ರೀಯನ್ನು 'ಶರಣೆ' ಎಂದು ಕರೆದು ಅವಳನ್ನು ಗೌರವದಿಂದ ಕಂಡರು.ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯು ಅವರ ವಚನಗಳ ಮತ್ತು ಸಾಮಾಜಿಕ ಸುಧಾರಣೆಗಳ ತಿರುಳಾಗಿದೆ ಎಂದರು.
ಶ್ರೀ ಬಸವಣ್ಣರ ಜೀವನದಲ್ಲಿ ಶಿಕ್ಷಣವು ಅತ್ಯಂತ ಮಹತ್ವದ ಪಾತ್ರವಹಿಸಿದೆ. ಅವರ ಚಿಂತನೆಗಳು, ತತ್ವಗಳು ಮತ್ತು ಸಮಾಜ ಸುಧಾರಣಾ ಕಾರ್ಯಗಳಿಗೆ ಅವರ ಶಿಕ್ಷಣವೇ ಬಲವಾದ ಅಡಿಪಾಯವಾಗಿದೆ. ಅವರು ಪಡೆದ ಶಿಕ್ಷಣವು ಕೇವಲ ಪಾಠಪುಸ್ತಕಗಳಲ್ಲದೆ, ಜೀವನಾನುಭವ ಮತ್ತು ಆಧ್ಯಾತ್ಮಿಕ ಚಿಂತನೆಯೊಂದಿಗೆ ಕೂಡಿತ್ತು.ಬಸವಣ್ಣರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರು ಬಸವನ ಬಾಗೇವಾಡಿಯಲ್ಲಿ ಆರಂಭಿಸಿದರು. ಆ ಕಾಲದಲ್ಲಿ ಶಿಕ್ಷಣವು ಮುಖ್ಯವಾಗಿ ಧಾರ್ಮಿಕ ಗ್ರಂಥಗಳ ಮೇಲೆ ಆಧಾರಿತವಾಗಿತ್ತು. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಕಾರಣ ಅವರಿಗೆ ವೇದಗಳು, ಶಾಸ್ತ್ರಗಳು ಮತ್ತು ಸಂಸ್ಕೃತ ಭಾμÉಯ ಅಧ್ಯಯನ ಮಾಡುವ ಅವಕಾಶ ದೊರೆಯಿತು. ಆದರೆ, ಅವರು ಕೇವಲ ಪಾಠಗಳನ್ನು ಕೇವಲ ಕಣ್ಣುಂಬಿಕೊಳ್ಳುವುದಕ್ಕಿಂತ ಅದರ ಅರ್ಥವನ್ನು ಅರಿಯಲು ಹೆಚ್ಚು ಆಸಕ್ತಿ ತೋರಿದರು. ಬಾಲ್ಯದಲ್ಲಿಯೇ ಬಸವಣ್ಣರು ಧಾರ್ಮಿಕ ಆಚರಣೆಗಳ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದರು. ಯಾಕೆ ಕೆಲವು ಜನರಿಗೆ ಮಾತ್ರ ದೇವರ ಆರಾಧನೆ ಮಾಡಲು ಅವಕಾಶ ಇದೆ? ಯಾಕೆ ಜಾತಿ ಆಧಾರಿತ ಭೇದಭಾವ ಇದೆ? ಎಂಬ ಪ್ರಶ್ನೆಗಳು ಅವರ ಮನಸ್ಸಿ ನಲ್ಲಿ ಮೂಡುತ್ತಿದ್ದವು. ಈ ಪ್ರಶ್ನಿಸುವ ಮನೋಭಾವವೇ ಅವರ ಶಿಕ್ಷಣದ ಪ್ರಮುಖ ಲಕ್ಷಣವಾಗಿತ್ತು. ನಂತರ ಬಸವಣ್ಣರು ಹೆಚ್ಚಿನ ಜ್ಞಾನಕ್ಕಾಗಿ ಕೂಡಲಸಂಗಮಕ್ಕೆ ತೆರಳಿದರು. ಕೂಡಲ ಸಂಗಮ ಆ ಕಾಲದಲ್ಲಿ ಧಾರ್ಮಿಕ ಮತ್ತು ವಿದ್ಯಾ ಕೇಂದ್ರವಾಗಿತ್ತು. ಅಲ್ಲಿ ಅವರು ವೇದ, ಉಪನಿಷತ್ತುಗಳು, ತತ್ವಶಾಸ್ತ್ರ, ಮತ್ತು ಧಾರ್ಮಿಕ ಚಿಂತನೆಗಳ ಅಧ್ಯಯನ ಮಾಡಿದರು. ಆದರೆ, ಅವರು ಅಲ್ಲಿ ಕಲಿತ ವಿಷಯಗಳನ್ನು ಅಂಧವಾಗಿ ಸ್ವೀಕರಿಸಲಿಲ್ಲ. ಬದಲಾಗಿ, ಅವುಗಳನ್ನು ವಿಶ್ಲೇಷಿಸಿ, ತಮ್ಮದೇ ಆದ ತತ್ವಗಳನ್ನು ರೂಪಿಸಿದರು.
ಜಾತಿ ಭೇದಭಾವ, ಮತ್ತು ಅಸಮಾನತೆಗಳನ್ನು ಅವರು ನೇರವಾಗಿ ಕಂಡರು. ಇದರಿಂದ ಅವರು ಕೇವಲ ವಿದ್ಯಾರ್ಥಿಯಾಗಿರದೆ, ಸಮಾಜವನ್ನು ಬದಲಾಯಿಸುವ ಅವರ ಶಿಕ್ಷಣವು ಅಂಶಗಳನ್ನು ಚಿಂತಕರಾಗಿ ಬೆಳೆದರು. ಧಾರ್ಮಿಕ ಜ್ಞಾನ ವೇದಗಳು ಮತ್ತು ಶಾಸ್ತ್ರಗಳ ಅಧ್ಯಯನ ಆಧ್ಯಾತ್ಮಿಕ ಚಿಂತನೆ ಧ್ಯಾನ ಮತ್ತು ಆತ್ಮ ಜ್ಞಾನ ಸಾಮಾಜಿಕ ಅರಿವು ಸಮಾಜದ ಸಮಸ್ಯೆಗಳ ವಿಶ್ಲೇಷಣೆ ಈ ಮೂರೂ ಅಂಶಗಳು ಸೇರಿ ಬಸವಣ್ಣರನ್ನು ಮಹಾನ್ ತತ್ವಜ್ಞಾನಿ ಮತ್ತು ಸಮಾಜ ಸುಧಾರಕರನ್ನಾಗಿ ರೂಪಿಸಿವೆ. ವಿದ್ಯಾಭ್ಯಾಸವಲ್ಲ; ಅದು ಜೀವನದ ದಾರಿದೀಪವಾಗಿತ್ತು. ಅವರ ಶಿಕ್ಷಣವು ಅವರನ್ನು ಸತ್ಯ, ಸಮಾನತೆ ಮತ್ತು ಮಾನವೀಯತೆಯ ಮಾರ್ಗದಲ್ಲಿ ನಡೆಸಿತು. ಇದೇ ಕಾರಣಕ್ಕೆ ಅವರು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ.
ಬಸವಣ್ಣನವರ ಸಾಹಿತ್ಯಕ ಜೀವನ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸುಮಾರು 1500 ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹ ಮಾಡಲಾಗಿದೆ.ಇವರ ವಚನಗಳು ಇಂದಿಗೂ ಮಾನವ ಸಂಕುಲಕ್ಕೆ ದಾರಿ ತೋರಿಸುವ ತಾಕತ್ತು ಹಾಗೂ ಶಕ್ತಿಯನ್ನ ಒಳಗೊಂಡಿವೆ.ಶ್ರೀ ಬಸವಣ್ಣರು ಕೇವಲ ಸಮಾಜ ಸುಧಾರಕರಲ್ಲ.ಅವರು ಕನ್ನಡ ಸಾಹಿತ್ಯದ ಮಹಾನ್ ಕವಿಯೂ ಆಗಿದ್ದಾರೆ.ಅವರ ಸಾಹಿತ್ಯ ಸೇವೆವಚನ ಸಾಹಿತ್ಯದ ಮೂಲಕ ಅತ್ಯಂತ ಪ್ರಸಿದ್ದಿಯಾಗಿದೆ. ಈ ವಚನಗಳು ಸರಳ ಕನ್ನಡದಲ್ಲಿ ಬರೆಯಲ್ಪಟ್ಟಿದ್ದು, ಆಳವಾದ ತತ್ವ ಮತ್ತು ಜೀವನದ ಸತ್ಯಗಳನ್ನು ಒಳಗೊಂಡಿವೆ.
ಬಸವಣ್ಣರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಈ ಧರ್ಮವು ಸಮಾನತೆ ಮತ್ತು ಭಕ್ತಿ ಆಧಾರಿತವಾಗಿದ್ದು, ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುತ್ತದೆ. ಇಷ್ಟಲಿಂಗ ಧಾರಣೆ ಮೂಲಕ ಪ್ರತಿಯೊಬ್ಬರೂ ದೇವರೊಂದಿಗೆ ನೇರ ಸಂಪರ್ಕ ಹೊಂದಬಹುದು ಎಂಬ ತತ್ವವನ್ನು ಅವರು ಪರಿಚಯಿಸಿದರು ಎಂದು ತಿಳಿಸಿದರು.
ಆ ಕಾಲದಲ್ಲಿ ಜಾತಿ ಆಧಾರಿತ ಅಸಮಾನತೆ ತುಂಬಾ ಗಟ್ಟಿಯಾಗಿ ಇತ್ತು. ಬಸವಣ್ಣರು ಇದನ್ನು ತೀವ್ರವಾಗಿ ವಿರೋಧಿಸಿದರು ಮತ್ತು "ಎಲ್ಲರೂ ಸಮಾನರು'' ಎಂಬ ಸಂದೇಶವನ್ನು ಹರಡಿದರು. ಬಸವಣ್ಣರು ಯಾವುದೇ ಕೆಲಸವೂ ಹೀನವಲ್ಲ ಎಂದು ಹೇಳಿದರು. ಪ್ರಾಮಾಣಿಕವಾಗಿ ಕೆಲಸ ಮಾಡುವುದು ದೇವರ ಸೇವೆಯಷ್ಟೇ ಮಹತ್ವದ್ದು ಎಂದು ಅವರು ಬೋಧಿಸಿದರು ಎಂದು ತಿಳಿಸಿದರು.
ತದನಂತರ ನಂದಿ ಕಾಲೇಜ್ ಲೆಕ್ಚರರ್ ಹನುಮಂತರೆಡ್ಡಿ ಮಾತನಾಡುತ್ತಾ ಬಸವಣ್ಣನವರ ವಚನ ಸಾಹಿತ್ಯದ ಸರಳ ಕನ್ನಡದಲ್ಲಿ ವಚನಗಳನ್ನು ಸಾಮಾನ್ಯ ಜನರಿಗೂ ತತ್ವಗಳು ಅರ್ಥವಾಗುವಂತೆ ತಿಳಿಸಿಕೊಟ್ಟರು. ಅವರ ಜೀವನವು ತ್ಯಾಗ, ಧೈರ್ಯ ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದೆ. ಅವರು ತಮ್ಮ ತತ್ವಗಳನ್ನು ಬಿಟ್ಟುಕೊಡದೆ, ಸತ್ಯ ಮತ್ತು ಸಮಾನತೆಯ ಮಾರ್ಗದಲ್ಲಿ ದೃಢವಾಗಿ ನಿಂತರು. ಇದು ಅವರ ಆತ್ಮವಿಶ್ವಾಸ ಮತ್ತು ಧೈರ್ಯದ ಸಾಕ್ಷಿಯಾಗಿದೆ. ಅವರ ಜೀವನದ ಯಶಸ್ಸು ಕೇವಲ ವೈಯಕ್ತಿಕ ಸಾಧನೆಗಳಲ್ಲಿ ಅಲ್ಲ, ಅವರು ತಂದ ಸಾಮಾಜಿಕ ಬದಲಾವಣೆಗಳಲ್ಲಿ ಕಾಣಿಸುತ್ತದೆ. ಲಿಂಗಾಯತ ಧರ್ಮದ ಸ್ಥಾಪನೆ, ಅನುಭವ ಮಂಟಪದ ನಿರ್ಮಾಣ, ಮತ್ತು ವಚನ ಸಾಹಿತ್ಯದ ಮೂಲಕ ಅವರು ಸಮಾಜದಲ್ಲಿ ಶಾಶ್ವತವಾದ ಪ್ರಭಾವ ಬೀರಿದ್ದಾರೆ. ''ಕಾಯಕವೇ ಕೈಲಾಸ'' ಮತ್ತು "ದಾಸೋಹ' ಎಂಬ ತತ್ವಗಳು ಇಂದಿಗೂ ಜನರನ್ನು ಪ್ರೇರೇಪಿಸುತ್ತಿವೆ. ಬಸವಣ್ಣರು ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವದ ಮಟ್ಟದಲ್ಲಿಯೂ ಪ್ರಖ್ಯಾತರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಗದಾಂಭ ಕಾಲನಿಯ ಅಧ್ಯಕ್ಷರು ಶ್ರೀನಿವಾಸ್ ಅವರು ಕಾಲನಿಯ ಸಮಸ್ಯೆಗಳನ್ನು ಅವರಿಗೆ ವಿವರಿಸಿದರು, ಅದಕ್ಕೆ ಸ್ಪಂದಿಸಿದ ಅವರು ನಿಮ್ಮ ಸಮಸ್ಯೆಗಳನ್ನು ಶೀಘ್ರದಲ್ಲೇ ಇತ್ಯರ್ಥ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲನಿಯ ನಿವಾಸಿಗಳು ಮತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


