- ಉಮೇಶ ಮುಂಡಳ್ಳಿ ಭಟ್ಕಳ
ಭಟ್ಕಳ ತಾಲೂಕು ಅನೇಕ ದೇವಾಲಯಗಳ ಒಂದು ಬ್ರಹತ್ ಸಮುಚ್ಛಯ ಎಂದರೆ ತಪ್ಪಾಗಲಾರದು ಅನ್ನಿಸುತ್ತದೆ. ಒಮ್ಮೆ ಮೆರವಣಿಗೆಯೊಂದರಲ್ಲಿ ಸಾಗಿ ಬಂದ ಸ್ವಾಮಿಜೀಯೊಬ್ಬರು ಒಂದು ಮಾರ್ಗದಲ್ಲಿ ಇಷ್ಟೊಂದು ದೇವಾಯಗಳನ್ನು ಇದೇ ಮೊದಲ ಬಾರಿ ಭಟ್ಕಳದಲ್ಲಿಯೇ ಕಂಡಿದ್ದು ಎಂದು ಹೇಳಿದ ಮಾತೂ ನೆನಪಿಗೆ ಬರುತ್ತಿದೆ ನನಗೆ. ಇಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳಿವೆ. ಬಸದಿಗಳಿವೆ ಗುಡಿಗಳಿವೆ.
ಒಂದೊಂದು ದೇವಾಲಯಗಳು ಕೂಡ ತನ್ನದೇ ಆದ ಇತಿಹಾಸವನ್ನು ಸಾರಿ ಹೇಳುತ್ತವೆ. ಇಂತಹ ಅನೇಕ ದೇವಾಲಯಗಳ ಪೈಕಿ ಸುಮಾರು 600 ವರುಷಗಳ ಇತಿಹಾಸವಿರುವ ಭವ್ಯ ವಾಸ್ತುಶಿಲ್ಪದ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಅತ್ಯಂತ ಪ್ರಮುಖವಾಗಿದೆ. ಮುಂಡಳ್ಳಿಯ ಪ್ರಮುಖ ಸಮುದಾಯಗಳಾದ ನಾಮಧಾರಿ,ಮೊಗೇರ,ದೇವಾಡಿಗ, ಬ್ರಾಹ್ಮಣ, ಆಚಾರ್ಯ, ಹಳ್ಳೇರ ಸಮುದಾಯಗಳ ಗ್ರಾಮ ದೇವತೆಯಾದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವು ಅತ್ಯಂತ ಪುರಾತನವಾದದ್ದು ಎಂದು ಹೇಳಲಾಗುತ್ತದೆ. ಈ ದೇವಾಲಯವು ತನ್ನೊಂದಿಗೆ ಅನೇಕ ಪರಿವಾರ ದೇವರುಗಳನ್ನು ಒಳಗೊಂಡಿದೆ. ಅವುಗಳಲ್ಲಿ ಶೀಗೇ ಹನುಮಂತ, ಅರೆಕಲ್ಲು ಮಹಾಸತಿ,ಪೇಟೆ ಬಸವ ಜಟಕ ಹಾಗೂ ನಾಗ ದೇವರುಗಳು ಪ್ರಮುಖವಾಗಿವೆ.
ದಕ್ಷಿಣ ಭಾರತದ ಪ್ರಮುಖ ರಾಜ ಮನೆತನವಾದ ಬಲ್ಲಾಳ ರಾಜಮನೆತನಕ್ಕೆ ಸಂಬಂದಿಸಿದೆಂದು ಹೇಳಲಾಗುವ ಅಮ್ಮನವರ ದೇವಾಲಯವು ಸುಮಾರು ಆರುನೂರು ವರ್ಷಗಳ ಹಿಂದೆಯೇ ಬಲ್ಲಾಳ ರಾಜರಿಂದ ಸ್ಥಾಪಿತವಾಗಿದ್ದು, ರಾಜರ ಕಾಲದಲ್ಲಿ ಅನೇಕ ಸ್ಥಿರಾಸ್ತಿಗಳು ಇತ್ತೆಂದು ಕಾಲಕ್ರಮೇಣ ಅವು ಅನ್ಯರ ಪಾಲಾಯಿತು ಎಂದು ಅನೇಕ ಹಿರಿಯರು ಆಗಾಗ ನೆನಪು ಮಾಡಿಕೊಳ್ಳುತ್ತಾರೆ.
ಗ್ರಾಮದಲ್ಲೇ ಇರುವ ಇದೀಗ ಹೊಸದಾಗಿ ನಿರ್ಮಾಣವಾಗಿರು ಪುರಾತನ ನರಸಿಂಹ ಮಠಕ್ಕೂ (ಅರ್ಚಕರಾದ ನಾಗರಾಜ ಭಟ್ ಅವರ ಮನೆತನದ ದೇವರು) ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೂ ಅವಿನಾಭಾವ ಸಂಬಂಧವಿರುವುದು ಕಂಡುಬರುತ್ತದೆ.
ಅಮ್ಮನವರ ದೇವಾಲಯದ ಬಗ್ಗೆ ಊರಿನಲ್ಲಿ ಒಂದು ದಂತಕಥೆಯೇ ಇದೆ.ಬಯಲು ಪ್ರದೇಶದ ಕುರುಚಲು ಗಿಡದ ಮಧ್ಯದಲ್ಲಿ ಇದ್ದ ಒಂದು ಹುತ್ತಕ್ಕೆ ಗೋವೊಂದು ಹಾಲು ಸುರಿಸುತ್ತಿದ್ದು ಸಂಜೆ ಮನೆಗೆ ಬರುವ ಹಸುವು ಮಾಲಿಕನಿಗೆ ಹಾಲು ಕೊಡದಿದ್ದಾಗ ಸಂಶಯಗೊಂಡ ಮಾಲಕ ಗೋವನ್ನು ಹಿಂಬಾಲಿಸಿದಾಗ ಹಸುವು ಹುತ್ತಕ್ಕೆ ಹಾಲೆರೆಯುವ ದೃಶ್ಯ ಕಂಡು ಗ್ರಾಮಸ್ತರು ಶರಣಾಗಿ ದೇವಿಗೆ ಹುತ್ತ ಸಮೇತವಾಗಿ ದೇವಾಲಯ ನಿರ್ಮಾಣ ಮಾಡಿದರಂತೆ. ಈ ಹುತ್ತವನ್ನು ಇಂದಿಗೂ ನಾವು ಅಮ್ಮನವರ ಗರ್ಭಗುಡಿಯಲ್ಲಿ ಕಣ್ಣಾರೆ ನೋಡಬಹುದಾಗಿದೆ. ಅಲ್ಲದೇ ಒಮ್ಮೊಮ್ಮೆ ಜೀವಂತ ನಾಗನ ದರ್ಶನವನ್ನೂ ಮಾಡಬಹುದಾಗಿದೆ.
ಆನಂತರ ಅನೇಕ ಬಾರಿ ಜೀರ್ಣೋದ್ಧಾರ ಗೊಂಡ ಈ ದೇವಾಲಯವು ಸರಿಸುಮಾರು ನಲವತ್ತು ವರ್ಷಗಳ ವರೆಗೂ ಯಾವುದೇ ಜೀರ್ಣೋದ್ಧಾರ ಕಾಣದೇ ಇತ್ತೆಂದು. ತದನಂತರ ಶಿಥಿಲಗೊಂಡ ದೇವಾಲಯವನ್ನು ಜೀರ್ಣೋದ್ಧಾರಗೊಳಿಸುವ ಬಗ್ಗೆ ಮಾತುಕತೆ ನಡೆದಾಗ ಮುಂಡಳ್ಳಿ ಯ ಪ್ರಮುಖ ಸಮುದಾಯದ ನಡುವೆ ಹೊಂದಾಣಿಕೆ ನಡೆದು ಹಲವು ಪ್ರಯತ್ನದ ಫಲವಾಗಿ ಶ್ರೀ ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಬೃಹತ್ ವಾಸ್ತುಶಿಲ್ಪದ ಸುಮಾರು ಆಗಿನ ಒಂದು ಕೋಟಿ ವೆಚ್ಚದಲ್ಲಿ 2010 ನೇ ಇಸ್ವಿಯಲ್ಲಿ ಸುಂದರವಾದ ದೇವಾಲಯ ಲೋಕಾರ್ಪಣೆಗೊಂಡಿತು.
ಈ ದೇವಾಲಯದಲ್ಲಿ ಮುಖ್ಯವಾಗಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು, ಗಣಪತಿ, ಧರ್ಮಶಾಸ್ತಾರ ಮತ್ತು ವೀರಭದ್ರ ದೇವರುಗಳು ಇವೆ. ನಾಗ ಮತ್ತು ಜಟಕ ದೇವರುಗಳು ದೇವಾಲಯದ ಎಡ ಮತ್ತು ಬಲಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಎದುರು ಬೃಹತ್ತಾದ ಅಶ್ವತ ವೃಕ್ಷವಿದ್ದು ಸುಮಂಗಲೆಯರು ನಿತ್ಯವೂ ಪ್ರದಕ್ಷಿಣೆ ಹಾಕುವುದನ್ನು ಕಾಣಬಹುದು. ಮುಂಡಳ್ಳಿಯ ಮುಖ್ಯರಸ್ತೆಯಲ್ಲಿ ದೇವಾಲಯಕ್ಕೆ ತಿರುಗುವ ಮಾರ್ಗದಲ್ಲಿ ಬೃಹತ್ ಮುಖ ದ್ವಾರವಿದೆ. ಈ ಮುಖದ್ವಾರವು ದ್ವಿಮುಖ ಮಾದರಿಯಲ್ಲಿ ನಿರ್ಮಾಣವಾಗಿದೆ. ಮುಖದ್ವಾರದ ಮೇಲ್ಗಡೆ, ಅಮ್ಮನವರು, ಮಹಾಗಣಪತಿ ಹಾಗೂ ವೀರಭದ್ರ ದೇವರುಗಳ ಮೂರ್ತಿಯನ್ನು ಮಾಡಲಾಗಿದೆ. ಇವು ಎಲ್ಲರ ಗಮನ ಸೆಳೆಯುವಂತಿದೆ.
ಇದೀಗ ಅಮ್ಮನವರ ದೇವಾಲಯ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಸಂಭ್ರಮ. 2010 ರಲ್ಲಿ ಪುನರ್ ನಿರ್ಮಾಣಗೊಂಡ ದೇವಾಯಕ್ಕೆ ಐದು ದಿನಗಳ ಕಾಲ ಅಷ್ಢಬಂಧ ಬ್ರಹ್ಮ ಕಲಶೋತ್ಸವ ನಡೆಯಲಿದ್ದು ಊರಿನ ಎಲ್ಲ ಸಮಾಜದವರು ಒಕ್ಕೋರಲಿನಿಂದ ಧರ್ಮ ಕಾರ್ಯದಲ್ಲಿ ಪಣತೊಟ್ಟು ನಿಂತಿದ್ದಾರೆ. ದಿನಪ್ರತಿ ಮಹಾ ಅನ್ನ ಪ್ರಸಾದ, ಅನೇಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪಲ್ಲಕಿ ಉತ್ಸವ ಕೂಡ ನಡೆಯಲಿದೆ.
ಅಮ್ಮನವರ ದೇವಾಲಯ ಭಟ್ಕಳ ಬಸ್ ನಿಲ್ದಾಣದಿಂದ ಕೇವಲ ಮೂರು ಕಿ.ಮೀ.ಅಂತರದಲ್ಲಿದ್ದು ಬಸ್ ಮತ್ತು ಆಟೋ ವ್ಯವಸ್ಥೆ ಇದೆ. ದೇವಾಲಯದಲ್ಲಿ ತ್ರಿಕಾಲ ಪೂಜೆ ಇದ್ದು ಶುಕ್ರವಾರ ಮತ್ತು ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ನವರಾತ್ರಿ ಸಮಯದಲ್ಲಿ ಹತ್ತು ದಿನಗಳವರೆಗೂ ವಿಜೃಂಭಣೆಯಿಂದ ಉತ್ಸವ ನಡೆಯುವದನ್ನು ನೋಡಬಹುದಾಗಿದೆ.


