ನರಿಮೊಗರಿನಲ್ಲಿ ‘ಯಕ್ಷ ಪ್ರಸಾದಿನೀ–2026’: ಪೆರ್ಡೂರು ಮೇಳದ ಯಕ್ಷಗಾನಕ್ಕೆ ಕಲಾರಸಿಕರಿಂದ ಭಾರೀ ಮೆಚ್ಚುಗೆ

Upayuktha
0


ಪುತ್ತೂರು: ಪುತ್ತೂರಿನ ಹೊರವಲಯದ ನರಿಮೊಗರಿನಲ್ಲಿ ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಶ್ರಯದಲ್ಲಿ “ಯಕ್ಷ ಪ್ರಸಾದಿನೀ–2026” ಸಾಂಸ್ಕೃತಿಕ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಇವರಿಂದ “ಕಾರ್ತವೀರ್ಯ–ಚಕ್ರ ಚಂಡಿಕೆ” ಎಂಬ ಪೌರಾಣಿಕ ಕಥಾನಕದ ಯಕ್ಷಗಾನ ಪ್ರದರ್ಶನ ನಡೆಯಿತು.


ಸಂಸ್ಕೃತಿ ಮತ್ತು ಪರಂಪರೆಯ ಸೊಗಡನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಕೊನೆಯವರೆಗೂ ಹಾಜರಿದ್ದು ಯಕ್ಷಗಾನವನ್ನು ಆಸ್ವಾದಿಸಿದರು.


ಆಯುರ್ವೇದ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ನರಿಮೊಗರಿನಲ್ಲಿ ಎಂಟು ಹಾಸಿಗೆಗಳ ಒಳರೋಗಿ ವಿಭಾಗವನ್ನು ಹೊಂದಿದ್ದು, ಕೆ.ಪಿ.ಎಂ.ಇ. ನೋಂದಣಿ ಹಾಗೂ ಐ.ಎಸ್.ಒ. ಪ್ರಮಾಣಪತ್ರವನ್ನು ಪಡೆದಿದೆ. ಪಾರ್ಕಿನ್ಸನ್ಸ್, ಪಕ್ಷವಾತ, ಸಂಧಿವಾತ, ಮೈಗ್ರೇನ್ ತಲೆನೋವು, ಮೂಗಿನ ಪಾಲಿಪ್, ಮೂಲವ್ಯಾಧಿ, ಮಹಿಳೆಯರ ಮುಟ್ಟಿನ ತೊಂದರೆ, ಸೋರಿಯಾಸಿಸ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆ ವಿಶಿಷ್ಟ ಹೆಸರು ಗಳಿಸಿದೆ.


ಮಕ್ಕಳಲ್ಲಿ ರೋಗನಿರೋಧಕ ಶಕ್ತಿ, ಸ್ಮರಣಶಕ್ತಿ ಹಾಗೂ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯಕವಾಗುವ “ಪ್ರಸಾದಿನೀ ಸ್ವರ್ಣಪ್ರಾಶ” ಉತ್ಪನ್ನವು ದೇಶಾದ್ಯಂತ ಗ್ರಾಹಕರನ್ನು ಜಾಲತಾಣದ ಮೂಲಕ ಹೊಂದಿದ್ದು, ಉತ್ತಮ ಗುಣಮಟ್ಟಕ್ಕಾಗಿ ಪ್ರಸಿದ್ಧಿಯನ್ನೂ ಪಡೆದಿದೆ. ತ್ರಿಪುರ ಪ್ಯೂರಿಫಿಕೇಷನ್ ಧ್ಯಾನ ವಿಧಾನವನ್ನು ಅಳವಡಿಸಿಕೊಂಡಿರುವ ಸಂಸ್ಥೆ ಚಿಕಿತ್ಸೆಯಲ್ಲಿ ಸಂಗೀತ ಮತ್ತು ನಾಟ್ಯದ ಮಹತ್ವವನ್ನೂ ಗುರುತಿಸಿ ಅಳವಡಿಸಿಕೊಂಡಿದೆ. ‘ಆರೋಗ್ಯದ ನರನಾಡಿ’, ‘ಆರೋಗ್ಯ ಪ್ರಸಾದಿನೀ’ ಹಾಗೂ ‘ಆಯುರ್ವೇದ–ಆಶಾವಾದ’ ಎಂಬ ಪುಸ್ತಕಗಳನ್ನೂ ಸಂಸ್ಥೆ ಪ್ರಕಟಿಸಿದೆ.


ಯಕ್ಷಗಾನ ಪ್ರದರ್ಶನದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಪ್ರಸನ್ನಭಟ್ ಬಾಳ್ಕಲ್ ಭಾಗವತಿಗಳಾಗಿ ಭಾಗವಹಿಸಿದ್ದರು. ನೀಲ್ಕೋಡು ಶಂಕರ ಹೆಗಡೆ ಕಾರ್ತವೀರ್ಯನಾಗಿ, ಕಾರ್ತಿಕ್ ಚಿಟ್ಟಾಣಿ ಬರ್ಬರಿಕನಾಗಿ, ಸನ್ಮಯ್ ಕೃಷ್ಣ ಮಳವಳ್ಳಿ ಕೃಷ್ಣನಾಗಿ ಹಾಗೂ ನಾಗರಾಜ್ ಭಟ್ ಕುಂಕಿಪಾಲ ವತ್ಸಲೆಯಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ತವೀರ್ಯನ ಜಲಕ್ರೀಡೆ, ಕೃಷ್ಣ–ಬರ್ಬರಿಕ ಸಂಭಾಷಣೆ, ಹಾಡು–ನೃತ್ಯಗಳು ಪ್ರೇಕ್ಷಕರನ್ನು ಮನರಂಜಿಸಿತು.


ಕಾರ್ಯಕ್ರಮದ ಆಯೋಜಕ ಹಾಗೂ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ, “ಚಂದ್ರಗ್ರಹಣ ಬರುತ್ತದೆ ಹೋಗುತ್ತದೆ. ಆದರೆ ಮನಸ್ಸು ಮತ್ತು ಬುದ್ಧಿಗೆ ಹಿಡಿದಿರುವ ಗ್ರಹಣ ಸದಾ ಇರುತ್ತದೆ. ಅದರಿಂದ ಮುಕ್ತಿ ನೀಡುವ ಸಾಮರ್ಥ್ಯ ಯಕ್ಷಗಾನದಂತಹ ಆರಾಧನಾ ಕಲೆಗಳಿಗೆ ಇದೆ. ಯಕ್ಷಗಾನ ಕೇವಲ ಮನರಂಜನೆ ಅಲ್ಲ; ಅದು ಉಪಾಸನೆಯೂ ಹೌದು” ಎಂದು ಹೇಳಿದರು.


ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹಾಗೂ ಡಾ. ಶ್ರುತಿ ಎಂ.ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಮೊಗರು, ಶ್ರೀ ಮೃತ್ಯುಂಜಯ ದೇವಸ್ಥಾನ, ಮರಾಠಿ ಸಮಾಜ ಸೇವಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಸ್ಥಳದಾನ ಮತ್ತು ಸಹಕಾರ ನೀಡಿದವು.


ಕಾರ್ಯಕ್ರಮದಲ್ಲಿ ವೇದನಾಥ್ ಸುವರ್ಣ, ವಿಶ್ರಾಂತ ಪ್ರಾಚಾರ್ಯ ದುಗ್ಗಪ್ಪ, ಮೃತ್ಯುಂಜಯೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ.ಟಿ. ಗೋಪಾಲ್, ಸಂಚಾಲಕ ಗಂಗಾಧರ ಸುವರ್ಣ, ಪ್ರವೀಣ್ ಆಚಾರ್ಯ, ವಿಶ್ವೇಶ್ವರ ಭಟ್ ಬಂಗಾರಡ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಮುಖ್ಯಗುರು ಚರಣ್ ಕುಮಾರ್, ಶಿಕ್ಷಕಿ ಶ್ರೀಲತಾ, ಶ್ರೀನಿವಾಸ್ ರಾವ್, ಈಶ್ವರ ಬಡೇಕಾರ್, ಸುಬ್ರಮಣ್ಯ ಪ್ರಕಾಶ್, ಮಹಾಲಿಂಗ ನಾಯ್ಕ್, ಸದಾಶಿವ ನಾಯ್ಕ್, ಅರುಣ್ ಕುಮಾರ್ ಪುತ್ತಿಲ, ನಾರಾಯಣ ಬನ್ನಿಂತಾಯ, ಡಾ. ಸುರೇಶ್ ಪುತ್ತೂರಾಯ, ಡಾ. ಶ್ರೀಪ್ರಕಾಶ್ ಬಂಗಾರಡ್ಕ ಸೇರಿದಂತೆ ಅನೇಕ ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.


ಮಾನ್ಯ ಶಾಸಕ ಅಶೋಕ್ ರೈ ಕೋಡಿಂಬಾಡಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು. ಛಾಯಾಗ್ರಹಣವನ್ನು ಉದಯ ಕುಮಾರ್ ಬಂಗಾರಡ್ಕ ನಿರ್ವಹಿಸಿದ್ದು, ಹರಿಗಣೇಶ್ ಕಲ್ಲೂರಾಯ ಕುಂಜೂರುಪಂಜ ರುಚಿಕರ ಭೋಜನ ವ್ಯವಸ್ಥೆ ಮಾಡಿದರು.


ಪುತ್ತೂರಿನ ಕಲಾರಸಿಕರಿಗೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರನ್ನು ಪ್ರೇಕ್ಷಕರು ಶ್ಲಾಘಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top