ನುಡಿನಮನ: ಯಕ್ಷ ಸವ್ಯಸಾಚಿಯ ಮಹಾಪ್ರಸ್ಥಾನ

Upayuktha
0


ಗುರುಗಳ ನೆನಪು ಮಾಡುವಾಗ; ವೈಶಂಪಾಯನ ಸರೋವರದಿಂದ ಮೇಲೇಳುವ ಕೌರವ, ಶಿವನನ್ನು ನಿಂದಿಸುವ ದಕ್ಷ, ವಸಿಷ್ಠನ ಮುಂದೆ ಪ್ರತಿಜ್ಞಾಬದ್ಧನಾಗುವ ಕೌಶಿಕ, ಭೂದೇವಿಯನ್ನು ತುಡುಕುವ ಹಿರಣ್ಯಾಕ್ಷ, ದೀಕ್ಷೆಯನ್ನು ಬಿಸುಟೇಳುವ ಇಂದ್ರಜಿತು, ತ್ರಿಶಂಕುವನ್ನು ಸ್ವರ್ಗಕ್ಕೇರಿಸುವ ವಿಶ್ವಾಮಿತ್ರ, ಕೃಷ್ಣನನ್ನು ಎದುರಿಸುವ ಜಾಂಬವ, ರಾಕ್ಷಸಶೃಂಗಾರದ ಭೌಮಾಸುರ, ಕೃಷ್ಣನನ್ನು ಪಚಾರಿಸುವ ಮಾಗಧ,... ಹೀಗೆ ಹಲವು ವೇಷಗಳು ಕಣ್ಣೆದುರು ಕಾಣಿಸುತ್ತವೆ. ಒಂದೊಂದೂ ಅದ್ಭುತವಾದ ರಂಗಕೃತಿಗಳು! ರಾಜವೇಷದ ಸ್ಪಷ್ಟರೂಪ ಹೊಂದಿರುವ ಅಂಗಸೌಷ್ಟವ. ಗುರುಗಳ ವೀರಾವೇಶದ ರಾಜವೇಷಗಳೆಂದರೆ ಸಾಟಿಯಿಲ್ಲದ್ದು.


ಹಾಗೆ ನೋಡಿದರೆ ಗುರುಗಳು ಒಂದೇ ಜಾತಿಯ ವೇಷಗಾರಿಕೆಗೆ ಸೀಮಿತರಾದವರಲ್ಲ. ಯಾವುದೇ ಸಂದರ್ಭದಲ್ಲಿ ಯಾವ ಪಾತ್ರವನ್ನಿತ್ತರೂ ನಿರ್ವಹಿಸಲು ಸೈ. ನಿದ್ರೆಯಿಂದ ಎಬ್ಬಿಸಿ ಅಭಿಮನ್ಯು ಪಾತ್ರವನ್ನಿತ್ತರೂ ರಂಗಸ್ಥಳ ಹುಡಿ ಹಾರಿಸಿಯಾರು! ತೀರಾ ಇತ್ತೀಚಿನವರೆಗೂ ಕಾಡ್ಗಿಚ್ಚಿನಂತೆ ರಂಗಸ್ಥಳದಲ್ಲಿ ಧಗಧಗಿಸುತ್ತಿದ್ದ ನಟಸಾರ್ವಭೌಮ.


ರಾತ್ರೆಯಿಂದ ಬೆಳಗ್ಗಿನ ತನಕ ಎಷ್ಟೇ ಪಾತ್ರಗಳನ್ನಿತ್ತರೂ ಅವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ. ಆಯಾಸವೆಂದರೆ ಏನೆಂಬುದೇ ಅರಿಯದ ಕುಣಿತ, ಕಂಚಿನ ಕಂಠದಿಂದ ಹೊಮ್ಮುವ ಸ್ವರಮಾಧುರ್ಯ, ನಿರಂತರ ಕಾವ್ಯಾಧ್ಯಯನದಿಂದ ಪರಿಪಕ್ವಗೊಂಡ ಸುಸಂಸ್ಕೃತ ಪ್ರೌಢಭಾಷೆ, ಆಳಿನಿಂದ ಅರಸನ ತನಕ ಯಾವುದೇ ಪಾತ್ರವಿತ್ತರೂ ಅದನ್ನು ಅತ್ಯಂತ ಶೃದ್ಧೆಯಿಂದ ನಿರ್ವಹಿಸುವ ಕಲಾನಿಷ್ಠೆ. ಪ್ರಾಯಃ ಇಂತಹ ಕಲಾವಿದ ಇನ್ನೊಬ್ಬನಿಲ್ಲ.

 

ತಿದ್ದಿ ತೀಡಿದ ಅಚ್ಚುಕಟ್ಟಾದ ಕುಣಿತ, ಅಪ್ರತಿಮ ಅಭಿನಯ ಕೌಶಲ, ನಿಂತದ್ದೇ ಭಂಗಿ, ಕಾಲಿಟ್ಟದ್ದೇ ಹೆಜ್ಜೆ, ಅನನ್ಯ ಲಯಜ್ಞಾನ, ತರ್ಕಕ್ಕೆ ನಿಂತರೆ ಎದುರಾಳಿಯನ್ನು ಶರಶಯ್ಯೆಯಲ್ಲಿ ಮಲಗಿದ ಭೀಷ್ಮನಂತೆಸಗುವ ಮಾತಿನ ಕೌಶಲ, ಎಳ್ಳಿನಿತೂ ವಿಕಾರವಿಲ್ಲದ ಸರ್ವಾಂಗಸುಂದರ ವೇಷ. ಕಲಾನಿಷ್ಠೆ, ಪಾತ್ರನಿಷ್ಠೆ, ಮೇಳನಿಷ್ಠೆ ಮುಪ್ಪುರಿಗೊಂಡ ಮೂರ್ತರೂಪಕ್ಕೆ ಇನ್ನೊಂದು ಹೆಸರೇ ಕೆ.ಗೋವಿಂದ ಭಟ್.


ಚೌಕಿಯಲ್ಲಿ ಕುಳಿತರೆ ಮೌನಕ್ಕೇ ಪ್ರಾಶಸ್ತ್ಯ. ಗಂಟೆಗಟ್ಟಲೆ ಪ್ರಾಣಾಯಾಮ, ಧ್ಯಾನ, ಪಾರಾಯಣ, ಜಪ, ಯಾರೊಡನೆಯೂ ಬೆರೆಯದ ನಿರ್ಲಿಪ್ತ. ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿದ ಯುಧಿಷ್ಠಿರಪ್ರಜ್ಞೆ, ಸಂಕಷ್ಟಕ್ಕೊಳಗಾಗಿ ಕೈನೀಡಿದರೆ ಸಹಾಯಹಸ್ತ ಚಾಚುವ ಕಾರುಣ್ಯ. ದಿನದಿನದ ಕ್ಷಣಕ್ಷಣಗಳನ್ನು ಸಾರ್ಥಕಗೊಳಿಸುತ್ತಿದ್ದ ಗುರುಗಳ ಜೀವನವೇ ಒಂದು ಯಶೋಗಾಥೆ.

 

ಜನನ ಮಾರ್ಚ್ 10, 1940. ನಿರ್ಗಮನ ಮಾರ್ಚ್ 20, 2026. 86 ವರ್ಷ 10 ದಿನಗಳ ಜೀವನಯಾತ್ರೆಯಲ್ಲಿ ಬಾಲ್ಯದ 14 ವರ್ಷಗಳು, ನಿವೃತ್ತ ಜೀವನದ ನಾಲ್ಕೈದು ವರ್ಷಗಳನ್ನು ಬಿಟ್ಟರೆ ಆಯುಷ್ಯದ ಉಳಿದ ಸಂವತ್ಸರಗಳನ್ನು ಕಳೆದುದೆಲ್ಲವೂ ಕಲಾಸೇವೆಯಲ್ಲೇ.

 

ಕಲಾವಿದ, ವೇಷಧಾರಿ, ಅರ್ಥಧಾರಿ, ಬರೆಹಗಾರ, ಪ್ರಸಂಗಕರ್ತ, ಕಲಾಗುರು,... ಹೀಗೆ ಸಾವಿರ ಬಾಹುಗಳ ವಿರಾಟ್ಪುರುಷನಂತೆ ಬಹುಮುಖದ ಪ್ರತಿಭೆಗಳಿಂದ ಸಾವಿರದ ಚೈತನ್ಯವಾಗಿ ರಂಗಸ್ಥಳದಲ್ಲಿ ಉಳಿಯುವವರು ಕೆ.ಗೋವಿಂದ ಭಟ್. ಈ ಸಂದರ್ಭದಲ್ಲಿ ಅವರೊಳಗಿನ ಕಲಾವಿದನನ್ನು ಗುರುತಿಸಿ ಬೆಳಗಿಸಿದ ಕಡತೋಕಾ ಮಂಜುನಾಥ ಭಾಗವತರನ್ನು ನೆನೆಯಲೇ ಬೇಕು.

 

ಕಡುಬಡತನದಿಂದ ಹೊಟ್ಟೆ ಹೊರೆಯಲು ಕಲಾಜೀವನಕ್ಕೆ ಕಾಲಿಟ್ಟು ಕಲಾಶ್ರೀಮಂತಿಕೆಯನ್ನು ಇನ್ನಿಲ್ಲದಂತೆ ಮೆರೆಸಿ ಅಗ್ನಿದಿವ್ಯದ ನಡುವೆ ನಡೆದ ಅವರ ಕಲಾಯಾನ ಬೆರಗು ಮೂಡಿಸುವಂಥದ್ದು. ಭಾವಹೀನ ಕಾಲ, ಕಲಾಸರಸ್ವತಿಯ ತಾರಹಾರದ ಒಂದೊಂದೇ ರನ್ನವಣಿಗಳನ್ನು ಕಳಚುತ್ತಿದೆ. ಕೆ.ಗೋವಿಂದ ಭಟ್ಟರಂತಹ ಕೊಹಿನೂರ್ ವಜ್ರವೂ ಕಳಚಿಹೋಯಿತು. ಯಕ್ಷಗಾನ ಹೋರಾಟವನ್ನು ಅಪೇಕ್ಷಿಸುವ ಕ್ಷಾತ್ರಕಲೆ. ಗುರುಗಳು ಇಲ್ಲಿ ಹೋರಾಡಿ ಗೆದ್ದಿದ್ದಾರೆ. ಚೌಕಿಯ ಒಳಗೆ, ಹೊರಗೆ, ರಂಗಸ್ಥಳದಲ್ಲಿ, ಸಮಾಜದಲ್ಲಿ ಕಲಾವಿದರು ಹೇಗಿರಬೇಕೆಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಇಂದು ಸಾಧನೆಯ ಕೊರತೆ ಬಹುವಾಗಿ ಕಾಡುವ ರಂಗಸ್ಥಳದ ಬದುಕಿನಲ್ಲಿ ಕೆ.ಗೋವಿಂದ ಭಟ್ಟರಂತಹ ಕಲಾವಿದರು ಮತ್ತೆ ಕಾಣಿಸಿಕೊಳ್ಳುವರೋ ಕಾದು ನೋಡಬೇಕು. 

 

"ಬೆಲೆಯಿಂದಕ್ಕುಮೇ ಕಲಾವಿದ, ಯಕ್ಷಭುವನದ ಭಾಗ್ಯದಿಂದಕ್ಕುಂ"

ಗುರುಗಳಿಗೆ ಭಕ್ತಿಪೂರ್ವಕ ಭಾಷ್ಪಾಂಜಲಿ.


-ಡಾ. ತಾರಾನಾಥ ವರ್ಕಾಡಿ

ಚಿತ್ರಗಳು: ಉದಯ ಕಂಬಾರು, ರಾಮ್ ನರೇಶ್ ಮಂಚಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top